ಸ್ವಾಭಿಮಾನಿ, ದಲಿತ ಸಮಾವೇಶ ನಂತರ ಈಗ ಶೋಷಿತರ ಸಮಾವೇಶಕ್ಕೂ ಕಾಂಗ್ರೆಸ್‌ ಹೈಕಮಾಂಡ್ ಕಡಿವಾಣ?

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ದೆಹಲಿ ಭೇಟಿ 'ಶೋಷಿತರ ಸಮಾವೇಶ' ಮಾಡಲು ಮುಂದಾಗಿರುವ ಸಿದ್ದರಾಮಯ್ಯ ಅಸಹನೆ ಸೃಷ್ಟಿಸಿದೆ. ದಲಿತ ಸಮಾವೇಶದಂತೆ ಶೋಷಿತರ ಸಮಾವೇಶಕ್ಕೂ ಕಾಂಗ್ರೆಸ್ ಹೈಕಮಾಂಡ್ ಕಡಿವಾಣ ಹಾಕಬಹುದು ಎಂಬ ಬಗ್ಗೆ ಆ ಪಕ್ಷದೊಳಗೆ ಚರ್ಚೆ ನಡೆದಿದೆ.;

Update: 2025-02-25 00:30 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ ಕಾಂಗ್ರೆಸ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಹತ್ತಿಕ್ಕಲು  ಪಕ್ಷದಲ್ಲಿರುವ ವಿರೋಧಿ ಬಣಗಳು ನಡೆಸುತ್ತಿರುವ
ʼಔತಣಕೂಟʼ ಹಾಗೂ ʼಸಮಾವೇಶʼ ರಾಜಕೀಯವನ್ನು ಹಂತಹಂತವಾಗಿ ತಹಬದಿಗೆ ಸರಿಸಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ಬಾರಿ, ಶೋಷಿತರ ಸಮಾವೇಶವನ್ನು ಹೇಗೆ ಎದುರಿಸುತ್ತಾರೆ?

ಈ ಪ್ರಶ್ನೆ ಈಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಛಾಯೆ ಇರುವ ಡಿ.ಕೆ. ಶಿವಕುಮಾರ್‌ ವಿರೋಧಿ ಬಣದಲ್ಲಿ ಈಗ ಪ್ರಮುಖವಾಗಿ ಗುರುತಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೂ ಸೇರಿದಂತೆ ಹಲವು ದಲಿತ ನಾಯಕರು ಘೋಷಿಸಿದ್ದ ದಲಿತ ಸಮಾವೇಶ, ಹೈಕಮಾಂಡ್‌ ಮಧ್ಯಸ್ಥಿಕೆ ಬಳಿಕ ನಿಂತು ಹೋಯಿತು. ದಲಿತ ಸಮಾವೇಶ ರೂಪಾಂತರಗೊಂಡು ಈಗ ಶೋಷಿತರ ಸಮಾವೇಶದ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್‌ ಅವರ ʼಮುಖ್ಯಮಂತ್ರಿʼ ಕನಸಿಗೆ ತಡೆಯಾಗುವ ಲಕ್ಷಣಗಳು  ಕಂಡುಬಂದಿವೆ.

ಈಗ ಶೋಷಿತರ ಸಮಾವೇಶಕ್ಕೂ ಕಡಿವಾಣ ಹಾಕಲು ಡಿ.ಕೆ. ಶಿವಕುಮಾರ್‌ ಪ್ರಭಾವ ಬೀರುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಮಂಗಳವಾರ (ಡಿ. 25) ಅಧಿಕೃತ ಕಾರ್ಯಕ್ರಮಕ್ಕೆಂದು ದೆಹಲಿಗೆ ತೆರಳಿ, ಬಳಿಕ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತಾರೆ. ಆ ಬಳಿಕ  ಪ್ರತ್ಯೇಕವಾಗಿ ನಡೆಸಲು ಉದ್ದೇಶಿಸಲಾಗಿರುವ ಶೋಷಿತರ ಸಮಾವೇಶಕ್ಕೂ ಲಗಾಮು ಹಾಕುವಲ್ಲಿ ಪ್ರಯತ್ನಿಸಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಹಾಸನದಲ್ಲಿ ಪ್ರತ್ಯೇಕವಾಗಿ  'ಸ್ವಾಭಿಮಾನಿ ಸಮಾವೇಶ' ಸಮಾವೇಶ ಮಾಡಲು ಮುಂದಾಗಿದ್ದರು. ಅದಕ್ಕೆ ಕಡಿವಾಣ ಹಾಕಿಸಿ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಫಲರಾಗಿದ್ದರು.

ಅದಾದ ಬಳಿಕ  ದಲಿತ ಸಮಾವೇಶ ನಡೆಯಲೂ ಆವಕಾಶವಾಗಲಿಲ್ಲ. ಈಗ  ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರು ಈಗ ಮಾಡಲು ಉದ್ದೇಶಿಸಿರುವ ಶೋಷಿತರ ಸಮಾವೇಶಕ್ಕೂ ಕಡಿವಾಣ ಬೀಳಬಹುದು ಎನ್ನಲಾಗಿದೆ. ಸಚಿವರಾದ ಕೆ.ಎನ್. ರಾಜಣ್ಣ, ಸತೀಶ ಜಾರಕಿಹೊಳಿ ಸೇರಿದಂತೆ ಸಿದ್ದರಾಮಯ್ಯ ಆಪ್ತರು ಶೋಷಿತರ ಸಮಾವೇಶ ಮಾಡಲು ಸಿದ್ಧತೆಗಳನ್ನು ಆರಂಭಿಸಿಕೊಂಡಿದ್ದಾರೆ. ಇದಕ್ಕಾಗಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭೇಟಿ ಮಾಡಿ ಅನುಮತಿ ಪಡೆದಿರುವುದಾಗಿಯೂ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ. ನಂತರ ಶೋಷಿತರ ಸಮಾವೇಶದ ಕುರಿತು ರಾಜ್ಯ ಕಾಂಗ್ರೆಸ್​ನಲ್ಲಿ ಚರ್ಚೆಗಳು ಶುರುವಾಗಿವೆ.

ದೆಹಲಿ ಪ್ರಯಾಣ

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೆಹಲಿ ಭೇಟಿ ಕುರಿತು ಮಾಹಿತಿ ನೀಡಿರುವ ಡಿಕೆಶಿ, ‘ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ರಾಜಸ್ಥಾನದಲ್ಲಿ ನಡೆದ ಸಮ್ಮೇಳನಕ್ಕೆ ಹೋದಾಗ ನಾನು ನಮ್ಮ ನೀರಾವರಿ ಯೋಜನೆಗಳ ವಿಚಾರವನ್ನು ಪ್ರಸ್ತಾಪಿಸಿದ್ದೆ. ಅದಕ್ಕೆ ಅವರು ಮಂಗಳವಾರ ಸಭೆ ಮಾಡಲು ಸಮಯ ನೀಡಿದ್ದಾರೆ. ನಮ್ಮ ರಾಜ್ಯದವರೇ ಆದ  ಸಚಿವ ವಿ. ಸೋಮಣ್ಣ ಅವರ ಮೂಲಕವೇ ಕಡತ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಸೋಮಣ್ಣ ಅವರಿಗೂ ಪತ್ರ ಬರೆದಿದ್ದೇನೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ಇದೆ. ನಮ್ಮ ಅಧಿಕಾರಿಗಳು ಇಂದೇ ದೆಹಲಿಗೆ ಪ್ರಯಾಣ ಮಾಡಿದ್ದು, ಪ್ರಾಸ್ತಾವಿಕ ಸಭೆ ಮಾಡುತ್ತಿದ್ದಾರೆ. ಅಲ್ಲಿ ಸಭೆಯಲ್ಲಿ ಭಾಗವಹಿಸಿದ ನಂತರ ಸಮಯ ಸಿಕ್ಕರೆ, ನಮ್ಮ ದೆಹಲಿ ನಾಯಕರಿಗೂ ಸಮಯ ಇದ್ದರೆ ಅವರನ್ನು ಭೇಟಿ ಮಾಡಿಕೊಂಡು ಬರುತ್ತೇನೆ’ ಎಂದಿದ್ದಾರೆ.

ದೆಹಲಿ ಪ್ರವಾಸದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭೇಟಿ ಮಾಡಿ, ಪ್ರತ್ಯೇಕವಾಗಿ ಶೋಷಿತರ ಸಮಾವೇಶ ಮಾಡಲು ಅನುಮತಿ ಕೊಡುವ ಬದಲು ಪಕ್ಷದ ವೇದಿಕೆಯಡಿಯೆ ಅದನ್ನು ಮಾಡಲು ಸೂಚಿಸಬೇಕು ಎಂಬ ಬೇಡಿಕೆಯನ್ನು ಪಕ್ಷದ ವರಿಷ್ಠರ ಎದುರು ಡಿಕೆ ಶಿವಕುಮಾರ್ ಬೇಡಿಕೆ ಇಡುವ ಸಾಧ್ಯತೆಗಳು ದಟ್ಟವಾಗಿವೆ. ಇದು ಶೋಷಿತರ ಸಮಾವೇಶ ಮಾಡಲು ಮುಂದಾಗಿರುವವರ ಆತಂಕಕ್ಕೆ ಕಾರಣವಾಗಿದೆ.

ಔತಣಕೂಟ

ಇದಕ್ಕಿಂತ ಮೊದಲು  ಸತೀಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಆಪ್ತರ ಬಣಕ್ಕೆ ಔತಣಕೂಟ ನೀಡುವಲ್ಲಿ ಯಶಸ್ವಿಯಾಗಿದ್ದರು. ಬಳಿ ಡಾ. ಜಿ. ಪರಮೇಶ್ವರ ಅವರು  ಶಾಸಕರು-ಸಂಸದರ ಔತಣಕೂಟ ನಡೆಸಲು ಹೊರಟಾಗ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿರಲಿಲ್ಲ. ಔತಣಕೂಟ ಮುಂದೂಡುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಹೈಕಮಾಂಡ್ ಸೂಚಿಸಿತ್ತು. ನಂತರ ದಲಿತ ಸಮಾವೇಶ ಮಾಡಲು ಡಾ. ಪರಮೇಶ್ವರ ಸೇರಿದಂತೆ ದಲಿತ ಶಾಸಕರು, ಸಂಸದರು ಮುಂದಾಗಿದ್ದರು. ಆ ಮೂಲಕ ದಲಿತ ಸಮಾವೇಶ ನಡೆಸುವ ಮೂಲಕ ದಲಿತ ಮುಖ್ಯಮಂತ್ರಿ ಹಕ್ಕೊತ್ತಾಯ ಮಾಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಪ್ರಯತ್ನಗಳು ನಡೆದಿದ್ದವು.

ಆದರೆ ದಲಿತ ಸಮಾವೇಶಕ್ಕೂ ಹೈಕಮಾಂಡ್ ಅನುಮತಿ ನಿರಾಕರಿಸಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಈ ಸಮಾವೇಶ ಮಾಡುವುದಾದರೆ ಪಕ್ಷದ ವೇದಿಕೆಯಡಿಯೇ ಮಾಡೋಣ. ನಾನು ಕೂಡ ಸಮಾವೇಶದಲ್ಲಿ ಭಾಗಿಯಾಗುತ್ತೇನೆ. ಎಲ್ಲ ಚರ್ಚಿಸಿ ಸಮಾವೇಶ ಮಾಡೋಣ. ಸದ್ಯಕ್ಕೆ ಸಮಾವೇಶ ಮುಂದೂಡಿ ಎಂಬ ಸಮಜಾಯಿಷಿಯನ್ನು ಕೊಟ್ಟಿದ್ದರು. ಹೀಗಾಗಿ ದಲಿತ ಸಮಾವೇಶವನ್ನು ಮುಂದೂಡಲಾಗಿತ್ತು.

ಡಿ.ಕೆ.ಶಿ ಅಸಮಾಧಾನ

ಡಾ. ಜಿ. ಪರಮೇಶ್ವರ್‌ ಅವರು ಡಿ.ಕೆ. ಶಿವಕುಮಾರ್‌ ಅವರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಬೇರೆಯವರಿಗೆ ನೀಡಬೇಕೆಂಬ ಒತ್ತಾಯವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಡಿ.ಕೆ.ಶಿ. ಅವರನ್ನು ಅತಂತ್ರರಾಗಿ ಮಾಡಿ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಸಿಎಂ ಹುದ್ದೆ ಬದಲಾವಣೆ ಆದದ್ದೇ ಆದರೆ, ಪರಮೇಶ್ವರ್‌ ಅವರು ಸ್ವತಃ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಲು ಹೂಡಿದ ಯೋಜನೆ ಇದಾಗಿದೆ ಎಂಬುದು ಶಿವಕುಮಾರ್‌ ಅವರ ಅಸಹನೆಗೆ ಕಾರಣ ಎಂದು ಹೇಳಲಾಗಿದೆ. ಹಾಗಾಗಿ ಶೋಷಿತರ ಸಮಾವೇಶಕ್ಕೂ ಕಡಿವಾಣ ಹಾಕಲು ಅವರು ಶತಾಯಗತಾಯ ಪ್ರಯತ್ನ ಮಾಡಲಿದ್ದಾರೆ ಎನ್ನುತ್ತವೆ ಮೂಲಗಳು.


Tags:    

Similar News