Silicon Beach Of India | ಮಂಗಳೂರು ಐಟಿ ಸಿಟಿ: ಸಿಲಿಕಾನ್ ಬೀಚ್ ಆಗಲಿದೆಯೇ ಕರಾವಳಿ?

ಕರಾವಳಿಯಲ್ಲಿ ಐಟಿ ಕಂಪನಿಗಳು ಆರಂಭವಾದರೆ ಲಾಭ ಕೇವಲ ಕರಾವಳಿಗಷ್ಟೇ ಅಲ್ಲ, ಭಾರತದಾದ್ಯಂತ ಇರುವ ಐಟಿ ಪರಿಣತರು ಇಲ್ಲಿಗೆ ಆಗಮಿಸುವಂತಾಗುತ್ತದೆ. ಥೇಟ್ ಬೆಂಗಳೂರಿನ ಮಾರ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿಯಂಥ ಪ್ರದೇಶಗಳು ಬೆಳೆದ ರೀತಿಯಲ್ಲಿ ದಕ್ಷಿಣಕನ್ನಡದಿಂದ ಉಡುಪಿವರೆಗಿನ ಕರಾವಳಿ ವಿಸ್ತರಿಸಿಕೊಳ್ಳುತ್ತದೆ.;

Update: 2024-10-26 02:00 GMT

ಭೋರ್ಗರೆಯುವ ಕಡಲು, ಹಸಿರುತೋಟಗಳ ಮಧ್ಯೆ ಜಗತ್ತನ್ನೇ ಬೆಸೆಯುವ ಮಾಹಿತಿ ತಂತ್ರಜ್ಞಾನ ಕ್ಷೇತ್ರ ತಳವೂರಲು ಆಸಕ್ತಿ ವಹಿಸುತ್ತಿದೆ. ಕ್ಷೇತ್ರದ ದಿಗ್ಗಜ ಕಂಪನಿಗಳು, ಐಟಿ ವೃತ್ತಿನಿರತರ ನಂಬರ್ ಒನ್ ಆಯ್ಕೆಯಾಗಿರುವ ಬೆಂಗಳೂರು ಮಹಾನಗರದ ಒತ್ತಡ ನಿವಾರಣೆ ಹಾಗೂ ಪರ್ಯಾಯ ಸಾಧ್ಯತೆಯನ್ನು ಹುಡುಕುತ್ತಾ ಸಾಗಿದಾಗ ಆ ಕಂಪನಿಗಳ ದೃಷ್ಟಿ ಕರ್ನಾಟಕ ಕರಾವಳಿಯ ನಗರ ಮಂಗಳೂರಿನತ್ತ ನೆಟ್ಟಿದೆ.

ಕರ್ನಾಟಕ ಕರಾವಳಿ ಕೃಷಿ ಪ್ರಧಾನವಾದ ಪ್ರದೇಶವಾದರೂ, ಸಾಕಷ್ಟು ವಿರೋಧದ ನಡುವೆಯೂ ಅಲ್ಲಿ ಕೈಗಾರಿಕೆಗಳೂ ಬಂದವು. ಕೋವಿಡ್‌ ನಂತರದ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಲವಾರು ಸಾಫ್ಟ್ ವೇರ್ ಕಂಪನಿಗಳು ಮೊಳಕೆಯೊಡೆಯಲು ಆರಂಭಿಸಿದವು. ಬೆಂಗಳೂರಿನ ದಟ್ಟಣೆಗೆ ಮಂಗಳೂರು ಪರಿಹಾರ ನೀಡುತ್ತದೆಯೇ?

ಸಾಫ್ಟ್ ವೇರ್ ಉದ್ಯಮಿಗಳ ಗಮನಕ್ಕೆ ಈ ನೆಲ ಈಗ ಬರುತ್ತಿದೆ. ವಾಯು, ನೆಲ ಮತ್ತು ಜಲ ಸಾರಿಗೆಗಳು ಮಂಗಳೂರನ್ನು ವಿಶ್ವಕ್ಕೆ ಸಂಪರ್ಕಿಸುತ್ತಿರುವುದರಿಂದ ಕರಾವಳಿ, ʼಭಾರತದ ಸಿಲಿಕಾನ್‌ ಬೀಚ್‌ʼ ಆಗಿ ಪರಿವರ್ತನೆಯಾಗುವ ಸೂಚನೆಗಳು ಹೇರಳವಾಗಿವೆ. 

ಯಾಕೆ ಸಿಲಿಕಾನ್‌ ಬೀಚ್‌?

ಅಮೆರಿಕದ ಲಾಸ್ ಏಂಜಲೀಸ್‌ ನಗರ ಪ್ರದೇಶದ ಪಶ್ಚಿಮ ಭಾಗ ಕಡಲ ಕಿನಾರೆಯ ಪ್ರದೇಶವಾಗಿದ್ದು, ಇದು ಸ್ಟಾರ್ಟ್‌ಅಪ್‌ಗಳು ಸೇರಿದಂತೆ 500 ಕ್ಕೂ ಹೆಚ್ಚು ಐಟಿ ಕಂಪನಿಗಳಿಗೆ ನೆಲೆಯಾಗಿದೆ. ಇದು ನಿರ್ದಿಷ್ಟವಾಗಿ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರಕ್ಕೆ ಸಾಂಟಾ ಮೋನಿಕಾ ಪರ್ವತಗಳವರೆಗೆ ವ್ಯಾಪಿಸಿದೆ. ಅದರಂತೆ ಮಂಗಳೂರಿನಿಂದ ಉಡುಪಿಯವರೆಗಿನ ಕರಾವಳಿ ತೀರವನ್ನು ಸಿಲಿಕಾನ್‌ ಬೀಚ್‌ ಆಗಿ ಪರಿವರ್ತಿಸುವ ಪರಿಕಲ್ಪನೆ ಇದಾಗಿದೆ.

ಕರ್ನಾಟಕ ಕರಾವಳಿಯನ್ನು ಮಂಗಳೂರು ಕೇಂದ್ರವಾಗಿಟ್ಟುಕೊಂಡು, ತಲಪಾಡಿಯಿಂದ ಉತ್ತರ ಕನ್ನಡದ ಮಾಜಾಳಿ (ಗೋವಾ ಬಾರ್ಡರ್)ವರೆಗೆ ಇಡೀ ಕರಾವಳಿ ಸಿಲಿಕಾನ್ ಬೀಚ್ ಆಗಬೇಕು ಎಂಬುದು ಈಗಿನ ಪ್ರಸ್ತಾಪ. ಇದು ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ, ಹೊಗೆಯುಗುಳದ ಕಂಪನಿಗಳು ಇರುವ ಕಾರಣ ಪರಿಸರ ಸ್ನೇಹಿ ಹಾಗೂ ತಂತ್ರಜ್ಞಾನ ಸಂಬಂಧಿತವಾಗಿ ಜಗತ್ತಿನ ಗಮನವನ್ನು ಮಂಗಳೂರು ಸೆಳೆಯುವ ಕಾರ್ಯವಾಗುತ್ತದೆ.

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಗೆ ಸಂಬಂಧಿಸಿದ ಎಲ್ಲವೂ ಒಂದೆಡೆ ಸಿಗುವ ತಂತ್ರಜ್ಞಾನ ಸಂಬಂಧಿತ ಕಂಪನಿಗಳು ಕೆಲಸ ಮಾಡಲಾರಂಭಿಸಿದಾಗ ಅದನ್ನು ಸಿಲಿಕಾನ್ ವ್ಯಾಲಿ ಎಂದು ಕರೆದರು. ಕಳೆದ ಎರಡು ದಶಕಗಳಿಂದ ಭಾರತದ ಬೆಂಗಳೂರಿನಲ್ಲಿಯೂ ಇಂಥದ್ದೇ ವೇಗ ಪಡೆದುಕೊಂಡ ಬಳಿಕ ಬೆಂಗಳೂರು ಸಿಲಿಕಾನ್ ಸಿಟಿಯಾಯಿತು. ಈಗ ಮಂಗಳೂರು ಸಿಲಿಕಾನ್‌ ಬೀಚ್‌ ಆಗುವ ಹಾದಿಯಲ್ಲಿದೆ! 

ಮಂಗಳೂರಿನತ್ತ ಆಸಕ್ತಿ

ಬೆಂಗಳೂರಿನಂಥ ಪ್ರದೇಶಗಳ ದಟ್ಟಣೆ ಜಾಸ್ತಿಯಾಗತೊಡಗಿದಂತೆ ಕರಾವಳಿ ಮೂಲದ ಪ್ರಭಾವಶಾಲಿ ಹುದ್ದೆಯಲ್ಲಿದ್ದವರು ತಮ್ಮ ಕಂಪನಿಗಳ ಕೇಂದ್ರವನ್ನು ಮಂಗಳೂರಲ್ಲಿ ತೆರೆಯಲು ಪ್ರೇರೇಪಿಸಿದರು. ಸ್ಟಾರ್ಟಪ್‌ಗಳು ಮಂಗಳೂರಷ್ಟೇ ಅಲ್ಲ, ಪುತ್ತೂರು, ಕಾರ್ಕಳದಂಥ ತಾಲೂಕು ಕೇಂದ್ರಗಳಲ್ಲೂ ಆರಂಭಗೊಂಡವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳಿವೆ. ಎಂಸಿಎ ಪದವಿ ನೀಡುವ ಕಾಲೇಜುಗಳು ಸಾಕಷ್ಟಿವೆ. ಬೆಂಗಳೂರಲ್ಲಿ ಸಿಗುವ ವೇತನ, ಊರಲ್ಲೇ ಬಂಧುಗಳೊಂದಿಗೆ ವಾಸ ಮಾಡುವ ವ್ಯವಸ್ಥೆಗಳಿದ್ದರೆ, ಪರವೂರಿಗೆ ಯಾಕೆ ಹೋಗಬೇಕು ಎಂಬ ಯೋಚನೆ ಕೋರೋನೋತ್ತರ ಚಿಂತನೆ. ಅದೀಗ ಫಲಕೊಡಲು ಆರಂಭಿಸಿದೆ.

ಮಂಗಳೂರನ್ನು ಮತ್ತಷ್ಟು ಐಟಿ ಕಂಪನಿಗಳಿಗೆ ತೆರೆದಿಡುವುದು ಹಾಗೂ ಅದನ್ನು ವ್ಯವಸ್ಥಿತವಾಗಿ ಮಾಡುವ ಕುರಿತು ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ವತಿಯಿಂದ ಮಂಗಳೂರು ಟೆಕ್ನೋವನ್ಝಾ ಎಂಬ ಕಾರ್ಯಕ್ರಮ ಆಯೋಜಿಸಿ ವಿಷಯತಜ್ಞರು, ಸ್ಟಾರ್ಟಪ್ ಗಳು, ಔದ್ಯೋಗಿಕ ಪ್ರಮುಖರನ್ನು ಒಟ್ಟುಗೂಡಿಸುವ ಕಾರ್ಯ ಮಾಡುತ್ತಿದೆ. TIEMANGALURU ತಂತ್ರಜ್ಞಾನ ಕ್ಷೇತ್ರ ಹಾಗೂ ಅದಕ್ಕೆ ಸಂಬಂಧಿಸಿದವರನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಸುಮಾರು 87 ಕಂಪನಿಗಳ ಮುಖ್ಯಸ್ಥರು ಅದರ ಸದಸ್ಯರಾಗಿದ್ದಾರೆ. ರೋಬೋಸಾಫ್ಟ್ ಮತ್ತು 99ಗೇಮ್ಸ್ ಸ್ಥಾಪಕ ರೋಹಿತ್ ಭಟ್ ಅಧ್ಯಕ್ಷರಾಗಿರುವ ಟೈ, ಸಾಕಷ್ಟು ಸ್ಟಾರ್ಟಪ್ ಗಳನ್ನು ಒಗ್ಗೂಡಿಸುವುದಲ್ಲದೆ, ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಉತ್ತಮ ಮಾನವ ಸಂಪನ್ಮೂಲವನ್ನು ಒದಗಿಸಲು ನೆರವಾಗುತ್ತಿದೆ.

ಐಟಿ ಹಬ್ ಆಗುವುದರಲ್ಲಿ ಸಂಶಯವೇ ಇಲ್ಲ

ಈ ಕುರಿತು ಮಾತನಾಡಿದ ಪುತ್ತೂರಿನ THE WEB PEOPLE ಸಾಫ್ಟ್ ವೇರ್ ಕಂಪನಿಯ ಸಿಇಒ ಆಗಿರುವ ಆದಿತ್ಯ ʼದ ಫೆಡರಲ್‌ ಕರ್ನಾಟಕʼ ದ ಜತೆ ಮಾತನಾಡಿ, " ಮಂಗಳೂರು ಐಟಿ ಹಬ್ ಆಗುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿನ ಕಾಲೇಜುಗಳು ಪ್ರತಿಭಾಶಾಲಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರೆ, ಸಿಲಿಕಾನ್ ಬೀಚ್ ಯೋಜನೆ ಐಟಿ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಬೆಂಗಳೂರು ಸಹಿತ ಇತರ ಮೆಟ್ರೋಗಳಿಗೆ ವಲಸೆ ಹೋಗುವುದು ಯಾಕೆ ಎಂಬ ವಿಚಾರದ ಕುರಿತು ಚಿಂತನ, ಮಂಥನಗಳೂ ಆಗಬೇಕಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರದಲ್ಲಿ ಮಂಗಳೂರು ಯಾವ ರೀತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಕಾಸಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು," ಎಂದರು.

200ಕ್ಕೂ ಅಧಿಕ ಐಟಿ ಕಂಪನಿಗಳು

1996-97ರಲ್ಲಿ ಇನ್ಫೋಸಿಸ್ ಕಂಪನಿ ಮಂಗಳೂರಿನ ಕಂಕನಾಡಿ ಸರ್ಕಲ್ ಬಳಿ ಪುಟ್ಟ ಕಚೇರಿಯಲ್ಲಿ ಕಾರ್ಯಾಚರಣೆ ಆರಂಭಿಸಿದ ಹೊತ್ತಿನಲ್ಲಿ ಕರಾವಳಿಯಲ್ಲಿ ಐಟಿ ಕ್ಷೇತ್ರ ಅಂಬೆಗಾಲಿಡಲು ಆರಂಭಿಸಿತು. ಸರಿಸುಮಾರು ಅದೇ ಹೊತ್ತಿನಲ್ಲಿ ಉಡುಪಿಯಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್ ಆರಂಭಗೊಂಡಿತು. ಇನ್ಫೋಸಿಸ್ ಮಂಗಳೂರಿನ ಕೊಟ್ಟಾರ ಚೌಕಿ ಹಾಗೂ ಹೊರವಲಯದ ಮುಡಿಪುವಿನಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಮಂಗಳೂರು ಹೊರದೇಶಗಳ ಗಮನ ಸೆಳೆಯುವಂತೆ ಮಾಡಿತು. ಒಂದು ಹಂತಕ್ಕೆ ದಕ್ಷಿಣ ಕನ್ನಡ, ಉಡುಪಿಯ ಪ್ರತಿಭಾಪಲಾಯನ ತಡೆಯುವ ಪ್ರಯತ್ನ ಇಲ್ಲಿ ಆಯಿತಾದರೂ, ದೊಡ್ಡ ಮಟ್ಟಿಗೆ ಯಶಸ್ವಿಯಾಗಲಿಲ್ಲ. 2000ದಿಂದ 2010ರವರೆಗೆ ಸುಮಾರು ಇಪ್ಪತ್ತರಿಂದ ಮೂವತ್ತರಷ್ಟು ಸ್ಟಾರ್ಟಪ್ ಗಳು ಮಂಗಳೂರಿನಲ್ಲಿ ಸಣ್ಣ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಡದೊಳಗೆ ಕಾರ್ಯಾಚರಣೆ ಆರಂಭಿಸಿದವು. ಅದೀಗ 200ರವರೆಗೆ ಬಂದು ನಿಂತಿದೆ. ಕೆಲವೊಂದು ಕಂಪನಿಗಳು 500 ಕೋಟಿ ರೂಗಳಷ್ಟು ವ್ಯವಹಾರ ಮಾಡಲು ಶಕ್ತವಾಗಿದೆ.

ವಿದ್ಯಾರ್ಥಿಗಳು, ಐಟಿ ಕ್ಷೇತ್ರದಲ್ಲಿರುವವರು ಏನಂತಾರೆ

ಬೆಂಗಳೂರಿನಲ್ಲಿದ್ದು, ಮಂಗಳೂರಿಗೆ ವಾಸ್ತವ್ಯ ಬದಲಾಯಿಸಿ, ಇಲ್ಲಿಯೇ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳದ ಉದ್ಯೋಗದಲ್ಲಿರುವ ತಮಿಳುನಾಡು ಮೂಲದ ಶ್ಯಾಮಸುಂದರ್ ಹೇಳುವ ಪ್ರಕಾರ, ಮಂಗಳೂರು ಶೈಕ್ಷಣಿಕವಾಗಿಯೂ ಬೆಳೆದ ಪ್ರದೇಶ. ಇಲ್ಲಿ ವಾಸಯೋಗ್ಯ ವಾತಾವರಣವಿದೆ. ಬೆಂಗಳೂರಿನಂಥ ಉಸಿರುಗಟ್ಟಿಸುವ ಸನ್ನಿವೇಶವಿಲ್ಲ. ವೀಕೆಂಡ್ ಗಳ ಸಂದರ್ಭ ಕಡಲಕಿನಾರೆಯಲ್ಲಿ ವಿಹರಿಸಬಹುದು. ಕನೆಕ್ಟಿವಿಟಿಯೂ ಚೆನ್ನಾಗಿದೆ. ಹೀಗಾಗಿ ಇಲ್ಲೇ ಕೆಲಸ ಮಾಡಲು ಖುಷಿ ಇದೆ ಎಂದರು.

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ವೈಷ್ಣವಿ ಹೇಳುವ ಪ್ರಕಾರ, ಈಗ ಯಾವ ಪ್ರದೇಶದಲ್ಲಿ ಕೆಲಸ ಮಾಡಿದರೂ ಒಂದೇ. ಉದ್ಯೋಗ ಹೇಗಿರುತ್ತದೆ ಹಾಗೂ ವೇತನಶ್ರೇಣಿ ದೊಡ್ಡ ಸಿಟಿಯಲ್ಲಿದ್ದವರಿಗೆ ದೊರಕುವಷ್ಟು ಸಿಗುತ್ತದೆಯಾ ಎಂಬುದು ಮುಖ್ಯವಾಗುತ್ತದೆ. ಅವಕಾಶಗಳು ಮಂಗಳೂರಿನಲ್ಲೇ ಇದ್ದರೆ, ನಾನು ಇದನ್ನೇ ಆಯ್ಕೆ ಮಾಡುತ್ತೇನೆ ಎಂದು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು.

ದಕ್ಷಿಣ ಕನ್ನಡದಲ್ಲೇ 20000 ಟೆಕ್ಕಿಗಳಿದ್ದಾರೆ

99GAMES ನ ಸ್ಥಾಪಕ ಹಾಗೂ ಸಿಇಒ ಆಗಿರುವ ಹಾಗೆಯೇ ಉಡುಪಿಯಲ್ಲಿ ರೋಬೋಸಾಫ್ಟ್ ಕಂಪನಿಯನ್ನು ಹುಟ್ಟುಹಾಕುವ ಮೂಲಕ ಸಾಫ್ಟ್ ವೇರ್ ಕ್ಷೇತ್ರ ಮಂಗಳೂರಿನತ್ತ ತಿರುಗಿನೋಡುವಂತೆ ಮಾಡಿದ ರೋಹಿತ್ ಭಟ್, ಮಂಗಳೂರನ್ನು ಭಾರತದ ಸಿಲಿಕಾನ್ ಬೀಚ್ ಆಫ್ ಇಂಡಿಯಾ ಎಂದು ಹೇಳಲು ಇಷ್ಟಪಡುತ್ತಾರೆ. ಕಳೆದೊಂದು ವರ್ಷದಲ್ಲಿ ಈ ಭಾಗದಲ್ಲಿ ಐಟಿ ಕಂಪನಿಗಳ ಆಗಮನ ಹೆಚ್ಚಾಗಿದೆ. ತಿಂಗಳಲ್ಲಿ 10ರಿಂದ 15 ಕಂಪನಿಗಳು ಈ ಪ್ರದೇಶದಲ್ಲಿ ಕಾರ್ಯಾರಂಭ ಮಾಡಬಹುದೇ ಎಂದು ಕೇಳುತ್ತವೆ. ಈ ಟ್ರೆಂಡ್ ಮುಂದುವರಿದರೆ, ಮುಂದಿನ ಹತ್ತು ವರ್ಷಗಳಲ್ಲಿ ನಿಸ್ಸಂಶಯವಾಗಿಯೂ ಮಂಗಳೂರು ಜಗತ್ತಿನ ದೊಡ್ಡ ಐಟಿ ಸಿಟಿಯಾಗಲಿದೆ. ಕಳೆದ ವರ್ಷಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು  ಕಂಪನಿಗಳ ಆಸಕ್ತಿ ಮಂಗಳೂರಿನತ್ತ ನೆಟ್ಟಿದೆ ಎನ್ನುತ್ತಾರೆ. ಸ್ಟಾರ್ಟಪ್ ಸೇರಿ ಕಂಪ್ಯೂಟರ್ ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಕಾರ್ಯಾಚರಿಸುವ 20 ಸಾವಿರ ಐಟಿ ಪ್ರೊಫೆಶನಲ್ ಗಳು ಕಾರ್ಯಾಚರಿಸುತ್ತಿರುವುದು ಪ್ರಮುಖ ವಿಚಾರ.

ಸಂಪರ್ಕ ವ್ಯವಸ್ಥೆಯೂ ಸುಧಾರಣೆ

ಹಾಗೆ ನೋಡಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ವ್ಯವಸ್ಥೆಗಳಾದ ರಸ್ತೆ, ವಿಮಾನ, ರೈಲುಗಳ ವ್ಯತ್ಯಯವಾಗುತ್ತಿದ್ದುದು, ಇಲ್ಲಿನವರೆಲ್ಲಾ ಹೊರಭಾಗಕ್ಕೆ ತೆರಳುತ್ತಿದ್ದುದು ಯಾರೂ ಈ ಭಾಗದತ್ತ ಆಸಕ್ತರಾಗದಿರಲು ಕಾರಣವಾಗಿತ್ತು. ಆದರೂ, ಇದೀಗ ಸಂಪರ್ಕ ವ್ಯವಸ್ಥೆಯಲ್ಲೂ ಸುಧಾರಣೆಯಾಗುತ್ತಿದೆ.

ಮಂಗಳೂರನ್ನು ಸ್ಮಾರ್ಟ್ ಸಿಟಿ ಕೆಲಸ ಪ್ರಗತಿಯಲ್ಲಿದೆ. ಹತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕಗಳಲ್ಲಿ ಉತ್ಕೃಷ್ಟ ಮಟ್ಟದ ಸೇವೆಯನ್ನು ಕೊಡಬಹುದು ಎಂಬ ಆಶಾವಾದದಲ್ಲಿ ಐಟಿ ಕಂಪನಿಗಳಿವೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಲ್ಲಿದೆ. ರೈಲು ಸೇವೆ ಮುಂಬಯಿ, ಮಂಗಳೂರು, ಬೆಂಗಳೂರು, ಕೇರಳ, ತಮಿಳುನಾಡಿಗೆ ಇದ್ದು, ಇತ್ತೀಚೆಗೆ ಕೇಂದ್ರ ಸಚಿವರು ವರ್ತುಲ ರೈಲ್ವೆ ಸೇವೆ ಕುರಿತು ಪ್ರಸ್ತಾಪಿಸಿದ್ದರು. ಅಲ್ಲದೆ, ಶಿರಾಡಿ ಸಹಿತ ಹಲವು ರಸ್ತೆ ಅಭಿವೃದ್ಧಿಗಳಾಗುತ್ತಿದ್ದು, ಮಂಗಳೂರು ಬೆಂಗಳೂರು ಮತ್ತಷ್ಟು ಹತ್ತಿರವಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಐದು ಗಂಟೆಯೊಳಗೆ ಬೆಂಗಳೂರು- ಮಂಗಳೂರು ತಲುಪಲು ಸಾಧ್ಯವಾಗುತ್ತದೆ. 

ಆಫ್ರಿಕಾದ ದೇಶಕ್ಕೆ ಕಾರ್ಕಳದಲ್ಲಿದೆ ಡೇಟಾ ಸೆಂಟರ್

ಮೇಲ್ನೋಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಇನ್ಫೋಸಿಸ್, ರೋಬೋಸಾಫ್ಟ್ ನಂಥ ಕಣ್ಣಿಗೆ ಕಾಣುವ ಕಟ್ಟಡಗಳಷ್ಟೇ ಐಟಿ ಕಂಪನಿಗಳು ಎಂದೆನಿಸುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಸಾಕಷ್ಟು ಇದ್ದರೂ ಅವರೆಲ್ಲಾ ಬೆಂಗಳೂರು ಅಥವಾ ಹೊರದೇಶಕ್ಕೆ ಉದ್ಯೋಗಕ್ಕೆಂದು ತೆರಳುತ್ತಿದ್ದರು. ಆದರೆ 2000 ದಶಕದ ಆರಂಭದಲ್ಲೇ ನಿಧಾನವಾಗಿ ಐಟಿ ಇಲ್ಲಿ ಚಿಗುರೊಡೆಯಿತು. ಅದೀಗ ಕಳೆದೊಂದು ದಶಕದಲ್ಲಿ ಟ್ರ್ಯಾಕ್ ಗೆ ಬರುತ್ತಿದೆ. ಒಂದೆರಡು ವರ್ಷಗಳಿಂದ ವೇಗ ಪಡೆಯುತ್ತಿದೆ. ಕಾರ್ಕಳದಂಥ ಪುಟ್ಟ ತಾಲೂಕು ಕೇಂದ್ರವೊಂದರಲ್ಲೇ ವಿದೇಶಿ ಕಂಪನಿಯೊಂದು (ಸ್ಥಳೀಯ ದಿನೇಶ್ ಶೆಟ್ಟಿ ಅವರ ಎಲೋಗಿಕ್ಸ ಟೆಕ್ನಾಲಜಿ ELOGIXA TECHNOLOGY) ಆಫ್ರಿಕಾದ ದೇಶವೊಂದಕ್ಕೆ ಸರ್ವೀಸ್ ನೀಡುವ ಡೇಟಾ ಸೆಂಟರ್ ಆರಂಭಿಸಿದೆ ಎಂಬುದು ಐಟಿ ಪ್ರಗತಿ ತಳ್ಳಿ ಹಾಕುವ ವಿಚಾರವಲ್ಲ ಎಂಬುದನ್ನು ಸೂಚಿಸುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಗಳೂರನ್ನು ಮತ್ತಷ್ಟು ತೆರೆದುಕೊಳ್ಳುವ ದೃಷ್ಟಿಯಿಂದ ಮಂಗಳೂರು ಟೆಕ್ನೋವಾಂಜಾ ಎಂಬ, ನವ ತಂತ್ರಜ್ಞಾನಗಳು ಮತ್ತು ಜಾಗತಿಕ ವ್ಯಾಪಾರ ಅವಕಾಶಗಳ ಸಮ್ಮೇಳನ  ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು. 

ಗ್ಲೋಬಲ್ ಮಂಗಳೂರು ಥಿಯರಿ

ಕರಾವಳಿಯಲ್ಲಿ ಐಟಿ ಕಂಪನಿಗಳು ಆರಂಭವಾದರೆ ಲಾಭ ಕೇವಲ ಕರಾವಳಿಗಷ್ಟೇ ಅಲ್ಲ, ಭಾರತದಾದ್ಯಂತ ಇರುವ ಪ್ರತಿಭಾವಂತರು ಇಲ್ಲಿಗೆ ಆಗಮಿಸುವಂತಾಗುತ್ತದೆ. ಉತ್ತರ ಭಾರತ, ಕೇರಳ, ತಮಿಳುನಾಡು, ಆಂಧ್ರ ಸಹಿತ ವಿದೇಶಗಳಿಂದಲೂ ಯುವಪ್ರತಿಭೆಗಳು ಆಗಮಿಸಿ ಇಲ್ಲಿ ನೆಲೆಯೂರುತ್ತಾರೆ. ಥೇಟ್ ಬೆಂಗಳೂರಿನಂತೆ ಮಾರ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿಯಂಥ ಪ್ರದೇಶಗಳು ಬೆಳೆದ ರೀತಿಯಲ್ಲಿ ದಕ್ಷಿಣ ಕನ್ನಡದಿಂದ ಉಡುಪಿವರೆಗಿನ ಕರಾವಳಿ ವಿಸ್ತರಿಸಿಕೊಳ್ಳುತ್ತದೆ. ಈಗಾಗಲೇ ಮಂಗಳೂರು-ಉಡುಪಿ ಆರೋಗ್ಯ ಸೇವೆ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮುಂಚೂಣಿಯ ಸ್ಥಾನದಲ್ಲಿದೆ. ಹೊರ ರಾಜ್ಯ, ಜಿಲ್ಲೆಯವರಿಗೆ ಉದ್ಯೋಗಾವಕಾಶ ನೀಡಿದೆ. ಅದೇ ರೀತಿ ‘ಸಿಲಿಕಾನ್ ಬೀಚ್’ ಆದರೆ ಇದರಿಂದ ಲಾಭ ಕರಾವಳಿಗರಿಗಷ್ಟೇ ಅಲ್ಲ. ಭಾರತದ ಐಟಿ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೂ ಸಿಗಲಿದೆ. ಇದರಿಂದ ಮಂಗಳೂರು– ಉಡುಪಿ ಸೇರಿ ಸಿಲಿಕಾನ್ ಕರಾವಳಿಯಾಗುತ್ತದೆ. ಅಂತಾರಾಷ್ಟ್ರೀಯ ನಗರಿಯಾಗುತ್ತದೆ. ಒಂದು ಐಟಿ ಕಂಪನಿಯಿಂದ ನಾಲ್ಕು ಇತರ ಕ್ಷೇತ್ರಕ್ಕೆ ಲಾಭವಾಗುತ್ತದೆ ಎಂಬ ಮಾತು ಇಲ್ಲಿಗೂ ಅನ್ವಯಿಸುತ್ತದೆ. ನಿರ್ಮಾಣ ಕ್ಷೇತ್ರದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಇದು ವಿಸ್ತರಿಸುತ್ತದೆ.

Tags:    

Similar News