́ಗೃಹಲಕ್ಷ್ಮಿʼಯರಿಂದ ಹೊಸ ಸಹಕಾರಿ ಬ್ಯಾಂಕ್: ಗ್ಯಾರಂಟಿ ಯೋಜನೆ ಬಳಿಕ ಮಹಿಳಾ ʼವೋಟ್-ಬ್ಯಾಂಕ್ʼ?
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ನ ಪ್ರಮುಖ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳ ಶೋಷಣೆಯಿಂದ ಮಹಿಳೆಯರನ್ನು ಪಾರುಮಾಡುವುದು ಪ್ರಮುಖ ಗುರಿಯಾಗಿದೆ.
ರಾಜ್ಯ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಯ ಮುಂದುವರಿದ ಭಾಗವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಆರಂಭಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿಯೇ ನಡೆಸಲ್ಪಡುವ ಒಂದು ವಿಶಿಷ್ಟ ಹಣಕಾಸು ಸಂಸ್ಥೆ ಇದಾಗಲಿದೆ. ಇದೇ 28 ರಂದು ಸಹಕಾರಿ ಬ್ಯಾಂಕ್‌ಗೆ ಅಧಿಕೃತ ಚಾಲನೆ ದೊರೆಯಲಿದೆ.
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸ್ಥಾಪನೆಯ ಹಿಂದೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶವಿದ್ದರೂ ವೋಟ್‌ಬ್ಯಾಂಕ್ ಹುನ್ನಾರವೂ ಅಡಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಮಹಿಳೆಗೆ ಮಾಸಿಕ 2 ಸಾವಿರ ರೂ.ಗಳಂತೆ ವಾರ್ಷಿಕ 24 ಸಾವಿರ ರೂ. ಅವರ ಖಾತೆಗೆ ಜಮೆ ಆಗಲಿದೆ. ಚುನಾವಣಾ ಗ್ಯಾರಂಟಿ ಯೋಜನೆಯಾಗಿ ಆರಂಭಿಸಿದ ಗೃಹಲಕ್ಷ್ಮಿಯು ಇದೀಗ ಕಾಂಗ್ರೆಸ್ ಪಾಲಿಗೆ ಮತ ಬ್ಯಾಂಕ್ ಆಗಿ ಪರಿವರ್ತಿಸುವ ಯೋಜಿತ ಉದ್ದೇಶವಾಗಿದೆ ಎನ್ನಲಾಗಿದೆ.
ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಅರ್ಧದಷ್ಟು ಫಲಾನುಭವಿಗಳು 'ಕೈ' ಹಿಡಿದರೂ ಮತಬ್ಯಾಂಕ್ ಗ್ಯಾರಂಟಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರದಲ್ಲಿ ಪ್ರತಿ ಮಹಿಳೆಗೆ ವಾರ್ಷಿಕ ಹತ್ತು ಸಾವಿರ ಪ್ರೋತ್ಸಾಹಧನ ಘೋಷಿಸಿದ ಪರಿಣಾಮ ಮಹಿಳಾ ಮತದಾರರು ನಿತೀಶ್ ಕುಮಾರ್ ಕೈ ಹಿಡಿದರು. ಆದ್ದರಿಂದಲೇ ಎನ್ ಡಿಎ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಈಗ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದರೆ ಭವಿಷ್ಯದಲ್ಲಿ ಮಹಿಳೆಯರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರಲಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಫೈನಾನ್ಸ್ ಗಳ ಹಾವಳಿಯಿಂದ ಮುಕ್ತಿ
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸ್ಥಾಪನೆಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿದ್ದಾರೆ. ಇದರಿಂದ ಖಾಸಗಿ ಫೈನಾನ್ಸ್ ಕಿರುಕುಳದಿಂದಲೂ ಮುಕ್ತಿ ಹೊಂದಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಸಂಸ್ಥೆ, ಖಾಸಗಿ ಫೈನಾನ್ಸ್ ಗಳು ಸಾಲ ಸೌಲಭ್ಯ ಒದಗಿಸಿ ದುಬಾರಿ ಬಡ್ಡಿ ದರ ವಿಧಿಸುತ್ತಿವೆ. ಖಾಸಗಿ ಹಣಕಾಸು ಸಂಸ್ಥೆಗಳ ಶೋಷಣೆಯಿಂದ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಕಿರುಕುಳದಿಂದ ಪಾರಾಗಲು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನೆರವಾಗಲಿದೆ. ಇದು ಸರ್ಕಾರದ ಪರಿಣಾಮಕಾರಿ ಕ್ರಮ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಮೂಲಕ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಸ್ವಂತ ಉದ್ಯಮ ಪ್ರಾರಂಭಿಸಲು, ಕೃಷಿ, ಹೈನುಗಾರಿಕೆ, ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗೆ ಆರ್ಥಿಕ ಬೆಂಬಲ ದೊರೆಯಲಿದೆ. ಇದರಿಂದ ಮಹಿಳೆಯರು ಕೂಡ ಉದ್ಯಮಿಗಳಾಗುವ ಅವಕಾಶ ಒದಗಿ ಬರಲಿದೆ.
ಬ್ಯಾಂಕ್‌ನ ರಚನೆ ಮತ್ತು ಸದಸ್ಯತ್ವ
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡಲಿದೆ. ಮಹಿಳೆಯರೇ ಷೇರುದಾರರಾಗಿ, ನಿರ್ದೇಶಕರಾಗಿ ಮತ್ತು ಫಲಾನುಭವಿಗಳಾಗಿರುತ್ತಾರೆ. ಬ್ಯಾಂಕ್‌ನ ಸದಸ್ಯರಾಗಲು ಇಚ್ಛಿಸುವ ಮಹಿಳೆಯರು 1 ಸಾವಿರ ರೂ. ಪಾವತಿಸಿ ಷೇರುದಾರರಾಗಬೇಕು. ಷೇರುದಾರರಾದ ನಂತರ, ಪ್ರತಿ ತಿಂಗಳು 200 ರೂ.ಕಡ್ಡಾಯವಾಗಿ ಠೇವಣಿ ಇಡಬೇಕು. ಷೇರುದಾರರಾಗಿ ಆರು ತಿಂಗಳು ಪೂರ್ಣಗೊಳಿಸಿದ ನಂತರ ಸದಸ್ಯರು ಸಾಲ ಪಡೆಯಲು ಅರ್ಹರಾಗುತ್ತಾರೆ.
ಬ್ಯಾಂಕ್ ವೈಯಕ್ತಿಕ ಸಾಲಗಳಿಗೆ ಆದ್ಯತೆ ನೀಡಲಿದೆ. ಸಂಘ-ಸಂಸ್ಥೆಗಳಿಗೆ ಸದ್ಯಕ್ಕೆ ಸಾಲ ನೀಡುವ ಉದ್ದೇಶವಿಲ್ಲ. ಸದಸ್ಯರು 30 ಸಾವಿರ ರೂ.ನಿಂದ 3ಲಕ್ಷ ರೂ. ವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ. ಈ ಸಾಲವನ್ನು ಕೃಷಿ, ಹೈನುಗಾರಿಕೆ, ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ, ಸ್ವಂತ ಉದ್ಯಮ ಪ್ರಾರಂಭಿಸಲು ಅಥವಾ ಇತರ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾದ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗಿಂತ ಕಡಿಮೆ ಬಡ್ಡಿ ದರ ವಿಧಿಸಲಾಗುವುದು. ಇದರಿಂದ ಮಹಿಳೆಯರು ಬಡ್ಡಿಯ ಶೋಷಣೆಯಿಂದ ಪಾರಾಗಲಿದ್ದಾರೆ.
ಮಹಿಳೆಯ ಜೀವನದಲ್ಲಿ ಮಹತ್ತರ ಬದಲಾವಣೆ
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸಂಪೂರ್ಣವಾಗಿ ಡಿಜಿಟಲ್ ಮತ್ತು ನಗದುರಹಿತ ವ್ಯವಹಾರ ನಡೆಸಲಿದೆ. ಪಾರದರ್ಶಕತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಆನ್‌ಲೈನ್ ವಹಿವಾಟುಗಳ ಮೂಲಕ ಸುಲಭ ಮತ್ತು ತ್ವರಿತ ಸೇವೆಗಳನ್ನು ಒದಗಿಸುವುದು ಇದರ ಗುರಿಯಾಗಿದೆ. ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಮಹಿಳೆಯರಿಗೆ ಸುಲಭವಾಗಿ ಆರ್ಥಿಕ ಸಂಪನ್ಮೂಲಗಳು ಲಭ್ಯವಾಗುವುದರಿಂದ ಅವರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಪಡೆದು, ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಇದು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ, ಕುಟುಂಬ ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವೂ ಸುಧಾರಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತದೆ ಎನ್ನುವುದು ಇಲಾಖೆ ಅಭಿಪ್ರಾಯವಾಗಿದೆ.
1.28 ಕೋಟಿಗಿಂತ ಹೆಚ್ಚು ಮಹಿಳೆಯರು ಫಲಾನುಭವಿಗಳಾಗಿ ನೋಂದಣಿ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಯಡಿ, ರಾಜ್ಯದಲ್ಲಿ ಸುಮಾರು 1.28 ಕೋಟಿ ಮಹಿಳೆಯರು ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಯೋಜನೆ ಆರಂಭದಲ್ಲಿ1.31 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದರು. ನಂತರ, ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿಸುವಂತಹ ಕ್ರಮಗಳ ಮೂಲಕ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರಸ್ತುತ, ಯೋಜನೆಯಿಂದ ಮಹಿಳೆಯರು ಉತ್ತಮ ಜೀವನ ನಡೆಸಲು ಸಹಾಯವಾಗುತ್ತಿದೆ. ಮಹಿಳೆಯರ ಜೀವನಶೈಲಿ ಸುಧಾರಿಸುತ್ತಿದೆ. ಅಗತ್ಯ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕುಟುಂಬಗಳ ಮೇಲೆ ಆಗಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಕಾರಿಯಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ರಾಜ್ಯ ಸರ್ಕಾರವು 2023ರ ಆಗಸ್ಟ್ ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು. ಈವರೆಗೆ 50 ಸಾವಿರ ಕೋಟಿ ರು. ಗಿಂತ ಹೆಚ್ಚು ಮೊತ್ತ ಫಲಾನುಭವಿಗಳ ಖಾತೆಗೆ ಸೇರಿದೆ ಎಂಬುದು ಇಲಾಖೆಯ ಮೂಲಗಳು ಹೇಳಿವೆ.
ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಸೇರಲು ಇರುವ ನಿಯಮಗಳು
* ಗೃಹಲಕ್ಷ್ಮಿ ಬ್ಯಾಂಕ್‌ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಷೇರುದಾರರಾಗಬೇಕು.
* ಸಂಪೂರ್ಣವಾಗಿ ನಗದು ರಹಿತ ವ್ಯವಹಾರ ನಡೆಯಲಿದೆ.
* ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಪಾವತಿಸಬೇಕು.
* ಷೇರುದಾರರಾದ ಆರು ತಿಂಗಳಲ್ಲಿ ಸಾಲ ಪಡೆಯಬಹುದು.
* 30 ಸಾವಿರ ರೂ.ನಿಂದ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ.
* ಗೃಹಲಕ್ಷ್ಮಿ ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲ ಮಾತ್ರ ನೀಡಲಾಗುವುದು.
* ಗುಂಪು, ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ.
* ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
* ಸಂಘಕ್ಕೆ ಸೇರಲು ಯಾವುದೇ ಒತ್ತಡ ಇರುವುದಿಲ್ಲ.
ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, "ಇದೇ 28ರಂದು ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಉದ್ಘಾಟನೆಯಾಗಲಿದೆ. ಇದು ಮಹಿಳೆಯರಿಗಾಗಿಯೇ ಸ್ಥಾಪಿತವಾಗುತ್ತಿರುವ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಇರಲಿದೆ ಎಂಬ ಆರೋಪದ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಮುಂದೆ ಯಾವುದೇ ಸರ್ಕಾರಗಳು ಬಂದರೂ ಗೃಹಲಕ್ಷ್ಮಿ ಬ್ಯಾಂಕ್ ಮುಚ್ಚುವ ಪ್ರಯತ್ನ ಮಾಡುವುದಿಲ್ಲ. ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಮಹಿಳೆಯರಿಗೆ ಅನುಕೂಲ ಆಗುವ ದೃಷ್ಟಿಯಿಂದ ಬ್ಯಾಂಕ್ ತೆರೆಯಲಾಗುತ್ತಿದ್ದು, ಕೃಷಿ, ಹೈನುಗಾರಿಕೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯಲ್ಲಿ ಸಾಲ ತೆಗೆದುಕೊಳ್ಳಬಹುದಾಗಿದೆ" ಎಂದು ತಿಳಿಸಿದರು.
ಮಹಿಳಾ ಸಹಕಾರಿ ಬ್ಯಾಂಕ್‌ಗಳು ಈಗಾಗಲೇ ಕಾರ್ಯನಿರ್ವಹಣೆ
ರಾಜ್ಯ ಸಹಕಾರಿ ನಗರ ಬ್ಯಾಂಕುಗಳ ಮಹಾಮಂಡಳದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 252ಕ್ಕೂ ಹೆಚ್ಚು ನಗರ ಸಹಕಾರಿ ಬ್ಯಾಂಕುಗಳಿವೆ. ಇವುಗಳು 1105 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ. ಈ ಬ್ಯಾಂಕುಗಳಲ್ಲಿ ಮಹಿಳೆಯರಿಂದಲೇ ನಡೆಸಲ್ಪಡುವ ಸಹಕಾರಿ ಬ್ಯಾಂಕುಗಳೂ ಸೇರಿವೆ. ಸುಮಾರು 28 ಮಹಿಳಾ ಸಹಕಾರಿ ಬ್ಯಾಂಕ್‌ಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಮೊದಲ ಮಹಿಳಾ ಸಹಕಾರಿ ಬ್ಯಾಂಕ್ "ಜಿಜಾಮಾತಾ ಮಹಿಳಾ ಸಹಕಾರಿ ಬ್ಯಾಂಕ್" ಆಗಿದೆ. ಇದನ್ನು 1974ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸ್ಥಾಪಿಸಲಾಯಿತು. ಈ ಬ್ಯಾಂಕ್‌ಗಳ ಪ್ರಮುಖ ಉದ್ದೇಶ ಮಹಿಳೆಯರಿಗೆ ಉಳಿತಾಯದ ಮನೋಭಾವವನ್ನು ಬೆಳೆಸುವುದು, ಆರ್ಥಿಕ ನೆರವು ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಾಗಿದೆ. ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್,ಕೊಡಚಾದ್ರಿ ಮಹಿಳಾ ಸೌಹಾರ್ದ ಸಹಕಾರಿ ಕ್ರೆಡಿಟ್ ಸೊಸೈಟಿ, ಸುಂತಿಕೊಪ್ಪ ಮಹಿಳಾ ಸಹಕಾರಿ ಸಂಘ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಬ್ಯಾಂಕ್‌ಗಳಾಗಿವೆ.
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ರಾಜ್ಯದ ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆಯನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಂಘಟಿತ ಮತ್ತು ಪಾರದರ್ಶಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಮಹಿಳೆಯರಿಂದ ನಿರ್ವಹಿಸಲ್ಪಡುವ ಸಹಕಾರಿ ಬ್ಯಾಂಕುಗಳು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಟ್ಟಿದೆ.