Greater Mysore- Part 2: ಮೈಸೂರು ಅಭಿವೃದ್ಧಿಯ ಶಕೆಗೆ ಮೈಲುಗಲ್ಲೇ ʼಗ್ರೇಟರ್ ಮೈಸೂರುʼ ಮಂತ್ರ..?

ಮೈಸೂರು ಮಹಾನಗರ ಪಾಲಿಕೆಗೆ ʼಬೃಹತ್‌ʼ ಎಂಬ ಹೆಚ್ಚುವರಿ ನಾಮಕರಣವಾದರೆ ಮೈಸೂರು ನಿಜವಾಗಿ ಅಭಿವೃದ್ಧಿಯಾಗುತ್ತದೆಯೆ? ಮುಂಬಯಿ -ಪುಣೆ ಮಾದರಿಯಂತೆ ಬೆಂಗಳೂರು- ಮೈಸೂರು ನಗರಗಳೂ ಕಂಗೊಳಿಸಲಿವೆಯೇ?;

Update: 2025-05-17 00:40 GMT

ಮೈಸೂರು ಮಹಾನಗರ ಪಾಲಿಕೆಗೆ ʼಬೃಹತ್‌ʼ ಎಂಬ ಹೆಚ್ಚುವರಿ ನಾಮಕರಣವಾದರೆ ಮತ್ತು ಅದು ಅಕ್ಷರಶಃ ನಿಜವಾದರೆ ಮೈಸೂರು ನಿಜವಾಗಿ ಅಭಿವೃದ್ಧಿಯಾಗುತ್ತದೆಯೆ? ಮುಂಬಯಿ -ಪುಣೆ ಮಾದರಿಯಂತೆ ಬೆಂಗಳೂರು- ಮೈಸೂರು ನಗರಗಳೂ ಅಭಿವೃದ್ಧಿ ಮಾದರಿಯ ಉದಾಹರಣೆಯಾಗಲಿದೆಯೆ? 

ಎಲ್ಲೆ ಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರನ್ನು ಕಟ್ಟಬೇಕು, ಸೂಕ್ತ ರೀತಿಯಲ್ಲಿ ನಗರವನ್ನು ಅಣಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಗ್ರೇಟರ್ ಮೈಸೂರು ಪ್ರಸ್ತಾವನೆ ಸಿದ್ಧವಾಗಿದೆ. ಆದರೆ ಸರ್ಕಾರ ಈ ಬಗ್ಗೆ ಕೈಗೊಳ್ಳುವ ನಿರ್ಧಾರ, ನೀಡುವ ಅನುದಾನ ಮುಂದಿನ ವರ್ಷಗಳಲ್ಲಿ ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಲು ಸಹಕಾರಿಯಾಗಬಲ್ಲದೇ? ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಲೇ, ನವ ಮನ್ವಂತರಕ್ಕೆ ತೆರೆದುಕೊಳ್ಳುವುದಕ್ಕೆ ಈ ನಿರ್ಧಾರ ಹೆಬ್ಬಾಗಿಲು ಆಗಬಹುದೇ ಎಂಬ ಪ್ರಶ್ನೆಗಳಿಗೆ ದ ಫೆಡರಲ್‌ ಕರ್ನಾಟಕ ಉತ್ತರ ಪಡೆಯಲು ಪ್ರಯತ್ನಿಸಿದೆ.

ಆಂಗ್ಲೋ-ಮೈಸೂರು ಯುದ್ಧ ಬಳಿಕ ಮೈಸೂರು ಬೆಳೆದದ್ದು ಹೇಗೆ?

1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ಚಾರಿತ್ರಿಕವಾಗಿ ಸಾಕಷ್ಟು ಮಹತ್ವದ್ದು. ಇದಾದ ನಂತರ ಹಳೆ ಮೈಸೂರು ಪ್ರಾಂತ್ಯದ ಆಡಳಿತ ಸ್ವರೂಪವೇ ಬದಲಾಯಿತು. ಟಿಪ್ಪು ಯುಗಾಂತ್ಯವಾಗಿ, ಬ್ರಿಟೀಷರ ಪ್ರಾಬಲ್ಯ ಹೆಚ್ಚಾಯಿತು. ಇವರ ಅಧೀನಕ್ಕೆ ಒಳಪಟ್ಟು ಮೈಸೂರು ರಾಜಮನೆತನ ಮುಮ್ಮಡಿ ಕೃಷ್ಣರಾಜ ಒಡೆಯರ್ ಷರತ್ತು ಬದ್ಧ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ನೈಸರ್ಗಿಕವಾಗಿ ಜಲ ರಕ್ಷಣಾ ಕವಚವನ್ನು ಹೊಂದಿದ್ದ ಶ್ರೀರಂಗಪಟ್ಟಣಕ್ಕೆ ಬದಲಾಗಿ ವಿಶಾಲ ಬಯಲು ಸೀಮೆಯಾಗಿದ್ದ ಮೈಸೂರು ರಾಜರ ಆಡಳಿತಕ್ಕೆ ಕೇಂದ್ರವಾಯಿತು.

ದಿವಾನರ ಆಡಳಿತಕ್ಕೆ ಬೆಂಗಳೂರು ಕೇಂದ್ರವಾಯಿತು. ಅಲ್ಲಿಂದಲೇ ಮೈಸೂರು ಕಲೆ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಆರೋಗ್ಯ ಹೀಗೆ ಬಹುಮುಖ ಆಯಾಮಗಳಲ್ಲಿ ಅಭಿವೃದ್ಧಿಯಾಗತೊಡಗಿತು. ಪ್ರಜಾಪ್ರಭುತ್ವ ಅಸ್ಥಿತ್ವಕ್ಕೆ ಬಂದು ಚುನಾಯಿತ ಸರ್ಕಾರಗಳು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕವೂ ಮೈಸೂರು ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿ ಕಾಣುತ್ತಿದೆ. ಇದೀಗ ಗ್ರೇಟರ್ ಮೈಸೂರು ರಚನೆ ಸಂಬಂಧ ನಡೆದಿರುವ ಚರ್ಚೆಗಳೂ ಮೈಸೂರು ಅಭಿವೃದ್ಧಿಯ ಶಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎನ್ನುವ ಭರವಸೆ ಹುಟ್ಟುಕೊಂಡಿದೆ.

ಪೌರಸಭೆಯಿಂದ ಮಹಾನಗರಪಾಲಿಕೆ ವರೆಗೆ

1939ರಲ್ಲಿಯೇ ಅಸ್ಥಿತ್ವಕ್ಕೆ ಬಂದ ಮೈಸೂರು ಪೌರಸಭೆಯು ಕರ್ನಾಟಕ ನಗರ ಪಾಲಿಕೆ ಅಧಿನಿಯಮ 1976ರ ಮೇರೆಗೆ ಜೂ. 10 1977ರಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಅದಾದ ಬಳಿಕ 2007ರಲ್ಲಿ ಮಹಾನಗರಪಾಲಿಕೆಯಾಗಿ ಉನ್ನತೀಕರಣಗೊಂಡು 65 ವಾರ್ಡ್ಗಳು ಮತ್ತು 9 ವಲಯ ಕಚೇರಿಗಳನ್ನು ಒಳಗೊಂಡು ಆಡಳಿತ ನಡೆಸುತ್ತಾ ಬಂದಿದೆ. ಇದೀಗ ಬೆಂಗಳೂರಿನ ಮಾದರಿಯಲ್ಲಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಯಾಗಬೇಕು, ಮಹಾನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ತರಬೇಕು ಎನ್ನುವ ಕೂಗು ಹೆಚ್ಚಾಗಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆಯನ್ನೂ ನಡೆಸಿದೆ. ಒಂದು ವೇಳೆ ಗ್ರೇಟರ್ ಮೈಸೂರು ರಚನೆಯಾದರೆ ಪ್ರಾರಂಭಿಕ ಹಂತದಲ್ಲಿಯೇ ಕನಿಷ್ಟ 25 ಸಾವಿರ ಕೋಟಿ ರೂ.ಗಳಷ್ಟು ಅನುದಾನ ನೀಡಬೇಕಾಗುತ್ತದೆ. ಹೊಸ ವಾರ್ಡ್‌ಗಳ ರಚನೆ, ವಲಯ ಕಚೇರಿಗಳ ವಿಸ್ತರಣೆ, ಮೂಲ ಸೌಕರ್ಯಗಳ ಪೂರೈಕೆ, ಸಿಬ್ಬಂದಿ ನೇಮಕ ಹೀಗೆ ವಿಸ್ತರಣೆಗೆ ಪೂರಕವಾಗಿ ತಕ್ಷಣವೇ ಕೆಲಸಗಳು ಪ್ರಾರಂಭವಾಗಬೇಕಿದೆ.

ಈ ಸಂಬಂಧ ಮಹಾನಗರ ಪಾಲಿಕ ನಿಕಟಪೂರ್ವ ಮೇಯರ್, ಬಿಜೆಪಿ ಸ್ಥಳೀಯ ನಾಯಕ ಶಿವಕುಮಾರ್ ದಿ ಫೆಡರಲ್ ಕರ್ನಾಟಕ ದೊಂದಿಗೆ ಮಾತನಾಡಿ, ನಾವು ಗ್ರೇಟರ್ ಮೈಸೂರು ರಚನೆಯನ್ನು ಸ್ವಾಗತಿಸುತ್ತೇವೆ. ಆದರೆ ಪ್ರಸ್ತಾವನೆ ಪಡೆದು, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡ ತಕ್ಷಣವೇ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದೇ ಇದ್ದರೆ ಈಗ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಜನತೆಗೆ ಹೆಚ್ಚಿನ ಕಂದಾಯದ ಹೊರೆ ಬೀಳುತ್ತದೆ. ಇದರಿಂದ ಜನತೆಗೆ ಯಾವುದೇ ಸೌಲಭ್ಯಗಳು ಸಿಗದೇ ಇದ್ದರೂ ಅನಾವಶ್ಯಕವಾಗಿ ಕಂದಾಯ ಕಟ್ಟಬೇಕಾಗುತ್ತದೆ. ಜನತೆಯ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಗ್ರೇಟರ್ ಮೈಸೂರು ರಚನೆ ಮಾಡಿ ತಕ್ಷಣವೇ ಅದಕ್ಕೆ ಪೂರಕವಾದ ಕೆಲಸಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ.

ತೆರಿಗೆ ಸಂಗ್ರಹದಲ್ಲೂ ಆಗಲಿದೆ ಏರಿಕೆ..

ಮಹಾನಗರಪಾಲಿಕೆ 2024-25ನೇ ಸಾಲಿನಲ್ಲಿ 251 ಕೋಟಿ ರೂ. ತೆರಿಗೆ ವಸೂಲಿ ಗುರಿಯನ್ನು ಹೊಂದಿತ್ತು. ಆದರೆ ಹಣಕಾಸು ವರ್ಷದ ಕೊನೆಗೆ 238.5 ಕೋಟಿಯಷ್ಟೇ ಸಂಗ್ರಹ ಮಾಡಲು ಸಾಧ್ಯವಾಗಿದ್ದು. ಈ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ ಮಾಹಿತಿ ನೀಡಿದ ಪಾಲಿಕೆ ಕಂದಾಯ ಅಧಿಕಾರಿ ಜಿ.ಎಸ್. ಸೋಮಶೇಖರ್ ಅವರು, ಹಿಂದಿನ ಎಲ್ಲಾ ಹಣಕಾಸು ವರ್ಷಗಳಿಗೆ ಹೋಲಿಕೆ ಮಾಡಿದರೆ ಕಳೆದ ವರ್ಷ ತೆರಿಗೆ ಸಂಗ್ರಹದಲ್ಲಿ ನಾವು ಶೇ.93 ರಷ್ಟು ಪ್ರಗತಿ ಸಾಧಿಸಿದ್ದೇವೆ. 15 ಕೋಟಿ ರೂ. ಮಾತ್ರ ಕೊರತೆಯಾಗಿದೆ. ಸರ್ಕಾರ ಶೇ.5 ರಷ್ಟು ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರಿಂದ ಏಪ್ರಿಲ್ ತಿಂಗಳಿನಲ್ಲಿಯೇ 128 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಮೇ, ಜೂನ್ ತಿಂಗಳಿಗೂ ತೆರಿಗೆ ವಿನಾಯಿತಿ ಅವಕಾಶ ವಿಸ್ತರಣೆಯಾಗಿದ್ದು, ಇನ್ನೂ ಹೆಚ್ಚಿನ ತೆರಿಗೆ ಗುರಿ ಸಾಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಂದರೆ ಪಾಲಿಗೆ ಸಮರ್ಥವಾಗಿ ತೆರಿಗೆ ಸಂಗ್ರಹ ಮಾಡುವುದರಿಂದ, ಹೆಚ್ಚಿನ ಆದಾಯ ಬರುವುದರಿಂದ ಮುಂದಿನ ದಿನಗಳಲ್ಲಿ ಗ್ರೇಟರ್ ಮೈಸೂರು ರಚನೆಯಾದರೂ, ಸರ್ಕಾರವನ್ನು ಅನುದಾನಕ್ಕಾಗಿ ಅವಲಂಭಿಸಬೇಕಾಗುವುದಿಲ್ಲ ಎನ್ನುವ ಅಂಶವೂ ಮುಖ್ಯವಾಗುತ್ತದೆ. ಹೊಸದಾಗಿ ಗ್ರೇಟರ್ ಮೈಸೂರು ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಂದಲೂ ಹೆಚ್ಚಿನ ತೆರಿಗೆ ಸಂಗ್ರಹ ಆಗುತ್ತದೆ. ಅಲ್ಲಿಗೆ ಪಾಲಿಕೆ ಆದಾಯ ವಾರ್ಷಿಕವಾಗಿ 500 ಕೋಟಿ ರೂ. ದಾಟುತ್ತದೆ ಎನ್ನುವ ವಿಶ್ವಾಸ ಇದೆ. ಆದರೆ ಅಂದುಕೊಂಡಂತೆ ತೆರಿಗೆ ಸಂಗ್ರಹ ಆಗದೇ ಇದ್ದರೆ ಸರ್ಕಾರದ ಮೇಲೆ ಹೊರೆ ಬೀಳಲಿದೆ, ವಿಶೇಷ ಅನುದಾನದ ಮೊರೆ ಹೋಗಬೇಕಾಗುತ್ತದೆ ಎನ್ನುವುದೂ ಪ್ರಸ್ತಾವನೆ ಜಾರಿಗೆ ಕಾರಣವಾಗುತ್ತಿದೆ.

ಮೈಸೂರು ಸುಂದರವಾಗಿ ಬೆಳೆಯಬೇಕು; ಜಿ.ಟಿ. ದೇವೇಗೌಡ ಏನನ್ನುತ್ತಾರೆ?

ಈ ಹಿಂದೆ ಪಾಲಿಕೆ ಅಭಿವೃದ್ಧಿಗೆ ಹಣದ ಕೊರತೆ ಇದೆ ಎನ್ನುವ ಕಾರಣಕ್ಕಾಗಿ ಮೈಸೂರು ಸುತ್ತಲಿನ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ ಉಂಟಾಗಿತ್ತು. ಸರ್ಕಾರ ವಿಶೇಷ ಅನುದಾನ ನೀಡಿದರೆ ಮಾತ್ರ ವಿಸ್ತರಣೆ ಸಾಧ್ಯ ಎನ್ನುವ ಅಭಿಪ್ರಾಯ ಪಾಲಿಕೆಯ ಸಭೆಯಲ್ಲಿ ಪಕ್ಷಾತೀತವಾಗಿ ಕೇಳಿ ಬಂದಿತ್ತು. 

ಈಗ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿರುವ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಮಾಜಿ  ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು, "ಅನುದಾನದ ಕೊರತೆ ಕಾರಣದಿಂದಾಗಿಯೇ ಹೂಟಗಳ್ಳಿ ನಗರಸಭೆ, ಬೋಗಾದಿ, ರಮ್ಮನಹಳ್ಳಿ, ಕಡಕೋಳ, ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳ ರಚನೆ ಮಾಡಲಾಯಿತು. ಆದರೆ ಈಗ ಅವುಗಳಿಗೂ ಅನುದಾನ ಸಾಕಾಗುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಅದಕ್ಕಾಗಿಯೇ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ, ಇದರಿಂದ ಹೆಚ್ಚಿನ ಅನುದಾನ ಸಿಗುವುದರ ಜೊತೆಗೆ ಕಂದಾಯ ವಸೂಲಿಯೂ ಹೆಚ್ಚಾಗಲಿದೆ. ಮಹಾರಾಜರು ಕಟ್ಟಿರುವ ಮೈಸೂರಿನ ರೀತಿಯೇ ಸುತ್ತಲೂ ಇರುವ ಗ್ರಾಮಗಳು ಸುಂದರವಾಗಿ ಬೆಳೆಯಬೇಕು, ಮೂಲ ಸೌಕರ್ಯಗಳು ಅವರಿಗೂ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ," ಎಂದು ತಿಳಿಸಿದರು.

ಚುನಾವಣೆ ನಡೆಸದೇ ಇರಲು ಇದು ಕಾರಣವಾದಿರಲಿ

2023 ನವೆಂಬರ್ 16ಕ್ಕೆ ಪಾಲಿಕೆ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿದೆ. ಈಗಲಾಗಲೇ ಜನಪ್ರತಿನಿಧಿಗಳು ಇಲ್ಲದೇ ಪಾಲಿಕೆ ಒಂದೂವರೆ ವರ್ಷ ಪೂರೈಸಿದೆ. ಇನ್ನು ಎಷ್ಟು ದಿನ ಹೀಗೆ ಚುನಾವಣೆ ನಡೆಸದೇ ಇರುತ್ತೀರಿ ಎಂದು ಪಾಲಿಕೆಯ ಮಾಜಿ ಸದಸ್ಯರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಗ್ರೇಟರ್ ಮೈಸೂರು ರಚನೆ, ವಾರ್ಡ್ ಮೀಸಲಾತಿ ಹಂಚಿಕೆಯ ನೆಪವೊಡ್ಡಿ ಈ ರೀತಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎನ್ನುವ ಆರೋಪಗಳಿವೆ.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು, "ಸೂಕ್ತ ಸಮಯದಲ್ಲಿ ಚುನಾವಣೆ ನಡೆಸುವುದು ಸರ್ಕಾರದ ಹೊಣೆ. ಅಧಿಕಾರ ವಿಕೇಂದ್ರೀಕರಣ, ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇದು ಆಗಬೇಕಿದೆ. ಆದರೆ ಸರ್ಕಾರ ಗ್ರೇಟರ್ ಮೈಸೂರು ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡುತ್ತಿರುವುದು ಸರಿಯಲ್ಲ. 15ನೇ ಹಣಕಾಸು ಆಯೋಗದಿಂದ ಬಂದಿದ್ದ 80 ಕೋಟಿ ರೂ. ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ವಾಪಸ್ ಹೋಗಿದೆ," ಎನ್ನುತ್ತರೆ. "ಇದಕ್ಕೆ ಯಾರು ಹೊಣೆ..? ಚುನಾವಣೆ ನಡೆಸಿ, ಆಯ್ಕೆಯಾದ ಸದಸ್ಯರ ಅಭಿಪ್ರಾಯವನ್ನೂ ಪಡೆದು, ಅವರನ್ನೂ ಒಳಗೊಂಡು ಗ್ರೇಟರ್ ಮೈಸೂರು ರಚನೆ ಮಾಡುವುದು ಇನ್ನೂ ಸೂಕ್ತವಲ್ಲವೇ..? ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು," ಎಂದೂ ಒತ್ತಾಯಿಸುತ್ತಾರೆ ಮಂಜು.

ನಾವೂ ಅಧಿಕೃತವಾಗಿ ನಗರವಾಸಿಗಳಾಗುತ್ತೇವೆ..

ಗ್ರೇಟರ್ ಮೈಸೂರು ರಚನೆ ಸಂಬಂಧ ದ ಫೆಡರಲ್ ಕರ್ನಾಟಕ ದೊಂದಿಗೆ ಮಾತನಾಡಿದ ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, "ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಗ್ರೇಟರ್ ಮೈಸೂರು ರಚನೆ ಮಾಡಬೇಕು. ದೊಡ್ಡ ಮಟ್ಟದ ಅಭಿವೃದ್ಧಿ ಇದರಿಂದ ಸಾಧ್ಯವಾಗುತ್ತದೆ. ಈಗ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ನಾಲ್ಕು ಅಂತಸ್ಥಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಗ್ರೇಟರ್ ಮೈಸೂರು ರಚನೆಯಿಂದ ಇದು ಮತ್ತಷ್ಟು ಹೆಚ್ಚಾಗುತ್ತದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಿದಂತೆ, ಉದ್ಯೋಗ, ಶಿಕ್ಷಣ, ಆರೋಗ್ಯ, ಉತ್ಪಾದನಾ ಕ್ಷೇತ್ರಗಳಲ್ಲಿಯೂ ಪ್ರಗತಿ ಕಾಣುತ್ತದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಇದು ಅನುಕೂಲ ಮಾಡಿಕೊಡುತ್ತದೆ," ಎಂದು ಅಭಿಪ್ರಾಯಪಡುತ್ತಾರೆ.

ಇನ್ನು ಪ್ರಸ್ತಾಪಿತ ಗ್ರೇಟರ್ ಮೈಸೂರು ವ್ಯಾಪ್ತಿಗೆ ಒಳಪಡುವ 41 ಗ್ರಾಮಗಳಲ್ಲಿ ಒಂದಾಗಿರುವ ಮಾದಗಳ್ಳಿ ನಿವಾಸಿ ಶಿವಕುಮಾರ್ ಅವರು ದಿ ಫೆಡರಲ್ ಕರ್ನಾಟಕ ದೊಂದಿಗೆ ಮಾತನಾಡಿ, ವಿಜಯನಗರಕ್ಕೂ ನಮ್ಮ ಊರಿಗೂ ಅರ್ಧ ಕಿ.ಮೀ. ದೂರವೂ ಇಲ್ಲ. ಅಲ್ಲಿನವರಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಕಾವೇರಿ ನೀರಿನ ಸರಬರಾಜು, ಉತ್ತಮ ರಸ್ತೆ, ಬೀದಿ ದೀಪ, ಯುಜಿಡಿ ವ್ಯವಸ್ಥೆಗಳೆಲ್ಲವೂ ಇವೆ. ಆದರೆ ಅದರ ಪಕ್ಕದಲ್ಲಿಯೇ ಇರುವ ನಮಗೆ ಅವೆಲ್ಲವೂ ಇಲ್ಲ. ಹೀಗಿರುವಾಗ ನಮ್ಮನ್ನೂ ಪಾಲಿಕೆ ವ್ಯಾಪ್ತಿಗೆ ತೆಗೆದುಕೊಳ್ಳಿ. ಮೂಲ ಸೌಲಭ್ಯಗಳನ್ನು ನಮಗೂ ನೀಡಿ. ನಾವು ಸೂಕ್ತ ಕಂದಾಯ ಕಟ್ಟಲು ಸಿದ್ಧರಿದ್ದೇವೆ. ನಗರದ ಅಂಚಿನಲ್ಲಿ ಇದ್ದು, ನಗರದೊಂದಿಗೆ ಎಲ್ಲಾ ವ್ಯವಹಾರಗಳನ್ನು ಇಟ್ಟುಕೊಂಡಿರುವ ನಾವು ಅಧಿಕೃತವಾಗಿ ನಗರ ವಾಸಿಗಳು ಎನ್ನಿಸಿಕೊಳ್ಳುತ್ತೇವೆ ಎನ್ನುತ್ತಾರೆ.

Tags:    

Similar News