E Khata Part 2:  ಮೂರು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್‌: ದಾಖಲೆಗಳ ಕೊರತೆ, ಖಾತೆ ವಿಳಂಬ; ಹಳ್ಳಿಗರು ಹೈರಾಣು
x

ಗೌರಿಬಿದನೂರು ತಾಲೂಕು ತೊಂಡೇಭಾವಿ ಗ್ರಾಮ ಪಂಚಾಯಿತಿ ಕಾರ್ಯಾಲಯ

E Khata Part 2: ಮೂರು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್‌: ದಾಖಲೆಗಳ ಕೊರತೆ, ಖಾತೆ ವಿಳಂಬ; ಹಳ್ಳಿಗರು ಹೈರಾಣು

ಇ-ಖಾತಾ ಆಂದೋಲನ ಕುರಿತು ರಾಜ್ಯದ ಗಡಿ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ(ಗ್ರಾಮಾಂತರ) ಹಾಗೂ ತುಮಕೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ʼದ ಫೆಡರಲ್‌ ಕರ್ನಾಟಕʼ ನಡೆಸಿದ ರಿಯಾಲಿಟಿ ಚೆಕ್‌.


ಮಾಲೀಕರ ಸ್ವತ್ತುಗಳಿಗೆ ರಕ್ಷಣೆ ಒದಗಿಸುವ, ನಕಲಿ ದಾಖಲೆಗಳ ಮೂಲಕ ನಡೆಯುವ ಅವ್ಯವಹಾರಕ್ಕೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರ ಇ-ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ರಾಜ್ಯಾದ್ಯಂತ ಆಂದೋಲನ ರೂಪದಲ್ಲಿ ಇ- ಖಾತಾ ಅಭಿಯಾನ ಆರಂಭವಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ದಾಖಲೆಗಳ ಅಲಭ್ಯತೆ, ಜಾಗೃತಿ ಮೂಡಿಸದ ಹಿನ್ನೆಲೆಯಲ್ಲಿ ಯೋಜನೆಯ ಲಾಭ ಅಷ್ಟಕ್ಕಷ್ಟೇ ಎಂಬಂತಿದೆ.

ಗ್ರಾಮಠಾಣಾ ಹಾಗೂ ಸಾಗುವಳಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಕುಟುಂಬಗಳು ದಾಖಲೆ ಇಲ್ಲದ ಕಾರಣ ಇ-ಖಾತಾ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಇ-ಖಾತಾ ಆಂದೋಲನ ಕುರಿತು 'ದ ಫೆಡರಲ್ ಕರ್ನಾಟಕ' ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗಡಿ ಭಾಗದಲ್ಲಿರುವ ಹಲವು ಗ್ರಾಮಗಳು ಹಾಗೂ ಪಂಚಾಯಿತಿಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್‌ ನಡೆಸಿದಾಗ ಬಹುತೇಕರಿಗೆ ಇ-ಖಾತಾ ಗಂಧಗಾಳಿಯೇ ಗೊತ್ತಿಲ್ಲ. ಅರ್ಥಾತ್ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸದಿರುವುದು ಬೆಳಕಿಗೆ ಬಂದಿತು.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರೇ ಇ-ಖಾತೆ ಮಾಡಿಸಿಕೊಡಿಸುತ್ತೇವೆ ಎಂದು ದಾಖಲೆಗಳನ್ನು ಪಡೆದು, ಹಣ ಸುಲಿಗೆ ಮಾಡುತ್ತಿರುವ ಆರೋಪಗಳೂ ಕೇಳಿಬಂದಿವೆ.

ಆಸ್ತಿಗೆ ಡಿಜಿಟಲ್ ಸುರಕ್ಷತೆ

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಮನೆಗಳಿಗೆ ಖಾತೆ ಮಾಡಿಕೊಡಲು 2013 ರಲ್ಲಿ ಇ-ಖಾತೆ ಯೋಜನೆ ಜಾರಿಗೆ ತಂದಿತು. ಇದಕ್ಕಿಂತ ಮೊದಲು ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಕೈ ಬರಹದಲ್ಲಿ ಖಾತೆಗಳನ್ನು ಮಾಡಿಕೊಡಲಾಗುತ್ತಿತ್ತು. ಇದರಿಂದ ಸಾಕಷ್ಟು ಮೋಸ, ಅವ್ಯವಹಾರಗಳು ನಡೆಯುತ್ತಿದ್ದವು. ಇದರಿಂದ ಜನರು ಪೊಲೀಸ್ ಠಾಣೆ, ಕೋರ್ಟ್-ಕಚೇರಿ ಅಲೆಯಬೇಕಾಗಿತ್ತು. ಈಗ ಮಾಲೀಕರು ತಮ್ಮ ಸ್ವತ್ತುಗಳಿಗೆ ಇ-ಖಾತೆ ಮಾಡಿಸುವುದರಿಂದ ಡಿಜಿಟಲ್ ಸುರಕ್ಷತೆ ಸಿಗಲಿದೆ. ಅಲ್ಲದೇ ಮಾಲೀಕನ ಅನುಮತಿ ಇಲ್ಲದೆ ವಂಚನೆ, ಆಸ್ತಿ ಲಪಟಾಯಿಸಲು ಸಾಧ್ಯವಿಲ್ಲ. ಇ-ಖಾತೆಗೆ ಅರ್ಜಿ ಸಲ್ಲಿಸಿದ ನಂತರ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ(ಇಒ) ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿ(ಪಿಡಿಒ) ಲಾಗಿನ್‌ನಲ್ಲಿ ಅನುಮತಿ ಪಡೆದು ನಂತರ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಪಂಚತಂತ್ರ ತಂತ್ರಾಂಶ ಮತ್ತು ಉಪನೊಂದಣಾಧಿಕಾರಿ ಕಚೇರಿಯ ಕಾವೇರಿ ತಂತ್ರಾಂಶದಲ್ಲಿ ಭಾವಚಿತ್ರ ಸಮೇತ ನೊಂದಣಿಯಾಗುವುದರಿಂದ ಹೆಚ್ಚು ಭದ್ರತೆ ಇರುತ್ತದೆ.

ಗ್ರಾಮಠಾಣಾ ಗುರುತಿಸಲು ಮನವಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಗ್ರಾಮಗಳಿದ್ದು, ಒಟ್ಟು 3,800 ಸ್ವತ್ತುಗಳಿವೆ. ಅವುಗಳ ಪೈಕಿ ಶೇ.50 ಕ್ಕಿಂತ ಕಡಿಮೆ ಸ್ವತ್ತುಗಳಿಗೆ ಮಾತ್ರ ಇ-ಖಾತೆಗಳನ್ನು ನೀಡಲಾಗಿದೆ. ಉಳಿದ ಸ್ವತ್ತುಗಳಿಗೆ ಖಾತೆಗಳೇ ಆಗಿಲ್ಲ.ಏಕೆಂದರೆ ಗ್ರಾಮ ಠಾಣಾ ಹಾಗೂ ಸಾಗುವಳಿ ಭೂಮಿಯಲ್ಲಿ ಬಹುತೇಕರು ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಜನರಿಗೆ ಅಗತ್ಯ ದಾಖಲೆಗಳು ಸಿಗುತ್ತಿಲ್ಲ. ಅಲ್ಲದೇ ಸ್ವಂತ ಜಾಗದಲ್ಲಿ ಇರುವ ಕಾರಣ ಯಾರೂ ಕೂಡ ಸ್ವಯಂ ಪ್ರೇರಣೆಯಿಂದ ಪಂಚಾಯಿತಿಗಳಿಗೆ ಬಂದು ಇ-ಖಾತೆ ಮಾಡಿಸಿಕೊಳ್ಳುತ್ತಿಲ್ಲ ಎಂದೂ ಹೇಳಾಗುತ್ತಿದೆ.

"ತೊಂಡೇಭಾವಿ ಗ್ರಾಮಠಾಣಾ ಸರಹದ್ದನ್ನು ಗುರುತಿಸಿಕೊಡುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದ್ದು, ಸಾರ್ವಜನಿಕರಲ್ಲೂ ಅರಿವು ಮೂಡಿಸಲಾಗಿದೆ. ಸೂಕ್ತ ದಾಖಲೆಗಳು ಹೊಂದಿರುವ ಎಲ್ಲಾ ಸ್ವತ್ತುಗಳಿಗೆ ಶೀಘ್ರದಲ್ಲೇ ಇ-ಖಾತಾ ಮಾಡಿಕೊಡಲಾಗುವುದು" ಎಂದು ಪಿಡಿಒ ಬಸವರಾಜ ವೀರಪ್ಪ ಬಾಳೂಟಗಿ ʼದ ಫೆಡರಲ್‌ ಕರ್ನಾಟಕಕ್ಕೆʼ ತಿಳಿಸಿದರು.

ಅಲೀಪುರ ಗ್ರಾ. ಪಂ ನಲ್ಲಿ ಶೇ.20 ಕ್ಕಿಂತ ಕಡಿಮೆ ಇ-ಖಾತೆ

ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಗೌರಿಬಿದನೂರು ತಾಲೂಕಿನ ಅಲೀಪುರ ಸಕಲ ಸೌಲಭ್ಯ ಹೊಂದಿದ್ದು, ಮುಂದುವರಿದ ಗ್ರಾಮ ಎಂಬ ಹೆಸರು ಪಡೆದಿದೆ. ಆದರೆ, ಇದೇ ಗ್ರಾಮ ಪಂಚಾಯಿತಿಯಲ್ಲಿ ಸ್ವತ್ತುಗಳಿಗೆ ಇ-ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ಅಂದಾಜು 16,000 ಜನಸಂಖ್ಯೆ ಇದ್ದು 3,125 ಸ್ವತ್ತುಗಳಿವೆ. ಈ ಪೈಕಿ ಇ-ಖಾತೆಗಳಿರುವುದು ಕೇವಲ ಶೇ.20 ಮಾತ್ರ. ಈ ಗ್ರಾಮ ಪಂಚಾಯಿತಿಯಲ್ಲಿ ಶೇ. 15 ರಷ್ಟು ಗ್ರಾಮಠಾಣಾವಿದೆ. ಶೇ.60 ರಷ್ಟು ಬಡಾವಣೆಯು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಹೊಂದಿದ ಜಾಗವಾಗಿದೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಲವು ಸ್ವತ್ತುಗಳಿಗೆ ಸೂಕ್ತ ದಾಖಲಾತಿಗಳು ಇಲ್ಲದಿರುವುದರಿಂದ ಇ -ಖಾತಾ ಪ್ರಗತಿ ತೃಪ್ತಿದಾಯಕವಾಗಿಲ್ಲ.

"ದಾಖಲೆಗಳ ಅಲಭ್ಯತೆ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ" ಎಂದು ಪಿಡಿಒ ಜೆ. ಮುನಿಯೋಜಿರಾವ್‌ ʼದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

ಮೂಲ ದಾಖಲೆಗಳ ಕೊರತೆ

ಅಲೀಪುರ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್‌ ʼದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿ, ಗ್ರಾಮಠಾಣಾಗಳಲ್ಲಿರುವ ಸ್ವತ್ತುಗಳಿಗೆ ಮೂಲ ದಾಖಲಾತಿಗಳ ಕೊರತೆ ಎದುರಾಗಿರುವುದರಿಂದ ಇ-ಖಾತೆ ಮಾಡಿಸಲು ತೊಂದರೆಯಾಗುತ್ತಿದೆ. ಸದ್ಯ ಗ್ರಾಮಠಾಣಾ (11ಎ)ಗಳಲ್ಲಿರುವ ಸ್ವತ್ತುಗಳಿಗೆ ಮಾತ್ರ ಇ-ಖಾತೆ ಮಾಡಿಕೊಡಲಾಗುತ್ತಿದ್ದು, ಸ್ವಂತ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ನೀಡಲಾಗುವ (11ಬಿ) ಇ-ಖಾತೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಶೀಘ್ರವೇ ಅವುಗಳಿಗೂ ಇ-ಖಾತೆ ಮಾಡಲು ಅನುಮತಿ ದೊರೆಯುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಇ-ಖಾತೆ ಮಾಡಿಸಿಕೊಳ್ಳುವಂತೆ ಆಟೋ ಮೂಲಕ ಪ್ರಚಾರ ಮಾಡಲಾಗಿದ್ದು ಗ್ರಾಮಸಭೆ ಹಾಗೂ ವಾರ್ಡ್‌ ಸಭೆ ನಡೆಸಿದಾಗಲೂ ಜನರಿಗೆ ಅರಿವು ಮೂಡಿಸಲಾಗಿದೆ. ದಾಖಲೆಗಳಿಲ್ಲದಿರುವ ಸ್ವತ್ತುಗಳಿಗೆ ಯಾವ ರೀತಿ ಇ-ಖಾತೆಗಳನ್ನು ವಿತರಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಶಾಸಕರಿಗೆ ಮನವಿ ಮಾಡಲಾಗಿದೆ" ಎಂದು ತಿಳಿಸಿದರು.

ಹಣ ನೀಡಿದವರಿಗೆ ಇ-ಖಾತೆ

ಗ್ರಾಮ ಪಂಚಾಯಿತಿಯಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಇ-ಖಾತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ನೀಡುತ್ತಿಲ್ಲ. ಹಣವಿದ್ದವರಿಗೆ ಮಾತ್ರ ಪಂಚಾಯಿತಿಯಲ್ಲಿ ಇ-ಖಾತೆ ಸಿಗುತ್ತಿವೆ. ಇಲ್ಲದಿದ್ದರೆ ತಿಂಗಳುಗಟ್ಟಲೆ ಕಾದರೂ ಖಾತೆಗಳು ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಹೆಸರೇಳಲು ಇಚ್ಚಿಸದ ಅಲೀಪುರದ ಯುವಕರೊಬ್ಬರು ತಿಳಿಸಿದರು.

ಗೃಹ ಸಚಿವರ ಕ್ಷೇತ್ರದಲ್ಲಿ ಇ-ಖಾತೆಗಿಲ್ಲ ವೇಗ

ರಾಜ್ಯ ಗೃಹಸಚಿವ ಡಾ.ಜಿ. ಪರಮೇಶ್ವರ್‌ ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡ ಸಾಗ್ಗೆರೆ, ಮಾವತ್ತೂರು, ಚಿನ್ನಹಳ್ಳಿ ಹಾಗೂ ಕೋಳಾಲ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಸ್ವತ್ತುಗಳಿಗೆ ಇ-ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಪಂಚಾಯಿತಿಗೆ ಭೇಟಿ ನೀಡುವುದೇ ವಿರಳವಾಗಿದೆ. ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 14 ಗ್ರಾಮಗಳಿದ್ದು 1,210 ಸ್ವತ್ತುಗಳಿದ್ದು ಕೇವಲ 450 ಸ್ವತ್ತುಗಳಿಗೆ ಮಾತ್ರ ಇ-ಖಾತೆಗಳಾಗಿವೆ. ಚಿನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 15 ಗ್ರಾಮಗಳಿದ್ದು 6,962 ಜನಸಂಖ್ಯೆ ಹೊಂದಿದ್ದು 2,488 ಸ್ವತ್ತುಗಳಿವೆ. ಈ ಪೈಕಿ 589 ಸ್ವತ್ತುಗಳಿಗೆ ಮಾತ್ರ ಇ-ಖಾತೆ ನೀಡಲಾಗಿದೆ. ಕೋಳಾಲ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಗ್ರಾಮಗಳಿದ್ದು 3,298 ಸ್ವತ್ತುಗಳಿವೆ. ಈ ಪೈಕಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ 826 ಹಾಗೂ ಸಾಗುವಳಿ ಜಮೀನಿನಲ್ಲಿ 414 ಒಟ್ಟು 1,240 ಇ-ಖಾತೆಗಳು ವಿತರಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು ಟಿ. 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಮಾವತ್ತೂರು ಗ್ರಾಮ ಪಂಚಾಯಿತಿ ಪಿಡಿಒಗೆ ನಿರಂತರವಾಗಿ ಕರೆ ಮಾಡಿದರೂ ಕರೆಗೆ ಸ್ಪಂದಿಸಿಲ್ಲ.

ಉಳ್ಳವರ ಪರ ಪಂಚಾಯಿತಿಗಳು

ಗ್ರಾಮ ಪಂಚಾಯತಿಯಲ್ಲಿ ಇ-ಖಾತೆ ಸೇರಿದಂತೆ ಹಲವು ಕೆಲಸಗಳು ಆಗಬೇಕೆಂದರೆ ಹೆಚ್ಚುವರಿ ಹಣ ನೀಡಲೇಬೇಕು. ಸರ್ಕಾರದಿಂದ ಇ-ಖಾತೆ ಮಾಡಿಸಲು 50 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪಿಡಿಒಗಳು ಸ್ವತ್ತಿನ ಕಂದಾಯವನ್ನು ಕಟ್ಟಿಸಿಕೊಳ್ಳುತ್ತಾರೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೂ 3-4 ಸಾವಿರ ರೂ. ಹೆಚ್ಚುವರಿ ಹಣ ನೀಡಲೇಬೇಕು. ಹೆಚ್ಚುವರಿ ಹಣ ನೀಡಿದರೂ ತಿಂಗಳುಗಟ್ಟಲೆ ಕಾಯಲೇಬೇಕಾದ ಸ್ಥಿತಿ ಇದೆ ಎಂದು ದೊಡ್ಡಸಾಗ್ಗೆರೆ ಗ್ರಾಮದ ಮನೋಹರ್‌(ಹೆಸರು ಬದಲಾಯಿಸಲಾಗಿದೆ) ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾನ್ಯರ ಕೈಗೆ ಸಿಗುತ್ತಿಲ್ಲ ಪಿಡಿಒ

ಜಿಲ್ಲಾ ಪಂಚಾಯಿತಿಯಲ್ಲಿ ಸಿಇಒ ಸರಿಯಾದ ಸಮಯಕ್ಕೆ ಸಿಗುತ್ತಾರೆ. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಸಿಗುವುದೇ ವಿರಳವಾಗಿದೆ. ಕಚೇರಿ ಸದಾ ಖಾಲಿಯಾಗಿರುತ್ತದೆ. ಕರೆ ಮಾಡಿದರೆ ಎರಡು ಪಂಚಾಯಿತಿಗಳಿಗೆ ಒಬ್ಬ ಪಿಡಿಒ ರನ್ನೇ ನಿಯೋಜಿಸಲಾಗಿದೆ. ಬೇರೆ ಪಂಚಾಯಿತಿಗೆ ಕೆಲಸದ ನಿಮಿತ್ತ ಹೋಗಲಾಗಿದೆ. ನಾಳೆ ಬನ್ನಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೊಡ್ಡಸಾಗ್ಗೆರೆ ಗ್ರಾಮಸ್ಥರು ಆರೋಪಿಸಿದರು.

ತ್ಯಾಜ್ಯ ಸಂಗ್ರಹದ ವಾಹನಗಳಲ್ಲಿ ಪ್ರಚಾರ

ಚಿನ್ನಹಳ್ಳಿ ಹಾಗೂ ಕೋಳಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತೆ ಮಾಡಿಸಿಕೊಳ್ಳುವಂತೆ ತ್ಯಾಜ್ಯ ಸಂಗ್ರಹದ ವಾಹನಗಳಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ. ನಿರಂತರವಾಗಿ ನಡೆಯುತ್ತಿರುವ ಸಾಮನ್ಯ ಸಭೆ, ಗ್ರಾಮ ಸಭೆ ಹಾಗೂ ವಾರ್ಡ್‌ ಸಭೆಗಳ ಮೂಲಕವು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಸೂಕ್ತ ದಾಖಲೆಗಳಿದ್ದರೆ ಇ-ಖಾತೆಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಇ-ಖಾತೆ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದರು.

ಇ-ಖಾತೆಗಳಲ್ಲಿ ಹಿಂದುಳಿದಿರುವ ಪಂಚಾಯಿತಿಗಳು

ಬೆಂಗಳೂರು ಉತ್ತರ ಜಿಲ್ಲೆಯ( ಗ್ರಾಮಾಂತರ ಜಿಲ್ಲೆ) ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತಾ ಅಭಿಯಾನಕ್ಕೆ ಸಾರ್ವಜನಿಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ದೊರೆತಿಲ್ಲ.

ಆರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,880 ಸ್ವತ್ತುಗಳಿದ್ದು 385 ಇ-ಖಾತೆಗಳಾಗಿವೆ. ಪಂಚಾಯಿತಿ ವ್ಯಾಪ್ತಿಯ ಗುಂಡಪ್ಪನಾಯಕನಹಳ್ಳಿ ಗ್ರಾಮದಲ್ಲಿ ಇ-ಖಾತಾ ಆಂದೋಲನದಲ್ಲಿ 38 ಅರ್ಜಿಗಳು ಸ್ವೀಕೃತವಾಗಿದ್ದು ಶೀಘ್ರವೇ ಇ-ಖಾತೆ ನೀಡಲಾಗುವುದು ಎಂದು ಪಿಡಿಒ ಕೆ. ಮಲ್ಲೇಶ್‌ ಅವರು 'ದ ಫೆಡರಲ್‌ ಕರ್ನಾಟಕ'ಕ್ಕೆ ಮಾಹಿತಿ ನೀಡಿದರು.

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 27 ಗ್ರಾಮಗಳಿದ್ದು 1,839 ಸ್ವತ್ತುಗಳಿವೆ. ಆದರೆ ಈ ಪೈಕಿ ಕೇವಲ 350 ಇ-ಖಾತೆಗಳನ್ನು ಮಾತ್ರ ನೀಡಲಾಗಿದೆ. ಇತ್ತೀಚೆಗೆ ನಡೆದ ಇ-ಖಾತಾ ಅಭಿಯಾನದಡಿ ಪಂಚಾಯಿತಿ ವ್ಯಾಪ್ತಿಯ ಕನಕೇನಹಳ್ಳಿ ಹಾಗೂ ಮಲ್ಲೇಗೌಡನಹಳ್ಳಿಯಲ್ಲಿ ಕೇವಲ 40 ಅರ್ಜಿಗಳು ಮಾತ್ರ ಸ್ವೀಕೃತಗೊಂಡಿದ್ದು ಇನ್ನೂ ಹೆಚ್ಚಿನ ಜನರು ಅರ್ಜಿ ಸಲ್ಲಿಸುವಂತೆ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಧ್ವನಿ ಮುದ್ರಣ , ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಿಸಿ , ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್‌.ಜಿ. ತಿಮ್ಮರಾಜು ತಿಳಿಸಿದರು.

ಪಂಚಾಯಿತಿಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ

ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಇ-ಖಾತೆ ಮಾಡಲು ಕೇವಲ 50 ರೂ. ಶುಲ್ಕ ಮಾತ್ರ ಎಂದು ಹೇಳುತ್ತಾರೆ. ಆದರೆ ಸೂಕ್ತ ದಾಖಲೆಗಳಿದ್ದರೂ ಇ-ಖಾತೆ ಮಾಡಿಕೊಡಲು ಸುಮಾರು 5 ಸಾವಿರ ರೂ. ಹಣ ನೀಡಬೇಕು. ದಿನವೂ ಪಂಚಾಯಿತಿಗೆ ಅಲೆದಾಟ ನಡೆಸಿದರೆ ಮಾತ್ರ ನಮಗೆ ಎರಡು ತಿಂಗಳಲ್ಲಿ ಇ- ಖಾತೆ ದೊರೆಯುತ್ತದೆ. ಇಲ್ಲವಾದಲ್ಲಿ ಇ-ಖಾತೆ ಸಿಗುವುದೇ ಕಷ್ಟ ಎಂದು ಅಲಪನಹಳ್ಳಿ ಗ್ರಾಮದ ಯುವಕ ಶಿವಕುಮಾರ್‌ (ಹೆಸರು ಬದಲಾಯಿಸಲಾಗಿದೆ) ಹೇಳಿದರು.

ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂದು ಇ-ಖಾತಾ ಅಭಿಯಾನ ಮಾಡಿದರೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಜನರ ಬಳಿ ಸೂಕ್ತ ದಾಖಲಾತಿ ಇಲ್ಲದಿರುವುದು. ಜಾಗೃತಿಯ ಕೊರತೆಯಿಂದಾಗಿ ಯೋಜನೆ ಹಿನ್ನೆಡೆ ಅನುಭವಿಸುತ್ತಿದೆ.

ಇ-ಖಾತೆಗೆ ಅಗತ್ಯವಿರುವ ದಾಖಲೆಗಳು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಇ-ಖಾತೆ ಮಾಡಿಕೊಡಲು ಮಾಲೀಕರಿಗೆ ನೀಡಲಾಗಿರುವ ಕ್ರಯಾಪತ್ರ, ಖಾತೆ ಎಕ್ಸ್ಟ್ರಾಕ್‌, ಕಂದಾಯ ರಸೀದಿ, ಮನೆ ಫೋಡಿ, ಮಾಲೀಕನ ಭಾವಚಿತ್ರ, ಚುನಾವಣಾ ಗುರುತಿನ ಚೀಟಿ, ಕಂದಾಯ ಇಲಾಖೆಯಿಂದ ದೃಢೀಕರಿಸಿದ ವಂಶವೃಕ್ಷ, 50 ರೂ. ಶುಲ್ಕ, ವಿದ್ಯುತ್‌ ಬಿಲ್‌, ಮಾಲೀಕರು ಮೃತರಾಗಿದ್ದರೆ ಅವರ ಅವಲಂಬಿತರಿಗೆ ಖಾತೆ ಮಾಡಿಕೊಡಬೇಕಾದ ಸಂದರ್ಭದಲ್ಲಿ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕಿದೆ.

Read More
Next Story