No To Child Pregnancy Part-1| ನಲಿಯುವ ವಯಸ್ಸಿನಲ್ಲಿ ತಾಯ್ತನದ ಹೊರೆ; ಸರ್ಕಾರಕ್ಕೆ ಅಪ್ರಾಪ್ತರ ಹೆರಿಗೆಯ ಬರೆ
x

No To Child Pregnancy Part-1| ನಲಿಯುವ ವಯಸ್ಸಿನಲ್ಲಿ ತಾಯ್ತನದ ಹೊರೆ; ಸರ್ಕಾರಕ್ಕೆ ಅಪ್ರಾಪ್ತರ ಹೆರಿಗೆಯ ಬರೆ

ʼದ ಫೆಡರಲ್‌ ಕರ್ನಾಟಕʼ ಇಂದಿನಿಂದ ಮಕ್ಕಳಲ್ಲಿ ಅರಿವು ಮೂಡಿಸುವ, ಸಮಾಜವನ್ನು ಜಾಗೃತಗೊಳಿಸುವ, ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಸರಣಿ ವರದಿಗಳ ಮೂಲಕ ವಿಶೇಷ ಅಭಿಯಾನ ಆರಂಭಿಸಿದೆ.


Click the Play button to hear this message in audio format

ಆಡಿ ನಲಿಯಬೇಕಾದ ಬಾಲ್ಯಾವಸ್ಥೆಯಲ್ಲೇ ತಾಯ್ತನದ ಕಹಿ ಉಣ್ಣುವ ಅಪ್ರಾಪ್ತ ಬಾಲಕಿಯರ ಪ್ರಕರಣಗಳು ಸಭ್ಯ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿವೆ. ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 9ನೇ ತರಗತಿ ಬಾಲಕಿಯರಿಗೆ ಹೆರಿಗೆ ಆಗಿರುವ ಘಟನೆಗಳು ಆತಂಕದ ಜತೆಗೆ ಅಭದ್ರತೆಯನ್ನು ಸೃಷ್ಟಿಸಿವೆ. ಇತ್ತೀಚಿಗೆ ವರದಿಯಾದ ಘಟನೆಗಳ ಹಿನ್ನೆಲೆಯಲ್ಲಿ ಮನೆ, ಶಾಲೆ, ಹಾಸ್ಟೆಲ್‌ಗಳಲ್ಲಿ ಕಿಶೋರಿಯರ ಸುರಕ್ಷತೆಯ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಕಳೆದ 5 ವರ್ಷಗಳಲ್ಲಿ 15 ಸಾವಿರ ಪ್ರಕರಣಗಳು ದಾಖಲಾಗಿವೆ. 2025 ಜನವರಿಯಿಂದ ಜೂನ್‌ ತಿಂಗಳ ಅಂತ್ಯದವರೆಗೆ ಒಟ್ಟು 2,147ಪೋಕ್ಸೋ ಪ್ರಕರಣಗಳು ದಾಖಲಾಗಿರುವುದು ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ. ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಗರ್ಭ ಧರಿಸುವ ಹದಿಹರೆಯದ ಬಾಲಕಿಯರು, ತಮ್ಮ ಭವಿಷ್ಯವನ್ನೇ ಕತ್ತಲೆಯ ಕೂಪಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಸಹ ಆತಂಕಕಾರಿಯಾಗಿದೆ. ರಾಜ್ಯ ಸರ್ಕಾರ ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಗೆ ಏನೇ ಕ್ರಮ ಕೈಗೊಂಡರೂ ಹರಿವ ನೀರಿನಂತೆ ಪ್ರಕರಣಗಳ ಹರಿವು ಹೆಚ್ಚುತ್ತಿದೆ.

ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಪೋಕ್ಸೋ ಕಾಯ್ದೆ ತಂದರೂ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ದೌರ್ಜನ್ಯ ಪ್ರಕರಣಗಳಿಗೆ ಪೂರ್ಣ ಕಡಿವಾಣ ಬೀಳುತ್ತಿಲ್ಲ. ಈ ನಿಟ್ಟಿನಲ್ಲಿ ʼದ ಫೆಡರಲ್‌ ಕರ್ನಾಟಕʼ ಇಂದಿನಿಂದ ಮಕ್ಕಳಲ್ಲಿ ಅರಿವು ಮೂಡಿಸುವ, ಸಮಾಜವನ್ನು ಜಾಗೃತಗೊಳಿಸುವ, ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಸರಣಿ ವರದಿಗಳ ಮೂಲಕ ವಿಶೇಷ ಅಭಿಯಾನ ಆರಂಭಿಸಿದೆ.

ರಾಜ್ಯದಲ್ಲಿ ಗರ್ಭಧಾರಣೆ ಪ್ರಕರಣ ಹೆಚ್ಚು

ರಾಜ್ಯದಲ್ಲಿ ಗರ್ಭ ಧರಿಸುತ್ತಿರುವ ಅಪ್ರಾಪ್ತ ಬಾಲಕಿಯರ ಪ್ರಕರಣಗಳು ಶರವೇಗದಲ್ಲಿ ಏರುತ್ತಿವೆ. 2023ರಿಂದ 2025 ಜುಲೈವರೆಗೆ 14ರಿಂದ 18 ವರ್ಷದ ಒಳಗಿನ 80,813 ಬಾಲಕಿಯರು ಗರ್ಭ ಧರಿಸಿರುವ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 8,891 ಪ್ರಕರಣಗಳು ವರದಿಯಾಗಿವೆ. ಬೆಳಗಾವಿಯಲ್ಲಿ 8,169, ವಿಜಯಪುರದಲ್ಲಿ 6,229 ಮಂದಿ ಅಪ್ತಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಉಡುಪಿಯಲ್ಲಿ ಅತಿ ಕಡಿಮೆ 182 ಮಂದಿ ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಿದ್ದಾರೆ. ಮಂಗಳೂರಿನಲ್ಲಿ 135 ಪ್ರಕರಣಗಳು ಪತ್ತೆಯಾಗಿವೆ.

ಇದಕ್ಕೂ ಮುನ್ನ 2020 ಜನವರಿಯಿಂದ 2023 ಜೂನ್‌ವರೆಗೆ ರಾಜ್ಯದಲ್ಲಿ ಅಂದಾಜು 46 ಸಾವಿರ ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇನ್ನು ಬೆಳಕಿಗೆ ಬಾರದೇ ಮುಚ್ಚಿ ಹೋಗಿರುವ ಪ್ರಕರಣಗಳು ದುಪ್ಪಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಐದು ವರ್ಷದಲ್ಲಿ 15 ಸಾವಿರ ಪ್ರಕರಣ

ಮಕ್ಕಳ ದೌರ್ಜನ್ಯ ಪ್ರಕರಣಗಳ ತಡೆಗಾಗಿ ರೂಪಿಸಿರುವ ಪೋಕ್ಸೋ ಕಾಯ್ದೆ ಅತ್ಯಂತ ಬಲಿಷ್ಠವಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 15 ಸಾವಿರ ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. 2025 ನೇ ಸಾಲಿನಲ್ಲಿ ಜನವರಿಯಿಂದ ಜೂನ್‌ ವರೆಗೆ 2147 ಪ್ರಕರಣಗಳು ವರದಿಯಾಗಿವೆ.

ಆದರೆ, ಈವರೆಗೂ ಕೇವಲ 700 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಶಿಕ್ಷೆಯ ಪ್ರಮಾಣ ಹೆಚ್ಚಾದರೆ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗಲಿವೆ. ಅಧಿಕಾರಿಗಳು, ಪೊಲೀಸರು, ವಕೀಲರು, ನ್ಯಾಯಾಲಯಗಳು ಮಕ್ಕಳ ರಕ್ಷಣೆಗಾಗಿ ಮುಂದಾಗಬೇಕು ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್‌ ಕೋಸಂಬೆ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಆಸ್ಪತ್ರೆಗಳಲ್ಲಿ ಪಾಲನೆಯಾಗದ ನಿಯಮ

ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರಿಶೀಲಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚಿಸಬೇಕು. ಆದರೆ, ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ 2021 ರ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನು ಪೊಲೀಸ್‌ ಠಾಣೆಗಳಿಗೆ ಬರುವ ದೂರು ಆಧರಿಸಿ 24 ಗಂಟೆಗಳಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬುದು ಕಾನೂನಿನಲ್ಲಿದೆ.

ಪೊಲೀಸ್‌ ಠಾಣೆಗಳಲ್ಲಿ ಇಂತಹ ದೂರುಗಳನ್ನು ದೂರು ಸಂಧಾನದ ಮೂಲಕ ಬಗೆಹರಿಸುವುದರಿಂದಲೂ ಬಹುತೇಕ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಸರ್ಕಾರ ಇಂತಹ ಗಂಭೀರ ವಿ ಷಯದಲ್ಲಿ ಉದಾಸೀನತೆ ತೋರದೇ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಒತ್ತಾಯವಾಗಿದೆ.

ಶಿವಮೊಗ್ಗದ ಮೆಗ್ಗಾನ್‌ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಸಿದ್ದನಗೌಡ ಮಾತನಾಡಿ, ಒಂದೇ ತಿಂಗಳಲ್ಲಿ ಐದಾರು ಪ್ರಕರಣಗಳು ವರದಿಯಾಗಿವೆ. ಒಂದು ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪಡೆದು 24 ವಾರದ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ. ಇಂತಹ ಪ್ರಕರಣಗಳ ತಡೆಗೆ ತ್ವರಿತ ಕಾರ್ಯಯೋಜನೆ ಅಗತ್ಯವಾಗಿದೆ ಎಂದು ತಿಳಿಸಿದರು.

ಬಾಲ ಗರ್ಭಿಣಿಯರ ತೊಡಕುಗಳೇನು?

ಅಪ್ರಾಪ್ತ ವಯಸ್ಸಿನಲ್ಲಿ ಗರ್ಭ ಧರಿಸುವ ಬಾಲಕಿಯರಲ್ಲಿ ಅನಿಮಿಯಾ, ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳಲಿದೆ. ಅಲ್ಲದೇ ಅವಧಿ ಪೂರ್ವ ಜನನ, ಮಕ್ಕಳ ತೂಕ ಕಡಿಮೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂಬುದು ಸ್ತ್ರೀರೋಗ ತಜ್ಞರ ಅಭಿಪ್ರಾಯವಾಗಿದೆ.

ಇನ್ನು ಅಪ್ರಾಪ್ತ ವಯಸ್ಸಿನಲ್ಲೇ ಮಕ್ಕಳ ಜನನದಿಂದ ತಾಯಿಯಾಗುವ ಬಾಲಕಿಯು ಮಗುವಿನ ಆರೋಗ್ಯದತ್ತ ಕಾಳಜಿ ವಹಿಸುವುದು ಕಡಿಮೆ. ಆಗ ತಾಯಿ ಮತ್ತು ಮಗುವಿನ ಆರೋಗ್ಯ ಕೆಡುವ ಸಂಭವ ಇರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯಿ ಆಗುವುದರಿಂದ ಸಮಾಜದ ನಿರ್ಲಕ್ಷ್ಯಕ್ಕೂ ಒಳಗಾಗಬೇಕಾಗುತ್ತದೆ. ಮಕ್ಕಳ ಲಾಲನೆ ಪೋಷಣೆಯ ಅರಿವು ಮತ್ತು ಜ್ಞಾನ ಇರುವುದಿಲ್ಲ. ಕತ್ತಲೆಯ ಕೋಣೆಗಳಲ್ಲಿ ತಾಯಿ ಮಕ್ಕಳ ಭವಿಷ್ಯ ಮುಸುಕಾಗುತ್ತದೆ. ಅವಧಿ ಪೂರ್ವ ಜನನ ಹಾಘೂ ಅಪ್ರಾಪ್ತರಿಗೆ ಜನಿಸಿದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ.

ಇತ್ತೀಚೆಗೆ ನಡೆದ ಘಟನೆಗಳಿವು

2025 ಆ.29 ರಂದು ಯಾದಗಿರಿಯ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿ ಗರ್ಭಿಯಾಗಿರುವುದನ್ನು ಯಾರೂ ಗಮನಿಸಿರಲಿಲ್ಲ. ಆ.೨೮ ರಂದು ಮಗುವಿಗೆ ಜನ್ಮ ನೀಡಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಲೆಯ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

2025 ಜುಲೈ ತಿಂಗಳಲ್ಲಿ ಹಾಸನದ 15 ವರ್ಷದ ಬಾಲಕಿಯನ್ನು ಕುಟುಂಬದ ಸ್ನೇಹಿತರೊಬ್ಬರೇ ಅತ್ಯಾಚಾರ ನಡೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ನ್ಯಾಯಾಲಯದ ಆದೇಶದ ಬಳಿಕ ಗರ್ಭಪಾತ ಮಾಡಲಾಯಿತು.

2025 ಜುಲೈ ತಿಂಗಳಲ್ಲೇ ಚಿಕ್ಕಮಗಳೂರು ಜಿಲ್ಲೆಯ ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ನಿವಾಸಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿ ಗರ್ಭಿಣಿಯಾಗಿ ಪ್ರಕರಣ ಬೆಳಕಿಗೆ ಬಂದ ನಂತರ ಪೋಷಕರ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು.

2025ಜೂನ್ ತಿಂಗಳಲ್ಲಿ ಬೀದರ್‌ನ 16 ವರ್ಷದ ಬಾಲಕಿ ಮೇಲೆ ತನ್ನ ಸಹೋದರ ಸ್ನೇಹಿತನೇ ಅತ್ಯಾಚಾರ ನಡೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಬಾಲಕಿಯು ಮಗುವಿಗೆ ಜನ್ಮ ನೀಡಿದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಆಗಸ್ಟ್‌ 31ರಂದು ಶಿವಮೊಗ್ಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯು ತನ್ನ ಸಹೋದರನಿಂದಲೇ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಸಹಜ ಬೆಳವಣಿಗೆ ಹೊಂದಿದ್ದ ಸೋದರಿಯ ಮೇಲೆ ಅಪ್ರಾಪ್ತ ಅಣ್ಣನೇ ಅತ್ಯಾಚಾರ ನಡೆಸಿದ್ದ ಎಂಬುದನ್ನು ಬಾಲಕಿಯು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹೇಳಿದ್ದರು. ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಸಹೋದರನನ್ನು ಬಂಧಿಸಿದ್ದರು.

2025 ಸೆ.1ರಂದು ಬಾಗಲಕೋಟೆ ಜಿಲ್ಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ 8 ನೇ ತರಗತಿ ವಿದ್ಯಾರ್ಥಿಯೊಬ್ಬರು ಅತ್ಯಾಚಾರ ನಡೆಸಿದ್ದ. ಬಾಲಕಿಯು ಎರಡು ತಿಂಗಳ ಗರ್ಭಿಣಿಯಾಗಿದ್ದು, ವಿಷಯ ತಿಳಿದ ಪೋಷಕರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಬಳಿಕ ಬಾಲಾರೋಪಿಯನ್ನು ಬಂಧಿಸಲಾಗಿದೆ.

ಗರ್ಭಪಾತಕ್ಕೂ ಇದೆ ಅವಕಾಶ

ಹದಿಹರೆಯದ ಗರ್ಭಧಾರಣೆಯು ಬಾಲಕಿಯ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ದೃಷ್ಟಿಯಿಂದ ‌ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ವೈದ್ಯಕೀಯ ಮಂಡಳಿ ಅಭಿಪ್ರಾಯ ಆಧರಿಸಿ ಸುಪ್ರೀಂಕೋರ್ಟ್‌ 24 ವಾರಗಳ ಒಳಗಿನ ಗರ್ಭಾವಸ್ಥೆ ಹಾಗೂ ಕೆಳ ಪ್ರಕರಣದಲ್ಲಿ ಅವಧಿ ಮೀರಿದರೂ ಗರ್ಭಪಾತ ಮಾಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ 21ನೇ ವಿಧಿಯಡಿ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ. ಲಿವ್ ಇನ್ ರಿಲೇಶನ್‌ಶಿಪ್‌ ನಲ್ಲಿರುವ ಅವಿವಾಹಿತ ಮಹಿಳೆಯರಿಗೂ ಗರ್ಭಪಾತದ ಹಕ್ಕು ವಿಸ್ತರಿಸಲಾಗಿದೆ. 2021ರ ತಿದ್ದುಪಡಿ ಕಾಯ್ದೆಯಡಿ ಕೆಲವು ಸಂದರ್ಭಗಳಲ್ಲಿ 24 ವಾರಗಳ ಗರ್ಭಾವಸ್ಥೆ ಮೀರಿದರೂ ಗರ್ಭಪಾತಕ್ಕೆ ಅವಕಾಶವಿದೆ.

ಕೈಗೊಳ್ಳಬೇಕಾದ ತ್ವರಿತ ಕ್ರಮಗಳೇನು?

ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ ಕಡ್ಡಾಯಗೊಳಿಸಬೇಕು.

ಹೆಣ್ಣುಮಕ್ಕಳ ದೈಹಿಕ ಬದಲಾವಣೆಗಳ ಕುರಿತು ಪೋಷಕರು ನಿಗಾ ವಹಿಸಬೇಕು.

ಸಮುದಾಯ ಮಟ್ಟದಲ್ಲಿ ನಿಗಾ ಮತ್ತು ಕಾನೂನು ಜಾರಿ ಸಮರ್ಪಕಗೊಳಿಸಬೇಕು.

ಸಮಾಜದ ಮನೋಭಾವ ಮತ್ತು ಪೋಷಕರ ಜವಾಬ್ದಾರಿಗಳೂ ಬದಲಾಗಬೇಕು.

ರಾಜ್ಯ ಸರ್ಕಾರ ಕೂಡಲೇ ಮಕ್ಕಳ ರಕ್ಷಣಾ ನೀತಿ-2016 ಜಾರಿಗೊಳಿಸಬೇಕು.

Read More
Next Story