ರಾಜ್ಯವನ್ನು ಬೆಚ್ಚಿಬೀಳಿಸಿದ ಚಿನ್ನಸ್ವಾಮಿ ಸ್ಟೇಡಿಯಮ್ ಕಾಲ್ತುಳಿತ ದುರಂತದ ಕುರಿತು ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದರ ಜೊತೆಗೆ, ವೈಯಕ್ತಿಕ ಟೀಕೆಗಳಿಗೆ ಭಾವುಕರಾಗಿ ಉತ್ತರ ನೀಡಿದರು. "ಹೌದು, ನಾನು ದೋಸೆ ತಿನ್ನಲು ಹೋಗಿದ್ದು ನಿಜ. ನನ್ನ ಮೊಮ್ಮಗನಿಗಾಗಿ ಹೋಗಿದ್ದೆ," ಎಂದು ಅವರು ನೀಡಿದ ಸ್ಪಷ್ಟನೆ ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು. ತಮ್ಮ ಮೇಲಿನ 'ದೋಸೆ ತಿಂದ' ಆರೋಪಕ್ಕೆ ವೈಯಕ್ತಿಕ ನೆಲೆಯಲ್ಲಿ ಉತ್ತರಿಸಿದ ಸಿಎಂ, "ಆ ಘಟನೆ ನಡೆದಾಗ ನಾನು ದೋಸೆ ತಿನ್ನಲು ಹೋಗಿದ್ದೆ ಎಂದು ಆರೋಪಿಸಿದ್ದಾರೆ. ಹೌದು, ನಾನು ಹೋಗಿದ್ದು ನಿಜ, ಸುಳ್ಳು ಹೇಳುವುದಿಲ್ಲ. ನನ್ನ ಮೊಮ್ಮಗ ಹಿಂದಿನ ದಿನವಷ್ಟೇ ಲಂಡನ್ನಿಂದ ಬಂದಿದ್ದ. 'ತಾತ, ದೋಸೆ ತಿನ್ನಲು ಹೋಗೋಣ' ಎಂದು ಕೇಳಿದ. ಹಾಗಾಗಿ ಅವನನ್ನು ಕರೆದುಕೊಂಡು ಹೋಗಿದ್ದೆ. ಇದನ್ನು ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ," ಎಂದು ಸ್ಪಷ್ಟಪಡಿಸಿದರು. "ಸಂಜೆ 5.30ಕ್ಕೆ ಸಚಿವ ಪೊನ್ನಣ್ಣ ಅವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದಾಗಲೇ ಘಟನೆಯ ಗಂಭೀರತೆ ಗೊತ್ತಾಗಿದ್ದು. ತಕ್ಷಣ ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದೆ. ಅಷ್ಟರಲ್ಲಾಗಲೇ 11 ಮಂದಿ ಮೃತಪಟ್ಟಿದ್ದರು. ಮನುಷ್ಯತ್ವ ಇರುವ ಯಾರಿಗಾದರೂ ಇಂತಹ ಘಟನೆ ನಡೆದಾಗ ದುಃಖ ಬಂದೇ ಬರುತ್ತದೆ," ಎಂದು ಭಾವುಕರಾಗಿ ನುಡಿದರು. 42 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಘಟನೆ ನೋಡಿಲ್ಲ ದುರಂತದ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ಸಿದ್ದರಾಮಯ್ಯ, "ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಸತ್ತ ಘಟನೆಯನ್ನು ನಾನು ನೋಡಿಯೇ ಇರಲಿಲ್ಲ. ಈ ಘಟನೆಯಿಂದ ನನಗೂ ಅತೀವ ದುಃಖವಾಗಿದೆ, ಆ ನೋವಿನಿಂದ ನಾನಿನ್ನೂ ಹೊರಬಂದಿಲ್ಲ. ಘಟನೆ ನಡೆದ ದಿನವೇ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಆದರೆ, ಇವರು (ವಿಪಕ್ಷಗಳು) ತಮ್ಮ ಮಾತಿನ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ," ಎಂದು ಆರೋಪಿಸಿದರು. ಬಿಜೆಪಿ ಪ್ರಶ್ನೆಗಳಿಗೆ ಉತ್ತರ ಕಾಲ್ತುಳಿತ ದುರಂತದ ಬಗ್ಗೆ ಪ್ರತಿಪಕ್ಷ ಬಿಜೆಪಿ ಮಾಡಿದ ಆರೋಪಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, "ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅನುಭವಿಗಳು, ಅವರು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಮಾತುಗಳನ್ನು ನಾನು ಒಂದೇ ಒಂದು ಪ್ರತಿರೋಧ ತೋರದೆ ಕೇಳಿದ್ದೇನೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ಮುಗಿಬೀಳಲು ನೀವು ಮೊದಲೇ ತಯಾರಾಗಿದ್ದೀರಿ ಎನಿಸುತ್ತದೆ," ಎಂದು ಟೀಕಿಸಿದರು. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಮಾತಿನ ವೈಖರಿಯನ್ನು ಷೇಕ್ಸ್ಪಿಯರ್ ನಾಟಕಕ್ಕೆ ಹೋಲಿಸಿದ ಸಿಎಂ, "ಸುರೇಶ್ ಕುಮಾರ್ ಉತ್ತಮ ಮಾತುಗಾರರು. ಷೇಕ್ಸ್ಪಿಯರ್ ನಾಟಕದಲ್ಲಿ ಬರುವ ಮಾರ್ಕ್ ಆಂಟೋನಿಯಂತೆ ಚಾಣಾಕ್ಷತನದಿಂದ ಮಾತನಾಡುತ್ತಾರೆ," ಎಂದು ಕುಟುಕಿದರು. ಆರ್. ಅಶೋಕ್ ಅವರು ಮಾಡಿದ ವೈರ್ಲೆಸ್ ಸಂದೇಶದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಅಶೋಕ್ ಅವರು ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾದ ಅಂಶಗಳನ್ನೇ ಇಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಮಾತು ಮತ್ತು ವರದಿಯ ಅಂಶಗಳು ಒಂದೇ ರೀತಿ ಇದ್ದವು," ಎಂದು ತಿರುಗೇಟು ನೀಡಿದರು. ಸರ್ಕಾರದ ಕ್ರಮಗಳ ಸಮರ್ಥನೆ ಕಾಲ್ತುಳಿತದ ಬಳಿಕ ರಾಹ್ತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಿಎಂ ಬಲವಾಗಿ ಸಮರ್ಥಿಸಿಕೊಂಡರು. ದುರಂತದ ಬಳಿಕ ತಾವೇ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹಗಳನ್ನು ನೋಡಿ ತೀವ್ರವಾಗಿ ನೊಂದಿದ್ದಾಗಿ ಹೇಳಿಕೊಂಡ ಅವರು, ಘಟನೆಯ ಸತ್ಯಾಸತ್ಯತೆ ತಿಳಿಯಲು ಮ್ಯಾಜಿಸ್ಟೀರಿಯಲ್ ಮತ್ತು ನ್ಯಾಯಾಂಗ ತನಿಖೆ ಎರಡಕ್ಕೂ ತಕ್ಷಣವೇ ಆದೇಶಿಸಿದ್ದಾಗಿ ಸದನಕ್ಕೆ ಸ್ಪಷ್ಟಪಡಿಸಿದರು. ತನಿಖಾ ಕ್ರಮಗಳ ಬಗ್ಗೆ ಸಿಎಂ ಸ್ಪಷ್ಟನೆ ವಿಪಕ್ಷ ಶಾಸಕ ಸುರೇಶ್ ಕುಮಾರ್ ಅವರು 'ಸಾವಿಗೆ ಸರ್ಕಾರವೇ ಪ್ರಚೋದನೆ ಮತ್ತು ಕುಮ್ಮಕ್ಕು ನೀಡಿದೆ' ಎಂದು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, "ತನಿಖೆ ನಿಖರವಾಗಿ ನಡೆಯಲಿ ಎಂಬ ಕಾರಣಕ್ಕಾಗಿಯೇ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಿದ್ದೇವೆ," ಎಂದರು. "ಮ್ಯಾಜಿಸ್ಟ್ರೇಟ್ ತನಿಖೆಗೆ 15 ದಿನಗಳೊಳಗೆ ಹಾಗೂ ಕುನ್ಹಾ ಆಯೋಗಕ್ಕೆ ಒಂದು ತಿಂಗಳೊಳಗೆ ವರದಿ ನೀಡಲು ಸೂಚಿಸಲಾಗಿತ್ತು. ಅದರಂತೆ, ಕುನ್ಹಾ ಅವರು ಜುಲೈ 10ರಂದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಾವು ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ," ಎಂದು ಅವರು ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು. ಬೆಲ್ಲದ್ಗೆ ಕನ್ನಡ ಪಾಠ ಇದೇ ವೇಳೆ, ಚರ್ಚೆಯ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ಅವರತ್ತ ತಿರುಗಿದ ಸಿಎಂ ಸಿದ್ದರಾಮಯ್ಯ, "ಬೆಲ್ಲದ್, ನಿನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ನಿನ್ನ ತಂದೆ ಮತ್ತು ನಾನು ಗೋಕಾಕ್ ಚಳವಳಿಯಲ್ಲಿ ಒಟ್ಟಿಗೆ ಭಾಗವಹಿಸಿದ್ದೆವು. ಆಗ ನೀನು ಬಹಳ ಚಿಕ್ಕವನಿದ್ದೆ, ಅಥವಾ ಹುಟ್ಟಿದ್ದೀಯೋ ಇಲ್ಲವೋ. ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ," ಎಂದು ಹೇಳುವ ಮೂಲಕ ಕನ್ನಡದ ಬಗ್ಗೆ ಅವರಿಗೆ ಲಘು ಧಾಟಿಯಲ್ಲಿ ಪಾಠ ಮಾಡಿದರು. ಈ ಅನಿರೀಕ್ಷಿತ ಮಾತಿನಿಂದ ಸದನದಲ್ಲಿ ಕೆಲಕಾಲ ನಗೆಯುಕ್ಕಿತು.