ಗದ್ದುಗೆ ಗುದ್ದಾಟ| ಸಿದ್ದರಾಮಯ್ಯರ ಇಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ; ಕುರುಬ ಸಮುದಾಯ ಎಚ್ಚರಿಕೆ
ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯದ ಮುಖ್ಯಮಂತ್ರಿ ಅಲ್ಲ, ಸರ್ವ ಧರ್ಮಕ್ಕೆ ಸೇರಿದ ನಾಯಕ. ರಾಜ್ಯದಲ್ಲಿ ಉದ್ಭವಿಸಿರುವ ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ಹೈಕಮಾಂಡ್ ಮುಂದಾಗಬೇಕು.
ಬೆಂಗಳೂರಿನಲ್ಲಿ ಕುರುಬ ಸಮುದಾಯವು ಸಭೆ ನಡೆಸಿತು
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರವಾಗುತ್ತಿರುವ ನಡುವೆಯೇ ಸಿದ್ದರಾಮಯ್ಯ ಪರ ನಿಂತಿರುವ ಕುರುಬ ಸಮುದಾಯ ಬಿಗಿ ರಾಜಕೀಯ ನಿಲುವು ಘೋಷಿಸಿದೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡಲಾಗುವುದು ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕುರುಬ ಸಮುದಾಯದ ಸಂಘಟನೆಗಳ ಸಭೆಯಲ್ಲಿ ಮಹತ್ವದ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯದ ಮುಖ್ಯಮಂತ್ರಿ ಅಲ್ಲ, ಸರ್ವ ಧರ್ಮಕ್ಕೆ ಸೇರಿದ ನಾಯಕ. ರಾಜ್ಯದಲ್ಲಿ ಉದ್ಭವಿಸಿರುವ ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ಹೈಕಮಾಂಡ್ ಮುಂದಾಗಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಯಿತು.
ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಲುವಾಗಿ ನಾಳೆ(ನ.29 ) ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ವರಿಷ್ಠರಿಗೆ ಮನವಿ ರವಾನಿಸಲು ನಿರ್ಧರಿಸಲಾಗಿದೆ. ಸಂಘದ ಮೂಲಕ ಹೈಕಮಾಂಡ್ಗೆ ಪತ್ರ ಬರೆಯಲಾಗುವುದು. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಟ್ಟಿದ್ದೇ ಆದರೆ ಕಾಂಗ್ರೆಸ್ಗೆ ದೊಡ್ಡ ಮಟ್ಟದ ಒಳಯೇಟು ನೀಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಅಹಿಂದ ಹೆಸರಿನಲ್ಲಿ ಮತ ಪಡೆದ ಶಾಸಕರು ಸಿದ್ದರಾಮಯ್ಯ ಅವರ ಪರ ನಿಲ್ಲಬೇಕು. ಇಲ್ಲವಾದರೆ, ಅಂತವರಿಗೂ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಣ ಮಾಡಿಲ್ಲ, ಭ್ರಷ್ಟಾಚಾರ ನಡೆಸಿಲ್ಲ. ಜನರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಇಷ್ಟಾದರೂ ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.