ಮಹಿಳಾ ಸುರಕ್ಷತೆಗೆ ಒಂದು ಹೆಜ್ಜೆ; ಪೀಡಕರ ಹೆಡೆಮುರಿ ಕಟ್ಟಲು ಬಂದಿದ್ದಾಳೆ ಅಕ್ಕ!
ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಅಕ್ಕ ಪಡೆಯು ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ಪರಿಕಲ್ಪನೆಗೆ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ.
ಎಐ ಆಧಾರಿತ ಚಿತ್ರ
ಕರ್ನಾಟಕದ ಇತಿಹಾಸದಲ್ಲಿ 'ಅಕ್ಕ' ಎಂಬ ಪದಕ್ಕೆ ವಿಶೇಷ ಗೌರವ, ವಾತ್ಸಲ್ಯ ಮತ್ತು ರಕ್ಷಣೆಯ ಭಾವವಿದೆ.
ಮಹಿಳಾ ಸುರಕ್ಷತೆ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಉದ್ಯೋಗದ ಸ್ಥಳ, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಕಾಮಣ್ಣರ ಹೆಡೆಮುರಿ ಕಟ್ಟಲು ಸಜ್ಜಾಗಿದೆ.
ಕಿತ್ತೂರು ರಾಣಿ ಚನ್ನಮ್ಮ ಹೆಸರಿನ ಮಹಿಳಾ ಸೈನ್ಯಕ್ಕೆ 'ಅಕ್ಕ ಪಡೆ' ಎಂದು ಹೆಸರಿಟ್ಟು, ಈ ಪದಕ್ಕೆ ಶೌರ್ಯದ ಆಯಾಮ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರವು "ಅಕ್ಕ ಪಡೆ" ಎಂಬ ವಿನೂತನ ಮತ್ತು ಮಹತ್ವಾಕಾಂಕ್ಷಿಯ ಮಹಿಳಾ ಸುರಕ್ಷತಾ ಯೋಜನೆಯನ್ನು ಆರಂಭಿಸಿದೆ.
ಇದು ಕೇವಲ ಒಂದು ಯೋಜನೆಯಲ್ಲ, ಬದಲಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಯುವತಿಯರ ಪಾಲಿಗೆ ಧೈರ್ಯ ತುಂಬುವ, ರಕ್ಷಣೆಯ ಭರವಸೆ ನೀಡುವ ಒಂದು ಸಾಮಾಜಿಕ ಕವಚವಾಗಿದೆ.
ಪೊಲೀಸ್ ಇಲಾಖೆ, ಎನ್ ಸಿಸಿ ಕೆಡೆಟ್ ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಈ ಪಡೆಯು, ಮಹಿಳಾ ಸುರಕ್ಷತೆ ವಿಷಯದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ.
ಅಕ್ಕ ಪಡೆಯ ಪ್ರಮುಖ ಉದ್ದೇಶಗಳು
ಈ ಯೋಜನೆಯನ್ನು ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ರೂಪಿಸಲಾಗಿದೆ. ಅಕ್ಕ ಪಡೆಯು ನಿರ್ವಹಿಸುವ ಕಾರ್ಯಗಳ ಆಧಾರದ ಮೇಲೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ನಿಯಂತ್ರಣ ಸಾಧ್ಯವಾಗಲಿದೆ ಎಂಬುದು ಪರಿಣಿತರ ಮಾತು.
ಕಿರುಕುಳ ಪ್ರಕರಣಗಳಿಗೆ ಸ್ಪಂದನೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಲೈಂಗಿಕ ಕಿರುಕುಳ, ಚುಡಾಯಿಸುವಿಕೆ ಮತ್ತು ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳನ್ನು ತಡೆಯಲು ಅಕ್ಕ ಪಡೆ ಸನ್ನದ್ಧ ಸ್ಥಿತಿಯಲ್ಲಿ ಇರಲಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ಸಂತ್ರಸ್ಥೆಯರಿಗೆ ರಕ್ಷಣೆ ಒದಗಿಸಲಿದೆ. ಆರೋಪಿಗಳನ್ನು ಜೈಲಿಗೆ ಅಟ್ಟಲಿದೆ.
ಬಾಲ್ಯ ವಿವಾಹ ನಿರ್ಮೂಲನೆ: ಬಾಲ್ಯ ವಿವಾಹವು ಕಾನೂನುಬಾಹಿರ ಮಾತ್ರವಲ್ಲ, ಹೆಣ್ಣುಮಕ್ಕಳ ಭವಿಷ್ಯವನ್ನು ನಾಶ ಮಾಡುವ ಸಾಮಾಜಿಕ ಪಿಡುಗು. ಈ ಬಗ್ಗೆ ಖಚಿತ ಮಾಹಿತಿ ಬಂದೊಡನೆ ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾಡಳಿತ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ವಿವಾಹ ತಡೆಗಟ್ಟುವುದು. ಪೋಷಕರಿಗೆ ಮತ್ತು ಸಮುದಾಯಕ್ಕೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸಲಿದೆ.
ಸಂಕಷ್ಟದಲ್ಲಿರುವವರಿಗೆ ನೆರವು: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಅಥವಾ ಇನ್ಯಾವುದೇ ಕಾರಣದಿಂದ ಮನೆಯಿಂದ ಹೊರಬಂದ, ದಾರಿ ತಪ್ಪಿದ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಆಶ್ರಯ ನೀಡುವುದು. ಅವರನ್ನು ಸರ್ಕಾರದ 'ಸಾಂತ್ವನ ಕೇಂದ್ರ' ಅಥವಾ 'ಬಾಲಮಂದಿರ'ಗಳಿಗೆ ಸುರಕ್ಷಿತವಾಗಿ ತಲುಪಿಸಲಿದೆ.
ಜಾಗೃತಿ ಮೂಡಿಸುವುದು: ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳು, ಬಸ್ ನಿಲ್ದಾಣಗಳು, ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ, ಮಹಿಳೆಯರು ಮತ್ತು ಮಕ್ಕಳಿಗೆ ತಮ್ಮ ಹಕ್ಕುಗಳು, ಸುರಕ್ಷತಾ ಕ್ರಮಗಳು, ಕಾನೂನಿನ (ಪೋಕ್ಸೋ, ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ ಇತ್ಯಾದಿ) ಬಗ್ಗೆ ಅರಿವು ಮೂಡಿಸಲಾಗುವುದು.
ಶಾಲೆಗಳಲ್ಲಿ ಬಾಲಕಿಯರಿಗೆ 'ಗುಡ್ ಟಚ್' ಮತ್ತು 'ಬ್ಯಾಡ್ ಟಚ್' ಬಗ್ಗೆ ತಿಳಿ ಹೇಳುವ ಕಾರ್ಯವನ್ನೂ ಮಾಡಲಿದೆ.
'ಅಕ್ಕ ಪಡೆ'ಯ ರಚನೆ ಮತ್ತು ಕಾರ್ಯವೈಖರಿ
ಪ್ರತಿ 'ಅಕ್ಕ ಪಡೆ' ತಂಡದಲ್ಲಿ ಒಬ್ಬರು ಮಹಿಳಾ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ASI) ಅಥವಾ ಹೆಡ್ ಕಾನ್‌ಸ್ಟೇಬಲ್, ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಮತ್ತು ಒಬ್ಬ ಚಾಲಕ ಇರುತ್ತಾರೆ. ಇವರೊಂದಿಗೆ, ಯೋಜನೆಗೆ ಮತ್ತಷ್ಟು ಬಲ ತುಂಬಲು ತರಬೇತಿ ಪಡೆದ ರಾಷ್ಟ್ರೀಯ ಸೇವಾ ಯೋಜನೆ (NSS) ಅಥವಾ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಕೆಡೆಟ್‌ಗಳನ್ನು ಮತ್ತು ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳನ್ನು (SPC) ಸ್ವಯಂ ಸೇವಕರಾಗಿ ಬಳಸಿಕೊಳ್ಳಲಾಗುತ್ತದೆ.
ವಿಶೇಷ ವಾಹನ: ಈ ಪಡೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹಾಗೂ ಸುಲಭವಾಗಿ ಗುರುತಿಸಬಹುದಾದ (ಪಿಂಕ್ ಬಣ್ಣದ) ಗಸ್ತು ವಾಹನವನ್ನು ಒದಗಿಸಲಾಗುತ್ತದೆ. ಈ ವಾಹನವು ಜಿಪಿಎಸ್, ವೈರ್‌ಲೆಸ್ ಸಂವಹನ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಿರಲಿದೆ.
ಕಾರ್ಯಕ್ಷೇತ್ರ: ಅಕ್ಕ ಪಡೆಯು ಅಪರಾಧಗಳು ಹೆಚ್ಚಾಗಿ ವರದಿಯಾಗುವ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸುತ್ತದೆ. ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಮತ್ತು ಮುಗಿಯುವ ಸಮಯದಲ್ಲಿ, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಉದ್ಯಾನವನಗಳು ಮತ್ತು ನಿರ್ಜನ ಪ್ರದೇಶಗಳಲ್ಲಿ ನಿರಂತರವಾಗಿ ಗಸ್ತು ತಿರುಗಲಿದೆ.
ಸಮನ್ವಯತೆ ಮತ್ತು ಸಹಾಯವಾಣಿ: ಅಕ್ಕ ಪಡೆಯು ಪೊಲೀಸ್ ನಿಯಂತ್ರಣ ಕೊಠಡಿಯ ತುರ್ತು ಸ್ಪಂದನಾ ಸಹಾಯವಾಣಿ (112), ಮಕ್ಕಳ ಸಹಾಯವಾಣಿ (1098), ಮತ್ತು ಮಹಿಳಾ ಸಹಾಯವಾಣಿ (181) ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಈ ಸಹಾಯವಾಣಿಗಳಿಗೆ ಬರುವ ಕರೆಗಳನ್ನು ಆಧರಿಸಿ, ಅತಿ ಶೀಘ್ರದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಕಾರ್ಯಪ್ರವೃತ್ತವಾಗಲಿದೆ.
ಈ ಯೋಜನೆಯನ್ನು ರಾಜ್ಯದಾದ್ಯಂತ ಏಕಕಾಲದಲ್ಲಿ ಜಾರಿಗೊಳಿಸುವ ಬದಲು, ಕೆಲವು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಯಾದಗಿರಿ, ಕಲಬುರಗಿ, ಮತ್ತು ಇತರ ಕೆಲವು ಜಿಲ್ಲೆಗಳ ಪೊಲೀಸ್ ಇಲಾಖೆಯು ಈ ಉಪಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.
ಯಾದಗಿರಿ ಮಾದರಿ: ಯಾದಗಿರಿ ಜಿಲ್ಲೆಯಲ್ಲಿ ಪ್ರಾರಂಭವಾದ 'ಅಕ್ಕ ಪಡೆ'ಯು ಅತ್ಯುತ್ತಮ ಫಲಿತಾಂಶ ನೀಡಿದೆ. ಈ ಪಡೆ ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ತಂಡವು ನೂರಾರು ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.
ಕಾರ್ಯಾಚರಣೆಯ ಸ್ವರೂಪ: ಅಂಕಿ-ಅಂಶಗಳ ಪ್ರಕಾರ, ಅಕ್ಕ ಪಡೆಯು ಮಧ್ಯಪ್ರವೇಶಿಸುವ ಪ್ರಕರಣಗಳಲ್ಲಿ ಹೆಚ್ಚಿನವು ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹದ ಪ್ರಯತ್ನಗಳು ಮತ್ತು ಶಾಲಾ-ಕಾಲೇಜುಗಳ ಬಳಿ ನಡೆಯುವ ಚುಡಾಯಿಸುವಿಕೆಗೆ ಸಂಬಂಧಿಸಿವೆ.
ಹೆಚ್ಚಿದ ವಿಶ್ವಾಸ: ಈ ಪಡೆಯ ನಿರಂತರ ಗಸ್ತು ಮತ್ತು ತ್ವರಿತ ಸ್ಪಂದನೆಯಿಂದಾಗಿ, ಮಹಿಳೆಯರು ಮತ್ತು ಮಕ್ಕಳಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ವಿಶ್ವಾಸ ಹೆಚ್ಚಾಗಿದೆ. ಸಹಾಯವಾಣಿಗಳಿಗೆ ಕರೆ ಮಾಡಿ ದೂರು ನೀಡುವವರ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದ್ದು, ಇದು ಸಾರ್ವಜನಿಕರು ನಿರ್ಭೀತಿಯಿಂದ ಮುಂದೆ ಬರುತ್ತಿರುವುದರ ಸಂಕೇತವಾಗಿದೆ.
ಸವಾಲುಗಳೇನು?
ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆ: ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚಿನ ಸಂಖ್ಯೆಯ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ವಾಹನಗಳ ಅವಶ್ಯಕತೆಯಿದೆ.
ಸಮಗ್ರ ತರಬೇತಿ: ತಂಡದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಕೇವಲ ಕಾನೂನಿನ ಬಗ್ಗೆ ಮಾತ್ರವಲ್ಲ, ಸಂತ್ರಸ್ತರೊಂದಿಗೆ ಮಾನವೀಯವಾಗಿ ವರ್ತಿಸುವ, ಸಮಾಲೋಚನೆ ನಡೆಸುವ ಮತ್ತು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ವಿಶೇಷ ತರಬೇತಿ ನೀಡಬೇಕಿದೆ.
ಇಲಾಖೆಗಳ ನಡುವೆ ಸಮನ್ವಯ: ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮತ್ತು ಆರೋಗ್ಯ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಿದಾಗ ಮಾತ್ರ ಈ ಯೋಜನೆ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯ.
ಸಾರ್ವಜನಿಕ ಸಹಭಾಗಿತ್ವ: ಸಾರ್ವಜನಿಕರು, ವಿಶೇಷವಾಗಿ ಸ್ಥಳೀಯ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳು ಮತ್ತು ಯುವಕರು ಈ ಯೋಜನೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಅಪರಾಧಗಳನ್ನು ಮೂಲದಲ್ಲಿಯೇ ತಡೆಯಲು ಸಾಧ್ಯ.
ಮಹಿಳೆಯರಿಗೆ ಧೈರ್ಯ ಹೆಚ್ಚಿಸಲಿರುವ ಅಕ್ಕ ಪಡೆ
ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು. ಹೋಮ್ ಗಾರ್ಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳು ಅಕ್ಕಾ ಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಅಕ್ಕಾ ಪಡೆ ಶಾಲಾ-ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದು, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಹಾಯ ಮಾಡಲಿದೆ. ಡೀಪ್ ಫೇಕ್ ಹಾವಳಿ ಜಾಸ್ತಿ ಆಗುತ್ತಿದ್ದು, ಇದಕ್ಕೆ ಹೆಣ್ಣು ಮಕ್ಕಳು, ಹಿರಿಯ ಮಹಿಳೆಯರೇ ಟಾರ್ಗೆಟ್ ಆಗುತ್ತಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಅಕ್ಕ ಪಡೆ ಕೆಲಸ ಮಾಡಲಿದೆ. ಜೊತೆಗೆ ಆರಂಭಗೊಂಡ ಮೂರು ತಿಂಗಳಲ್ಲಿ ಮನೆ ಮನೆಗೆ ತೆರಳಲಿದೆ. ಜನರಿಗೆ ಜಾಗೃತಿ ಮೂಡಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಹಲವು ಜಿಲ್ಲೆಗಳಲ್ಲಿವೆ ಸುರಕ್ಷತಾ ಪಡೆ
ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2014ರಲ್ಲಿ ಚಾಮುಂಡಿ ಪಡೆ, ಬೆಂಗಳೂರು ನಗರದಲ್ಲಿ 2021ರಲ್ಲಿ ಚನ್ನಮ್ಮ ಪಡೆ ಹಾಗೂ 2023ರಲ್ಲಿ ತುಮಕೂರಿನಲ್ಲಿ ಕಲ್ಪತರು ಪಡೆ ಎಂಬ ಹೆಸರಿನೊಂದಿಗೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆಯಾದರೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಗೆ ಮತ್ತಷ್ಟು ಬಲ ತುಂಬಲಿದೆ.
'ಅಕ್ಕ ಪಡೆ' ಸುರಕ್ಷತಾ ಯೋಜನೆಯು ಕೇವಲ ಅಪರಾಧ ನಂತರ (ನಡೆದ ನಂತರ) ಕ್ರಮ ಕೈಗೊಳ್ಳುವ ಸಾಂಪ್ರದಾಯಿಕ ಪೊಲೀಸ್ ವ್ಯವಸ್ಥೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ, ಅಪರಾಧ ನಡೆಯದಂತೆ ತಡೆಯುವ 'ಮುಂಜಾಗ್ರತಾ ಪೊಲೀಸ್ ವ್ಯವಸ್ಥೆ'ಯ ಅತ್ಯುತ್ತಮ ಉಪಕ್ರಮವಾಗಲಿದೆ. ಇದು ಮಹಿಳೆಯರು ಮತ್ತು ಮಕ್ಕಳಿಗೆ ʼನೀವು ಒಬ್ಬಂಟಿಯಲ್ಲ, ನಿಮ್ಮ ರಕ್ಷಣೆಗೆ ನಾವಿದ್ದೇವೆʼ ಎಂಬ ಧೈರ್ಯವನ್ನು ತುಂಬುತ್ತದೆ. ಈ ಪಡೆಯನ್ನು ರಾಜ್ಯಾದ್ಯಂತ ವ್ಯವಸ್ಥಿತವಾಗಿ ವಿಸ್ತರಿಸಿ, ಅಗತ್ಯ ಸಂಪನ್ಮೂಲ ಮತ್ತು ತರಬೇತಿಯನ್ನು ಒದಗಿಸಿ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುನ್ನಡೆಸಿದರೆ, ಕರ್ನಾಟಕವು ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಒಂದು ಸುರಕ್ಷಿತ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.