ಟಿಪ್ಪು, ಒಡೆಯರ್‌ ಮತ್ತು ಕೆಆರ್‌ಎಸ್‌ ಡ್ಯಾಂ: ಸಚಿವ ಮಹಾದೇವಪ್ಪ ಮಾತಿನಲ್ಲಿ ಹುರುಳಿದೆಯೇ..?

ಆದರೆ ಮಹದೇವಪ್ಪ ಹೇಳಿಕೆಯ ಹಿಂದೆ ಸತ್ಯಾಂಶ ಇದೆಯೇ..? ನಿಜವಾಗಿಯೂ ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಯಾರು..? ಮಹದೇವಪ್ಪ ತಮ್ಮ ಹೇಳಿಕೆಗೆ ಸಾಕ್ಷ್ಯವಾಗಿ ನೀಡುತ್ತಿರುವ ಶಿಲಾನ್ಯಾಸದ ಶಾಸನದ ಹಿನ್ನೆಲೆ ಏನು..?;

Update: 2025-08-06 11:20 GMT
ಕೆಆರ್‌ಎಸ್‌ ಡ್ಯಾಂ ವಿವಾದ

ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್‌ ಎನ್ನುವ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹೇಳಿಕೆಗೆ ಈಗ ಹಲವು ಆಯಾಮಗಳು ದೊರೆತು ಚರ್ಚೆ ಆರಂಭವಾಗಿದೆ. ಬಿಜೆಪಿ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಮೈಸೂರು-ಕೊಡಗು ಸಂಸದ, ರಾಜವಂಶಸ್ಥ ಯದುವೀರ್‌ ಒಡೆಯರ್‌ ಕೂಡ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆದರೆ ಮಹದೇವಪ್ಪ ಹೇಳಿಕೆಯ ಹಿಂದೆ ಸತ್ಯಾಂಶ ಇದೆಯೇ..? ನಿಜವಾಗಿಯೂ ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಯಾರು..? ಮಹದೇವಪ್ಪ ತಮ್ಮ ಹೇಳಿಕೆಗೆ ಸಾಕ್ಷ್ಯವಾಗಿ ನೀಡುತ್ತಿರುವ ಶಿಲಾನ್ಯಾಸದ ಶಾಸನದ ಹಿನ್ನೆಲೆ ಏನು..? ಎನ್ನುವ ಪ್ರಶ್ನೆಗಳಿಗೆ ಇತಿಹಾಸ ತಜ್ಞರು ನೀಡುವ ಉತ್ತರವೇ ಬೇರೆ ಇದೆ. ಈ ಸಂಬಂಧ ದ ಫೆಡರಲ್‌ ಕರ್ನಾಟಕ ಇತಿಹಾಸ ತಜ್ಞರಾದ ಪ್ರೊ. ನಂಜರಾಜೇ ಅರಸ್‌ ಮತ್ತು ಡಾ. ತಲಕಾಡು ದೊಡ್ಡರಂಗೇಗೌಡರನ್ನು ಮಾತನಾಡಿಸಿದ್ದು, ಅವರು ಹೇಳುವುದು ಹೀಗೆ…

ಪ್ರೊ.ನಂಜರಾಜೇ ಅರಸ್

ಟಿಪ್ಪು ಕೆರೆ, ಕಟ್ಟೆ  ಕಟ್ಟಿದ್ದ, ಅಣೆಕಟ್ಟೆಯನ್ನಲ್ಲ: ಪ್ರೊ.ನಂಜರಾಜೇ ಅರಸ್

ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಾಣ ಮತ್ತು ಟಿಪ್ಪುವಿಗೂ ಸಂಬಂಧ ಇಲ್ಲ. ಟಿಪ್ಪು ಆಡಳಿತದ ಉದ್ದಕ್ಕೂ ಯುದ್ಧ ಯುದ್ಧ ಎಂದುಕೊಂಡೇ ಹೋರಾಡಿದವನು. ಅವನಿಗೆ ಪ್ರಜೆಗಳಿಗೆ ಒಳ್ಳೆಯದ್ದು ಮಾಡಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿದ. ಈಗ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಹೇಳಿರುವಂತೆ ಟಿಪ್ಪು ಕೆಆರ್‌ ಎಸ್‌ ಅಣೆಕಟ್ಟೆ ಕಟ್ಟಿಸಿಲ್ಲ, ಅವನ ಕಾಲದಲ್ಲಿ ಅಣೆಕಟ್ಟೆಯ ಪರಿಕಲ್ಪನೆಯೇ ಇರಲಿಲ್ಲ ಎನ್ನುತ್ತಾರೆ ಖ್ಯಾತ ಇತಿಹಾಸಕಾರ ಪ್ರೊ.ಬಿ.ವಿ.ನಂಜರಾಜೇ ಅರಸ್‌ ಅವರು.

ಮುಂದುವರಿದು ವಿಸ್ತೃತವಾಗಿ ಮಾತನಾಡಿದ ಅವರು, “ಟಿಪ್ಪು ತನ್ನ ಆಡಳಿತದ ಹೆಚ್ಚು ಭಾಗ ಯುದ್ಧಗಳಲ್ಲಿಯೇ ಕಳೆದವನು. ಸದಾ ಶತ್ರುಗಳ ಕಾಟದಿಂದ ರಾಜ್ಯವನ್ನು ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿತ್ತು. ಇದರ ನಡುವಲ್ಲೂ ಪ್ರಜೆಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ದೃಷ್ಟಿಯಿಂದ ಉತ್ತರ ಕರ್ನಾಟಕ, ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳನ್ನು ಕಟ್ಟಿಸಿದ್ದಾರೆ. ಅದರ ಜೊತೆಗೆ ಕಾವೇರಿ ನದಿಗೆ ಡ್ಯಾಂ ಕಟ್ಟಿಸಬೇಕು ಎನ್ನುವ ಕನಸು ಅವನಿಗೆ ಇತ್ತು. ಹೀಗಾಗಿ ಕನ್ನಂಬಾಡಿ ಅಣೆಕಟ್ಟೆ ರೀತಿಯೇ ಅಥವಾ ಅದನ್ನೇ ಕಟ್ಟಲು ಹೊರಟಿದ್ದ ಎಂದುಕೊಳ್ಳುತ್ತೇವೆ. ಇದು ತಪ್ಪು. ಅಂದಿನ ಕಾಲಕ್ಕೆ ಚೆಕ್‌ ಡ್ಯಾಂ ರೀತಿ ಹತ್ತು ಅಡಿ, ಇಪ್ಪತ್ತು ಅಡಿ ಎತ್ತರಕ್ಕೆ ಒಡ್ಡುಗಳನ್ನು ಕಟ್ಟಲಾಗುತ್ತಿತ್ತು. ಅದನ್ನೇ ಆಗ ಡ್ಯಾಂ ಎನ್ನುತ್ತಿದ್ದರು. ರಾಮನಾಥ ಪುರದ ಹತ್ತಿರ ಕೃಷ್ಣರಾಜೇಂದ್ರ ಕಟ್ಟೆ ಎನ್ನುವುದು 25 ಅಡಿ ಎತ್ತರ ಇದೆ. ಎಡಮುರಿ, ಬಲಮುರಿ, ಪಶ್ಚಿಮವಾಹಿನಿ ಬಳಿಯೂ ಈ ರೀತಿಯ ನಿರ್ಮಾಣಗಳು ಇವೆ. ಅಲ್ಲದೇ ಟಿಪ್ಪು ಕಾಲಕ್ಕೆ ಅಣೆಕಟ್ಟೆ ಎನ್ನುವುದರ ಕಲ್ಪನೆಯೇ ಬೇರೆ ಇತ್ತು. ಈಗ ತಪ್ಪಾಗಿ ಅರ್ಥೈಸಿಕೊಂಡು ಮಾತನಾಡುವುದು ಸರಿಯಲ್ಲ," ಎನ್ನುತ್ತಾರೆ ನಂಜರಾಜೇ ಅರಸು ಅವರು.

ಶಿಲಾನ್ಯಾಸ ಪತ್ತೆಯಾಗಿದ್ದು ನಾಲ್ವಡಿ ಅವರ ದೊಡ್ಡ ಗುಣದಿಂದ

"ಕೆಆರ್‌ ಎಸ್‌ ಅಣೆಕಟ್ಟೆ ಕಟ್ಟುವ ಕೆಲಸ ಆರಂಭವಾಗಿದ್ದು 1911 ರಲ್ಲಿ. ಅದಕ್ಕೂ ಮುನ್ನ ಅಂದರೆ 1795 ರಲ್ಲಿಯೇ ಟಿಪ್ಪು ಅಂದಿನ ತಾಂತ್ರಿಕತೆಗೆ ಅನುಗುಣವಾದ ಕಟ್ಟೆ ಕಟ್ಟುವ ಕನಸು ಕಂಡು ಶಿಲಾನ್ಯಾಸ ನೆರವೇರಿಸಿದ್ದಾನೆ. ಆದರೆ ಅದು ಪೂರ್ಣಗೊಂಡಿಲ್ಲ. ಅದಾದ 116 ವರ್ಷಗಳ ಬಳಿಕ ಅಣೆಕಟ್ಟೆಯ ನಿರ್ಮಾಣ ಕಾರ್ಯ ಆರಂಭವಾಗಿದೆ. ಆಗ ಈ ಶಿಲಾನ್ಯಾಸ ಪತ್ತೆಯಾಗಿದೆ. ನಾಲ್ವಡಿ ಅವರು ಅಂದೇ ಈ ಕಲ್ಲನ್ನು ನಾಶ ಮಾಡಿ ಎಂದು ಹೇಳಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೇ ಅದನ್ನು ಸ್ಥಾಪಿಸಿದ್ದಾರೆ. ಇದು ಅವರ ಉದಾರತೆಯನ್ನು ತೋರುತ್ತದೆ. ಹಾಗೆಂದು ಅಣೆಕಟ್ಟೆಯನ್ನು ಕಟ್ಟಲು ಶುರು ಮಾಡಿದ್ದೇ ಟಿಪ್ಪು ಎನ್ನುವುದು ಇತಿಹಾಸವನ್ನು ತಿಳಿದುಕೊಳ್ಳದೇ ಆಡುವ ಮಾತಾಗುತ್ತದೆ. ಇದಕ್ಕೆ ಯಾವುದೇ ಮಾನ್ಯತೆ ಕೊಡುವುದು ಬೇಕಿಲ್ಲ. ಯಾರು ಏನೇ ಹೇಳಿದರೂ ಈಗ ಇರುವ ಕನ್ನಂಬಾಡಿ ಕಟ್ಟೆಗೂ ಟಿಪ್ಪುವಿಗೂ ಯಾವುದೇ ಸಂಬಂಧ ಇಲ್ಲ," ಎಂದು ಹೇಳುತ್ತಾರೆ ನಂಜರಾಜ ಅರಸು ಅವರು.

ಡಾ. ತಲಕಾಡು ಚಿಕ್ಕರಂಗೇಗೌಡ

ಟಿಪ್ಪು ಕನಸು  ನಿಜ, ಹಣ ಮೀಸಲಿಟ್ಟಿದ್ದೂ ನಿಜ: ಡಾ. ತಲಕಾಡು ಚಿಕ್ಕರಂಗೇಗೌಡ

ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣ ಮತ್ತು ಟಿಪ್ಪುವಿನ ಪಾತ್ರದ ಕುರಿತು ಎದ್ದಿರುವ ಚರ್ಚೆಯ ಬಗ್ಗೆ ಮಾತನಾಡಿರುವ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡರು, "ಟಿಪ್ಪುವಿಗೂ ಕೆಆರ್‌ಎಸ್‌ ಅಣೆಕಟ್ಟೆಗೂ ಯಾವುದೇ ಸಂಬಂಧ ಇಲ್ಲ," ಎಂದು ಖಚಿತಪಡಿಸಿದ್ದಾರೆ.

ಅವರ ಪ್ರಕಾರ, "ಟಿಪ್ಪು ಕಟ್ಟೆ ಕಟ್ಟಬೇಕು ಎಂದುಕೊಂಡಿದ್ದು ನಿಜ, ಅದಕ್ಕಾಗಿಯೇ 1791 ರಲ್ಲಿ ಅಂದಿನ ನೀರಾವರಿ ತಜ್ಞರಿಗೆ ಸೂಚನೆ ನೀಡಿ ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ. ಇದಕ್ಕೆ ಬೇಕಾದ ಹಣವನ್ನೂ ಮೀಸಲು ಇಟ್ಟಿದ್ದ. ಆದರೆ ಮೂರನೇ ಆಂಗ್ಲೋ ಮೈಸೂರು ಯುದ್ಧ ನಡೆದದ್ದರಿಂದ ಈ ಯೋಜನೆ ಪೂರ್ಣವಾಗಲಿಲ್ಲ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ನಡೆದು ಅದರಲ್ಲಿ ಟಿಪ್ಪುವಿಗೆ ಸೋಲಾಗಿ ಆತನ ಯುಗಾಂತ್ಯವಾಗುತ್ತದೆ. ಅಲ್ಲಿಗೆ ಡ್ಯಾಂ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಅಂದು ಮಾಡಿದ್ದ ಶಿಲಾನ್ಯಾಸಕ್ಕೆ ನಾಲ್ವಡಿ ಅವರಿಂದ ಮಾನ್ಯತೆ ಸಿಗುತ್ತದೆ. ಈಗ ಸಚಿವ ಮಹದೇವಪ್ಪ ನವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮಾತನಾಡಿದ್ದಾರೆ," ಎನ್ನುತ್ತಾರೆ.

ಅಂದಿನ ಗೆಜೆಟಿಯರ್‌ ದಾಖಲೆಗಳೇ ಸತ್ಯ ಹೇಳುತ್ತವೆ

"1911 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕನ್ನಡಂಬಾಡಿ ಕಟ್ಟೆ ಕಟ್ಟಲು ಮುಂದಾಗುತ್ತಾರೆ. ಇದಕ್ಕೆ ಅಂದಿನ ಬ್ರಿಟಿಷ್‌ ಅಧಿಕಾರಿಗಳ ಸಹಾಯ ಪಡೆದು, ಅವರ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಯೋಜನೆ ಸಿದ್ಧಪಡಿಸುತ್ತಾರೆ. ಆದರೆ ಇದಕ್ಕೆ 3 ಕೋಟಿ 65 ಲಕ್ಷ ಹಣ ಬೇಕಾಗುತ್ತದೆ. ಇದು ಅಂದಿನ ಮೈಸೂರು ಸಂಸ್ಥಾನದ ಮೂರು ವರ್ಷಗಳ ಆಯವ್ಯಯ. ಇದರ ಬಗ್ಗೆ ಅಂದಿನ ಗ್ಯಾಜೆಟಿಯರ್‌ ನಲ್ಲಿ ಸ್ಪಷ್ಟ ಉಲ್ಲೇಖಗಳು ಇವೆ. ಹೀಗೆ ಹಣದ ಕೊರತೆ ಬಗ್ಗೆ ನಾಲ್ವಡಿ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ, ಪತ್ನಿ ಪ್ರತಾಪ ಕುಮಾರಿ ಅವರ ಬಳಿ ಪ್ರಸ್ತಾಪಿಸಿದಾಗ ಅವರು ತಮ್ಮ ಒಡವೆಗಳನ್ನೆಲ್ಲಾ ಕೊಟ್ಟು, ಇದನ್ನು ಮಾರಿ ಅಣೆಕಟ್ಟೆ ನಿರ್ಮಾಣ ಮಾಡಿ ಎನ್ನುತ್ತಾರೆ. ಹಾಗಾಗಿ ಡ್ಯಾಂ ಕಟ್ಟುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ವಾಣಿ ವಿಲಾಸ ಸನ್ನಿಧಾನ, ಪ್ರತಾಪ ಕುಮಾರಿ ಈ ಮೂವರನ್ನೂ ನಾವು ನೆನೆಯಬೇಕು. ಇದರ ಹೊರತಾಗಿ ಟಿಪ್ಪುವಿಗೂ ಡ್ಯಾಂ ಗೂ ಯಾವುದೇ ರೀತಿಯ ಸಂಬಂಧ ಇಲ್ಲ," ಎನ್ನುವುದು ಚಿಕ್ಕರಂಗೇಗೌಡರ ಅಭಿಪ್ರಾಯ.

ಹಾಗಿದ್ದರೆ ಅಣೆಕಟ್ಟೆಯ ಬಳಿ ಟಿಪ್ಪು ಕಾಲದ ಶಿಲಾಫಲಕ ಬಂದಿದ್ದು ಹೇಗೆ..?

ಕೆಆರ್‌ ಎಸ್‌ ಅಣೆಕಟ್ಟೆಯಲ್ಲಿ ಟಿಪ್ಪು ಕಾಲದ ಶಿಲಾನ್ಯಾಸ ಫಲಕ ಇರುವುದು, ಅದರಲ್ಲಿ ಕಟ್ಟೆ ಕಟ್ಟುವ ಬಗ್ಗೆ, ರೈತರಿಗೆ ನೆರವಾಗುವ ಬಗ್ಗೆ, ರೈತರು, ದಾನಿಗಳು ಈ ಕಾರ್ಯಕ್ಕೆ ನೆರವು ನೀಡಬೇಕು ಎನ್ನುವ ಬಗ್ಗೆ ಉಲ್ಲೇಖಗಳು ಇವೆ. ಇದನ್ನು ನೋಡಿದರೆ ಅಣೆಕಟ್ಟೆಗೂ ಟಿಪ್ಪುವಿಗೂ ಸಂಬಂಧ ಇರಬಹುದು ಎನ್ನಿಸುತ್ತದೆ. ಆದರೆ ಇದರ ವಾಸ್ತವ ಬೇರೆಯದ್ದೇ ಇದೆ ಎನ್ನುತ್ತಾರೆ ಚಿಕ್ಕರಂಗೇಗೌಡರು.

ಅವರ ಪ್ರಕಾರ, ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣ ಕಾರ್ಯ ಆಗಿ, ಮುಂದೆ ಬೃಂದಾವನ ನಿರ್ಮಾಣ ಮಾಡಲು ಮಹಾರಾಜರು ಮುಂದಾಗುತ್ತಾರೆ. ಈ ವೇಳೆ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ದಿವಾನರಾಗಿರುತ್ತಾರೆ. ಟಿಪ್ಪು ಅಭಿಮಾನಿಗಳು, ಈ ಸಂದರ್ಭದಲ್ಲಿ ಹಳೆಯ ಶಿಲಾನ್ಯಾಸ ಫಲಕದ ಬಗ್ಗೆ ತಿಳಿಸುತ್ತಾರೆ. ಇದನ್ನು ಗಮನಿಸಿದ ನಾಲ್ವಡಿ ಅವರು ಟಿಪ್ಪುವಿಗೂ ಜನ ಕಲ್ಯಾಣದ ಸದಾಶಯ ಇತ್ತು. ಅವರೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರೂ ಎಂದು ಪರ್ಷಿಯನ್‌ ಭಾಷೆಯಲ್ಲಿದ ಶಿಲಾನ್ಯಾಸ ಫಲಕವನ್ನು ಕನ್ನಡ ಮತ್ತು ಇಂಗ್ಲಿಷ್‌ಗೆ ಭಾಷಾಂತರ ಮಾಡಿಸಿ ಅಣೆಕಟ್ಟೆ ಬಳಿ ಪ್ರತಿಷ್ಠಾಪಿಸುತ್ತಾರೆ. ಇದು ಅವರ ದೊಡ್ಡ ಗುಣ. ನಿಜವಾಗಿಯೂ ಟಿಪ್ಪು ಎಲ್ಲಿ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದ್ದ ಎನ್ನುವುದನ್ನು ತಿಳಿಯಲು ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ಚಿಕ್ಕರಂಗೇಗೌಡರು.

ಒಟ್ಟಾರೆ ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣ ಸಂಬಂಧವಾಗಿ ಸಚಿವ ಎಚ್‌.ಸಿ.ಮಹದೇವಪ್ಪ ನೀಡಿರುವ ಹೇಳಿಕೆಗೂ ಇತಿಹಾಸದ ಪುಟಗಳಲ್ಲಿ ಅಡಗಿರುವ ಸತ್ಯಕ್ಕೂ ವ್ಯತ್ಯಾಸ ಇದೆ ಎನ್ನುವುದು ತಜ್ಞರ ಮಾತುಗಳಿಂದ ಸ್ಪಷ್ಟವಾಗುತ್ತದೆ.

Tags:    

Similar News