ಧರ್ಮಸ್ಥಳ ಪ್ರಕರಣ | ಮಾಧ್ಯಮ ಸಿಬ್ಬಂದಿ ಮೇಲೆ ಸ್ಥಳೀಯರ ಹಲ್ಲೆ ; ಮೂವರು ಆಸ್ಪತ್ರೆಗೆ ದಾಖಲು
ಯುನೈಟೆಡ್ ಚಾನೆಲ್‌ನ ಅಭಿಷೇಕ್, ಸಂಚಾರಿ ಸ್ಟುಡಿಯೋ ಸಂತೋಷ್, ಕುಡ್ಲ ರಾಂಪೇಜ್‌ನ ಅಜಯ್ ಅಚ್ಚನ್ ಮತ್ತು ಒಬ್ಬರು ಕ್ಯಾಮೆರಾಮೆನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.;
ಧರ್ಮಸ್ಥಳದಲ್ಲಿ ಕಳೇಬರ ಶೋಧ ವೀಕ್ಷಿಸಲು ಜನಜಂಗುಳಿ
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿದೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂಬ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆದ ಬಳಿಕವೇ ಸತ್ಯಾಸತ್ಯತೆ ಹೊರಬರಲಿದೆ.
ಬುಧವಾರ ಸಂಜೆಯ ಸಮಯದಲ್ಲಿ ಕಾರ್ಯನಿಮಿತ್ತ ಸ್ಥಳಕ್ಕೆ ಆಗಮಿಸಿದ ಮೂವರು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮಾಧ್ಯಮದವರು ಮತ್ತು ಓರ್ವ ಕ್ಯಾಮೆರಾಮೆನ್ ಮೇಲೆ ಹಲ್ಲೆ ನಡೆದಿದೆ ಎಂದು ಸ್ಥಳೀಯ ಮೂಲಗಳು ಹೇಳಿವೆ. ಯುನೈಟೆಡ್- ಚಾನೆಲ್‌ನ ಅಭಿಷೇಕ್, ಸಂಚಾರಿ ಸ್ಟುಡಿಯೋ ಸಂತೋಷ್, ಕುಡ್ಲ ರಾಂಪೇಜ್‌ನ ಅಜಯ್ ಅಚ್ಚನ್ ಮತ್ತು ಒಬ್ಬರು ಕ್ಯಾಮೆರಾಮೆನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾಗಿರುವ ಅಭಿಷೇಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ನಡೆದ ಘಟನೆಗಳ ಕುರಿತು ವಿಸ್ತೃತವಾಗಿ ವರದಿ ಮಾಡಿರುವ ಕಾರಣ ಈ ಹಲ್ಲೆ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಲ್ಲಿನ ಕೆಲವು ಆಟೋ ಚಾಲಕರು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಕ್ಯಾಮೆರಾಮೆನ್ ಅವರ ಕ್ಯಾಮೆರಾವನ್ನು ಪುಡಿಪುಡಿ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿ ಬಿಗಿವಿನ ವಾತಾವರಣ ಕಲ್ಪಿಸಲಾಗಿದೆ.
ಘಟನೆಯನ್ನು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ, ನಾಗರಿಕ ಸೇವಾ ಟ್ರಸ್ಟ್ ತೀವ್ರವಾಗಿ ಖಂಡಿಸಿದೆ. ಧರ್ಮಸ್ಥಳದಲ್ಲಿ ನಡೆದಿರುವ ಮಾಧ್ಯಮದವರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಹಲ್ಲೆಕೋರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಇವರ ಹಿಂದೆ ಇರುವ ಪ್ರಭಾವಶಕ್ತಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ದೂರುದಾರ ವ್ಯಕ್ತಿಯು ನೇತ್ರಾವತಿ ನದಿ ಸುತ್ತಮುತ್ತ ಜುಲೈ 28 ರಂದು ಒಟ್ಟು 13 ಸ್ಥಳಗಳನ್ನು ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸಿದ್ದ. ಜುಲೈ 29 ರಂದು 1 ಹಾಗೂ 2ನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ಆರಂಭಿಸಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಜುಲೈ 3, 4 ಹಾಗೂ 5 ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಅಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಜುಲೈ 31 ರಂದು 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು. ಆರನೇ ಪಾಯಿಂಟ್‌ನಲ್ಲಿ ದೊರೆತ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆ.1ರಂದು 7 ಹಾಗೂ 8ನೇ ಪಾಯಿಂಟ್ ಹಾಗೂ ಆ. 2ರಂದು 9 ಹಾಗೂ 10ನೇ ಪಾಯಿಂಟ್‌ನಲ್ಲಿ ಅಧಿಕಾರಿಗಳಿಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.13ನೇ ಪಾಯಿಂಟ್ ಶೋಧ ಕಾರ್ಯ ಮುಗಿದ ನಂತರ ಮುಂದಿನ ತನಿಖೆ ಯಾವ ರೀತಿ ನಡೆಯಬೇಕೆಂದು ಅಧಿಕಾರಿಗಳ ತಂಡ ಸಭೆ ಮಾಡಿ ಚರ್ಚಿಸಿತ್ತು. ಎರಡು ಸ್ಥಳಗಳಲ್ಲಿ ಸಿಕ್ಕ ಅಸ್ಥಿಪಂಜರಗಳನ್ನು ಪ್ರತ್ಯೇಕವಾಗಿ ಇರಿಸಿದ್ದು, ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.