ಗದ್ದುಗೆ ಗುದ್ದಾಟ| ಸಿಎಂ-ಡಿಸಿಎಂ ಮಧ್ಯೆ ಮಾತಿಲ್ಲ-ಕಥೆಯಿಲ್ಲ; ಬರೀ ಮೌನವೇ ಎಲ್ಲಾ!
ಅಕ್ಕಪಡೆ, ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ಗೆ ಚಾಲನೆ ನೀಡುವಾಗಲೂ ಸಿಎಂ ಹಾಗೂ ಡಿಸಿಎಂ ಮೊಗದಲ್ಲಿ ನಗು ಇರಲಿಲ್ಲ. ಇದೆಲ್ಲಾವನ್ನೂ ಗಮನಿಸುತ್ತಿದ್ದ ಪ್ರೇಕ್ಷಕರು ಸಿಎಂ ಸ್ಥಾನದ ಕಿತ್ತಾಟಗಳ ಬಗ್ಗೆ ಪಿಸುಗುಡಲಾರಂಭಿಸಿದ್ದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ಕ್ಷಣದಿಂದ ಜೋಡೆತ್ತುಗಳಂತಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಮಧ್ಯೆ ಗದ್ದುಗೆ ಗುದ್ದಾಟ ಆರಂಭವಾಗಿದೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುನಿಸು ಇದೀಗ ಸಾರ್ವಜನಿಕ ಸಮಾವೇಶಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಉಳಿದ ಎರಡೂವರೆ ವರ್ಷದ ಅವಧಿಗೆ ಸಿಎಂ ಸ್ಥಾನ ನೀಡುವಂತೆ ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಸಮರಾಂಗಣಕ್ಕೆ ಇಳಿದಿದ್ದಾರೆ.
ಕಳೆದೊಂದು ವಾರದಿಂದ ಏಟು-ಎದಿರೇಟುಗಳ ಮೂಲಕ ನಾಯಕತ್ವದ ಬದಲಾವಣೆ ವಿಚಾರ, ಹೈಕಮಾಂಡ್ ಮಟ್ಟದಲ್ಲೂ ಕೋಲಾಹಲ ಸೃಷ್ಟಿಸುತ್ತಿದೆ. ಪಕ್ಷದ ನಾಯಕರ ಭಿನ್ನ ಹೇಳಿಕೆಗಳು, ನಾಯಕತ್ವ ಕುರಿತ ಗೊಂದಲಗಳಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸೂ ಕೂಡ ಕಡಿಮೆಯಾಗುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಪರಿಚಿತರಂತೆ ವರ್ತಿಸಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಆಸ್ಪದ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಐಸಿಡಿಎಸ್ ಸುವರ್ಣ ಮಹೋತ್ಸವದಲ್ಲಿ ಡಿ.ಕೆ. ಶಿವಕುಮಾರ್
ಕಾರ್ಯಕ್ರಮ ಆರಂಭವಾದ ಕೆಲ ಕ್ಷಣಗಳ ಬಳಿಕ ವೇದಿಕೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಜನರತ್ತ ಕೈ ಬೀಸಿ, ಮುಖಂಡರನ್ನಷ್ಟೇ ಮಾತನಾಡಿಸಿದರು. ಶಿಷ್ಟಾಚಾರಕ್ಕಾದರೂ ಸಿಎಂ ಅವರನ್ನು ಮಾತನಾಡಿಸುವ ಪ್ರಯತ್ನ ನಡೆಸಲಿಲ್ಲ. ವೇದಿಕೆ ಮೇಲೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ಜನರು ಕೇಕೆ ಹಾಕಿದರು.
ಅಕ್ಕಪಡೆ, ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ಗೆ ಚಾಲನೆ ನೀಡುವಾಗಲೂ ಸಿಎಂ ಹಾಗೂ ಡಿಸಿಎಂ ಮೊಗದಲ್ಲಿ ನಗು ಇರಲಿಲ್ಲ. ಇದೆಲ್ಲಾವನ್ನೂ ಗಮನಿಸುತ್ತಿದ್ದ ಪ್ರೇಕ್ಷಕರು ಸಿಎಂ ಸ್ಥಾನದ ಕಿತ್ತಾಟಗಳ ಬಗ್ಗೆ ಪಿಸುಗುಡಲಾರಂಭಿಸಿದ್ದರು.
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಗ್ಯಾರೆಂಟಿ ಯೋಜನೆಗಳಿಗೆ ಜೊತೆಯಾಗಿ ಚಾಲನೆ ನೀಡಿದ್ದ ಈ ಇಬ್ಬರು ನಾಯಕರು ಈಗ ಸಿಎಂ ಕುರ್ಚಿ ಕಾದಾಟದಿಂದ ಬದ್ಧ ವೈರಿಗಳಂತೆ ಬದಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಡೀ ಕಾರ್ಯಕ್ರಮದ ಉದ್ದಕ್ಕೂ ಸಿಎಂ-ಡಿಸಿಎಂ ಒಬ್ಬರಿಗೊಬ್ಬರು ಮಾತನಾಡದೇ ಮೌನಕ್ಕೆ ಜಾರಿದ್ದರು. ಸಿಎಂ ಸಿದ್ದರಾಮಯ್ಯ ಅವರು ಆಗೊಮ್ಮೆ, ಈಗೊಮ್ಮೆ ಡಿ.ಕೆ. ಶಿವಕುಮಾರ್ ಅವರತ್ತ ನೋಡಿದರೂ ಡಿಕೆಶಿ ಮಾತ್ರ ಸಿಎಂ ಅವರತ್ತ ದೃಷ್ಟಿಯೇ ಹರಿಸಿಲ್ಲ. ಸಿಎಂ ಸ್ಥಾನದ ಗೊಂದಲವು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿರುವುದರಿಂದ ಇಬ್ಬರ ಮಧ್ಯೆ ಮುನಿಸು ತೀವ್ರವಾಗಿದೆ.
ಕಾರ್ಯಕ್ರಮ ಮುಗಿದ ಬಳಿಕವೂ ಸಿಎಂ ಹಾಗೂ ಡಿಸಿಎಂ ಅವರವರ ಪಾಡಿಗೆ ಹೊರಟರು. ಇನ್ನು ನ.5 ರಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲೂಈ ಇಬ್ಬರು ನಾಯಕರು ಅಂತರ ಕಾಯ್ದುಕೊಂಡಿದ್ದರು. ಪ್ರತ್ಯೇಕವಾಗಿಯೇ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪರಸ್ಪರ ಮಾತನಾಡದೇ ಮೊದಲ ಬಾರಿಗೆ ಮುನಿಸು ಪ್ರದರ್ಶಿಸಿದ್ದರು.
ಕಳೆದ ಮಂಗಳವಾರ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲೂ ಒಟ್ಟಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಕಾರ್ಯಕ್ರಮವಿದ್ದರೂ ಸಿದ್ದರಾಮಯ್ಯ ಮಾತ್ರ ಭಾಗವಹಿಸಿದ್ದರು. ಡಿ.ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಿದರೂ ಅಲ್ಲಿಗೆ ಸಿಎಂ ಬಂದಿರಲಿಲ್ಲ.
ಬೆಂಗಳೂರಿನಲ್ಲಿ ಸಿಎಂ ಹಾಗೂ ಡಿಸಿಎಂ ಮಾತುಕತೆಯಿಲ್ಲದೇ ಸುಮ್ಮನೆ ಕುಳಿತಿರುವುದು
ಟ್ವೀಟ್ ಸಮರ ಸೃಷ್ಟಿಸಿದ ಅಂತರ
ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿವುದೇ ವಿಶ್ವ ದೊಡ್ಡ ಶಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದರು. ಆ ಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆ ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತೇ ನಮ್ಮ ಜಗತ್ತು ಎಂದು ಟಾಂಗ್ ಕೊಟ್ಟಿದ್ದರು.
ಸಾಮಾನ್ಯವಾಗಿ ಸರ್ಕಾರದ ಕಾರ್ಯಕ್ರಮ ಅಥವಾ ಪಕ್ಷದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಸಿಎಂ ಹಾಗೂ ಡಿಸಿಎಂ ಅವರು ನಾಯಕತ್ವ ಬದಲಾವಣೆಯ ಗೊಂದಲ ತೀವ್ರವಾದ ನಂತರ ದೂರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ʼಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರುವುದಿಲ್ಲವೆಂದು ನಾವು ಹೇಳಿಲ್ಲ.ತಾನೇ ಐದು ವರ್ಷ ಸಿಎಂ ಎಂದು ಹೇಳಿಕೊಂಡಿದ್ದಾರೆ. ದೊಡ್ಡವರು ಹೇಳಿದ ಮೇಲೆ ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದರು.