ಕನ್ನಂಬಾಡಿ ನಿರ್ಮಿಸುವ ಯೋಚನೆ ಟಿಪ್ಪುವಿಗಿತ್ತು; ಮಹದೇವಪ್ಪ ನಂತರ ಜಮೀರ್ ಬ್ಯಾಟಿಂಗ್
ಬಿಜೆಪಿಯವರಿಗೆ ಟಿಪ್ಪುಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ, ಕೇವಲ ಧರ್ಮ ಹಾಗೂ ಜಾತಿಗಳ ನಡುವೆ ತಂದಿಡುವ ಕೆಲಸವನ್ನಷ್ಟೇ ಮಾಡುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಕಿಡಿಕಾರಿದ್ದಾರೆ.;
ಸಚಿವ ಜಮೀರ್ ಅಹಮದ್ ಖಾನ್
ಕೃಷ್ಣರಾಜಸಾಗರ ಅಣೆಕಟ್ಟೆಗೆ ಅಡಿಗಲ್ಲು ಹಾಕಿದವರು ಟಿಪ್ಪು ಸುಲ್ತಾನ್ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಸಚಿವ ಮಹದೇವಪ್ಪ ಹೇಳಿಕೆಗೆ ದನಿಗೂಡಿಸಿರುವ ಸಚಿವ ಜಮೀರ್ ಅಹಮದ್ ಅವರು, ಟಿಪ್ಪುಸುಲ್ತಾನ್ ಅವರಿಗೆ ಕೆಆರ್‌ಎಸ್ ಅಣೆಕಟ್ಟು ಕಟ್ಟುವ ಯೋಚನೆ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಟಿಪ್ಪು ಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ, ಕೇವಲ ಧರ್ಮ ಹಾಗೂ ಜಾತಿಗಳ ನಡುವೆ ತಂದಿಡುವ ಕೆಲಸವನ್ನಷ್ಟೇ ಮಾಡುತ್ತಾರೆ. ಅವರಿಗೆ ಕೇವಲ ರಾಜಕೀಯ ಮಾಡುವುದು ಮಾತ್ರ ಗೊತ್ತು ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಬಡವರಿಗಾಗಿ ಏನು ಅಭಿವೃದ್ಧಿ ಕೆಲಸ ಮಾಡಿದೆ?, ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದೆವು ಎಂದು ದೊಡ್ಡದಾಗಿ ಹೇಳಿಕೊಂಡಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದರೆ ನಾವು ಮನೆಯಲ್ಲೇ ಮಾಡುತ್ತೇವೆ. ಅದನ್ನು ನಿಲ್ಲಿಸಲು ಆಗುತ್ತದೆಯೇ ಎಂದು ಸವಾಲು ಹಾಕಿದ್ದಾರೆ.
ಸಚಿವರ ಹೇಳಿಕೆಗೆ ಬಿಜೆಪಿ ತಿರುಗೇಟು
ಮೈಸೂರಿನಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಕೆಆರ್‌ಎಸ್ ಡ್ಯಾಂ ನಿರ್ಮಿಸಲು ಟಿಪ್ಪು ಸುಲ್ತಾನ್ ಶಂಕುಸ್ಥಾಪನೆ ಮಾಡಿದ್ದರು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದರು.
"ಕೃಷ್ಣರಾಜಸಾಗರ ಜಲಾಶಯʼಕ್ಕೆ 'ಟಿಪ್ಪು ಸುಲ್ತಾನ್ ಸಾಗರ' ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ. ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟರೆ, ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣ ಆರಂಭವಾಗಿದ್ದು 1911ರಲ್ಲಿ. ಟಿಪ್ಪು ಮೃತಪಟ್ಟು 112 ವರ್ಷಗಳ ನಂತರ ನಿರ್ಮಾಣವಾದ ಜಲಾಶಯಕ್ಕೆ ಆತ ಹೇಗೆ ಅಡಿಗಲ್ಲು ಹಾಕಲು ಸಾಧ್ಯ?, ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾಡಿದ ಘೋರ ಅಪಮಾನ" ಎಂದು ಆಕ್ರೋಶ ಹೊರಹಾಕಿದ್ದರು.
ಕಾಂಗ್ರೆಸ್ ಪದೇ ಪದೇ ರಾಜಮನೆತನಕ್ಕೆ ಅಪಮಾನ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಈ ಕೂಡಲೇ ರಾಜವಂಶಸ್ಥರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದರು.