ಚಿನ್ನಸ್ವಾಮಿ ಕಾಲ್ತುಳಿತ ದುರಂತದ ವೇಳೆ 'ದೋಸೆ ತಿಂದ' ಆರೋಪಕ್ಕೆ ಸದನದಲ್ಲಿ ಭಾವುಕರಾಗಿ ಉತ್ತರಿಸಿದ ಸಿಎಂ
ಬೆಂಗಳೂರು ನಗರ ರಸ್ತೆಗಳ ಗುಂಡಿ ಮುಚ್ಚಲು ಕ್ರಮ: ಡಿಕೆಶಿ
ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕೆಲವು ಕಡೆ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡುವುದರಿಂದ 30ವರ್ಷ ರಸ್ತೆ ಬಾಳಿಕೆ ಬರುತ್ತವೆ. ಗುಂಡಿಗಳ ಪೋಟೋ ತೆಗೆದು ಕಳಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಗುಂಡಿ ಮುಚ್ಚಲು ಹಾಗೂ ವೈಟ್ ಟಾಪಿಂಗ್ ಮಾಡಲು 9,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡದರು.
ಆರ್‌ಸಿಬಿ ದುರಂತಕ್ಕೆ ಸರ್ಕಾರವೇ ಕಾರಣ, ಬಿಜೆಪಿ-ಜೆಡಿಎಸ್ ಸದಸ್ಯರ ಸಭಾತ್ಯಾಗ
ಆರ್‌ಸಿಬಿ ಬಹಳ ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ. ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲದಿದ್ದರು ಸರ್ಕಾರವೇ ಈ ಕಾರ್ಯಕ್ರಮ ಮಾಡಿತ್ತು ಎಂದು ಆರ್. ಅಶೋಕ್ ಆರೋಪಿಸಿದರು.
ಆದರೂ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ.ಸಿಎಂ ಸಿದ್ದರಾಮಯ್ಯಗೆ ಸ್ವಲ್ಪವೂ ಹೃದಯವಂತಿಕೆ ಇಲ್ಲವೇ, ಘಟನೆ ಆದ ಒಂದು ಗಂಟೆಗೆ ವಿಷಯ ತಿಳಿಯಿತು ಎಂದು ಸಿಎಂ ಹೇಳುತ್ತಾರೆ. ಇದು ಗುಪ್ತಚರ, ಸರ್ಕಾರದ ವಿಫಲತೆಯಲ್ಲವೆ ಎಂದು ಪ್ರಶ್ನಿಸಿದರು.
ಸಿಎಂ ನೀಡಿದ ಉತ್ತರ ನಮಗೆ ಸಮಾದಾನವಾಗಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಕಾಲ್ತುಳಿತ ದುರಂತ: ಸಿಎಂ ಸಿದ್ದರಾಮಯ್ಯರ ಉತ್ತರಕ್ಕೆ ಆರ್. ಅಶೋಕ್ ಅಕ್ಷೇಪ
ಆರ್‌ಸಿಬಿ ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನಕ್ಕೆ ನೀಡಿದ ಉತ್ತರದ ಬಗ್ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ವಿದೇಶ ಹಾಗೂ ದೇಶದಲ್ಲಿ ನಡೆದ ದುರಂತದ ಬಗ್ಗೆ ಮಾತನಾಡಿದ ಸಿಎಂ, ಆರ್‌ಸಿಬಿ ದುರಂತದ ಬಗ್ಗೆ ಕ್ಷಮೆ ಕೇಳಲಿಲ್ಲ ಹಾಗೂ ಸ್ಪಷ್ಟನೆಯನ್ನೂ ನೀಡಿಲ್ಲ. ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದರೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಕಾಲ್ತುಳಿತ ದುರಂತ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೂ ಕಾರ್ಯಕ್ರಮಕ್ಕೆ ಬರುವಂತೆ ನಾನೇ ಕರೆ ಮಾಡಿ ಆಹ್ವಾನ ನೀಡಿದ್ದೆ. ಆದಿನ ಮಳೆ ಬಂದು ಕಾರ್ಯಕ್ರಮ ಮುಕ್ತಯವಾಗಿತ್ತು. ನಾನು ಅಲ್ಲಿಂದ ಹೊರಟೆ ನಂತರ ಏನಾಯಿತು, ಎಷ್ಟು ಜನ ಮೃತಪಟ್ಟರು ಎಂದು ನನಗೆ ತಿಳಿಯಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ ಎಂದು ಬಿಜೆಪಿ ಆರೋಪಿಸಿದ್ದರು. ನಾವು ಈ ಪ್ರಕರಣದಲ್ಲಿ ಕ್ರಮ ಕೈಗೊಂಡು ಐವರು ಅಧಿಕಾರಿಗಳ ಅಮಾನತು ಮಾಡಿದ್ದೇವೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.
ಸದನದಲ್ಲಿ ಬಿಜೆಪಿ-ಜೆಡಿಎಸ್ ಅವಧಿಯಲ್ಲಿನ ದುರಂತಗಳ ಪ್ರಸ್ತಾಪ, ಗದ್ದಲ
ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ನಡೆದಿರುವ ವಿವಿಧ ಪ್ರಕರಣಗಳನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಚಾಮರಾಜನಗರ ಆಕ್ಸಿಜನ್ ದುರಂತ ನಡೆಯಿತು. ಆಗ 36 ಜನ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ರಾಜೀನಾಮೆ ಕೊಟ್ಟಿದ್ದರೆ ?, ಆಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಡಾ. ಸುಧಾಕರ್ ವಿರುದ್ಧ ನೀವು ಅಬೆಟರ್ ಎಂದು ಕರೆದ್ರಾ? ಎಂದು ಜೋರು ಧ್ವನಿಯಲ್ಲಿ ಶಾಸಕ ಸುರೇಶ್ ಕುಮಾರ್‌ನನ್ನು ಪ್ರಶ್ನಿಸಿದರು.
2006ರಲ್ಲಿ ವರನಟ ಡಾ. ರಾಜ್ ಕುಮಾರ್ ಮೃತಪಟ್ಟಾಗ ಸರ್ಕಾರ ಗೋಲಿಬಾರ್ ಮಾಡಿತು. ಆ ಸಂದರ್ಭದಲ್ಲಿ ಏಳು ಜನ ಮೃತಪಟ್ಟಿದ್ದರು. ಆಗ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದರೆ? ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಆದಾಗ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೋಟ್ಟಿದ್ದರೆ ? ಎಂದರು.
ಸಿಎಂ ಮಾತಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಉನ್ಮಾದಕ್ಕೆ ತುಪ್ಪಸುರಿವ ಕೆಲಸ: ಸಿಎಂ ಟೀಕೆ
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದಾಗ ಆರಂಭದಲ್ಲಿ ಬಿಜೆಪಿ ಸುಮ್ಮನಿದ್ದು, ಇದೀಗ ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅನಾಮಿಕ ಗುರುತಿಸಿದ ಎರಡು ಕಡೆ ಮೂಳೆಗಳು ದೊರೆತಿದ್ದು ಉಳಿದ 13 ಸ್ಥಳಗಳಲ್ಲಿ ಮೂಳೆಗಳು ಸಿಕ್ಕಿಲ್ಲ. ಬಿಜೆಪಿಯವರ ಅಬ್ಬರ ಈಗ ಶುರುವಾಗಿದ್ದು, ಬಿಜೆಪಿ ಉನ್ಮಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣ: ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಪ್ರತಿಭಟನೆ
ಎಸ್‌ಐಟಿ ತನಿಖೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಆದರೆ ಬಿಜೆಪಯವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾಲ್ತುಳಿತ ದುರಂತ| ಸದನದಲ್ಲಿ ಬಿಜೆಪಿ ಟ್ವಿಟ್ ಉಲ್ಲೇಖ
ಆರಂಭದಲ್ಲಿ ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡಲಿಲ್ಲ ಎಂದು ಬಿಜೆಪಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಅಸಮರ್ಥ, ಆಕಸ್ಮಿಕ ಗೃಹ ಸಚಿವ, ವಿಜಯೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಟ್ವೀಟ್ ಮಾಡಿದ್ದರು ಎಂದು ತಿಳಿಸಿದರು.
ಕಾಲ್ತುಳಿತಕ್ಕೆ ಪ್ರತಿಪಕ್ಷಗಳೂ ಪರೋಕ್ಷ ಕಾರಣ: ಸಿಎಂ ಸಿದ್ದರಾಮಯ್ಯ
ಪತ್ರಿಕೆಯೊಂದರ ಸಂಪಾದಕೀಯದಲ್ಲಿ ತಿಳಿಸಿದ ಪ್ರತಿಪಕ್ಷಗಳ ಬಗೆಗಿನ ಪ್ರಮುಖ ಅಂಶಗಳನ್ನು ಓದಿದ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷಗಳು ಸಹ ಕಾಲ್ತುಳಿತ ದುರಂತಕ್ಕೆ ಪರೋಕ್ಷ ಕಾರಣ ಎಂದು ತಿಳಿಸಿದರು.
ಕಾಲ್ತುಳಿತ ದುರಂತಗಳು ಬಿಜೆಪಿ ಆಡಳಿತದಲ್ಲೂ ಸಂಭವಿಸಿವೆ: ಅಂಕಿಅಂಶ ಸಹಿತ ವಿಪಕ್ಷಗಳಿಗೆ ತಿರುಗೇಟು ನೀಡಿದ ಸಿಎಂ
ಚಿನ್ನಸ್ವಾಮಿ ಸ್ಟೇಡಿಯಮ್ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ವಾಗ್ದಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂಕಿಅಂಶಗಳ ಸಹಿತ ತಿರುಗೇಟು ನೀಡಿದರು. ಇಂತಹ ದುರಂತಗಳು ಕೇವಲ ನಮ್ಮ ಅವಧಿಯಲ್ಲಿ ನಡೆದಿಲ್ಲ, ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳಲ್ಲೂ ಈ ಹಿಂದೆ ಭೀಕರ ಕಾಲ್ತುಳಿತಗಳು ಸಂಭವಿಸಿವೆ ಎಂದು ಅವರು ಉದಾಹರಣೆಗಳ ಸಮೇತ ವಿವರಿಸಿದರು.
ಚರ್ಚೆಯ ವೇಳೆ ಮಾತನಾಡಿದ ಸಿಎಂ, "ಸಾಮಾನ್ಯವಾಗಿ ಮೂರು ಸಂದರ್ಭಗಳಲ್ಲಿ ಕಾಲ್ತುಳಿತಗಳು ಸಂಭವಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟ ಅಥವಾ ಶೋಕಾಚರಣೆಯಂತಹ ಸಂದರ್ಭಗಳಲ್ಲಿ, ಹಾಗೂ ಜನರಲ್ಲಿ ಭಯ ಹುಟ್ಟಿದಾಗ ಅವರು ದಿಕ್ಕಾಪಾಲಾಗಿ ಓಡುವಾಗ ಇಂತಹ ದುರಂತಗಳು ನಡೆಯುತ್ತವೆ," ಎಂದು ವಿವರಿಸಿದರು.
ದೇಶದಲ್ಲಿ ನಡೆದ ಹಿಂದಿನ ದುರಂತಗಳನ್ನು ಸದನದ ಗಮನಕ್ಕೆ ತಂದ ಅವರು, "ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು ಇಪ್ಪತ್ತು ಕಾಲ್ತುಳಿತದ ಘಟನೆಗಳು ನಡೆದಿವೆ. 2008ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ 162 ಮಂದಿ ಮೃತಪಟ್ಟಿದ್ದರು. ಆಗ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರ್ಕಾರ. ಅದೇ ರೀತಿ, ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ದುರಂತದಲ್ಲಿ 250 ಅಮಾಯಕರು ಪ್ರಾಣ ಕಳೆದುಕೊಂಡಾಗ, ಅಲ್ಲಿ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವೇ ಇತ್ತು. 2012ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ 20 ಮಂದಿ ಸಾವಿಗೀಡಾದಾಗಲೂ ಅಲ್ಲಿ ಬಿಜೆಪಿ ಆಡಳಿತವೇ ಇತ್ತು," ಎಂದು ಸಿಎಂ ಸಿದ್ದರಾಮಯ್ಯ ಅಂಕಿಅಂಶಗಳನ್ನು ಮುಂದಿಟ್ಟರು.