ದೆಹಲಿ ಸ್ಫೋಟ: ಪ್ರಧಾನಿ ಮೋದಿಯೇ ನೇರ ಹೊಣೆ, ಇದು ಕೇಂದ್ರದ ಭದ್ರತಾ ವೈಫಲ್ಯ - ಮಧು ಬಂಗಾರಪ್ಪ
"ಪುಲ್ವಾಮಾ, ಪಹಲ್ಗಾಮ್‌ನಂತಹ ಘಟನೆಗಳು ನಡೆದಾಗಲೂ ಭದ್ರತಾ ವೈಫಲ್ಯವಾಗಿತ್ತು. ಈಗ ದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ನ್ಯೂನತೆ ಯಾರದ್ದೇ ಇರಲಿ, ಅದನ್ನು ಒಪ್ಪಿಕೊಳ್ಳುವ ಧೈರ್ಯ ಬೇಕು," ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಚಿವ ಮಧು ಬಂಗಾರಪ್ಪ
ದೆಹಲಿಯಲ್ಲಿ ಸಂಭವಿಸಿದ ಭೀಕರ ಕಾರು ಬಾಂಬ್ ಸ್ಫೋಟವು ಕೇಂದ್ರ ಸರ್ಕಾರದ ಸಂಪೂರ್ಣ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ರಾಜ್ಯ ಸಚಿವ ಮಧು ಬಂಗಾರಪ್ಪ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂತಹ ದುರಂತದ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿರಬೇಕು. ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ," ಎಂದು ಸಂತಾಪ ಸೂಚಿಸಿದರು. "ಪುಲ್ವಾಮಾ, ಪಹಲ್ಗಾಮ್‌ನಂತಹ ಘಟನೆಗಳು ನಡೆದಾಗಲೂ ಭದ್ರತಾ ವೈಫಲ್ಯವಾಗಿತ್ತು. ಈಗ ದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ನ್ಯೂನತೆ ಯಾರದ್ದೇ ಇರಲಿ, ಅದನ್ನು ಒಪ್ಪಿಕೊಳ್ಳುವ ಧೈರ್ಯ ಬೇಕು," ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣಾ ಸಂದರ್ಭದಲ್ಲೇ ಸ್ಫೋಟ ಏಕೆ?
ಈ ಸ್ಫೋಟವು ಬಿಹಾರ ಚುನಾವಣೆಯ ಸಂದರ್ಭದಲ್ಲಿಯೇ ನಡೆದಿದ್ದು, ಇದು ಯಾವ ರೀತಿಯ ಸಂದೇಶವನ್ನು ನೀಡಲಿದೆ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. "ಘಟನೆ ನಡೆದ ನಂತರ 'ಆಪರೇಷನ್ ಸಿಂಧೂರ' ಮಾಡುತ್ತಾರೆ. ಆದರೆ ಅದಕ್ಕೂ ಮುನ್ನ ಏನೇನಾಯಿತು ಎಂದು ನೋಡಬೇಕಲ್ಲವೇ? ಪುಲ್ವಾಮಾ ಘಟನೆಯ ನಂತರ ಯಾರು ಜವಾಬ್ದಾರಿ ತೆಗೆದುಕೊಳ್ಳಲಿಲ್ಲ? ಈಗಲೂ ಪ್ರಧಾನಿ ಯಾಕೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ? ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಯಾರು? ಎಲ್ಲದಕ್ಕೂ ಪ್ರಧಾನಿ ಮೋದಿಯವರೇ ಹೊಣೆ ಹೊರಬೇಕು," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅದಾನಿ ಪೋರ್ಟ್ ಪ್ರಕರಣ ಮುಚ್ಚಿಟ್ಟರು
ಕೇಂದ್ರದ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಅವರು, "ಅದಾನಿ ಪೋರ್ಟ್‌ನಲ್ಲಿ ಎಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತು ಸಿಕ್ಕಿತು? ಅದು ಎಲ್ಲಿಯಾದರೂ ದೊಡ್ಡ ಸುದ್ದಿಯಾಯಿತೇ? ಎಲ್ಲವನ್ನೂ ಮುಚ್ಚಿಟ್ಟರೆ ಹೇಗೆ? ಬಿಜೆಪಿಯವರು ಇಂತಹ ವಿಷಯಗಳಲ್ಲಿ ನಿಸ್ಸೀಮರು. ಇಂದು ಸಂಜೆ ಅವರು ಏನು ಮಾಡುತ್ತಾರೆ ಕಾದುನೋಡೋಣ," ಎಂದು ವ್ಯಂಗ್ಯವಾಡಿದರು. ಕೇಂದ್ರದ ಭದ್ರತಾ ವೈಫಲ್ಯವನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ಸ್ಪಷ್ಟಪಡಿಸಿದರು.