ಬಳ್ಳಾರಿಯಲ್ಲಿ ನಕಲಿ ಕಂಪನಿ ಸ್ಥಾಪಿಸಿ 16 ಕೋಟಿ ರೂ. ಜಿಎಸ್‌ಟಿ ವಂಚನೆ, ಒಬ್ಬನ ಬಂಧನ
ಆರೋಪಿಯು ಯಾವುದೇ ಕಾನೂನುಬದ್ಧ ವ್ಯವಹಾರ ಮಾಡದೇ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ, ನಕಲಿ ಇನ್‌ವಾಯ್ಸ್‌ಗಳು ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;
ಬೇಳಗಾವಿ ಜಿಎಸ್‌ಟಿ ಕಚೇರಿ
ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದ ನಕಲಿ ಕಂಪನಿಗಳ ಹೈಟೆಕ್ ಜಾಲವನ್ನು ಜಿಎಸ್‌ಟಿ ಅಧಿಕಾರಿಗಳ ತಂಡ ಬಳ್ಳಾರಿಯಲ್ಲಿ ಪತ್ತೆ ಹಚ್ಚಿದೆ.
ಬಳ್ಳಾರಿಯ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ ಬೆಳಗಾವಿ ವಿಭಾಗದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಂಡ ಸುಮಾರು 16 ಕೋಟಿ ರೂ. ವಂಚನೆ ಮತ್ತು ವರ್ಗಾವಣೆಗೆ ಸಂಬಂಧಿಸಿ ಇನ್‌ವಾಯ್ಸ್‌ಗಳನ್ನು ಪತ್ತೆ ಮಾಡಿದೆ. ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದೆ.
ಮೂರೂ ಸ್ಥಳಗಳಲ್ಲಿ ಶೋಧ ಮತ್ತು ತಪಾಸಣೆ ಕಾರ್ಯ ಮುಂದುವರಿದಿದೆ. ಆರೋಪಿಯು ಯಾವುದೇ ಕಾನೂನುಬದ್ಧ ವಹಿವಾಟು ನಡೆಸದೇ ನಕಲಿ ಕಂಪೆನಿಗಳನ್ನು ಸ್ಥಾಪಿಸಿ, ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ವಹಿವಾಟುಗಳಿಗೆ ಸಂಬಂಧಿಸಿದಂತೆ ಕಲೆ ಹಾಕಿದ ದತ್ತಾಂಶಗಳು ಆರೋಪಿಯ ವಂಚನೆಯ ಕರಾಳತೆಗೆ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ವ್ಯಕ್ತಿಯು ಶೆಲ್ ಕಂಪನಿಗಳನ್ನು ರಚಿಸುವ ಮತ್ತು ನಿರ್ವಹಿಸುವ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಲಾಭವನ್ನು ಪಡೆಯಲು ಮತ್ತು ವರ್ಗಾಯಿಸಲು ನಕಲಿ ಶೆಲ್ ಕಂಪನಿಗಳನ್ನು ಪ್ರಾರಂಭಿಸಿದ್ದ. ವ್ಯವಹಾರದ ಸ್ಥಳದಲ್ಲಿ ಶೋಧ ನಡೆಸುವಾಗ ನಕಲಿ ಇನ್‌ವಾಯ್ಸ್ ಸೇರಿದಂತೆ ಹಲವು ದಾಖಲೆಗಳು ಸಿಕ್ಕಿವೆ.
ಬಂಧಿತ ವ್ಯಕ್ತಿಯು ನಕಲಿ ಬಾಡಿಗೆ ಒಪ್ಪಂದ, ಲೆಟರ್ ಹೆಡ್ ಇತ್ಯಾದಿಗಳನ್ನು ಬಳಸಿದ್ದಾನೆ. ವಂಚನೆ ನಡೆಸಲು ತನ್ನ ಉದ್ಯೋಗಿಗಳ ಆಧಾರ್, ಪ್ಯಾನ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ಬಳಸಿರುವುದು ಕಂಡುಬಂದಿದೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.