ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು; ಎನ್‌ಐಎ ತನಿಖೆಗೆ ಆರ್.ಅಶೋಕ್ ಆಗ್ರಹ
ಪರಪ್ಪನ ಅಗ್ರಹಾರದಲ್ಲೂ ಕಾಂಗ್ರೆಸ್‌ನ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್ ಬಳಸುವಂತಾಗಿದೆ. ಇಂತಹ ವಿಫಲತೆಯನ್ನು ಒಪ್ಪಿಕೊಂಡು ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಬೇಕು ಎಂದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕನೊಬ್ಬ ಮೊಬೈಲ್ ಬಳಸಿದ ಪ್ರಕರಣವು ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು, ಇದನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಸ್ಫೋಟ ಮತ್ತು ಜೈಲಿನಲ್ಲಿ ಉಗ್ರನ ಮೊಬೈಲ್ ಬಳಕೆ ಪ್ರಕರಣಗಳನ್ನು ಒಟ್ಟಾಗಿ ತನಿಖೆಗೊಳಪಡಿಸಿದರೆ ಹೊಸ ಆಯಾಮಗಳು ಬೆಳಕಿಗೆ ಬರಲಿವೆ ಎಂದರು. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಮತ್ತು ವೈಫಲ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
"ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗುತ್ತಿರುವುದು ಆತಂಕಕಾರಿ. ಅಧಿಕಾರಕ್ಕಾಗಿ ಕಾಂಗ್ರೆಸ್ ಮಾಡುವ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಘಟನೆಗೆ ಸಂಪೂರ್ಣ ಕಾಂಗ್ರೆಸ್ ಸರ್ಕಾರವೇ ಹೊಣೆ. ಈ ವೈಫಲ್ಯವನ್ನು ಒಪ್ಪಿಕೊಂಡು ಸಂಬಂಧಪಟ್ಟ ನಾಯಕರು ರಾಜೀನಾಮೆ ನೀಡಬೇಕು" ಎಂದು ಆರ್. ಅಶೋಕ ಒತ್ತಾಯಿಸಿದರು.
ಕೇಂದ್ರದ ಕಠಿಣ ನಿಲುವು
"ಇದು ಮನಮೋಹನ್ ಸಿಂಗ್ ಸರ್ಕಾರವಲ್ಲ, ನರೇಂದ್ರ ಮೋದಿ ಅವರ ಸರ್ಕಾರ. ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುತ್ತಿದ್ದು, ದೆಹಲಿ ಸ್ಫೋಟದ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೃಹ ಸಚಿವ ಅಮಿತ್ ಶಾ ಅವರು ನಕ್ಸಲ್ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಿದಂತೆ, ಭಯೋತ್ಪಾದನೆಯನ್ನೂ ಮಟ್ಟ ಹಾಕಲಿದ್ದಾರೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಸಲಹೆ
"ಕೇವಲ ಸುತ್ತೋಲೆ ಹೊರಡಿಸಿದರೆ ಸಾಲದು, ಗೃಹಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಕಾಂಗ್ರೆಸ್ ಪಕ್ಷ ಪಾಕಿಸ್ತಾನವನ್ನು ಪ್ರೀತಿಸುತ್ತದೆ ಎಂಬುದು ಜನರಿಗೆ ತಿಳಿದಿದೆ. ಅವರ ಮೇಲೆ ಜನರಿಗೆ ನಂಬಿಕೆ ಇಲ್ಲ" ಎಂದು ಅಶೋಕ ಟೀಕಿಸಿದರು.
ರಾಜ್ಯ ರಾಜಕೀಯದ ಬಗ್ಗೆ ಭವಿಷ್ಯ
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ರೆಬಲ್ ಆಗಿದ್ದಾರೆ. ಯಾವ ಕ್ಷಣದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಬಿಜೆಪಿಯಿಂದ ಯಾರೂ ಪಕ್ಷಾಂತರ ಮಾಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.