ಕೆಎಸ್‌ಸಿಎ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ?

ವೆಂಕಟೇಶ್ ಪ್ರಸಾದ್ ಅವರ ತಂಡದಲ್ಲಿ ಸುಜಿತ್ ಸೋಮಸುಂದರ್ (ಉಪಾಧ್ಯಕ್ಷ/ಕಾರ್ಯದರ್ಶಿ) ಮತ್ತು ಅವಿನಾಶ್ ವೈದ್ಯ (ಜಂಟಿ ಕಾರ್ಯದರ್ಶಿ) ಅವರಂತಹ ಮಾಜಿ ಕ್ರಿಕೆಟಿಗರ ನಾಮಪತ್ರಗಳೂ ಅಂಗೀಕೃತವಾಗಿವೆ.

Update: 2025-11-26 10:51 GMT

ಕೆಎಸ್‌ಸಿಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವೆಂಕಟೇಶ್‌ ಪ್ರಸಾದ್‌

Click the Play button to listen to article

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ನಾಮಪತ್ರ ಪರಿಶೀಲನೆ ವೇಳೆ ಈ ಮಹತ್ವದ ಬೆಳವಣಿಗೆ ನಡೆದಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇನ್ನೋರ್ವ ಅಭ್ಯರ್ಥಿ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ. ಶಾಂತಕುಮಾರ್ ಅವರು ಡಿಎಚ್ ಮತ್ತು ಪಿವಿ ಸ್ಪೋರ್ಟ್ಸ್ ಕ್ಲಬ್‌ಗೆ ನಾಲ್ಕು ವರ್ಷಗಳ ಚಂದಾ ಪಾವತಿಸದ ಕಾರಣ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಡಾ. ಬಿ. ಬಸವರಾಜು (ನಿವೃತ್ತ ಐಎಎಸ್) ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೋರ್ವ ಸ್ಪರ್ಧಿಯಾಗಿದ್ದ ಕಲ್ಪನಾ ವೆಂಕಟಾಚಾರ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಇದರಿಂದಾಗಿ ವೆಂಕಟೇಶ್ ಪ್ರಸಾದ್ ಅವರ ಆಯ್ಕೆ ಸುಗಮವಾಗಿದೆ.

ಅಧಿಕೃತ ಘೋಷಣೆ ಬಾಕಿ

"ಈ ಬೆಳವಣಿಗೆಯೊಂದಿಗೆ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ," ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ. ಚುನಾವಣಾ ಪ್ರಕ್ರಿಯೆಯು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಆಡಿ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

ಮಾಜಿ ಕ್ರಿಕೆಟಿಗರ ತಂಡದ ಪ್ರವೇಶ

ವೆಂಕಟೇಶ್ ಪ್ರಸಾದ್ ಅವರ ತಂಡದಲ್ಲಿ ಸುಜಿತ್ ಸೋಮಸುಂದರ್ (ಉಪಾಧ್ಯಕ್ಷ/ಕಾರ್ಯದರ್ಶಿ) ಮತ್ತು ಅವಿನಾಶ್ ವೈದ್ಯ (ಜಂಟಿ ಕಾರ್ಯದರ್ಶಿ) ಅವರಂತಹ ಮಾಜಿ ಕ್ರಿಕೆಟಿಗರ ನಾಮಪತ್ರಗಳೂ ಅಂಗೀಕೃತವಾಗಿವೆ. ಈ ಹಿಂದೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವೆಂಕಟೇಶ್ ಪ್ರಸಾದ್ ಉಪಾಧ್ಯಕ್ಷರಾಗಿ ಮತ್ತು ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸುಜಿತ್ ಸೋಮಸುಂದರ್ ಅವರು ಇತ್ತೀಚೆಗೆ ಬಿಸಿಸಿಐನ (BCCI) ಶಿಕ್ಷಣ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ಸಂಸ್ಥೆಯ ಚುನಾವಣೆಗೆ ಇಳಿದಿದ್ದಾರೆ.

Tags:    

Similar News