ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿಸಲು ಡಿಸ್ಟಿಲರಿಗಳಿಗೆ ಸಿಎಂ ಸೂಚನೆ
ಎಥೆನಾಲ್ ಉತ್ಪಾದನೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ರೈತರಿಂದಲೇ ಖರೀದಿಸಿ ನೆರವಿಗೆ ಬರಬೇಕು ಎಂದು ಮದ್ಯಸಾರ ತಯಾರಿಕಾ ಘಟಕಗಳ ಮಾಲೀಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಎಥೆನಾಲ್ ಉತ್ಪಾದನೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ನಿಗದಿಪಡಿಸಿದ ಕೋಟಾ ಅನ್ವಯ ರೈತರಿಂದಲೇ ಖರೀದಿಸಿ ಅವರ ನೆರವಿಗೆ ಬರಬೇಕು ಎಂದು ಮದ್ಯಸಾರ ತಯಾರಿಕಾ ಘಟಕಗಳ ಮಾಲೀಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮೆಕ್ಕೆಜೋಳ ಖರೀದಿ ಹಾಗೂ ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ, ಯಾವ ಡಿಸ್ಟಿಲರಿಗಳು ಎಷ್ಟು ಪ್ರಮಾಣದ ಮೆಕ್ಕೆಜೋಳ ಖರೀದಿಸಬೇಕು ಎಂದು ಕೃಷಿ ಮಾರುಕಟ್ಟೆ ಇಲಾಖೆ ಈಗಾಗಲೇ ಪಟ್ಟಿ ನೀಡಿದೆ. ಅದರಂತೆ ಡಿಸ್ಟಿಲರಿಗಳು ನಡೆದುಕೊಳ್ಳಬೇಕು. ಡಿಸ್ಟಿಲರಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ನೇರವಾಗಿ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದರೆ, ಅಂತಹ ಘಟಕಗಳಿಗೆ ಜಿಲ್ಲಾಡಳಿತದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮೆಕ್ಕೆಜೋಳಕ್ಕೆ ನಾಫೆಡ್ ಪೂರ್ವ ನಿರ್ಧಾರಿತ ಖರೀದಿ ಬೆಲೆ ಕ್ವಿಂಟಾಲ್‌ಗೆ 2,639 ರೂ. ಇದೆ. ಇದರಲ್ಲಿ ಪ್ರತಿ ಕ್ವಿಂಟಾಲ್‌ಗೆ 2,400 ರೂ. ಕನಿಷ್ಠ ಬೆಂಬಲ ಬೆಲೆ ರೈತರಿಗೆ ನೇರವಾಗಿ ತಲುಪಲಿದೆ. ಈ ಹಿನ್ನೆಲೆಯಲ್ಲಿ ರೈತರಿಂದ ನೇರ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಡಿಸ್ಟಿಲರಿಗಳು ಈ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೆ, ಕೇಂದ್ರ ಸರ್ಕಾರ ನಾಫೆಡ್, ಎನ್‌ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಹೊರಡಿಸಿರುವ ಪ್ರಮಾಣಿತ ಕಾರ್ಯವಿಧಾನದಂತೆಯೇ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಸಮಸ್ಯೆಗಳ ಬಗ್ಗೆ ಪ್ರಧಾನಿ ಗಮನಕ್ಕೆ:
ಎಥೆನಾಲ್ ಕೋಟಾ ಮತ್ತು ಮೆಕ್ಕೆಜೋಳದ ಬೆಂಬಲ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದರೂ, ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದೆ. ಈಗಾಗಲೇ ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಡಿಸ್ಟಿಲರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಸಭೆಯಲ್ಲಿ ಡಿಸ್ಟಿಲರಿ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಕೇಂದ್ರ ಸರ್ಕಾರ ಮೆಕ್ಕೆಜೋಳದ ಬೆಂಬಲ ಬೆಲೆಯನ್ನು ಏರಿಕೆ ಮಾಡುತ್ತಲೇ ಬಂದಿದೆ. ಆದರೆ, 2020ರಿಂದ ಎಥೆನಾಲ್ ಬೆಲೆಯನ್ನು ಹೆಚ್ಚಿಸಿಲ್ಲ. ಕಚ್ಚಾ ವಸ್ತುವಿನ ಬೆಲೆ ಏರಿಕೆಯಾಗಿ, ಉತ್ಪನ್ನದ ಬೆಲೆ ಸ್ಥಿರವಾಗಿರುವುದರಿಂದ ನಷ್ಟ ಉಂಟಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ರಾಜ್ಯದಲ್ಲಿ ಧಾನ್ಯ ಆಧಾರಿತ ಮೂರು ಡಿಸ್ಟಿಲರಿಗಳಿಗೆ 94,400 ಕಿಲೋ ಲೀಟರ್ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, ಇದಕ್ಕಾಗಿ 2,48,461 ಮೆಟ್ರಿಕ್ ಟನ್ ಮೆಕ್ಕೆಜೋಳದ ಅಗತ್ಯವಿದೆ. ಹಾಗೆಯೇ, 7 ಡ್ಯುಯಲ್ ಫೀಡ್‌ಸ್ಟಾಕ್ ಡಿಸ್ಟಿಲರಿಗಳಿಗೆ 1,90,751 ಕಿ.ಲೀ ಎಥೆನಾಲ್ ಹಂಚಿಕೆಯಾಗಿದ್ದು, ಇವುಗಳಿಗೆ ಬರೋಬ್ಬರಿ 5,02,056 ಮೆಟ್ರಿಕ್ ಟನ್ ಮೆಕ್ಕೆಜೋಳದ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.