No To Child Pregnancy Part-3 | ವಸತಿ ಶಾಲೆಗಳಲ್ಲಿ ಅಪ್ರಾಪ್ತೆಯರಿಗೆ ಅಭದ್ರತೆ ; ಆಮಿಷ, ಆಕರ್ಷಣೆ ದೌರ್ಜನ್ಯಕ್ಕೆ ಕಾರಣ?
x

No To Child Pregnancy Part-3 | ವಸತಿ ಶಾಲೆಗಳಲ್ಲಿ ಅಪ್ರಾಪ್ತೆಯರಿಗೆ ಅಭದ್ರತೆ ; ಆಮಿಷ, ಆಕರ್ಷಣೆ ದೌರ್ಜನ್ಯಕ್ಕೆ ಕಾರಣ?

ವಸತಿ ಶಾಲೆಗಳಲ್ಲಿರುವ ಬಾಲಕಿಯರೇ ಹೆಚ್ಚಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ದುರಂತ. ವಿದ್ಯಾಭ್ಯಾಸ ಮಾಡಲು ಬಂದ ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿನಿಯರೇ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ವಿಷಾದನೀಯ.


ಶಿಕ್ಷಣವೇ ಶಕ್ತಿ ಎಂಬ ಧ್ಯೇಯದೊಂದಿಗೆ, ಬಡ ಮತ್ತು ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ವಸತಿ ಶಾಲೆಗಳನ್ನು ತೆರೆದಿವೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಉತ್ತೇಜನ ನೀಡಲು ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ನವೋದಯ ವಿದ್ಯಾಲಯಗಳಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಜ್ಞಾನದ ದೇಗುಲವಾಗಬೇಕಿದ್ದ ಈ ಶಾಲೆಗಳೇ ಇಂದು ಹೆಣ್ಣುಮಕ್ಕಳ ಪಾಲಿಗೆ ಭಯಾನಕ ತಾಣಗಳಾಗುತ್ತಿರುವುದು ವ್ಯವಸ್ಥೆಯ ದಾರುಣ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಾವಿರಾರು ಬಡ ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಮತ್ತು ವಸತಿಯ ಕನಸು ಹೊತ್ತು ಈ ಶಾಲೆಗಳಿಗೆ ಬರುತ್ತಾರೆ. ಆದರೆ, ಇಲ್ಲಿ ಅವರ ಕನಸುಗಳು ನುಚ್ಚುನೂರಾಗುತ್ತಿವೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ, ಈ ಶಾಲೆಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆಯನ್ನು ಬಟಾಬಯಲು ಮಾಡಿದೆ.

ಇದು ಕೇವಲ ಯಾದಗಿರಿಯ ಕಥೆಯಲ್ಲ. ಇತ್ತೀಚೆಗೆ ಶಿವಮೊಗ್ಗದಲ್ಲಿಯೂ 9ನೇ ತರಗತಿಯ ಬಾಲಕಿ ಸ್ವಂತ ಅಣ್ಣನಿಂದಲೇ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದಳು. ಇಂತಹ ಪ್ರಕರಣಗಳು ಒಂದರ ಹಿಂದೆ ಒಂದರಂತೆ ವರದಿಯಾಗುತ್ತಿರುವುದು, ತಮ್ಮ ಹೆಣ್ಣುಮಕ್ಕಳನ್ನು ನಂಬಿ ವಸತಿ ಶಾಲೆಗಳಿಗೆ ಕಳುಹಿಸಿರುವ ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. "ನಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೆಂದು ನಾವು ನಂಬುವುದು ಹೇಗೆ?" ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ವಸತಿ ಶಾಲೆಗಳಲ್ಲಿ ಹೆಚ್ಚುತ್ತಿರುವ ದೌರ್ಜನ್ಯ

ರಾಜ್ಯದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ಅಡಿಯಲ್ಲಿ ಸುಮಾರು 800 ವಸತಿ ಶಾಲೆಗಳು ಮತ್ತು ಸಾವಿರಕ್ಕೂ ಅಧಿಕ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ನಿಯಮದ ಪ್ರಕಾರ, ಈ ಎಲ್ಲಾ ಸಂಸ್ಥೆಗಳಿಗೆ ರಾತ್ರಿ ವೇಳೆ ಭದ್ರತೆ ಒದಗಿಸಲು ಸರ್ಕಾರವು ಸಿಬ್ಬಂದಿಯನ್ನು ನೇಮಿಸಬೇಕು. ಆದರೆ, ವಾಸ್ತವದಲ್ಲಿ ಬಹುತೇಕ ವಸತಿ ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿಗಳೇ ಇಲ್ಲ. ಇದರಿಂದಾಗಿ, ನಿಲಯಪಾಲಕರೇ ಮಕ್ಕಳ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿಯನ್ನು ಹೊರಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಭದ್ರತಾ ಸಿಬ್ಬಂದಿಯ ಅನುಪಸ್ಥಿತಿಯು ಗಂಭೀರ ಪರಿಣಾಮಗಳನ್ನು ಬೀರುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಅಪರಿಚಿತರು ರಾತ್ರೋರಾತ್ರಿ ವಸತಿ ನಿಲಯಗಳ ಆವರಣಕ್ಕೆ ನುಗ್ಗಿ ಉಪಟಳ ನೀಡಿದ ಪ್ರಸಂಗಗಳೂ ನಡೆದಿವೆ. ಈ ರೀತಿಯ ಭದ್ರತಾ ಲೋಪಗಳು ಹೆಣ್ಣುಮಕ್ಕಳನ್ನು ಮತ್ತಷ್ಟು ಅಪಾಯಕ್ಕೆ ದೂಡುತ್ತಿವೆ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ, ಬಡ ಮಕ್ಕಳ ಭವಿಷ್ಯ ರೂಪಿಸಬೇಕಾದ ವಸತಿ ಶಾಲೆಗಳು, ಅವರ ಬಾಳನ್ನು ಕಮರಿಸುವ ನೋವಿನ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ.

ಸಿಸಿಟಿವಿ ಕ್ಯಾಮೆರಾ ಕೊರತೆ

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಹಾಗೂ ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದಾಗ್ಯೂ, ರಾಜ್ಯದ ಕೆಲವು ವಸತಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದಿರುವುದು ದೌರ್ಜನ್ಯ ಎಸಗುವವರಿಗೆ ವರವಾಗಿ ಪರಿಣಮಿಸಿದೆ. ವಸತಿ ಶಾಲೆಗಳಿಗೆ ಅಕ್ರಮವಾಗಿ ಪ್ರವೇಶಿಸುವ ಅಪರಿಚಿತರು, ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆ

ವಸತಿ ಶಾಲೆಗಳು ಹಾಗೂ ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಕಾಲಕಾಲಕ್ಕೆ ವಾರ್ಡನ್‌ ಹುದ್ದೆಗಳನ್ನು ಸರ್ಕಾರ ನೇಮಕ ಮಾಡುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಹಾಸ್ಟೆಲ್‌ಗಳಿಗೆ ವಾರ್ಡನ್‌ ಸೇರಿದಂತೆ ಸಿಬ್ಬಂದಿ ನೇಮಕ ಮಾಡದಿರುವುದರಿಂದಲೂ ನಿರ್ವಹಣೆ, ನಿಯಂತ್ರಣ ಸಾಧ್ಯವಾಗಿಲ್ಲ. ಬಹಳಷ್ಟು ಕಡೆ ಐದು ಹಾಸ್ಟೆಲ್‌ಗಳ ಜವಾಬ್ದಾರಿಯನ್ನು ಒಬ್ಬರೇ ವಾರ್ಡನ್‌ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಸತಿ ನಿಲಯಗಳ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ವಾರ್ಡನ್‌ ಒಬ್ಬರು ʼದ ಫೆಡರಲ್‌ ಕರ್ನಾಟಕಕ್ಕೆʼ ತಿಳಿಸಿದರು.

ಮೂಲಭೂತ ಸೌಕರ್ಯ ಕೊರತೆ

ರಾಜ್ಯ ಸರ್ಕಾರ ಪ್ರತಿ ವರ್ಷ ತನ್ನ ಬಜೆಟ್‌ನಲ್ಲಿ ವಿವಿಧ ಇಲಾಖೆಯಡಿ ಹೊಸ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡುತ್ತದೆ. ಆದರೆ, ಅಗತ್ಯ ಮೂಲ‌ಸೌಕರ್ಯ ಒದಗಿಸುವುದಿಲ್ಲ. ಒಂದು ವಸತಿ ನಿಲಯದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದ್ದರೆ, 120 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಆಗ ಎಲ್ಲರಿಗೂ ಸಮರ್ಪಕ ಸೌಕರ್ಯ ಒದಗಿಸುವುದು ಕಷ್ಟಕರವಾಗಲಿದೆ. ಅಲ್ಲದೇ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸುವುದು ಕಷ್ಟವಾಗುತ್ತದೆ ಎಂದು ವಸತಿ ನಿಲಯದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕಡ್ಡಾಯ ವೈದ್ಯಕೀಯ ತಪಾಸಣೆಗೆ ಸೂಚನೆ

ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ 31ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ, ಬಾಲಕಿಯರಿಗೆ ಶುಚಿ ಪ್ಯಾಡ್‌ ಒದಗಿಸುವುದು, ಅವರಲ್ಲಿನ ದೈಹಿಕ ಬೆಳವಣಿಗೆ ಕುರಿತು ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಆಯೋಗವು ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ನಮ್ಮ ಪ್ರಯತ್ನದ ಫಲವಾಗಿ ಹೈಕೋರ್ಟ್‌ ಕೂಡ ಸುಮೊಟು ಪ್ರಕರಣ ದಾಖಲಿಸಿದೆ. ಮಕ್ಕಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಸೋಮವಾರ(ಸೆ.1) ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ಅಧಿಕಾರಿಗಳ ಸಭೆ ಕರೆದು, ಬಾಲ ಗರ್ಭಿಣಿಯರ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಶಿಕ್ಷಕರು, ಸಿಬ್ಬಂದಿಗಳಿಂದಲೇ ದೌರ್ಜನ್ಯ

ರಾಜ್ಯದ ವಸತಿ ಶಾಲೆಗಳಲ್ಲಿ ನಡೆದಿರುವ ಬಹುಪಾಲು ಲೈಂಗಿಕ ದೌರ್ಜನ್ಯಗಳು ಅಲ್ಲಿನ ಶಿಕ್ಷಕರು ಹಾಗೂ ಗ್ರೂಪ್‌ ʼಡಿʼ ನೌಕರರಿಂದಲೇ ಸಂಭವಿಸಿರುವುದು ಅಘಾತಕಾರಿಯಾಗಿದೆ. ರಕ್ಷಣೆ ಮಾಡಬೇಕಾದ ಶಿಕ್ಷಕರು ಹಾಗೂ ಸಿಬ್ಬಂದಿಗಳೇ ಭಕ್ಷಕರಾಗಿರುವುದು ಹೇಯ ಕೃತ್ಯವಾಗಿದೆ. ಶಿವಮೊಗ್ಗದ ವಸತಿ ಶಾಲೆಯಲ್ಲಿ ನೃತ್ಯ ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ, ಅರಕಲಗೂಡು ತಾಲೂಕಿನ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಿಂದಲೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಚಿತ್ರದುರ್ಗದಲ್ಲಿ ಶಾಲಾ ಶಿಕ್ಷಕನಿಂದಲೇ ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಮುಟ್ಟುವುದು. ಚಿಕ್ಕಮಗಳೂರಿನ ವಸತಿ ಶಾಲೆಯಲ್ಲಿ ಗ್ರೂಪ್‌ ʼಡಿʼ ನೌಕರ ಹಾಗೂ ಶುಶ್ರೂಷಕಿ ಪ್ರಿಯಕರನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ, ಬೀದರ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ ಹಾಗೂ ಜೇವರ್ಗಿಯ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರಿಂದಲೇ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕೋಲಾರದ ವಸತಿ ಶಾಲೆಯ ಶಿಕ್ಷಕನ ಮೊಬೈಲ್‌ನಲ್ಲಿ 5,000 ಕ್ಕೂ ಅಧಿಕ ನಗ್ನ ಚಿತ್ರಗಳಿದ್ದು, ಪೊಲೀಸರು ಆತನನ್ನು ಬಂಧಿಸಿದ್ದರು.

ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ಕೊರತೆ

ಪೋಷಕರು ಕುಟುಂಬ ಹಾಗೂ ಹಣಕಾಸಿನ ಸಮಸ್ಯೆಯಿಂದ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗೆ ಸೇರಿಸುವುದರಿಂದ ಕುಟುಂಬದ ಸಂಪರ್ಕ ಕಡಿಮೆಯಾಗಿ, ಕೆಲವೊಮ್ಮೆ ಬಾಹ್ಯ ಶಕ್ತಿಗಳ ಆಮಿಷಕ್ಕೆ ಬಲಿಯಾಗುವುದು ಹೆಚ್ಚಾಗಿದೆ. ಮಕ್ಕಳಿಗೆ ಸರಿಯಾದ ಸಂದರ್ಭದಲ್ಲಿ ಲೈಂಗಿಕ ಶಿಕ್ಷಣ ನೀಡುವುದೂ ಪೋಷಕರ ಜವಾಬ್ದಾರಿಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಮಕ್ಕಳಲ್ಲಿ ಲೈಂಗಿಕ ಜ್ಞಾನದ ಕೊರತೆಯಿಂದಲೂ ವಿದ್ಯಾರ್ಥಿನಿಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಒಟ್ಟಾರೆಯಾಗಿ ಸರ್ಕಾರ, ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬ ಬಾಲಕ ಹಾಗೂ ಬಾಲಕಿಗೆ ಲೈಂಗಿಕ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಿದರೆ ಬಾಲ ಗರ್ಭಿಣಿಯರು ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವರ ಸಂಖ್ಯೆ ಕಡಿಮೆಯಾಗಬಹುದು ಎಂಬುದು ಮಕ್ಕಳ ಹಕ್ಕುಗಳ ಹೋರಾಟಗಾರರು ಆಗ್ರಹವಾಗಿದೆ.

Read More
Next Story