ಜಿಂದಾಬಾದ್‌ ಕೋಲಾಹಲ: ಉಭಯ ಸದನದಲ್ಲಿ ವಾಗ್ವಾದ, ಕಲಾಪ ಮುಂದಕ್ಕೆ

ರಾಜ್ಯಸಭಾ ಚುನಾವಣಾ ವಿಜಯೋತ್ಸವದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ವಿಷಯ ಬುಧವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಗಿ, ಕಲಾಪವನ್ನು ಬಲಿ ತೆಗೆದುಕೊಂಡಿತು.

Update: 2024-02-28 13:01 GMT
ವಿಧಾನಸಭೆಯಲ್ಲಿ ವಾಗ್ವಾದ, ಕಲಾಪ ಮುಂದಕ್ಕೆ ದೂಡಲಾಯಿತು.
Click the Play button to listen to article

ರಾಜ್ಯಸಭಾ ಚುನಾವಣಾ ವಿಜಯೋತ್ಸವದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ವಿಷಯ ಬುಧವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಗಿ, ಕಲಾಪವನ್ನು ಬಲಿ ತೆಗೆದುಕೊಂಡಿತು.

ಬಿಜೆಪಿ ಸದಸ್ಯರು ಬೆಳಿಗ್ಗೆ ಸದನಕ್ಕೆ ಬರುವಾಗಲೇ ರಾಷ್ಟ್ರಧ್ವಜ ಹಿಡಿದು, ಭಾರತ್‌ ಮಾತಾಕಿ ಜೈ ಎಂಬ ಘೋಷಣೆ ಕೂಗುತ್ತಲೇ ಪ್ರತಿಭಟನೆ ಸೂಚಿಸಿದ್ದರು. ಧ್ವಜದ ವಿಷಯದಲ್ಲಿ ಸ್ಪೀಕರ್‌ ಮತ್ತು ಬಿಜೆಪಿ ನಾಯಕರ ನಡುವೆ ಕಲಾಪ ಆರಂಭಕ್ಕೂ ಮುನ್ನವೇ ವಾಗ್ವಾದ ನಡೆದಿತ್ತು.

ವಿಧಾನಸಭೆಯಲ್ಲಿ ವಾಗ್ವಾದ, ಕಲಾಪ ಮುಂದಕ್ಕೆ

ಬುಧವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಕೂಡ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ವಿಷಯ ಭಾರೀ ವಾಗ್ವಾದಕ್ಕೆ ಕಾರಣವಾಯಿತು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ಪ್ರತಿಪಕ್ಷ ಶಾಸಕರು ಸರ್ಕಾರದ ವಿರುದ್ಧ, ರಾಜ್ಯಸಭಾ ಅಭ್ಯರ್ಥಿ ನಾಸೀರ್‌ ಹುಸೇನ್‌ ವಿರುದ್ಧ ಘೋಷಣೆ ಕೂಗಿದರು. ಭಾರತ್‌ ಮಾತಾಕಿ ಜೈ ಘೋಷಣೆ ಕೂಗುವ ಮೂಲಕ ವಿಶಿಷ್ಟ ಪ್ರತಿಭಟನೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌, ಘೋಷಣೆ ಕೂಗಿದವರ ಮೇಲೆ ಕ್ರಮಕ್ಕೆ ಯಾಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಘಟನೆ ನಡೆದ ಕ್ಷಣದಲ್ಲೇ ಸಚಿವರು ಸಭೆ ಕರೆದು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು. ಆದರೆ, ಸರ್ಕಾರ ಮೌನ ವಹಿಸಿದೆ. ಯಾರನ್ನು ರಕ್ಷಿಸಲು ಈ ಮೌನ? ನಾಸೀರ್‌ ಹುಸೇನ್‌ ಕೂಡ ಯಾಕೆ ಮೌನ ವಹಿಸಿದ್ದಾರೆ? ಪವಿತ್ರವಾದ ವಿಧಾನಸೌಧವನ್ನು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗುವ ಮೂಲಕ ಅಪವಿತ್ರಗೊಳಿಸಿದ್ದಾರೆ. ಇಂಥ ಜಾಗದಲ್ಲಿ ನಾವು ಕೂರುವುದು ಹೇಗೆ? ಕಾನೂನು ಸುವ್ಯವಸ್ಥೆ ವಿಧಾನಸೌಧದಲ್ಲೇ ಇಲ್ಲ ಎಂದರೆ ರಾಜ್ಯದಲ್ಲಿ ಹೇಗಿರಲು ಸಾಧ್ಯ? ವಿಧಾನಸೌಧದ ಮೇಲೇ ಪಾಕಿಸ್ತಾನದ ಧ್ವಜ ಹಾರಿಸಿದರೆ ಏನು ಮಾಡುತ್ತೀರಿ? ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಮತ್ತೊಬ್ಬ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ನಡೆದ ಘಟನೆಯನ್ನು ಮುಚ್ಚಿಹಾಕುವ ಯತ್ನ ಬೇಡ. ಹಿಂದೂ, ಮುಸ್ಲಿಂ, ಕ್ರೈಸ್ತರು ಯಾರೇ ಇರಲಿ ದೇಶದ ವಿರುದ್ಧ ಮಾತನಾಡಿದರೆ ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಭಾರತದ ವಿರುದ್ಧ ಪಾಕಿಸ್ತಾನದ ಪರ ಇರುವವರು ನಮಕ್‌ ಹರಾಮಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಷೇಪಾರ್ಹ ಪದ ಬಳಕೆ ಮಾಡಿದ ಯತ್ನಾಳ್‌ ವಿರುದ್ಧ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ ಆಕ್ಷೇಪವೆತ್ತಿದರು. ಆದರೆ, ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ಯಾವ ಪದ ಬಳಸಿದರೂ ಅನುಮತಿ ಇದೆ ಎಂದು ಸ್ಪೀಕರ್‌ ಯು ಟಿ ಖಾದರ್‌ ಹೇಳಿದರು.

ಬಿಜೆಪಿ ಶಾಸಕರಿಗೆ ಪ್ರತಿಕ್ರಿಯಿಸಿದ ಸಚಿವ ಡಾ ಎಂ ಬಿ ಪಾಟೀಲ್‌, ಸಿಂಧಗಿಯಲ್ಲಿ ಈ ಹಿಂದೆ ಪಾಕಿಸ್ತಾನದ ಧ್ವಜ ಹಾರಿಸಿದಾಗಲೂ ನೀವು ಹೀಗೆ ಹುಯಿಲೆಬ್ಬಿಸಿದ್ದಿರಿ. ಆದರೆ, ಕೊನೆಗೆ ತನಿಖೆ ನಡೆಸಿದಾಗ ಸತ್ಯ ಹೊರಬಂದಿತ್ತು. ಎಲ್ಲರೂ ಮುಸ್ಲಿಮರು ಧ್ವಜ ಹಾರಿಸಿದ್ದು ಎಂದು ಭಾವಿಸಿದ್ದರು. ಆದರೆ, ಹಾರಿಸಿದ್ದು ನಿಮ್ಮವರೇ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಇದು ತನಿಖೆ ನಡೆಸಿ ಸತ್ಯ ಹೊರತರುತ್ತೇವೆ ಎಂದು ಹೇಳಿದರು.

ಅವರಿಗೆ ದನಿಗೂಡಿಸಿದ ಕಾಂಗ್ರೆಸ್‌ ಶಾಸಕ ನರೇಂದ್ರ ಸ್ವಾಮಿ, ದೇಶ ವಿರೋಧಿ ಘೋಷಣೆ ಕೂಗಿದ್ದರೆ ಗಲ್ಲಿಗೇರಿಸಿ. ಅದು ಬಿಟ್ಟು ಸತ್ಯವನ್ನು ತಿರುಚಿ ಗದ್ದಲವೆಬ್ಬಿಸುವುದಲ್ಲ. ಬ್ರಿಟಿಷರ ಗುಲಾಮರಿಂದ ನಾವು ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಪ್ರಿಯಾಂಕ್‌ ಖರ್ಗೆ ಮತ್ತು ದಿನೇಶ್‌ ಗುಂಡೂರಾವ್‌ ಕೂಡ ದನಿಗೂಡಿಸಿ ಬಿಜೆಪಿ ನಾಯಕರ ವಿರುದ್ಧ ಪ್ರತಿದಾಳಿ ನಡೆಸಿದರು. ಈ ವೇಳೆ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದನ ಗೊಂದಲದ ಗೂಡಾಯಿತು. ಆ ವೇಳೆ ಸ್ಪೀಕರ್‌ ಯು ಟಿ ಖಾದರ್‌ ಅವರು ಕಲಾಪವನ್ನು ಮುಂದೂಡಿದರು.

ಪರಿಷತ್‌ ನಲ್ಲೂ ಘೋಷಣೆ ಪ್ರತಿಧ್ವನಿ

ವಿಧಾನ ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯವಾಗಿ ಕಾಂಗ್ರೆಸ್‌ ಸದಸ್ಯ ಅಬ್ದುಲ್ ಜಬ್ಬಾರ್‌ ಅವರು ಬಿಜೆಪಿ ಸದಸ್ಯರೊಂದಿಗೆ ವಾಗ್ವಾದ ನಡೆಸುತ್ತಿರುವಾಗ ಏಕವಚನ ಪ್ರಯೋಗಿಸಿದ್ದು ಪ್ರತಿಪಕ್ಷ ನಾಯಕರ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಅಬ್ದುಲ್‌ ಜಬ್ಬಾರ್‌ ಅವರು ಬಿಜೆಪಿ ಶಾಸಕರಿಗೆ ಏಕ ವಚನ ಪ್ರಯೋಗಿಸಿದರು ಎಂಬುದು ಪರಸ್ಪರ ಸಂಘರ್ಷಕ್ಕೆ ಕಾರಣವಾಯಿತು.

ಬಿಜೆಪಿಯ ರವಿಕುಮಾರ್‌ ನೇತೃತ್ವದಲ್ಲಿ ಶಾಸಕರು ಸಭಾಪತಿಗಳ ಆಸನದತ್ತ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಬ್ಬಾರ್‌ ಖಾನ್‌ ಅವರತ್ತ ನುಗ್ಗಿ ಪ್ರಶ್ನಿಸಲು ಮುಂದಾದರು. ಈ ವೇಳೆ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿದ್ದರಿಂದ ಮಧ್ಯಪ್ರವೇಶಿಸಿದ ಮಾರ್ಷಲ್‌, ಸಭಾಪತಿ ಪೀಠಕ್ಕೆ ರಕ್ಷಣೆಯಾಗಿ ಸಾಲಾಗಿ ನಿಂತು ಪೀಠದತ್ತ ಯಾರೂ ನುಗ್ಗದಂತೆ ನೋಡಿಕೊಂಡರು.

ಇದರಿಂದಾಗಿ ಕೆಲ ಕಾಲ ಸದನದಲ್ಲಿ ಸಂಪೂರ್ಣ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ್‌ ಹೊರಟ್ಟಿಯವರು ಕಲಾಪವನ್ನು ಮುಂದೂಡಿದರು. ಕಲಾಪ ಮುಂದೂಡಿದ ಬಳಿಕವೂ ಕೆಲ ಹೊತ್ತು ಬಿಜೆಪಿ ಶಾಸಕರು ಸದನದಲ್ಲಿ ಜೋರು ದನಿಯಲ್ಲಿ ಘೋಷಣೆ ಕೂಗುತ್ತಾ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇದ್ದರು. ಕೆಲವು ಸಮಯದ ಬಳಿಕ ನಿರ್ಗಮಿಸಿದರು.

ಅಧಿವೇಶನ ಒಂದು ದಿನ ವಿಸ್ತರಣೆ

ಈ ಹಿಂದೆ ನಿಗದಿಯಾದಂತೆ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಬುಧವಾರಕ್ಕೆ ಅಂತ್ಯವಾಗಬೇಕಿತ್ತು. ಆದರೆ, ಬುಧವಾರದ ಕಲಾಪಗಳು ಜಿಂದಾಬಾದ್‌ ಗದ್ದಲಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಯಿತು. ಗುರುವಾರ ಅಧಿವೇಶನ ಮುಕ್ಗಾಯವಾಗಲಿದೆ.

Tags:    

Similar News