ಗದ್ದುಗೆ ಗುದ್ದಾಟ| ಮುನಿಯಪ್ಪ ನಿವಾಸಕ್ಕೆ ಹರಿಪ್ರಸಾದ್ ಭೇಟಿ; ಡಿಕೆಶಿ ವಿರುದ್ಧ ʼಅಹಿಂದʼ ಕೋಟೆ ರಚನೆ
ಶೀಘ್ರವೇ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದು, ಅದಕ್ಕೂ ಮೊದಲು ಹಲವು ಅಭಿಪ್ರಾಯ ಹಾಗೂ ರಣತಂತ್ರ ರೂಪಿಸುವ ಭಾಗವಾಗಿ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಸಚಿವ ಕೆ.ಎಚ್. ಮುನಿಯಪ್ಪ ನಿವಾಸಕ್ಕೆ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.
ರಾಜ್ಯ ಸರ್ಕಾರದಲ್ಲಿ ಸಿಎಂ ಸ್ಥಾನದ ಗೊಂದಲ ತಾರಕಕ್ಕೇರಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಆಪ್ತ ವಲಯದ ಸಚಿವರು ಹಾಗೂ ಶಾಸಕರು ರಹಸ್ಯ ಸಭೆಗಳನ್ನು ನಡೆಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
ಕಳೆದ ಕೆಲ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯೆ ನಾಯಕತ್ವ ಬದಲಾವಣೆಯ ಶೀತಲ ಸಮರ ನಡೆಯುತ್ತಿದೆ. ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದರಿಂದ ಕೊಂಚ ವಿಚಲಿತರಾದಂತೆ ಕಾಣುತ್ತಿರುವ ಸಿಎಂ ಬಣದ ಶಾಸಕರು ಹಾಗೂ ಸಚಿವರು ʼದಲಿತ ಸಿಎಂʼ ತಂತ್ರಗಾರಿಕೆ ಎಣೆಯುವಲ್ಲಿ ಮಗ್ನರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ಹೆಸರಲ್ಲಿ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಚಿವ ಕೆ.ಎಚ್. ಮುನಿಯಪ್ಪ ಮನೆಗೆ ಭೇಟಿ ನೀಡಿ ರಹಸ್ಯ ಸಭೆ ನಡೆಸಿದ್ದಾರೆ.
ಶೀಘ್ರವೇ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದು ಅದಕ್ಕೂ ಮೊದಲು ಹಲವು ಅಭಿಪ್ರಾಯ ಹಾಗೂ ರಣತಂತ್ರ ರೂಪಿಸುವ ಕುರಿತು ಚರ್ಚಿಸಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದರೆ, ಹಿಂದುಳಿದ ಮತ್ತು ದಲಿತ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಆಪ್ತರಿಂದ ನಿರಂತರ ಸಭೆ
ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು, ಆದರೂ ರಾಜಕೀಯ ಮೇಲಾಟಗಳಾಗಿ ಹೈಕಮಾಂಡ್ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ತಿಳಿಸಿದರೆ ಮುಂದೇನು ಮಾಡಬೇಕು ಎಂಬುದರ ಕುರಿತು, ಗುರುವಾರ(ನ.27) ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಅಹಿಂದ ಸಚಿವರು ಹಾಗೂ ಶಾಸಕರು ಸಭೆ ನಡೆಸಿದ್ದರು. ನಂತರ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು.