ಕಾಂಗ್ರೆಸ್‌ನಿಂದ ಬೇಸತ್ತಿದ್ದರೆ ಬನ್ನಿ, ಸರ್ಕಾರ ಮಾಡೋಣ: ಡಿ.ಕೆ.ಶಿವಕುಮಾರ್‌ಗೆ ಸದಾನಂದ ಗೌಡ ಬಹಿರಂಗ ಆಹ್ವಾನ
ಕಾಂಗ್ರೆಸ್ ಧೋರಣೆಗಳಿಂದ ಬೇಸತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಮಗೆ ಬಾಹ್ಯ ಬೆಂಬಲ ನೀಡಿದರೆ, ಸರ್ಕಾರ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಗದ್ದಲ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಚರ್ಚೆಗೆ ಕಾರಣರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಧೋರಣೆಗಳಿಂದ ಬೇಸತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮಗೆ (ಬಿಜೆಪಿಗೆ) ಬಾಹ್ಯ ಬೆಂಬಲ ನೀಡಿದರೆ, ನಾವು ಸರ್ಕಾರ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ನಾಯಕತ್ವ ಬದಲಾವಣೆ ಮತ್ತು ಪರ್ಯಾಯ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಪಕ್ಷದಲ್ಲಿನ ಬೆಳವಣಿಗೆಗಳಿಂದ ಅಥವಾ ನಾಯಕರ ಧೋರಣೆಯಿಂದ ಬೇಸತ್ತಿದ್ದರೆ, ಅವರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಬಹುದು. ಅವರ ಬೆಂಬಲದೊಂದಿಗೆ ಸರ್ಕಾರ ರಚಿಸಲು ನಾವು ಸಿದ್ಧರಿದ್ದೇವೆ. ಡಿ.ಕೆ.ಶಿವಕುಮಾರ್ ಬೆಂಬಲದೊಂದಿಗೆ ನಮ್ಮ ಪಕ್ಷದವರು (ಬಿಜೆಪಿ ನಾಯಕರು) ಮುಖ್ಯಮಂತ್ರಿಯಾಗಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಬೆಂಬಲದೊಂದಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಬೆಂಬಲದೊಂದಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬಹುದೇ ಎನ್ನುವುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಬೆಂಬಲ ನೀಡುವಂತಹ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಬಲವಾದ ನಂಬಿಕೆ ನನಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಜನರ ಒಲವು ಬಿಜೆಪಿಯತ್ತ ಇದೆ ಎಂದು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಬಳಿ 70 ಶಾಸಕರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನಿಜವಾಗಿಯೂ ಅವರ ಬಳಿ 70 ಶಾಸಕರ ಬೆಂಬಲ ಇದ್ದಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಅವರನ್ನು ಮುಖ್ಯಮಂತ್ರಿ ಮಾಡುತ್ತಿತ್ತು ಅಲ್ಲವೇ? ಅವರಿಗೆ ಅಷ್ಟು ಸಂಖ್ಯಾಬಲ ಇಲ್ಲದಿರುವುದೇ ಅವರು ಇನ್ನೂ ಉಪಮುಖ್ಯಮಂತ್ರಿಯಾಗಿರಲು ಕಾರಣ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
ಇದೇ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಸದಾನಂದಗೌಡ ಅವರು ಸಚಿವ ಸೋಮಣ್ಣ ಹೇಳಿಕೆ ಸತ್ಯವಾಗಿರಬಹುದು. ರಾಜಕೀಯದಲ್ಲಿ ಏನೂ ಆಗಬಹುದು. ಆದರೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಪದೇ ಪದೇ ಚುನಾವಣೆ ನಡೆದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಜನರಿಗೂ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.