ಮಹಿಳೆ ಕಟ್ಟಿ ಹಾಕಿ ಹಲ್ಲೆ | ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ
ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಾಕಿ ಹಲ್ಲೆ ಮಾಡುವುದು ಅಮಾನವೀಯ. ಅಲ್ಲದೇ ಗಂಭೀರ ಅಪರಾಧವೂ ಹೌದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಘುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.;
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಿಳೆಯನ್ನು ಥಳಿಸಿರುವ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ದಿಗ್ಭ್ರಮೆ ವ್ಯಕ್ತಪಡಿಸಿರುವ ಸಿಎಂ, ಕಾರಣವೇನೇ ಇರಲಿ, ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಾಕಿ ಹಲ್ಲೆ ಮಾಡುವುದು ಅಮಾನವೀಯ. ಅಲ್ಲದೇ ಗಂಭೀರ ಅಪರಾಧವೂ ಹೌದು. ಇಂತಹ ಅನಾಗರಿಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಲ್ಲ ಎಂದು ಕಿಡಿಕಾರಿದ್ದಾರೆ.
ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ, ಕಾನೂನು ಇದೆ. ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿ ಶಿಕ್ಷಿಸುತ್ತಿದ್ದರು. ಆದರೆ, ಸಾರ್ವಜನಿಕರೇ ಕಾನೂನು ಕೈಗೆತ್ತಿಕೊಂಡು ಮಹಿಳೆಯನ್ನು ಅಮಾನುಷವಾಗಿ ಥಳಿಸಿರುವುದನ್ನು ಸರ್ಕಾರ ಸಹಿಸುವುದಿಲ್ಲ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಉಡುಪಿ ತಾಲೂಕಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದರೆಂಬ ಕ್ಷುಲ್ಲಕ ಕಾರಣಕ್ಕೆ ಲಕ್ಷ್ಮೀ ಬಾಯಿ ಎಂಬುವವರನ್ನು ಮರಕ್ಕೆ ಕಟ್ಟಿ ಹಾಕಿ ಗುಂಪೊಂದು ಹಲ್ಲೆ ನಡೆಸಿತ್ತು. ಮಹಿಳೆಯ ಕಪಾಳಕ್ಕೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಂದರ್, ಶಿಲ್ಪ ಸೇರಿ ಮೂವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ವಿಡಿಯೋ ಪರಿಶೀಲಿಸಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಉಡುಪಿ ಎಸ್ಪಿ ಅರುಣ್‌ಕುಮಾರ್ ತಿಳಿಸಿದ್ದಾರೆ.
ಘಟನೆಯನ್ನು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಸಣ್ಣ ತಪ್ಪಿಗೆ ಈ ರೀತಿ ಅಮಾನುಷವಾಗಿ ಹಲ್ಲೆ ಮಾಡಿರುವುದು ಸರಿಯಲ್ಲ. ಮಹಿಳೆ ಮೇಲೆ ಕೆಲವರು ಹಲ್ಲೆ ಮಾಡುತ್ತಿದ್ದರೆ, ಮತ್ತೆ ಕೆಲವರು ನಗುತ್ತಾ ನಿಂತಿದ್ದರು. ಯಾರೂ ಕೂಡ ತಡೆಯುವ ಪ್ರಯತ್ನ ಮಾಡಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.