ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ, ರೈತರ ಕಡೆಗಣನೆ: ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ
ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ರೈತ ವಿರೋಧಿ ಮತ್ತು ಅಮಾನವೀಯ ಸರ್ಕಾರವನ್ನು ತಾನು ಕಂಡಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತು ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R. Ashoka) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆಯೇ ಹೊರತು ಅನ್ನದಾತನ ಸಂಕಷ್ಟವಲ್ಲ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ತಮ್ಮ ಕುರ್ಚಿ ಭದ್ರವಾಗಿದ್ದರೆ ಸಾಕು ಎಂಬ ಮನಸ್ಥಿತಿಯಲ್ಲಿ ಸರ್ಕಾರ ನಡೆಯುತ್ತಿದೆ," ಎಂದು ಆರೋಪಿಸಿದ್ದಾರೆ.
ಗುರ್ಲಾಪುರ ದುರಂತಕ್ಕೆ ಸರ್ಕಾರದ ಅಸಡ್ಡೆ ಕಾರಣ?
ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಪ್ರತಿಭಟನಾ ನಿರತ ರೈತ ನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ಪ್ರಸ್ತಾಪಿಸಿದ ಅಶೋಕ್, "ಇದು ಸರ್ಕಾರದ ಸಂವೇದನಾರಹಿತ ನಡವಳಿಕೆಗೆ ಹಿಡಿದ ಕನ್ನಡಿ. ರೈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ, ಸಕ್ಕರೆ ಸಚಿವರು, ಕೃಷಿ ಸಚಿವರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಲ್ಲ," ಎಂದು ಕಿಡಿಕಾರಿದ್ದಾರೆ.
ಹೈಕಮಾಂಡ್ ಆದೇಶ ಬೇಕೇ?
ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲು ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಅವರು, "ರೈತರ ಬೆಳೆ ಖರೀದಿ ಕೇಂದ್ರಗಳನ್ನು ಆರಂಭಿಸಲು ದೆಹಲಿ ಹೈಕಮಾಂಡ್‌ನಿಂದ ಅನುಮತಿ ಪತ್ರ ಬರಬೇಕೇ? ರಾಹುಲ್ ಗಾಂಧಿ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಆದೇಶಕ್ಕಾಗಿ ಸಿಎಂ ಕಾಯುತ್ತಿದ್ದಾರೆಯೇ?" ಎಂದು ಲೇವಡಿ ಮಾಡಿದ್ದಾರೆ.
"30 ವರ್ಷಗಳಲ್ಲಿ ಇಂತಹ ಸರ್ಕಾರ ನೋಡಿಲ್ಲ"
ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ರೈತ ವಿರೋಧಿ ಮತ್ತು ಅಮಾನವೀಯ ಸರ್ಕಾರವನ್ನು ತಾನು ಕಂಡಿಲ್ಲ ಎಂದು ಅಶೋಕ್ ಹೇಳಿದ್ದಾರೆ. "ಬರ ಪರಿಹಾರವಿಲ್ಲ, ಬೆಂಬಲ ಬೆಲೆ ಇಲ್ಲ, ಖರೀದಿ ಕೇಂದ್ರಗಳಿಲ್ಲ, ನೀರಾವರಿ ಯೋಜನೆಗಳಿಲ್ಲ - ಹೀಗೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಈ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲದು," ಎಂದು ಎಚ್ಚರಿಕೆ ನೀಡಿದ್ದಾರೆ.