ಗದ್ದುಗೆ ಗುದ್ದಾಟ| ಸಿಎಂ -ಡಿಸಿಎಂ ನಾಳೆ ಮುಖಾಮುಖಿ ; ಉಪಾಹಾರ ಕೂಟದ ಹೆಸರಲ್ಲಿ ಪರಸ್ಪರ ಮಾತುಕತೆ
ಭಾನುವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಬ್ಬರೂ ನಾಯಕರೊಂದಿಗೆ ಮಹತ್ವದ ಸಭೆ ಏರ್ಪಡಿಸಲಾಗಿದೆ. ಅದಕ್ಕೂ ಮೊದಲು ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಪರಸ್ಪರ ಸೌಹಾರ್ದಯುತವಾಗಿ ಮಾತನಾಡುವಂತೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ (ನ.29) ಉಪಾಹಾರ ಕೂಟದ ಹೆಸರಲ್ಲಿ ಮುಖಾಮುಖಿಯಾಗಿ, ಪರಸ್ಪರ ಮಾತುಕತೆ ನಡೆಸಲಿದ್ದಾರೆ.
ನಾಯಕತ್ವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹೈಕಮಾಂಡ್ ನೀಡಿದ ಸೂಚನೆ ಮೇರೆಗೆ ಇಬ್ಬರು ನಾಯಕರೂ ಪರಸ್ಪರ ಚರ್ಚಿಸಿದ ನಂತರ ನಿರ್ಧಾರ ತಿಳಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸಭೆಯು ತೀವ್ರ ಕುತೂಹಲ ಕೆರಳಿಸಿದೆ.
ಭಾನುವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಬ್ಬರೂ ನಾಯಕರೊಂದಿಗೆ ಮಹತ್ವದ ಸಭೆ ಏರ್ಪಡಿಸಲಾಗಿದೆ. ಅದಕ್ಕೂ ಮೊದಲು ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಪರಸ್ಪರ ಸೌಹಾರ್ದಯುತವಾಗಿ ಮಾತನಾಡುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ ಡಿ.ಕೆ.ಶಿವಕುಮಾರ್ ಅವರು ಸ್ವತಃ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಸಂಜೆ ಕರೆ ಮಾಡಿ ಉಪಾಹಾರ ಕೂಟದ ವಿಷಯ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ವಿಚಾರಕ್ಕೆ ಈಗ ಹೊಸ ತಿರುವು ಸಿಕ್ಕಂತಾಗಿದೆ. ಸಿಎಂ ಸ್ಥಾನ ಹಸ್ತಾಂತರ ವಿಚಾರವೂ ನಾಳಿನ ಉಪಾಹಾರ ಕೂಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರು ಸಿಎಂ ಸ್ಥಾನದ ಕುರಿತು ನೇರವಾಗಿ ಸಿದ್ದರಾಮಯ್ಯ ಎದುರು ಮಂಡಿಸುವ ಸಾಧ್ಯತೆ ಇದೆ.
ಆದರೆ, ಸಿದ್ದರಾಮಯ್ಯ ಅವರು ನಾಯಕತ್ವ ಕುರಿತ ಅಂತಿಮ ನಿರ್ಧಾರಕ್ಕೆ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಯವರ ಅಭಿಪ್ರಾಯಕ್ಕೆ ಬದ್ಧ ಎಂಬ ನಿಲುವು ಪುನರುಚ್ಚರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ತ್ರಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಹೈಕಮಾಂಡ್ ನಾಯಕರು ಕರೆ ಮಾಡಿದ್ದು, ದೆಹಲಿಗೆ ಬರುವ ಮೊದಲು ಪರಸ್ಪರ ಚರ್ಚಿಸಿಕೊಂಡು ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.