ಇ-ಖಾತಾ ವಿತರಣೆಯಲ್ಲಿ ತಾಂತ್ರಿಕ ಸವಾಲು ಎದುರಿಸಲು ಸಿದ್ಧತೆ : ಸಚಿವ ಪ್ರಿಯಾಂಕ್ ಖರ್ಗೆ
ಪಂಚತಂತ್ರ 2.0 ವೇದಿಕೆಯಲ್ಲಿ ಲಭ್ಯವಿರುವ 97 ಲಕ್ಷಕ್ಕೂ ಹೆಚ್ಚು ಡಿಜಿಟಲೀಕೃತ ಆಸ್ತಿಗಳಿಗೆ ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ನೀಡಲು ಅನುಕೂಲವಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.;
ಸಚಿವ ಪ್ರಿಯಾಂಕ್ ಖರ್ಗೆ
ಇ-ಸ್ವತ್ತು ಮಂಜೂರಾತಿ ವ್ಯವಸ್ಥೆಯನ್ನು ಬೇಡಿಕೆ ಆಧಾರಿತ ವಿಧಾನದಿಂದ ಅಭಿಯಾನ ಆಧಾರಿತ ಮಾದರಿಗೆ ಪರಿವರ್ತನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಎದುರಾಗಬಹುದಾದ ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಇ-ಸ್ವತ್ತು ಕಾರ್ಯಕ್ರಮ ಪ್ರಾರಂಭಿಸಲಿರುವ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸವಾಲುಗಳು ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ನೀಡಿದರು.
ಇಲಾಖೆಯು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ಗಳ ತೆರಿಗೆಗಳು, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿದೆ. ಈ ನಿಯಮಗಳು ಪಂಚತಂತ್ರ 2.0 ವೇದಿಕೆಯಲ್ಲಿ ಲಭ್ಯವಿರುವ 97 ಲಕ್ಷಕ್ಕೂ ಹೆಚ್ಚು ಡಿಜಿಟಲೀಕೃತ ಆಸ್ತಿಗಳಿಗೆ ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ನೀಡಲು ಅನುಕೂಲವಾಗುತ್ತದೆ. ಇದರಿಂದಾಗಿ ನಾಗರಿಕರು ಖಾತಾ ಸೇವೆಗಳಿಗಾಗಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ನಿವಾರಿಸುತ್ತದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತೆ ಆಂದೋಲನದ ಬಗ್ಗೆ ಸಾರ್ವಜನಿಕರಿಗೆ ಇರುವ ಮಾಹಿತಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ʼದ ಫೆಡರಲ್ ಕರ್ನಾಟಕʼ ವಿಸ್ತೃತ ವರದಿ ಮಾಡಿತ್ತು. ಈ ವೇಳೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಗತ್ಯ ಮಾಹಿತಿ ಹಾಗೂ ದಾಖಲೆಗಳಿಲ್ಲದೆ ಇ-ಖಾತೆಗೆ ಅರ್ಜಿ ಸಲ್ಲಿಸಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.