ಕಡತ ಇದ್ದರೂ ನಾಪತ್ತೆ ಎಂದು ನಾಟಕವಾಡಿದ ಅಧಿಕಾರಿಗಳು: ಲೋಕಾಯುಕ್ತ ದಾಳಿಯಲ್ಲಿ ಪತ್ತೆ
ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಮಹತ್ವದ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ಜಮೀನು ಖಾತೆ ಬದಲಾವಣೆಗೆ ಲಂಚ ನೀಡದ ಕಾರಣಕ್ಕೆ ಕಡತ ನಾಪತ್ತೆಯಾಗಿದೆ ಎಂದು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಮಹತ್ವದ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ರೇಖಾ ಎಂಬುವರು ಕೆಂಗೇರಿ ಗ್ರಾಮದ ಸರ್ವೆ ನಂ. 121/8 ರಲ್ಲಿ 2 ಎಕರೆ 20 ಗುಂಟೆ ಜಮೀನಿನನ್ನು 2014ರಲ್ಲಿ ನೋಂದಾಯಿತ ಕ್ರಯ ಪತ್ರದ ಮೂಲಕ ಖರೀದಿಸಿದ್ದರು. ಈ ಜಮೀನಿನ ಖಾತೆ ಬದಲಾವಣೆಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದಾಗ, ಅಲ್ಲಿನ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರೇಖಾ ಅವರು ಲಂಚ ನೀಡಲು ನಿರಾಕರಿಸಿದಾಗ, ಕಚೇರಿಯಲ್ಲಿ ಈ ಜಮೀನಿನ ಮೂಲ ದಾಖಲೆಗಳು ಲಭ್ಯವಿಲ್ಲ. ಆದ್ದರಿಂದ ಖಾತೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿ ಅಲೆದಾಡಿಸಿದ್ದರು.
ಆದರೆ, ಇದೇ ಸರ್ವೆ ನಂಬರ್‌ನ ಇತರ ಜಮೀನುಗಳಿಗೆ ಸಂಬಂಧಿಸಿದಂತೆ ಬೇರೆಯವರಿಗೆ ಖಾತೆ ಮಾಡಿಕೊಟ್ಟಿರುವುದನ್ನು ಗಮನಿಸಿದ ರೇಖಾ ಅವರು, ತಮಗೆ ಲಂಚ ನೀಡದ ಕಾರಣಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ದೂರಿನಲ್ಲಿ ಹುರುಳಿದೆ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತರು ಶೋಧನಾ ವಾರೆಂಟ್ ಹೊರಡಿಸಿದ್ದರು. ಅದರಂತೆ ಲೋಕಾಯುಕ್ತ ನಗರ ವಿಭಾಗದ ಪೊಲೀಸ್ ಉಪಾಧೀಕ್ಷಕರು ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಕಚೇರಿ ಹಾಗೂ ದಕ್ಷಿಣ ಉಪ ವಿಭಾಗದ ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಶೋಧ ನಡೆಸಿದರು.
ಅಚ್ಚರಿಯ ವಿಷಯವೆಂದರೆ, ಅಧಿಕಾರಿಗಳು ಇಲ್ಲ ಎಂದು ಹೇಳಿದ್ದ ರೇಖಾ ಅವರ ಜಮೀನಿಗೆ ಸಂಬಂಧಿಸಿದ ಮೂಲ ಕಡತವು ತಹಶೀಲ್ದಾರ್ ಕಚೇರಿಯಲ್ಲೇ ಪತ್ತೆಯಾಗಿದೆ. ಕೂಡಲೇ ಕಡತವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಈ ತನಿಖೆಯ ವೇಳೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿರುವ ಇನ್ನಷ್ಟು ಅಕ್ರಮಗಳು ಬಯಲಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.