
No To Child Pregnancy Part-2| ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಶೇಕಡಾ ಇಪ್ಪತ್ತು; ಅಪ್ರಾಪ್ತರಿಗೆ ಬಂತು ಆಪತ್ತು
ರಾಜ್ಯದ ಯಾವ ಭಾಗದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರೇತರ ಸಂಸ್ಥೆಗಳು ತೊಡಗಿಸಿಕೊಂಡಿವೆಯೋ ಅಂತಹ ಕಡೆಗಳಲ್ಲಿ ಮಾತ್ರ ಶೇ 20 ರಷ್ಟು ಮಾತ್ರ ರಕ್ಷಣಾ ನೀತಿ ಜಾರಿಯಾಗಿದೆ.
ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಸಾಮಾಜಿಕ ಕಾರಣಗಳ ಜೊತೆಗೆ ಸರ್ಕಾರದ ಗಂಭೀರ ನಿರ್ಲಕ್ಷ್ಯವೂ ಕಾರಣವಾಗಿದೆ. ಮಕ್ಕಳ ದೈಹಿಕ ಮತ್ತು ಭಾವನಾತ್ಮಕ ಸುರಕ್ಷತೆಯನ್ನು ಖಾತರಿಪಡಿಸುವ ಕರ್ನಾಟಕ ಮಕ್ಕಳ ರಕ್ಷಣಾ ನೀತಿ-2016" ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದೇ ಈ ದುರಂತಗಳಿಗೆ ಮೂಲ ಕಾರಣ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಈ ನೀತಿಯು ಸಮರ್ಪಕವಾಗಿ ಜಾರಿಯಾಗಿದ್ದರೆ, ಇಂತಹ ಹಲವು ಪ್ರಕರಣಗಳನ್ನು ತಡೆಯಬಹುದಿತ್ತು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ "ಕರ್ನಾಟಕ ಮಕ್ಕಳ ರಕ್ಷಣಾ ನೀತಿ"ಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಿರಂತರವಾಗಿ ಆಗ್ರಹಿಸುತ್ತಿದ್ದರೂ, ಅದರ ಅನುಷ್ಠಾನವು ಬಹುತೇಕ ಕಡೆಗಳಲ್ಲಿ ಕೇವಲ ದಾಖಲೆಗೆ ಮಾತ್ರ ಸೀಮಿತವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಮಾತ್ರ ಈ ನೀತಿಯು ಸುಮಾರು ಶೇ 20ರಷ್ಟು ಜಾರಿಯಾಗಿದ್ದು, ಉಳಿದೆಡೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಉದಾಸೀನತೆಯು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ಎತ್ತಿ ತೋರಿಸುತ್ತದೆ.
ಮಕ್ಕಳ ರಕ್ಷಣಾ ನೀತಿಯ ಅನುಕೂಲಗಳೇನು?
ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ 'ಮಕ್ಕಳ ರಕ್ಷಣಾ ನೀತಿ' ಯನ್ನು ಜಾರಿಗೊಳಿಸುವ ಭಾಗವಾಗಿ, ಪ್ರತಿ ಸಂಸ್ಥೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ. ಈ ಸಮಿತಿಗಳು ತ್ರೈಮಾಸಿಕವಾಗಿ ಸಭೆ ಸೇರಿ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥಿತ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು.
ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮುನ್ನ ಪೊಲೀಸ್ ಪರಿಶೀಲನೆ ಆಗಬೇಕು. ವಸತಿ ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿ, ಬೋಧಕ ವೃಂದದಿಂದ 'ಬದ್ಧತಾ ಸ್ವೀಕಾರ ಪ್ರಮಾಣ ಪತ್ರ'ಕ್ಕೆ ಸಹಿ ಪಡೆಯಬೇಕು. ಸಹಿ ಹಾಕಿದ ಬಳಿಕ ಆ ಶಾಲೆಯಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಸಿಬ್ಬಂದಿಯನ್ನು ಹೊಣೆಯಾಗಿಸಬಹುದಾಗಿದೆ. ಉಪ ವಿಭಾಗಾಧಿಕಾರಿಗಳು ಪ್ರತಿ ತಿಂಗಳು ಒಂದು ಹಾಸ್ಟೆಲ್, ತಹಶೀಲ್ದಾರರು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ತಲಾ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬುದು ರಕ್ಷಣಾ ನೀತಿಯಲ್ಲಿದೆ. ಆದರೆ, ಇದ್ಯಾವುದೂ ನಿಯಮಿತವಾಗಿ ಆಗುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಕೇವಲ ಭೂ ವ್ಯವಹಾರಗಳಲ್ಲಿ ಮುಳುಗಿದ್ದು, ವಿದ್ಯಾರ್ಥಿಗಳ ಕ್ಷೇಮ ಮರೆತಿದ್ದಾರೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಅವರು 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದರು.
ಕೆಳ ಹಂತದ ಅಧಿಕಾರಿಗಳು ಸಭೆ, ಕಡತ ತಯಾರಿ, ವರದಿ ಸಲ್ಲಿಕೆಗಳಲ್ಲೇ ನಿರತರಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಮಕ್ಕಳ ರಕ್ಷಣಾ ನೀತಿಯು ಅಭಿಯಾನ ಮಾದರಿಯಲ್ಲಿ ನಡೆಯುವುದರಿಂದ ಶಾಲಾ ಬಾಲಕಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ " ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹೊರತಾಗಿ ಹೆಣ್ಣು ಮಕ್ಕಳ ಸುರಕ್ಷತೆ, ಸುಭದ್ರತೆ ದೃಷ್ಟಿಯಿಂದಲೂ ನೋಡಬೇಕು. ಮಕ್ಕಳ ರಕ್ಷಣಾ ನೀತಿಯಡಿ ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಮಕ್ಕಳಲ್ಲಿ ಆಗುತ್ತಿರುವ ದೈಹಿಕ ಬದಲಾವಣೆಗಳನ್ನು ಪತ್ತೆ ಹಚ್ಚಬೇಕು ಎಂಬುದಿದೆ. ಆದರೆ, ಇದ್ಯಾವುದೂ ಸರಿಯಾಗಿ ಆಗುತ್ತಿಲ್ಲ ಎಂದು ದೂರಿದರು.
ಪ್ರತಿ ವಸತಿ ನಿಲಯದಲ್ಲಿ ವಾರ್ಡನ್, ಶುಶ್ರೂಷಕಿಯರು ಇದ್ದಾಗ್ಯೂ ಶಾಲಾ ಬಾಲಕಿಯರ ಹೆರಿಗೆ ಪ್ರಕರಣಗಳು ವರದಿಯಾಗಿರುವ ಗಂಭೀರ ಲೋಪ. ಮಕ್ಕಳ ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಶೀಘ್ರವೇ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನಿರ್ಲಕ್ಷ್ಯವನ್ನು ಆಯೋಗ ಯಾವುದೇ ಕಾರಣಕ್ಕೂ ಸಹಿಸಲ್ಲ. ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡಲೇಬೇಕು ಎಂದು ಒತ್ತಾಯಿಸಿದರು.
ಪಿಡಿಒಗಳ ಹೆಗಲಿಗೆ ಮಕ್ಕಳ ರಕ್ಷಣೆ ಹೊಣೆ
ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹೆರಿಗೆ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ದೌರ್ಜನ್ಯ ಪ್ರಕರಣಗಳ ತಡೆಗೆ ಸಾಕಷ್ಟು ಕ್ರಮ ಕೈಗೊಂಡರೂ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿವೆ. ಈ ನಿಟ್ಟಿನಲ್ಲಿ 'ಮಕ್ಕಳ ಸಹಾಯವಾಣಿ' ಕೂಡ ಕಠಿಣ ಕ್ರಮಗಳಿಗೆ ಮುಂದಾಗಿದೆ.
ಗ್ರಾಮಾಂತರ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಎರಡು ದಿನಕ್ಕಿಂತ ಹೆಚ್ಚು ಅವಧಿಯವರೆಗೆ ಬಾಲಕಿಯರು ಗೈರು ಹಾಜರಾಗಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೊಣೆ ವಹಿಸಲಾಗಿದೆ. ಇದರಿಂದ ಮಕ್ಕಳ ಸಮಸ್ಯೆ, ಆತಂಕಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ಶಿವಮೊಗ್ಗದ ಮಕ್ಕಳ ಸಹಾಯವಾಣಿ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸಣ್ಣ ವಯಸ್ಸಿನಲ್ಲೇ ಪರಸ್ಪರ ಆಕರ್ಷಣೆ, ಅತಿಯಾದ ಮೊಬೈಲ್ ಅವಲಂಬನೆ ಕೂಡ ಅಪ್ರಾಪ್ತರ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳು ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಮೂಡಿಸುತ್ತಿವೆ. ಯಾವುದು ಒಳ್ಳೆಯ ಸ್ಪರ್ಶ, ಯಾವುದು ಕೆಟ್ಟ ಸ್ಪರ್ಶ ಎಂಬ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಹೇಳಿದ್ದೇವೆ. ಆದಾಗ್ಯೂ, ಇಂತಹ ಪ್ರಕರಣಗಳು ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಕೆಲವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ದೂರು ನೀಡಿದ್ದಾರೆ. ಅಂತಹವರಿಗೆ ನಾವೇ ಕೌನ್ಸೆಲಿಂಗ್ ನೀಡಿದ್ದೇವೆ ಎಂದು ಅವರು ವಿವರಿಸಿದರು.
ಶಾಲೆಯ ಹೊರಗೂ ದೌರ್ಜನ್ಯ
ರಾಜ್ಯದ ಹಲವು ಕಡೆಗಳಲ್ಲಿ ಬಾಲಕಿಯರು ಶಾಲೆಗಳಿಗೆ ಬಸ್‌ಗಳಲ್ಲಿ ಹೋಗಿ ಬರುತ್ತಾರೆ. ಅಂತಹ ಸಂದರ್ಭದಲ್ಲಿಯೂ ಚಾಲಕ, ನಿರ್ವಾಹಕರಿಂದ ಲೈಂಗಿಕ ದೌರ್ಜನ್ಯಗಳು ನಡೆದಿರುವ ಉದಾಹರಣೆ ಇದೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ಬಾಲಕಿಯೊಬ್ಬಳು ತನಗೆ ಬಸ್ ಚಾಲಕನಿಂದ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಳು. ಬಾಲಕಿಗೆ ಒಂದು ವಾರ ತಡವಾಗಿ ಋತುಸ್ರಾವವಾದ ಕಾರಣ ದುರಂತ ತಪ್ಪಿತು. ಇಲ್ಲವಾದಲ್ಲಿ ಆಕೆಯೂ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡುವ ಆತಂಕವಿತ್ತು. ಆದಾಗ್ಯೂ ನಾವು ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದೆವು ಎಂದು ಮಕ್ಕಳ ಸಹಾಯವಾಣಿ ಅಧಿಕಾರಿ ತಿಳಿಸಿದರು.
ಕುಟುಂಬದ ಒಳಗೆ ನಡೆಯುವ ದೌರ್ಜನ್ಯ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ. ಕೆಲವೆಡೆ ತಂದೆಯಿಂದಲೇ, ಸೋದರನಿಂದಲೇ ಅತ್ಯಾಚಾರ ನಡೆದಿರುವ ಪ್ರಕರಣಗಳೂ ಇವೆ. ಅಂತಹ ಪ್ರಕರಣಗಳಲ್ಲಿ ಬಾಧಿತರಾದವರಿಗೆ ಸೂಕ್ತ ಸಮಾಲೋಚನೆ ಒದಗಿಸಿ,ಖಿನ್ನತೆಯಿಂದ ಪಾರು ಮಾಡಿದ್ದೇವೆ ಎಂದರು.
(ಓದುಗರೇ, ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಪೋಕ್ಸೋ ಕಾಯ್ದೆ ತಂದರೂ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ದೌರ್ಜನ್ಯ ಪ್ರಕರಣಗಳಿಗೆ ಪೂರ್ಣ ಕಡಿವಾಣ ಬೀಳುತ್ತಿಲ್ಲ. ಈ ನಿಟ್ಟಿನಲ್ಲಿ ʼದ ಫೆಡರಲ್ ಕರ್ನಾಟಕʼ ಇಂದಿನಿಂದ ಮಕ್ಕಳಲ್ಲಿ ಅರಿವು ಮೂಡಿಸುವ, ಸಮಾಜವನ್ನು ಜಾಗೃತಗೊಳಿಸುವ, ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಸರಣಿ ವರದಿಗಳ ಮೂಲಕ ವಿಶೇಷ ಅಭಿಯಾನ ಆರಂಭಿಸಿದೆ.
ಈ ವಿಶೇಷ ವರದಿಗಳ ಮಾಲಿಕೆಯ ಮೊದಲ ಭಾಗ ಬುಧವಾರ "No To Child Pregnancy Part-1| ನಲಿಯುವ ವಯಸ್ಸಿನಲ್ಲಿ ತಾಯ್ತನದ ಹೊರೆ; ಸರ್ಕಾರಕ್ಕೆ ಅಪ್ರಾಪ್ತರ ಹೆರಿಗೆಯ ಬರೆ" ಪ್ರಕಟವಾಗಿದೆ.
ಗುರುವಾರ (ಇಂದು) "No To Child Pregnancy Part-2| ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಶೇಕಡಾ ಇಪ್ಪತ್ತು; ಅಪ್ರಾಪ್ತರಿಗೆ ಬಂತು ಆಪತ್ತು" ಪ್ರಕಟವಾಗಿದೆ.
ನಾಳೆ(ಶುಕ್ರವಾರ) "No To Child Pregnancy Part-3 | ವಸತಿ ಶಾಲೆಗಳಲ್ಲಿ ಅಪ್ರಾಪ್ತೆಯರಿಗೆ ಅಭದ್ರತೆ ; ಆಮಿಷ, ಆಕರ್ಷಣೆಯಿಂದಲೂ ಹೆಚ್ಚುತ್ತಿದೆ ದೌರ್ಜನ್ಯ" ಪ್ರಕಟವಾಗಲಿದೆ.)