ಗದ್ದುಗೆ ಗುದ್ದಾಟ| ಡಿಕೆಶಿ ಬೆಂಬಲಕ್ಕೆ ನಿಂತ ಚುಂಚನಗಿರಿ ಮಠ: ಉಳಿದ ಅವಧಿಗೆ ಸಿಎಂ ಪಟ್ಟ ಕಟ್ಟಲು ಚುಂಚಶ್ರೀ ಆಗ್ರಹ

ಪಕ್ಷದ ಹೋರಾಟಗಾರರು ಯಾವ ಪರಿಸ್ಥಿತಿಯಲ್ಲಾದರೂ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ದೇಶದ ಅಭಿವೃದ್ಧಿಗೂ, ರಾಜ್ಯದ ಪ್ರಗತಿಗೂ ಹಾನಿ ಉಂಟಾಗದಂತೆ ಜಾಗರೂಕತೆವಹಿಸುವುದು ಅಗತ್ಯ" ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

Update: 2025-11-26 15:32 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ

Click the Play button to listen to article

ಡಿಸಿಎಂ ಡಿ.ಕೆ. ಶಿವಕುಮಾರ್ ಮಠದ ಭಕ್ತರು. ಅವರು ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಮಠದ ಭಕ್ತರಲ್ಲಿದೆ. ಕಳೆದ 2.5 ವರ್ಷದಿಂದ ನಾವೂ ನೀರೀಕ್ಷೆಯಲಿದ್ದೇವೆ. ಆದರೆ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವು ವ್ಯತ್ಯಾಸಗಳಾಗಿರುವುದು ಕಂಡು ಬರುತ್ತಿವೆ ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. 

ಹಾಸನ ಜಿಲ್ಲೆ ಕುಂದೂರು ಮಠದ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಧಾನಸಭೆ ಚುನಾವಣೆ ಸಮಯದಿಂದಲೇ ಡಿ.ಕೆ. ಶಿವಕುಮಾರ್‌ ಪಕ್ಷವನ್ನು ಮುನ್ನಡೆಸಿ ಅಧಿಕಾರಕ್ಕೆ ತಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವು ನಾಯಕರ ಆಂತರಿಕ  ಅಸಮಾಧಾನ ಮತ್ತು ಅಹವಾಲುಗಳನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಸಹಜವಾಗಿ ಒಕ್ಕಲಿಗ ಮಠ ಹಾಗೂ ಇತರೆ ಸಮುದಾಯದ ಮಠಗಳು ತಮ್ಮ ಜನಾಂಗದ ಆಕಾಂಕ್ಷಿಗಳು ಪ್ರಮುಖ ಸ್ಥಾನಗಳಿಗೆ ಆಕಾಂಕ್ಷೆ ವ್ಯಕ್ತಪಡಿಸಿದಾಗ ಅವರ ಭಾವನೆ ಸ್ಪಂದಿಸುತ್ತವೆ. ರಾಜ್ಯವನ್ನಾಳಲು ಹಪವು ನಾಯಕರನ್ನು ಸಮುದಾಯ ನೀಡಿದೆ. ಕಳೆದ ಚುನಾವಣೆಯಲ್ಲಿ ನಮ್ಮವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಆಶಾಭಾವನೆಯಿಂದ ಜನ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ, ಈಗಿನ ಬೆಳವಣಿಗೆಗಳು ನೋಡಿದರೆ ಅದು ಈಡೇರುವಂತೆ ಕಾಣುತ್ತಿಲ್ಲ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಕೂಡ ಆಡಳಿತ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಶಿಸ್ತಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಹೀಗಾಗಿ ಉಳಿದ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ನಲ್ಲಿ ಡಿಕೆಶಿ ಎಂದಿಗೂ ಪಕ್ಷ ನಿಷ್ಠೆ ಬಿಟ್ಟಿಲ್ಲ. ಎಷ್ಟೋ ನೋವುಗಳನ್ನು ಏಕಾಂಗಿಯಾಗಿ ಅನುಭವಿಸಿದ್ದಾರೆ. ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸಿದರು.

“ಪಕ್ಷದ ಹೋರಾಟಗಾರರು ಯಾವ ಪರಿಸ್ಥಿತಿಯಲ್ಲಾದರೂ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಡಿಕೆಶಿ ಚೆನ್ನಾಗಿ ಬಲ್ಲವರಾಗಿದ್ದಾರೆ.ಅವರು ಹುಟ್ಟು ಹೋರಾಟಗಾರ. ಇಡೀ ರಾಷ್ಟ್ರ ರಾಜಕಾರಣದ ಒಳಸುಳಿ ಅವರಿಗೆ ಗೊತ್ತಿದೆ ಎಂದರು.

ರಾಜ್ಯ ಒಂದು ದಿಕ್ಕಿನಲ್ಲಿ ಸಾಗುತ್ತಿದೆ. ರಾಜಕೀಯ ಅಸ್ಥಿರತೆ ಉಂಟಾದಾಗ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲಿದೆ. ಯಾವ ಪ್ರೀತಿಯೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದರೋ, ಅದೇ ಪ್ರೀತಿಯಲ್ಲಿ ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕು. ರಾಜ್ಯದ ಹಿತಾಸಕ್ತಿ, ಡಿಕೆಶಿ ತ್ಯಾಗ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Full View

ರಾಜ್ಯದ ಜನತೆಗೆ ಸಂದೇಶ

ರಾಜ್ಯದ ಜನತೆಗೆ ಸಲಹೆ ನೀಡಿದ ಅವರು, “ದೇಶದ ಹಿತಾಸಕ್ತಿಯನ್ನು ಮೊದಲಿಗಾಗಿಸಿಕೊಂಡು ಕೆಲಸ ಮಾಡಬೇಕು. ಡಿ.ಕೆ. ಶಿವಕುಮಾರ್‌ ಅವರ ಹೋರಾಟ ಮತ್ತು ತ್ಯಾಗವನ್ನು ಗೌರವಿಸಬೇಕು. ಆತ್ಮನಿರ್ಭರತೆ ಸಾಧಿಸಲು ಹೊಂದಿರುವ ಅವಕಾಶಗಳನ್ನು ಬಳಸಿಕೊಂಡು, ಸಕಾರಾತ್ಮಕವಾಗಿ ಮುಂದೆ ಸಾಗಬೇಕು,” ಎಂದು ಹೇಳಿದರು.

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಗೊಂದಲ ಏರ್ಪಟ್ಟ ನಂತರ ಇದೇ ಪ್ರಥಮ ಬಾರಿಗೆ ಆದಿ ಚುಂಚನಗಿರಿಶ್ರೀಗಳು ಡಿಸಿಎಂ ಡಿ.ಕೆ. ಶಿವಕುಮಾರ್‌ ಪರವಾಗಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.

Tags:    

Similar News