ಯುವ ಅಧಿಕಾರಿಗಳು ವೃತ್ತಿ ಘನತೆಯಿಂದ ಕರ್ತವ್ಯ ನಿರ್ವಹಿಸಿ: ಡಿಸಿಪಿ ನಾರಾಯಣ ಭರಮನಿ

ನಮ್ಮ ಇಲಾಖೆಯ ಬಗ್ಗೆ ಯಾವಾಗಲೂ ನಿಷ್ಠೆ, ಹೆಮ್ಮೆ, ಅಭಿಮಾನ ಇರಬೇಕು. ಪೊಲೀಸ ಇಲಾಖೆಯ ಧ್ಯೇಯವಾದಂತೆ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ರೀತಿ ನಮ್ಮ ವೃತ್ತಿ ಬದುಕು ಇರಬೇಕು ಎಂದು ಡಿಸಿಪಿ ನಾರಾಯಣ ಭರಮನಿ ತಿಳಿಸಿದರು.;

Update: 2025-07-18 08:35 GMT

ಡಿಸಿಪಿ ನಾರಾಯಣ ಭರಮನಿಯವರನ್ನು ಬೀಳ್ಕೊಡಲಾಯಿತು.

"ಖಾಕಿ ನನ್ನ ದೇವರು, ತಾಯಿಯಂತೆ ಗೌರವಿಸಿ, ಬದುಕಿದ್ದೇನೆ. ಯುವ ಅಧಿಕಾರಿಗಳು ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವಂತೆ ಸದಾ ಕಾಲ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು" ಎಂದು ಬೆಳಗಾವಿ ಡಿಎಸ್‌ಪಿಯಾಗಿ ಮುಂಬಡ್ತಿ ಪಡೆದ ನಾರಾಯಣ ಭರಮನಿ ಅವರು ಕಿರಿಯ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು.

ಧಾರವಾಡದ ಎಸ್‌ಪಿ ಕಚೇರಿ ಸಭಾ ಭವನದಲ್ಲಿ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾವು ಕೆಲಸ ಮಾಡುವ ಇಲಾಖೆ, ಹುದ್ದೆಯ ಬಗ್ಗೆ ಯಾವಾಗಲೂ ನಿಷ್ಠೆ, ಹೆಮ್ಮೆ, ಅಭಿಮಾನ ಇರಬೇಕು. ಪೊಲೀಸ್‌ ಇಲಾಖೆಯ ಧ್ಯೇಯವಾಗಿರುವ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ತರಹ ವೃತ್ತಿ ಬದುಕು ಇರಬೇಕು ಎಂದರು.

ನಮ್ಮತನ ಕಳೆದುಕೊಳ್ಳಬೇಡಿ

ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವಾಗ ನಿಷ್ಠುರತೆ ಇರಬೇಕು. ಕಾನೂನು ಪ್ರಕಾರ ಆಗುವುದನ್ನು ಮಾಡಬೇಕು, ಆಗದಿದ್ದನ್ನು ಇಲ್ಲವೆಂದು ನೇರವಾಗಿ ಹೇಳುವ ಸಾಮರ್ಥ್ಯ, ಗುಣ ಬೆಳೆಸಿಕೊಳ್ಳಬೇಕು. ಸಮಾಜವನ್ನು ಸರಿದಾರಿಗೆ ತರುವ ಕೆಲಸ ನಮ್ಮಿಂದ ಆಗಬೇಕು. ನಮ್ಮತನವನ್ನು ಎಂದಿಗೂ ಕಳೆದುಕೊಳ್ಳಬಾರದು. ಧಾರವಾಡದಿಂದ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಮೂಟೆ ಹೊತ್ತು ಹೊರಟಿದ್ದೇನೆ. ಧಾರವಾಡ ಜಿಲ್ಲೆ ಶಾಂತ, ಸುಂದರವಾಗಿದೆ. ಸಂಸ್ಕಾರ, ಸಂಸ್ಕೃತಿ ಇನ್ನೂ ಉಳಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.

"ನೂರು ಪುಸ್ತಕ ಹೇಳುವ ಸಾರವನ್ನು ಒಬ್ಬ ಹಿರಿಯ ಅಧಿಕಾರಿಯ ಅನುಭವದ ಮಾತುಗಳು ಹೇಳುತ್ತವೆ. ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ನಮ್ಮ ಪೊಲೀಸ್‌ ಇಲಾಖೆಯ ಹೆಮ್ಮೆಯ ಪುತ್ರ. ಅವರ ಸೇವೆ, ನಡವಳಿಕೆ, ಕರ್ತವ್ಯ ನಿಷ್ಠೆ ಮತ್ತು ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸುದೀರ್ಘ ಸೇವೆ, ಇಲಾಖೆಯ ಅಧಿಕಾರಿಗಳಿಗೆ ಸ್ಪೂರ್ತಿ, ಹೆಮ್ಮೆ ಮೂಡಿಸಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಅರ್ಯ ತಿಳಿಸಿದರು.

ಡಿಸಿಪಿಯಾಗಿ ಪದೋನ್ನತಿ ನೀಡಿದ್ದ ಸರ್ಕಾರ  

ಮುಖ್ಯಮಂತ್ರಿ ಸಿದ್ದರಾಮಯ್ಯ ʼಕೈ ಎತ್ತಿದ್ದರುʼ ಎಂಬ ಕಾರಣಕ್ಕೆ ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದ ಎಎಸ್‌ಪಿ ನಾರಾಯಣ ಭರಮನಿಯವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಡಿಸಿಪಿಯಾಗಿ ಪದೋನ್ನತಿ ನೀಡಿ ಬೆಳಗಾವಿ ಡಿಸಿಪಿಯಾಗಿ ನೇಮಿಸಿ ಆದೇಶಿಸಿತ್ತು. ಕಳೆದ ಏಪ್ರಿಲ್‌ನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಅಧಿಕಾರಿ ವಿರುದ್ದ ಸಿಎಂ ಸಿದ್ದರಾಮಯ್ಯರ ನಡವಳಿಕೆ ಸಾರ್ವಜನಿಕ ವಲಯದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಿತ್ತು.

ಸಿಎಂ ಸ್ಪಷ್ಟನೆ

ಘಟನೆಯಿಂದ ಬೇಸತ್ತಿದ್ದ ಪೊಲೀಸ್‌ ಅಧಿಕಾರಿ ರಾಜೀನಾಮೆ ನೀಡಲು ಮುಂದಾಗಿದ್ದ ವೇಳೆ ಗೃಹ ಸಚಿವ ಪರಮೇಶ್ವರ್‌ ಕರೆ ಮಾಡಿ ರಾಜೀನಾಮೆ ನೀಡದಂತೆ ಮನವೊಲಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೂಡ ಕರೆ ಮಾಡಿ, " ನಾನು ಬೇಕು ಎಂದು ಆ ರೀತಿ ನಡೆದುಕೊಳ್ಳಲಿಲ್ಲ. ನಿಮಗೆ ಅಗೌರವ ಅಥವಾ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

Tags:    

Similar News