ಶಾಲೆ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ

ವಸತಿ ನಿಲಯದಲ್ಲಿ ಬಾಲಕಿ ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದರೂ, ಈ ವಿಷಯ ವಾರ್ಡನ್ ಅಥವಾ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ಬಾರದೇ ಇರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Update: 2025-11-26 12:34 GMT

ಸಾಂದರ್ಭಿಕ ಚಿತ್ರ 

Click the Play button to listen to article

ಭವಿಷ್ಯ ರೂಪಿಸಿಕೊಳ್ಳಬೇಕಿದ್ದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಾಲೆಯೊಂದರ ವಸತಿ ನಿಲಯದಲ್ಲಿ ನಡೆದಿದೆ. 

ಶಾಲಾ ಹಾಸ್ಟೆಲ್‌ನಲ್ಲಿ ಇದ್ದ ವಿದ್ಯಾರ್ಥಿನಿಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ತಕ್ಷಣವೇ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಆ ಅಪ್ರಾಪ್ತ ಬಾಲಕಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕುಕನೂರು ಪೊಲೀಸರು, ಬಾಲಕಿಯ ಈ ಪರಿಸ್ಥಿತಿಗೆ ಕಾರಣನಾದ ಯುವಕನನ್ನು ಶೀಘ್ರವಾಗಿ ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೋ  ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. 

ವಸತಿ ನಿಲಯದಲ್ಲಿ ಬಾಲಕಿ ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದರೂ, ಈ ವಿಷಯ ವಾರ್ಡನ್ ಅಥವಾ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ಬಾರದೇ ಇರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೆಣ್ಣುಮಕ್ಕಳ ಸುರಕ್ಷತೆಗಾಗಿ ಇರುವ ಹಾಸ್ಟೆಲ್‌ನಲ್ಲಿಯೇ ಇಂತಹ ಘಟನೆ ನಡೆಯುವುದು ನಾಚಿಕೆಗೇಡಿನ ಸಂಗತಿ. ವಸತಿನಿಲಯದ ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಒಂದು ವೇಳೆ ಸಿಬ್ಬಂದಿಗೆ ಈ ವಿಷಯ ತಿಳಿದಿದ್ದರೂ ಏಕೆ ಮುಚ್ಚಿಟ್ಟರು? ಎಂದು ಪಾಲಕರು ಮತ್ತು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 

Tags:    

Similar News