ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ

ರಾಜಪ್ರಭುತ್ವಕ್ಕೆ ತಳಕು ಹಾಕಿಕೊಂಡಿರುವ ಮೈಸೂರು ಅರಮೆನೆಯ ಪ್ರತಿನಿಧಿ, ಖಾಸಗಿ ದರಬಾರಿನ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದೆ. ರಾಜಮನೆತನದ ಹಿನ್ನೆಲೆಯೇ ಚುನಾವಣಾ ರಾಜಕೀಯದಲ್ಲಿ ಪಾತ್ರ ವಹಿಸಲಿದೆಯೇ? ಬಿಜೆಪಿ-ಕಾಂಗ್ರೆಸ್‌ ಪೈಪೋಟಿಯಲ್ಲಿ ಯಾರು ಪ್ರಬಲರು?

Update: 2024-03-16 01:40 GMT

ಮೈಸೂರು ಲೋಕಸಭೆ ಸ್ಥಾನಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಹಾಗೂ ಕರ್ನಾಟಕದ ರಾಜಕೀಯ ವಲಯದಲ್ಲಿ ವಿಶೇಷ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಮೈಸೂರು ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಹಳ ವರ್ಷಗಳ ಬಳಿಕ "ರಾಯಲ್‌ ರಾಜಕೀಯ"ದ ಕೊಂಡಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಗಿಟಾರ್ ಮತ್ತು ಸರಸ್ವತಿ ವೀಣೆ ನುಡಿಸುತ್ತಾರೆ ಮತ್ತು ಟೆನ್ನಿಸ್ ಆಡುತ್ತಾರೆ ನಿಜ. ಕುದುರೆ ರೇಸಿಂಗ್ ಬಗ್ಗೆ ಕೂಡಾ ಆಸ್ಥೆ ಹೊಂದಿದ್ದಾರೆ ದಿಟ.

ಆದರೆ ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ ಕೇಳಿದಂತೆ ಅರಮನೆಯಲ್ಲಿ ನೆಲೆಸಿರುವ ‘ರಾಜ’ ಜನರ ನಡುವೆ ನಡೆದಾಡಿಕೊಂಡು ಜನ ಸೇವೆ ಮಾಡಬಹುದೇ?

ಆದರೆ 32ರ ಹರೆಯದ ಈ ಖಾಸಗಿ ದರ್ಬಾರಿನ ರಾಜ, ಅರಮನೆಯ ಪ್ರಾತಿನಿಧ್ಯದ ಜತೆಗೆ ಜನಪ್ರತಿನಿಧಿಯಾಗುವ ಸಾಮರ್ಥ್ಯ ಹೊಂದಿದ್ದರೂ, ರಾಜವಂಶಸ್ಥರಾಗಿ ಕ್ಷೇತ್ರದಿಂದ ಗೆಲುವು ಸಾಧಿಸುವುದು ಇನ್ನು ಮುಂದೆ ಸುಲಲಿತವೇನಲ್ಲ ರಾಜಕೀಯ ವಿಶ್ಲೇಷಕರು. ಇಂದಿನ ಮತದಾರರನ್ನು ಓಲೈಸಲು ರಾಜಮನೆತನದ ಹೆಸರಿಗಿಂತ, ರಾಜಕೀಯ ಪಕ್ಷದ ಜನಪ್ರಿಯತೆ ಮತ್ತು ಸಾಮಾಜಿಕ ಚಲನಶೀಲತೆಯೂ ಬಹುಮುಖ್ಯವಾಗುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು.

ಯದುವೀರ್ ಯಾರು?

ಮಾರ್ಚ್ 24, 1992 ರಂದು ಬೆಂಗಳೂರಿನಲ್ಲಿ ಸ್ವರೂಪಾ ಗೋಪಾಲ್ ರಾಜ್ ಅರಸ್‌ ಮತ್ತು ರಾಜಕುಮಾರಿ ತ್ರಿಪುರಸುಂದರಿ ದೇವಿ ದಂಪತಿಗೆ ಜನಿಸಿದ ಯದುವೀರ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಮತ್ತು ನಂತರ ಕೆನಡಿಯನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಾಡಿದರು. ಅವರು ಅಮೇರಿಕದ ಅಮ್ಹೆರ್ಸ್ಟ್‌ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪದವಿಗಳನ್ನು ಹೊಂದಿದ್ದಾರೆ. 2014 ರಲ್ಲಿ, ಅವರ ಚಿಕ್ಕಪ್ಪ ೨೬ನೇ "ಮೈಸೂರಿನ ರಾಜ" ಶ್ರೀಕಂಠದತ್ತ ಒಡೆಯರ್ ಅವರು ಡಿಸೆಂಬರ್ 2013 ರಲ್ಲಿ ನಿಧನರಾದ ನಂತರ ಅವರ ಪತ್ನಿ ಪ್ರಮೋದಾ ದೇವಿ, ಯದುವೀರ್‌ ಅವರನ್ನು ದತ್ತು ಪಡೆದರು. ದಸರಾ ಸಂದರ್ಭದಲ್ಲಿ, ರಾಜವಂಶದ 27 ನೇ 'ರಾಜ' ಎನಿಸಕೊಂಡರು ಯದುವೀರ್.

ಯದುವೀರ್ ಅವರು ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ (ಮೈಸೂರು ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದವರು) ಅವರ ಹಿರಿಯ ಪುತ್ರಿ ರಾಜಕುಮಾರಿ ಗಾಯತ್ರಿ ದೇವಿಯವರ ಮೊಮ್ಮಗ. ಜಯಚಾಮರಾಜೇಂದ್ರ ಅವರು ತಮ್ಮ ರಾಜ್ಯವನ್ನು ಭಾರತ ಸರ್ಕಾರದೊಂದಿಗೆ ವಿಲೀನಗೊಳಿಸುವುದಕ್ಕೆ ಸಾಕ್ಷಿಯಾದರು ಮತ್ತು ಸ್ವಾತಂತ್ರ್ಯದ ನಂತರ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದರು ಎಂಬುದು ಸರ್ವ ವಿದಿತ.

ರಾಜಮನೆತನದವನು ಜನಪ್ರತಿನಿಧಿಯಾಗಬಹುದೇ?

ಹಳೆಯ ಮೈಸೂರು ಪ್ರದೇಶದಲ್ಲಿ ರಾಜಮನೆತನವು ಇಂದಿಗೂ ಗೌರವ ಮತ್ತು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆಯುತ್ತಿದೆ. ಪ್ರಸ್ತುತ, ಯದುವೀರ್ ಅವರು ಮೈಸೂರು ಮತ್ತು ಬೆಂಗಳೂರು ಅರಮನೆಗಳು, ರಾಜಮನೆತನದ ಆಸ್ತಿಗಳು ಮತ್ತು ಸಂಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ. ಮೈಸೂರಿನ ವಿಶ್ವಪ್ರಸಿದ್ಧ ದಸರಾ ಉತ್ಸವ ಸೇರಿದಂತೆ ಅರಮನೆ ಆವರಣದಲ್ಲಿ ರಾಜಮನೆತನವು ಹಲವಾರು ಉತ್ಸವಗಳನ್ನು ಆಯೋಜಿಸುತ್ತದೆ.

ಯದುವೀರ್ ಅವರು ವಿವಿಧ ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂಸ್ಕೃತಿ, ಪರಿಸರ ಮತ್ತು ಪರಂಪರೆಯನ್ನು ಕಾಪಾಡುವುದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಮೈಸೂರು ಅರಮನೆಯ ವ್ಯವಸ್ಥಾಪಕರೊಬ್ಬರು ಹೇಳಿದರು.

“ಯದುವೀರ್ ಅವರು ತಮ್ಮ ಭೇರುಂಡ ಫೌಂಡೇಶನ್ ಮೂಲಕ ಪರಂಪರೆ, ಸಂಸ್ಕೃತಿ, ಪರಿಸರ, ಉದ್ಯಮ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯು 2016 ಮತ್ತು 2017ರಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನದಲ್ಲಿ ತಾಯಿ ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ರಾಯಭಾರಿಯಾಗಿದ್ದ ಅವರು 2018 ರಲ್ಲಿ ಹಳೆ ಮೈಸೂರು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಿದ್ದರು,'' ಎಂದು ಮೈಸೂರು ಅರಮನೆಯ ವ್ಯವಸ್ಥಾಪಕರೊಬ್ಬರು ತಿಳಿಸುತ್ತಾರೆ.




 ಜನ ನನ್ನನ್ನು ಸೋದರನಂತೆ ನೋಡುತ್ತಾರೆ: ಯದುವೀರ್

ಮೈಸೂರು ಲೋಕಸಭೆ ಚುನಾವಣೆ ಸಂಬಂಧ ತಮ್ಮ ಉಮೇದುವಾರಿಕೆಗೆ ಪೂರ್ವಭಾವಿಯಾಗಿ ಯದುವೀರ್ ಅವರ ಸಂಬಂಧ ಕ್ಷೇತ್ರದ ಹಾಲಿ ಸಂಸದ ಸಿಂಹ ವ್ಯಂಗ್ಯೋಕ್ತಿಯನ್ನು ಹೇಳಿ, "ಬಿಜೆಪಿ ರಾಜಮನೆತನದವರನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಅದು ಪ್ರಜಾಪ್ರಭುತ್ವದ ಸಾರವನ್ನು ಎತ್ತಿ ತೋರಿಸುತ್ತದೆ, ಏಕೆಂದರೆ ರಾಜಮನೆತನದವರು ಸಾಮಾನ್ಯ ನಾಗರಿಕರೊಂದಿಗೆ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆʼ ಎಂದು ಹೇಳಿಕೆ ನೀಡಿದ್ದರು.

ಯದುವೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಿಂಹ ಅವರ ಹೆಸರನ್ನು ಹೆಸರಿಸದೆ ತಮ್ಮ ವಿರುದ್ಧದ ಟೀಕೆಗೆ ಉತ್ತರಿಸಿದರು. “ನಾನು ಮೈಸೂರು ಸಾಮ್ರಾಜ್ಯದ ಪ್ರತಿನಿಧಿಯಾದ ನಂತರ ಒಂಬತ್ತು ವರ್ಷಗಳ ಕಾಲ ಜನರೊಂದಿಗೆ ಬೆರೆತಿದ್ದೇನೆ. ನೀವು ಸಾರ್ವಜನಿಕ ಜೀವನಕ್ಕೆ ಬಂದಾಗ, ನೀವು ಸಾರ್ವಜನಿಕರ ಜತೆಗಿರಬೇಕು. ಜನ ನನ್ನನ್ನು ಸೋದರನಂತೆ ನೋಡಿದ್ದಾರೆ. ಜನರ ಋಣ ತೀರಿಸಲು ಇದೊಂದು ಸದವಕಾಶ,’’ ಎಂದು ತಮ್ಮದೇ ಶೈಲಿಯಲ್ಲಿ ಮಾರುತ್ತರ ನೀಡಿದ್ದಾರೆ.

ರಾಜಕೀಯಕ್ಕೆ ತನ್ನ ಪ್ರವೇಶ ದಿಢೀರ್ ಆಗಿಲ್ಲ ಎಂದ ಅವರು, "ಕಳೆದ ಒಂಬತ್ತು ವರ್ಷಗಳಿಂದ ನಾನು ಜನಮನದ ಜತೆಗಿದ್ದೇನೆ. ನಮಗೆ ಅಧಿಕಾರವಿದ್ದರೆ ಜನರ ಬದುಕನ್ನು ಸುಧಾರಿಸಬಹುದು. ಉತ್ತಮ ಸರ್ಕಾರ ರಚನೆಯಾದರೆ ಅಭಿವೃದ್ಧಿ ಸಾಧಿಸಬಹುದು. ನಾನು ಕಳೆದ ಒಂಬತ್ತು ವರ್ಷಗಳಿಂದ ನಮ್ಮ ಕ್ಷೇತ್ರದ ಮತ್ತು ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದೇನೆ ಮತ್ತು ಹಲವಾರು ಜನರನ್ನು ಭೇಟಿ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ," ಎಂದು ಅವರು ಹೇಳಿದ್ದಾರೆ.

ರಾಜಮನೆತನದವರಿಂದ ಚುನಾವಣಾ ರಾಜಕೀಯ ಸಾಧ್ಯವೆ?

ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥರು ಚುನಾವಣಾ ಅಖಾಡಕ್ಕೆ ಬರುತ್ತಿರುವುದು ಇದೇ ಮೊದಲಲ್ಲ. ಒಡೆಯರ್ ರಾಜವಂಶದ 26 ನೇ ಮುಖ್ಯಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಸಂಸದರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಎರಡು ಬಾರಿ ಅಂದರೆ ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಇನ್ನೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. ಆದಾಗ್ಯೂ, 2009 ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಂತರ ಚುನಾವಣೆಗಳು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಯಿತು.

“ಕೊಡಗು ಜಿಲ್ಲೆಯನ್ನು ಮೈಸೂರು ಕ್ಷೇತ್ರಕ್ಕೆ ಸೇರಿಸಿರುವುದು ಮತ್ತು ಜಾತಿ, ಸಮೂದಾಯದ ಪ್ರಜ್ಞೆ ಮತದಾರರ ಭಾವನೆಗಳನ್ನು ಬದಲಾಯಿಸಿವೆ ಮತ್ತು ಚುನಾವಣಾ ರಾಜಕೀಯದಲ್ಲಿ ರಾಜಮನೆತನದ ಪ್ರಾಬಲ್ಯಕ್ಕೆ ಸವಾಲಾಗಿದೆ. ರಾಜವಂಶದ ಮೇಲಿನ ಗೌರವವು ಉಳಿದುಕೊಂಡಿದ್ದರೂ, ಸಮಕಾಲೀನ ಚುನಾವಣಾ ಪ್ರವೃತ್ತಿಗಳು ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚು ಸೂಕ್ಷ್ಮವಾದ ವಿಧಾನವನ್ನು ಸೂಚಿಸುತ್ತವೆ, ಆಡಳಿತ ಮತ್ತು ಅಭಿವೃದ್ಧಿಯ ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ ,"ಎಂದು ಮೈಸೂರು ರಾಜಮನೆತನದ ನಿಕಟ ಸಹವರ್ತಿ ರಾಮರಾಜೇ ಅರಸ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರಾಜಮನೆತನದ ಪ್ರಭಾವವು ಐತಿಹಾಸಿಕವಾಗಿ ಚುನಾವಣಾ ಗೆಲುವಿಗೆ ಕೊಡುಗೆ ನೀಡಿದರೆ, ರಾಜಕೀಯ ಪಕ್ಷದ ಜನಪ್ರಿಯತೆ ಮತ್ತು ಆ ಅಭ್ಯರ್ಥಿಗಿರುವ ಸಾಮರ್ಥ್ಯ ಮತ್ತು ಜನರ ಒಲವು ಚುನಾವಣಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜನತಾ ಪಕ್ಷದ ಹಿಡಿತ ಮತ್ತು ಅದರ ನಂತರದ ವಿಭಜನೆಯನ್ನು ಉಲ್ಲೇಖಿಸಿದ ಅವರು ಬಳಿಕದ ಬಿಜೆಪಿ ಸಾಮರ್ಥ್ಯದ ಚೇತರಿಕೆ ಬಗ್ಗೆ ವಿವಿರಿಸಿದರು. "ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ಸಾರ್ವಜನಿಕ ಭಾವನೆ, ಜಾತಿ ಡೈನಾಮಿಕ್ಸ್ ಮತ್ತು ಸಮುದಾಯದ ಸಂಬಂಧಗಳು ಪಾತ್ರ ವಹಿಸುತ್ತವೆ" ಎಂದರು.

ಮೈಸೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅಲ್ಲಿ ಐದು ಕಾಂಗ್ರೆಸ್, ಎರಡು ಜೆಡಿಎಸ್ (ಎಸ್) ಮತ್ತು ಒಂದು ಬಿಜೆಪಿ ಪ್ರತಿನಿಧಿಸುತ್ತದೆ. ಹಾಗಾಗಿ ಚುನಾವಣೆಯಲ್ಲಿ ಯಾರು ಮುಂಚೂಣಿಯಲ್ಲಿರುತ್ತಾರೆ ಎಂಬುದನ್ನು ಊಹಿಸುವುದು ಅಷ್ಟು ಸುಲಭವಲ್ಲ ಎಂದೂ ಅವರು ಅಭಿಪ್ರಾಯಿಸಿದರು.

ಕಾಂಗ್ರೆಸ್ ನಿಂದ ಅಭ್ಯರ್ಥಿ

ಈ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಯ ಬಲದ ಮೇಲೆ ನಿಂತಿದೆ. ಇಬ್ಬರು ಸಂಭಾವ್ಯ ಸ್ಪರ್ಧಿಗಳು ಹೊರಹೊಮ್ಮಿದ್ದು, ಒಕ್ಕಲಿಗ ನಾಯಕ ಮತ್ತು ಕಾಂಗ್ರೆಸ್ ವಕ್ತಾರ ಕೆ ಲಕ್ಷ್ಮಣ್ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಮೊಮ್ಮಗ ಸೂರಜ್ ಹೆಗಡೆ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಯದುವೀರ್‌ಗೆ ಸವಾಲೆಸೆಯಲು ಕಾಂಗ್ರೆಸ್ನ ಪ್ರಮುಖ ಅಭ್ಯರ್ಥಿಯಾಗಿ ಹೆಗಡೆ ಆಯ್ಕೆಯಾದರೆ, 90ರ ದಶಕದಲ್ಲಿ ಚಂದ್ರಪ್ರಭಾ ಅರಸ್ (ದೇವರಾಜ್‌ ಅರಸು ಅವರ ಪುತ್ರಿ) ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಡುವಿನ ಸ್ಪರ್ಧೆಯನ್ನು ಇತಿಹಾಸ ಪ್ರತಿಧ್ವನಿಸಬಹುದು. ಹೆಗ್ಡೆಯವರ ಉಮೇದುವಾರಿಕೆಯು ಅಹಿಂದ ಮತದಾರರನ್ನು ಜತೆಗೂಡಿಸುವ ಸಾಮರ್ಥ್ಯ ಹೊಂದಿದ್ದರೆ ಲಕ್ಷ್ಮಣ ಅವರ ಅಭ್ಯರ್ಥಿತನ ಒಕ್ಕಲಿಗರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಸಾಧ್ಯವಾಗಬಹುದು. ಜೆಡಿ(ಎಸ್)-ಬಿಜೆಪಿ ಮೈತ್ರಿಯಿಂದಾಗಿ ಒಕ್ಕಲಿಗ ಮತಗಳು ವಿಭಜನೆಯಾಗುವ ಸಾಧ್ಯತೆಯಿದ್ದು, ಒಕ್ಕಲಿಗ ಮತ್ತು ಅಹಿಂದ ಬೆಂಬಲವನ್ನು ಭದ್ರಪಡಿಸಿಕೊಳ್ಳುವ ಕಾಂಗ್ರೆಸ್‌ ಪ್ರಯತ್ನ ಯದುವೀರ್‌ ಮತ್ತು ಬಿಜೆಪಿಗೆ ಸವಾಲಾಗುವ ಸಾಧ್ಯತೆ ದಟ್ಟವಾಗಿದೆ.



Tags:    

Similar News