ಹಳದಿ ಮಾರ್ಗದ ಮೆಟ್ರೋ | ಡಿಕೆಶಿ- ತೇಜಸ್ವಿ ಸೂರ್ಯ ವಾಕ್ಸಮರ; ಜನರ ಕಷ್ಟ ಅರ್ಥವಾಗಲ್ಲ ಎಂದು ತಿವಿದ ಸಂಸದ
ಬಿಎಂಆರ್‌ಸಿಎಲ್‌ಗೆ ನಾಲ್ಕು ವರ್ಷ ವ್ಯವಸ್ಥಾಪಕ ನಿರ್ದೇಶಕರು ಇರಲಿಲ್ಲ. ಬಿಎಂಆರ್‌ಸಿಎಲ್ ಎರಡು ವರ್ಷದಲ್ಲಿ 12 ಕ್ಕೂ ಹೆಚ್ಚು ಬಾರಿ ಮುಹೂರ್ತ ನಿಗದಿ ಮಾಡಿ, ಮುಂದೂಡಿಕೆ ಮಾಡಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.;
ಹಳದಿ ಮಾರ್ಗದ ʼನಮ್ಮ ಮೆಟ್ರೋʼ ಉದ್ಘಾಟನೆ ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮೆಟ್ರೋ ಉದ್ಘಾಟನೆಗೆ ಚಿಕ್ಕ ಹುಡುಗ ಅರ್ಜೆಂಟ್ ಮಾಡ್ತಿದ್ದಾನೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಇದು ಮೋದಿ ಕಾಲ, ಎಲ್ಲವೂ ಬೇಗ ನಡೆಯುತ್ತವೆ. ಇಂದಿರಾ ಗಾಂಧಿ ಅವರು ಶಂಕುಸ್ಥಾಪನೆ ಮಾಡಿ, ಸೋನಿಯಾ ಗಾಂಧಿ ಅವರು ಉದ್ಘಾಟನೆ ಮಾಡುವ ಸಮಯ ಮುಗಿದಿದೆ ಎಂದು ವ್ಯಂಗ್ಯವಾಡಿದ್ದಾರೆ. ನಾನು ಹೊಸ ತಲೆಮಾರಿನವನು, ಎಲ್ಲಾ ಕೆಲಸಗಳು ಬೇಗ ಮುಗಿಯಬೇಕು ಎಂದು ಆಶಿಸುವವನು. ಪ್ರತಿ ಯೋಜನೆಯನ್ನು ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕಥೆ ಕಿಡಿಕಾರಿದ್ದಾರೆ.
ಡಿಕೆಶಿ ಕೊಡುಗೆ ಪ್ರಶ್ನಿಸಿದ ತೇಜಸ್ವಿ ಸೂರ್ಯ
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು , ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಏಕೆ ಆತುರ ಎಂದು ಕೇಳುವವರ ಕೊಡುಗೆ ಏನಿದೆ. ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ದರು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ್ದಾರೆ.
ಬಿಎಂಆರ್‌ಸಿಎಲ್‌ಗೆ ನಾಲ್ಕು ವರ್ಷ ವ್ಯವಸ್ಥಾಪಕ ನಿರ್ದೇಶಕರು ಇರಲಿಲ್ಲ. ಬಿಎಂಆರ್‌ಸಿಎಲ್ ಎರಡು ವರ್ಷದಲ್ಲಿ 12 ಕ್ಕೂ ಹೆಚ್ಚು ಬಾರಿ ಮುಹೂರ್ತ ನಿಗದಿ ಮಾಡಿ, ಮುಂದೂಡಿಕೆ ಮಾಡಿದೆ. ಈಗ ತ್ವರಿತವಾಗಿ ಹಳದಿ ಮಾರ್ಗದ ಮೆಟ್ರೋ ಉದ್ಘಾಟಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಇದು ವೇಗವಾಗಿ ಕೆಲಸ ಮಾಡುವ ಸಮಯ. ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಡಿಗಲ್ಲು ಹಾಕಿ, ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು. ಇದು ಕಾಂಗ್ರೆಸ್ಸಿಗರ ವೇಗದ ಕೆಲಸಕ್ಕೆ ಉದಾಹರಣೆ. ರಾಜ್ಯ ಸರ್ಕಾರಕ್ಕೆ ತುರ್ತು ಇಲ್ಲ. ಜಿರೋ ಟ್ರಾಫಿಕ್ನಲ್ಲಿ ಓಡಾಡುವವರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಬ್ ಅರ್ಬನ್ ರೈಲಿನ ಕಥೆ ಏನಾಯಿತು?
ಸಬ್ ಅರ್ಬನ್ ರೈಲು ಯೋಜನೆಯಲ್ಲಿ ನಾಲ್ಕು ಕಾರಿಡಾರ್‌ಗಳ ಕೆಲಸ ನಿಂತಿದೆ. ಗುತ್ತಿಗೆ ಪಡೆದಿದ್ದ ಕಂಪನಿಗಳು ಕೆಲಸ ನಿಲ್ಲಿಸಿವೆ. ಇದು ರಾಜ್ಯ ಸರ್ಕಾರದ ಕಥೆ. ಶುಲ್ಕ ನಿಗದಿ ಸಮಿತಿಯ ವರದಿ ಈ ತನಕವೂ ಕಾರ್ಯಾರಂಭಿಸಿಲ್ಲ. ಈ ಕುರಿತು ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ದರವಿರುವ ಮೆಟ್ರೋ ಯಾವುದು ಅಂದರೆ ಅದು ಬೆಂಗಳೂರು ಮೆಟ್ರೋ. ಟಿಕೆಟ್ ದರ ಶೇ 130 ಜಾಸ್ತಿ ಮಾಡಿದರೆ ಸಾಮಾನ್ಯರ ಪಾಡೇನು?, ರಾಜ್ಯ ಸರ್ಕಾರದ ಪಾಲು ಇಲ್ಲ ಎಂದು ಹೇಳುವುದಿಲ್ಲ. ಬದಲಿಗೆ ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಅಷ್ಟೇ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪವಾಗಿದೆ ಎನುತ್ತಿದ್ದಾರೆ. ಲೋಕಸಭೆಗೆ ಚುನಾವಣೆ ನಡೆದು ವರ್ಷ ಕಳೆಯುತ್ತಿದೆ. ಇಲ್ಲಿಯವರೆಗೆ ಸಮಸ್ಯೆ ಪ್ರಸ್ತಾಪಿಸದ ನಾಯಕರುಮ ಈಗ ಪ್ರತಿಭಟನೆಗೆ ಇಳಿದಿರುವುದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಆಡಳಿತ ಸಹಿಸುತ್ತಿಲ್ಲ ರಾಹುಲ್
ಪ್ರಧಾನಿ ಮೋದಿ ಅವರು 11 ವರ್ಷದಿಂದ ಆಡಳಿತ ಮಾಡುತ್ತಿರುವುದು ರಾಹುಲ್ ಗಾಂಧಿಗೆ ಸಹಿಸಲು ಆಗುತ್ತಿಲ್ಲ. ಅಧಿಕಾರದ ಆಸೆ ಅವರಿಗೆ ಇತ್ತು. ಪರಿಸ್ಥಿತಿ ಹೀಗಿರುವಾಗ 10 ವರ್ಷದಿಂದ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ನ್ಯಾಯಾಲಯ, ಲೋಕಪಾಲ್ ಸಂಸ್ಥೆ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಮೇಲೂ ದಾಳಿ ಮಾಡಿದ್ದಾರೆ. ಇದು ರಾಹುಲ್ ಗಾಂಧಿ ರಾಜಕಾರಣ ಎಂದು ಟೀಕಿಸಿದ್ದಾರೆ.