ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ | ಮೆಡಿಕಲ್‌ ಮಾಫಿಯಾ ಸೂತ್ರಧಾರ ಯಾರು?

ತಾಯಂದಿರನ್ನು ಕೊಂದು ಹಾಸನದಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆರ್‌.ಅಶೋಕ್‌ ಕಿಡಿಕಾರಿದ್ದಾರೆ.;

Update: 2024-12-01 15:24 GMT

ಬಳ್ಳಾರಿ ಜಿಲ್ಲಾಸ್ಪತ್ರೆ (ವಿಮ್ಸ್‌) ಯಲ್ಲಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಮೆಡಿಕಲ್‌ ಮಾಫಿಯಾ ಕೈವಾಡವಿರುವ ಆರೋಪ ಕೇಳಿಬರುತ್ತಿದೆ. ಪಶ್ಚಿಮ ಬಂಗಾ ಫಾರ್ಮಾಸುಟಿಕಲ್‌ ಕಂಪೆನಿ ಸರಬರಾಜು ಮಾಡುವ ಐವಿ ರಿಂಗರ್‌ ಲ್ಯಾಕ್ಟಿಕ್‌ ದ್ರಾವಣ ಕಳಪೆ ಎಂಬುದಾಗಿ ಆರು ತಿಂಗಳ ಹಿಂದೆಯೇ ವರದಿ ಬಂದಿದ್ದರೂ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದರ ಯಾರ ಕೈವಾಡವಿತ್ತು ಎಂಬ ಪ್ರಶ್ನೆ ಈಗ ಎದುರಾಗಿದೆ.

ವರದಿ ಮುಚ್ಚಿಟ್ಟು ಐವಿ ದ್ರಾವಣ ಸರಬರಾಜಿಗೆ ಅನುಮತಿ ನೀಡಿದವರು ಯಾರೇ ಇದ್ದರೂ ಬಾಣಂತಿಯರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂಬ ಆಕ್ರೋಶ ವ್ಯಕ್ತವಾಗಿದೆ. ನಿಷೇಧಿತ ದ್ರಾವಣವನ್ನು ಬಾಣಂತಿಯರಿಗೆ ನೀಡಿದ ಪರಿಣಾಮ ಅಂಗಾಂಗ ವೈಫಲ್ಯವಾಗಿದೆ. ರಕ್ತದೊತ್ತಡ ಕ್ಷೀಣಿಸಿದೆ. ಬಾಣಂತಿಯರಿಗೆ ಸರ್ಕಾರ ಸಾವಿನ್ಯ ಭಾಗ್ಯ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯರಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ತಾಯಂದಿರನ್ನು ಕೊಂದು ಹಾಸನದಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಕಾರಿದ್ದಾರೆ.

25 ಲಕ್ಷ ಪರಿಹಾರಕ್ಕೆ ಒತ್ತಾಯ

ಮೃತ ತಾಯಂದಿರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು ಎಂದು ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ. ಸರ್ಕಾರ ಮೃತ ಬಾಣಂತಿಯರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ತಾಯಂದಿರ ಜೀವಗಳಿಗೆ ಸರ್ಕಾರ 2 ಲಕ್ಷ ಬೆಲೆ ಕಟ್ಟಿದೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ತಾಯಂದಿರು ಹೆರಿಗೆ ನಂತರ ಮೃತರಾಗಿದ್ದಾರೆ. ಇದರಿಂದ ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಮೆಡಿಕಲ್‌ ಮಾಫಿಯಾ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಇಲ್ಲವಾದರೆ ನಾವೇ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದಿನ ಡ್ರಗ್ ಕಂಟ್ರೋಲ‌ರ್ ಆರು ತಿಂಗಳ ಹಿಂದೆಯೇ ರಿಂಗರ್‌ ಲ್ಯಾಕ್ಟಿಕ್‌ ಐವಿ ದ್ರಾವಣ ಖರೀದಿಸದಂತೆ ಸರ್ಕಾರಕ್ಕೆ ತಿಳಿಸಿದ್ದರು. ಆದರೂ ಈ ದ್ರಾವಣ ಆಸ್ಪತ್ರೆಗಳಿಗೆ ಸರಬರಾಜಾಗಿದೆ. ಇದರ ಹಿಂದೆ ಬಲಾಡ್ಯರ ಕೈವಾಡ ಇರುವುದು ತಿಳಿಯುತ್ತದೆ. ಪಶ್ಚಿಮ ಬಂಗಾ ಫಾರ್ಮಾಸುಟಿಕಲ್‌ ಕಂಪನಿಯ ಅನ್ಸಾರಿ ಎಂಬುವರು ಇಲ್ಲಿ ಪ್ರಭಾವ ಬೀರಿದ್ದೇಗೆ?, ಈತನನ್ನು ಬಂಧಿಸಿದರೆ ಮಾಫಿಯಾ ಹಿಂದಿರುವವರನ್ನು ಪತ್ತೆ ಮಾಡಬಹುದು ಎಂದಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿ ನುಣುಚಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವರು ಕೂಡ ರಾಜೀನಾಮೆ ನೀಡಬೇಕು ಎಂದು ಅಶೋಕ್‌ ಒತ್ತಾಯಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳಾದ ಚಿದಾನಂದ ವಟಾರೆ, ರಘುನಂದನ್, ನಂದಿನಿ, ಶೈಲಾವತಿ 97 ಐವಿ ದ್ರಾವಣದ ಬ್ಯಾಚ್‌ಗಳಲ್ಲಿ 23 ಬ್ಯಾಚ್‌ಗಳು ಕಳಪೆ ಎಂದು ವರದಿ ನೀಡಿದ್ದಾರೆ.

ಔಷಧಿಯಲ್ಲಿ ಶೇ.1 ರಷ್ಟು ಕಳಪೆ ಇದ್ದರೂ ಅದು ರೋಗಿಗಳಿಗೆ ಅಪಾಯ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಳಪೆ ಔಷಧ ಇದ್ದರೂ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಸರ್ಕಾರವೇ ಇದೆ. ಈ ಸಾವುಗಳಿಗೆ ಯಾರು ನ್ಯಾಯ ಕೊಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.

Tags:    

Similar News