ಗದ್ದುಗೆ ಗುದ್ದಾಟ| ಸಿಎಂ-ಡಿಸಿಎಂ ಮುನಿಸು ಮತ್ತೊಮ್ಮೆ ಬಹಿರಂಗ; ಟ್ವೀಟ್ ವಾರ್ ನಂತರ ಹೆಚ್ಚಾಯ್ತು ಅಂತರ
ಕಾರ್ಯಕ್ರಮದ ಉದ್ದಕ್ಕೂ ಸಿಎಂ-ಡಿಸಿಎಂ ಒಬ್ಬರಿಗೊಬ್ಬರು ಮಾತನಾಡದೇ ಮೌನಕ್ಕೆ ಜಾರಿದ್ದರು. ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಸಿಎಂ ಸ್ಥಾನದ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಮುನಿಸು ತಲೆದೋರಿದೆ.
ಕಾಂಗ್ರೆಸ್ ಸರ್ಕಾರದ ಜೋಡೆತ್ತುಗಳಂತಿದ್ದ ಸಿಎಂ ಸಿದ್ದರಾಮಯ್ಯ –ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾಯಕತ್ವ ಬದಲಾವಣೆಯ ಬಿಕ್ಕಟ್ಟು ತಲೆದೋರಿದ ಬಳಿಕ ಇಬ್ಬರಲ್ಲಿನ ಮುನಿಸು ಬಹಿರಂಗವಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಾಕಷ್ಟು ಮಂದಿ ಗಣ್ಯರಿದ್ದರೂ ಸಿಎಂ-ಡಿಸಿಎಂ ಮಾತ್ರ ಅಪರಿಚಿತರ ರೀತಿ ವರ್ತಿಸಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಸಿಎಂ ಹಾಗೂ ಡಿಸಿಎಂ ಇಬ್ಬರೂ ಜೊತೆಯಾಗಿಯೇ ಚಾಲನೆ ನೀಡಿದ್ದರು. ಈಗ ಗೃಹಲಕ್ಷ್ಮಿಯರಿಗಾಗಿಯೇ ಸ್ಥಾಪಿಸುತ್ತಿರುವ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ಗೆ ಚಾಲನೆ ನೀಡುವ ವೇಳೆ ಹತ್ತಿರವಿದ್ದರೂ ಮಾತುಕತೆ ನಡೆಸದೇ ಮುನಿಸಿಕೊಂಡಿದ್ದರ ಬಗ್ಗೆ ಜನರಲ್ಲೇ ಗುಸು ಗುಸು ಶುರುವಾಗಿತ್ತು.
ಕಾರ್ಯಕ್ರಮದ ಉದ್ದಕ್ಕೂ ಸಿಎಂ-ಡಿಸಿಎಂ ಒಬ್ಬರಿಗೊಬ್ಬರು ಮಾತನಾಡದೇ ಮೌನಕ್ಕೆ ಜಾರಿದ್ದರು. ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಸಿಎಂ ಸ್ಥಾನದ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಮುನಿಸು ತಲೆದೋರಿದೆ.
ಸಿಎಂ ಹಾಗೂ ಡಿಸಿಎಂ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಅವರವರ ಪಾಡಿಗೆ ಕಾರ್ಯಕ್ರಮ ಮುಗಿಸಿ ಹೊರಟರು. ರಾಜ್ಯದಲ್ಲಿ ನವೆಂಬರ್ ಆರಂಭದಿಂದಲೂ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿದ್ದವು. ರಾಜ್ಯ ಸರ್ಕಾರಕ್ಕ ಎರಡೂವರೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪಿಸಿ, ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದು ಲಾಬಿ ಆರಂಭಿಸಿದ್ದಾರೆ.
ನ.5 ರಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಿಂದಲೂ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಇಬ್ಬರೂ ಪ್ರತ್ಯೇಕವಾಗಿ ಹೆಲಿಕಾಪ್ಟರ್ಗಳಲ್ಲಿ ಆಗಮಿಸಿ ಮೊದಲ ಬಾರಿಗೆ ಮುನಿಸು ಬಹಿರಂಗಪಡಿಸಿದ್ದರು.
ಕಳೆದ ಮಂಗಳವಾರ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲೂ ಒಟ್ಟಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಕಾರ್ಯಕ್ರಮವಿದ್ದರೂ ಸಿದ್ದರಾಮಯ್ಯ ಮಾತ್ರ ಭಾಗವಹಿಸಿದ್ದರು. ಡಿ.ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಿದರೂ ಅಲ್ಲಿಗೆ ಸಿಎಂ ಬಂದಿರಲಿಲ್ಲ.
ಬೆಂಗಳೂರಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಮುನಿಸು
ಟ್ವೀಟ್ ಸಮರ ಸೃಷ್ಟಿಸಿದ ಅಂತರ
ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿವುದೇ ವಿಶ್ವ ದೊಡ್ಡ ಶಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದರು. ಆ ಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆ ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತೇ ನಮ್ಮ ಜಗತ್ತು ಎಂದು ಟಾಂಗ್ ಕೊಟ್ಟಿದ್ದರು.
ಸಾಮಾನ್ಯವಾಗಿ ಸರ್ಕಾರದ ಕಾರ್ಯಕ್ರಮ ಅಥವಾ ಪಕ್ಷದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಸಿಎಂ ಹಾಗೂ ಡಿಸಿಎಂ ಅವರು ನಾಯಕತ್ವ ಬದಲಾವಣೆಯ ಗೊಂದಲ ತೀವ್ರವಾದ ನಂತರ ದೂರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ʼಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರುವುದಿಲ್ಲವೆಂದು ನಾವು ಹೇಳಿಲ್ಲ.ತಾನೇ ಐದು ವರ್ಷ ಸಿಎಂ ಎಂದು ಹೇಳಿಕೊಂಡಿದ್ದಾರೆ. ದೊಡ್ಡವರು ಹೇಳಿದ ಮೇಲೆ ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದರು.