ನೀರಿನ ಬಾಕಿ ಬಿಲ್ ಪಾವತಿಸಿದವರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಲು ಸಂಪುಟ ನಿರ್ಧಾರ?
ಗೃಹ ಬಳಕೆಯ ಗ್ರಾಹಕರು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರ ಶಾಸನಬದ್ಧ ಸಂಸ್ಥೆಗಳು ಬಾಕಿ ಮೊತ್ತವನ್ನು ಕಟ್ಟಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಬೆಂಗಳೂರು ಜಲ ಮಂಡಳಿ
ಬೆಂಗಳೂರು ಜಲಮಂಡಳಿ (BWSSB) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ , ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಗುರುವಾರ(ನ.27) ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಈ ಯೋಜನೆಯಡಿ, ಗ್ರಾಹಕರು ತಮ್ಮ ಪ್ರಧಾನ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದರೆ, ದಂಡ ಮತ್ತು ಬಡ್ಡಿ ಶುಲ್ಕಗಳ ಮೇಲೆ ಶೇ.10 ವಿನಾಯಿತಿ ಪಡೆಯುತ್ತಾರೆ.
ಬೆಂಗಳೂರು ಜಲ ಮಂಡಳಿ ತನ್ನ ಬಾಕಿ ಮೊತ್ತವನ್ನು ವಸೂಲಿ ಮಾಡಲು 'ಒನ್-ಟೈಮ್ ಸೆಟಲ್ಮೆಂಟ್' (ಒಂದು ಬಾರಿ ಇತ್ಯರ್ಥ) ಯೋಜನೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕ್ರಮದಿಂದಾಗಿ ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದ್ದು, ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಇದರಿಂದ ಜಲಮಂಡಳಿಗೆ ಬರಬೇಕಾದ 701ಕೋಟಿ ರೂಪಾಯಿಗೂ ಅಧಿಕ ಬಾಕಿ ಮೊತ್ತವನ್ನು ಶೀಘ್ರವಾಗಿ ಸಂಗ್ರಹಿಸಿ, ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಯಾರಿಗೆ ಅನ್ವಯ?
ಗೃಹ ಬಳಕೆಯ ಗ್ರಾಹಕರು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರ ಶಾಸನಬದ್ಧ ಸಂಸ್ಥೆಗಳು ಬಾಕಿ ಮೊತ್ತವನ್ನು ಕಟ್ಟಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರವು ಈಗಾಗಲೇ ಅನುಮೋದನೆ ನೀಡಿದ್ದು, ಇದು ಶೀಘ್ರದಲ್ಲಿಯೇ ಜಾರಿಗೆ ಬರುವ ನಿರೀಕ್ಷೆಯಿದೆ.