WOMEN'S DAY SPECIAL | ದೌರ್ಬಲ್ಯ ಇರೋದು ನಮ್ಮ ಮನಸ್ಸಿಗೆ, ದೇಹಕ್ಕಲ್ಲ; ಡಾ.ಧರಣಿದೇವಿ ಮಾಲಗತ್ತಿ

ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ ಮತ್ತು ಲೇಖಕಿ ಡಾ ಧರಣಿದೇವಿ ಮಾಲಗತ್ತಿ ಅವರೊಂದಿಗೆ ʼದ ಫೆಡರಲ್‌ ಕರ್ನಾಟಕʼ ನಡೆಸಿದ ಸಂವಾದ ಇಲ್ಲಿದೆ.

Update: 2024-03-08 09:24 GMT
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿದೇವಿ
Click the Play button to listen to article

ಜಗತ್ತಿನಾದ್ಯಂತ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷದ ವಿಶ್ವಸಂಸ್ಥೆಯ ಧ್ಯೇಯವಾಕ್ಯ ‘ Invest in Women: Accelerate Progress’ ಎಂಬುದಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ದ.ಫೆಡರಲ್ ಕರ್ನಾಟಕ ಮಹಿಳಾಪರ ಸಾಹಿತಿ, ಕವಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಯಾಗಿರುವ, ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿರುವ ಡಾ.ಧರಣಿದೇವಿ ಅವರೊಂದಿಗೆ ನಡೆಸಿದ ಸಂವಾದ ಇಲ್ಲಿದೆ…

ಪೊಲೀಸ್ ಆಗಿ ನೀವು ಶಿಸ್ತಿನ ಅಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆ ಶಿಸ್ತನ್ನು ಹೇಗೆ ಅಳವಡಿಕೆ ಮಾಡಿಕೊಂಡಿದ್ದೀರಿ?

ಶಿಸ್ತು ವ್ಯಕ್ತಿಗತವಾಗಿ ಬರಬೇಕು. ಪೊಲೀಸ್ ಇಲಾಖೆಯಲ್ಲಿ ಎರಡು ವರ್ಷಗಳ ಕಾಲ ಡಿಸಿಪ್ಲೀನ್ ಬಗ್ಗೆ ತರಬೇತಿ ಕೊಡ್ತಾರೆ. ನಡಿಗೆ, ಡ್ರೆಸ್ಸಿಂಗ್‌ ಸೆನ್ಸ್‌ ನಿಂದ ಹಿಡಿದು ಹಿರಿಯ ಅಧಿಕಾರಿಗಳಿಗೆ ಲೆಟರ್ ಹೇಗೆ ಕೊಡಬೇಕು ಎಂಬುವುದನ್ನು ಕೂಡ ತರಬೇತಿ ಕೊಡ್ತಾರೆ. ಅಂತಹ ತರಬೇತಿ ಯಾವ ಡಿಪಾರ್ಟ್‌ಮೆಂಟ್‌ನಲ್ಲೂ ಇಲ್ಲ. ಹಾಗೆ ನಾವು ಶಿಸ್ತನ್ನು ದಿಢೀರನೇ ತರಲು ಸಾಧ್ಯವಿಲ್ಲ. ಅದು ಅಂತರಾಳದಿಂದ ಬರಬೇಕು. ನಾವು ಹೊರಗಡೆ ಹೇಗೆ ನಮ್ಮನ್ನು ಪ್ರದರ್ಶಿಸುತ್ತೇವೆಯೋ ಅದೇ ಶಿಸ್ತು ನಮ್ಮ ಒಳಗೆ ಕೂಡ ಇರುತ್ತದೆ.

ನಾವು ಕೆಲಸ ಮಾಡುವ ಸಂಸ್ಥೆ, ವೃತ್ತಿಯ ಬಗ್ಗೆ ಗೌರವವಿರಬೇಕು. ನಾವು ನಮ್ಮ ಕೆಲಸವನ್ನು ಪ್ರೀತಿಯಿಂದ ಸರಿಯಾದ ಸಮಯ, ಸರಿಯಾದ ಸ್ಥಳದಲ್ಲಿ ಮಾಡಿದರೆ ಶಿಸ್ತು ತನ್ನಿಂದ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.

ಮಹಿಳಾ ಪೊಲೀಸ್ ಅಧಿಕಾರಿಯಾಗಿ ನೀವು ಎದುರಿಸಿದ ಕಠಿಣ ಸವಾಲು, ಅಥವಾ ಪ್ರಕರಣಗಳ ಬಗ್ಗೆ ಹೇಳಿ..

ಕೆಲಸದ ಸಮಯದಲ್ಲಿ ಅಂತಹ ಚಾಲೆಂಜ್‌ಗಳೇನಿರಲಿಲ್ಲ. ಆದರೆ ನಾನು ಟ್ರೈನಿಂಗ್‌ಗೆ ಸೇರಿಕೊಳ್ಳುವಾಗ ಕೆಲವರು ಸಾರ್ವಜನಿಕರು ಧೈರ್ಯ ಕುಂದಿಸುವ ಕೆಲಸ ಮಾಡಿದ್ರು. ನಾನು ಟ್ರೈನಿಂಗ್ ಸೇರಿಕೊಳ್ಳುವಾಗ ನಾನು ಎರಡು ಮಕ್ಕಳ ತಾಯಿ. ಈ ಪೊಲೀಸ್ ಟ್ರೈನಿಂಗ್ ಬಹಳ ಕಷ್ಟವಿರುತ್ತದೆ, ಹೇಗೆ ಮಾಡುತ್ತೀರಾ? ಗಂಡಸರಿಗೆ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ನನಗೆ ಸೀಸರಿನ್ ಡೆಲಿವರಿ ಆಗಿತ್ತು. ಹಾಗಾಗಿ ಸ್ವಿಮಿಂಗ್, ಹಾರ್ಸ್ ರೈಡಿಂಗ್‌ ಕಷ್ಟ ಆಗುತ್ತದೆ. ಇದೆಲ್ಲ ಹೇಗೆ ಮಾಡ್ತೀರಾ ಎನ್ನುವ ಮಾತುಗಳು ಕೇಳಿ ಬಂತು. ಆದ್ರೆ ನಾವು ಒಂದು ಅಗತ್ಯವಾಗಿ ತಿಳ್ಕೊಬೇಕು; ಏನಂದ್ರೆ ದೌರ್ಬಲ್ಯ ಇರೋದು ನಮ್ಮ ಮನಸ್ಸಿನಲ್ಲಿಯೇ ಹೊರತು ದೇಹಕ್ಕಲ್ಲ. ನಮ್ಮ ಮನಸ್ಸು ದೃಢವಾಗಿದ್ರೆ ದೇಹ ಮನಸ್ಸಿನ ಮಾತು ಕೇಳುತ್ತದೆ. ಮನಸ್ಸಲ್ಲಿ ಪುಕ್ಕುಲುತನ ಇದ್ರೆ ಏನು ಮಾಡಲು ಸಾಧ್ಯವಿಲ್ಲ. ನಾನು ಮನಸ್ಸು ಧೃಡಮಾಡಿಕೊಂಡೆ. ಹಾಗಾಗಿ ನನಗೆ ಇದೆಲ್ಲ ಕಷ್ಟ ಅಂತ ಅನಿಸಲಿಲ್ಲ. ನನ್ನ 38ನೇ ವರ್ಷದಲ್ಲಿ ಎಲ್ಲಾ ತರಬೇತಿಗಳನ್ನು ಸಲೀಸಾಗಿ ನಿಭಾಯಿಸಿದೆ. ನನಗೆ ಅದು ಕಷ್ಟ ಎಂದೇ ಅನಿಸಲಿಲ್ಲ.

ಪುರುಷ ಪಾರುಪತ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆ ಎಂಬ ಕಾರಣಕ್ಕೆ ನೀವು ಒತ್ತಡ ಎದುರಿಸಿದ್ದು ಇದೆಯಾ?

ನನ್ನ ಪ್ರಕಾರ ಮಹಿಳೆಯರು ಎನ್ನುವ ಕಾರಣಕ್ಕೆ ರಿಯಾಯಿತಿ ಕೊಡುವುದು ಕೂಡ ತಪ್ಪು. ಏಕೆಂದರೆ ನಾವೆಲ್ಲ ಸಮಾನರು ಎಂದಾದ ಮೇಲೆ ಅವಳು ಪಾಪ ಮಹಿಳೆ ಇರಲಿ ಎಂಬ ರಿಯಾಯಿತಿ ಯಾಕೆ ಬೇಕು? ಮಹಿಳೆಯರು ತಮಗೆ ಬೇಕಾದ ಪೋಸ್ಟಿಗೆ ಹಠ, ಬೆನ್ನೆತ್ತಿ ಹೋದ್ರೆ ಅದು ಸಿಗಬಹುದೋ ಏನೋ. ಆದ್ರೆ ಮಹಿಳೆ ತನಗೆ ಬೇಕಾದನ್ನು ಕೇಳದೇ ಇರುವುದು ಕೂಡ ಆಕೆಯ ಸ್ವಭಾವ. ಇದು ವ್ಯವಸ್ಥೆಯ ದೋಷವಲ್ಲ. ನಮ್ಮ ಸಾಮಾಜಿಕ ಗೃಹಿಕೆಯೇ ಕಾರಣ. ನನ್ನ ಕೆಲಸದ ಅವಧಿಯಲ್ಲಿ ನನಗೆ ಯಾವ ರೀತಿಯ ಪುರುಷ ದಬ್ಬಾಳಿಕೆ, ಒತ್ತಡ ಏನೂ ಸಮಸ್ಯೆ ಉಂಟಾಗಲಿಲ್ಲ.

ಸ್ತ್ರೀ ಸ್ವಾತಂತ್ರ್ಯ ಎಂಬುದು ಇಂದು ಸಾಕಾರವಾಗಿದೆ ಎಂದು ಅನಿಸುತ್ತದೆಯೇ? ನಿಮ್ಮ ಅಭಿಪ್ರಾಯವೇನು?

ಸ್ವಾತಂತ್ರ್ಯ ಎಂದರೇನು? ಸ್ವಾತಂತ್ರ್ಯ ನಮ್ಮ ಮನಸ್ಸಿನೊಳಗೆ ಇರಬೇಕು. ಮಹಿಳೆಯರು ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ನಿರ್ಧಾರಗಳನ್ನು ಬೇರೆಯವರು ತೆಗೆದುಕೊಂಡಾಗ, ನಮ್ಮ ನಿರ್ಧಾಗಳನ್ನು ತಡೆದು ಪ್ರಶ್ನಿಸಿದರೆ ಅಲ್ಲಿ ಪರತಂತ್ರ ಇದೆ ಅಂತ ಅರ್ಥ.

ನಮ್ಮೊಳಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಲು ಯಾವುದು ನಮ್ಮನ್ನು ತಡೆದಿದೆ ಎನ್ನುವುದು ಪ್ರಶ್ನೆ. ಆಂತರಿಕ ಸ್ವಾತಂತ್ಯದ ಕೊರತೆ ಇದ್ರೆ ನಾವು ಅದನ್ನು ನಾವೇ ಬಗೆಹರಿಸಿಕೊಳ್ಳಬೇಕು. ಇನ್ನು ಬಾಹ್ಯ ಸ್ವಾತಂತ್ರ್ಯ ಅಂದ್ರೆ ಕುಟುಂಬದಿಂದ ಬರುವ ವಿರೋಧ, ಸಾಮಾಜಿಕ ಗ್ರಹಿಕೆಯಿಂದ ಬರುವ ಟೀಕೆ ಇವುಗಳು ನಮಗೆ ಹಿಂಸೆಯಾದ್ರೆ ನಮ್ಮಲ್ಲಿ ಏನೋ ಕೊರತೆ ಇದೆ ಎಂದರ್ಥ. ಅವುಗಳನ್ನು ಅವುಗಳ ಪಾಡಿಗೆ ಏನು ಬೇಕಾದರೂ ಮಾಡಲಿ ಎಂದು ಬಿಟ್ಟು ಬಿಡಬೇಕು.

ಇನ್ನೊಂದು; ಸ್ವಾತಂತ್ರ್ಯ ಯಾರಿಗೂ ಪರಿಪೂರ್ಣವಾಗಿ ಬರುವುದಿಲ್ಲ. ಸಂವಿಧಾನದಲ್ಲೇ ಹೇಳುವಂತೆ ಪ್ರೀಡಂ, ವಿಥ್ ರೀಸನೇಬಬ್ ರಿಸ್ಟ್ರಿಕ್ಷನ್ ಅಂದ್ರೆ ಸ್ವಾತಂತ್ರ್ಯ ಇದೆ. ಆದ್ರೆ ಅಲ್ಲಿ ಸಂವಿದಾನಾತ್ಮಕ ನಿರ್ಬಂಧಗಳೂ ಇವೆ. ಕಾನೂನಾತ್ಮಕವಾಗಿ ನಿರ್ಬಂಧಗಳಿವೆ. ನಮಗೆ ಮನಸ್ಸಿಗೆ ಬಂದಂತೆ ಮಾಡುವುದು, ಎಲ್ಲೋ ಹೋಗುವುದು, ಏನೋ ಮಾಡುವುದು ಸ್ವಾತಂತ್ರ್ಯವಲ್ಲ. ಆದರೆ ಸಾಮಾಜಿಕ ನಿರ್ಬಂಧಗಳನ್ನು ಹೆಣ್ಣಿನ ಮೇಲೆ ಹೇರುವುದು ತಪ್ಪು.

ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ರೆ ಇಲ್ಲೊಂದು ಪ್ರಶ್ನೆ ಬರುತ್ತದೆ. ಮಹಿಳಾ ಹಕ್ಕು ಮತ್ತು ಮಹಿಳ ಸುರಕ್ಷತೆ ಎರಡಕ್ಕೂ ವಿಲೋಮ ಸಂಬಂಧ ಇವೆ. ಮಹಿಳೆಯರು ಸರಕ್ಷತೆಗೆ ಆದ್ಯತೆ ನೀಡುವುದಾದದರೆ ಹಕ್ಕುಗಳನ್ನು ಬಿಟ್ಟುಕೊಡಬೇಕು. ರಾತ್ರಿ ಎಷ್ಟೊತ್ತಾದ್ರೂ ಹೊತ್ತು ಕೆಲಸ ಮಾಡ್ತೀನಿ, ಎಷ್ಟೇ ಹೊತ್ತಿಗಾದ್ರೂ ಮನೆಗೆ ಬರ್ತೀನಿ ಅನ್ನೋದಾದ್ರೆ ಸುರಕ್ಷತೆ ಕಡೆಗೂ ಗಮನ ಹರಿಸಬೇಕು. ಏನೂ ಹಲ್ಲೆ, ದಾಳಿ, ದಬ್ಬಾಳಿಕೆ, ಕಿರುಕುಳ ನಡೆಯಬಹುದು. ಗಂಡಿಗೆ ಆ ಪ್ರಶ್ನೆಯೇ ಬರುವುದಲ್ಲಿ. ಮಹಿಳೆಯರ ಸುರಕ್ಷತೆಗೆ ಭಾರತದಲ್ಲಿ ಕಾನೂನಿಗೇನೂ ಕಡಿಮೆಯಿಲ್ಲ. ಆದರೆ ಕಾನೂನನ್ನು ಅನುಷ್ಠಾನಗೊಳಿಸಬೇಕು. ಮಹಿಳೆಗೆ ಆಗುವ ತೊಂದರೆಗಳನ್ನು ಹೇಳಿಕೊಳ್ಳಲು ಆಕೆ ಮುಂದೆ ಬರಬೇಕು. ಆಕೆ ಮನಸ್ಸು ಮಾಡಬೇಕು. ಆಕೆಯ ಕುಟುಂಬ ಆಕೆಗೆ ಬೆಂಬಲು ಕೊಡಬೇಕು. ಸುತ್ತಮುತ್ತಲಿನವರು ಬೆಂಬಲ ಕೊಡಬೇಕು., ಕಾನೂನು ವ್ಯವಸ್ಥೆ ಕೂಡ ಬೆಂಬಲ ನೀಡಬೇಕು. ಈ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ನಮ್ಮಲ್ಲಿ ನಾವು ಸಂವೇದನಶೀಲತೆಯನ್ನು ಬೆಳಸಿಕೊಳ್ಳಬೇಕು.

ಉದ್ಯೋಗಸ್ತ ಮಹಿಳೆಯಾಗಿ ವೃತ್ತಿ ಮತ್ತು ಕುಟುಂಬವನ್ನು ಹೇಗೆ ನಿಭಾಯಿಸುತ್ತೀರಾ?

ಹೆಣ್ಣುಮಕ್ಕಳಿಗೆ ವೃತ್ತಿ ಮತ್ತು ಕುಟುಂಬ ಎರಡನ್ನು ನಿಭಾಯಿಸುವ ಗುರುತರದ ಜವಾಬ್ದಾರಿ ಇದೆ ಎಂದು ಸಮಾಜ ನಿರ್ಧರಿಸಿಬಿಟ್ಟಿದೆ. ಆದರೆ ವಾಸ್ತವದಲ್ಲಿ ಕೆಲವೊಮ್ಮೆ ಗಂಡ ಕೂಡ ನಿಭಾಯಿಸಬೇಕಾಗುತ್ತದೆ. ನಮ್ಮ ಕೆಲಸದ ವಿಚಾರಕ್ಕೆ ಬಂದ್ರೆ ಕೆಲಸದಲ್ಲಿ ವರ್ಗಾವಣೆ ಇದ್ದಾಗ ಸಮಸ್ಯೆ ಉಂಟಾಗುತ್ತದೆ. ಗಂಡ ಒಂದು ಕಡೆ, ಹೆಂಡತಿ ಒಂದು ಕಡೆ ಕೆಲಸ ಮಾಡಿದರೆ ಸರಿಯಾದ ಸಮಯ ಸಿಗುವುದಿಲ್ಲ. ಮಕ್ಕಳನ್ನು ಬಹಳ ಕೇರ್ ಮಾಡಬೇಕು. ಗಂಡ ಹೆಂಡತಿ ಇಬ್ಬರು ಶೇರ್ ಮಾಡಬೇಕು. ಅರ್ಥ ಮಾಡಿಕೊಳ್ಳುವ ಲೈಫ್ ಪಾಟ್ನರ್ ಇದ್ದರೆ ಇದು ಕಷ್ಟದ ವಿಷಯವೇ ಅಲ್ಲ. ಬಾಲೆಂನ್ಸ್ ಮಾಡಿಕೊಂಡು ಹೋಗಬಹುದು. ಕುಟುಂಬ ಸದಸ್ಯರ ನಡುವೆ ಸರಿಯಾದ ಬಾಲೆನ್ಸ್ ಬೇಕು. ಚಿಕ್ಕ ಮಕ್ಕಳು ಇದ್ದರೆ ಸಮಸ್ಯೆ ಅಷ್ಟೇ.

ಕನ್ನಡ ಸಾಹಿತ್ಯದ ನಿಮ್ಮ ಆಸಕ್ತಿಯ ಬಗ್ಗೆ ಹೇಳಿ..

ನನಗೆ ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ನನ್ನ ತಂದೆ ಕನ್ನಡ ಮೇಷ್ಟ್ರು. ಹಾಗಾಗಿ ಸಾಹಿತ್ಯದ ಸೆಳೆತ ನನ್ನಲ್ಲಿ ಬಂದಿತ್ತು. ಚಿಕ್ಕಂದಿನಿಂದಲೂ ಕವಿತೆಗಳನ್ನು ಬರೆಯುತ್ತಿದ್ದೆ. ನನಗೆ ನನ್ನ ಸಾಹಿತ್ಯದಲ್ಲಿ ಬಹಳಷ್ಟು ಸಂತೋಷ ನೀಡಿದ ಸಾಹಿತ್ಯ ಅಂದ್ರೆ ಅದು ನಾನು ಬರೆದ ʼಇಳಾ ಭಾರತಂʼ. ಈ ಕೃತಿ ಬರೆಯುವಾಗ ನನಗೆ 37 ವರ್ಷ. ಇದು ಅನುಭವದಿಂದ ಬಾಗಿದ ಕವಿತೆ. ಇದು ಮಹಿಳಾ ಸಂಬಂಧಿ ಕೃತಿ. ಭಾವಿನಿ ಷಪ್ಪದಿಯನ್ನು ಇಟ್ಟುಕೊಂಡು ಈ ಕೃತಿಯನ್ನು ಬರೆದಿದ್ದೇನೆ. ಮಹಿಳಾ ಪಾತ್ರಗಳ ಮೂಲಕ ಮಹಾಭಾರತದ ಕಥೆಯನ್ನು ಹೇಳಿದ್ದೇನೆ. ನಾನು ಆಯ್ಕೆ ಮಾಡಿರುವುದು ಅತ್ತೆ ಸೊಸೆಯ ಸಂಭಾಷಣೆಯ ರೀತಿಯಲ್ಲಿ ಈ ಕಥೆಯನ್ನು ಸತ್ಯವತಿ ಅಂಬಿಕೆ ಅಂಬಾಲಿಕೆ ವಾನಪ್ರಸ್ತಕ್ಕೆ ಹೋಗುವಾಗ ಚಂದ್ರವಂಶದ ಕಥೆಯನ್ನು ಹೇಳುವ ಕಥೆ ಇದಾಗಿದೆ. ಈ ಕಥೆಗಳಲ್ಲಿ ಆಧುನಿಕ ವಿಷಯಗಳು ಕೂಡ ಒಳಗೊಂಡಿವೆ. ಟ್ರಾನ್ಸ್‌ ಜೆಂಡರ್‌ಗಳ ಜೀವನದ ಕುರಿತು ಕೂಡ ವಿಷಯ ಈ ಕಾವ್ಯದಲ್ಲಿ ಪ್ರಸ್ತಾಪವಾಗಿದೆ.

ಈ ವರ್ಷದ ಮಹಿಳಾ ದಿನಾಚರಣೆಯ ವಿಶ್ವಸಂಸ್ಥೆಯ 2024 ರ ಧ್ಯೇಯವಾಕ್ಯ ಅಂದ್ರೆ ಇನ್‌ಸ್ಪೈರ್‌ ಅಂಡ್‌ ಇನ್ವೆಸ್ಟ್‌. ಅಂದರೆ ಮಹಿಳಾ ಒಳಗೊಳ್ಳುವಿಕೆಯ ಕಡೆಗೆ ಪ್ರಭಾವಿಸಿ ಎಂದು ನಾನು ಭಾವಿಸುತ್ತೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲಾ ಮಹಿಳೆಯರು ಪ್ರಭಾವಿಬೇಕು. ಇಲ್ಲಿ ಗಂಡು ಹೆಣ್ಣು ಎನ್ನುವ ಸ್ಪರ್ಧೆ ಇರುವುದಿಲ್ಲ. ಆದ್ರೆ ಮಹಿಳೆಯರು ತಮ್ಮತನವನ್ನು ಬಿಟ್ಟುಕೊಡದೆ ವ್ಯಕ್ತಿಗಳಾಗಿ ಸಾಧನೆ ಮಾಡಬೇಕು. ಗಂಡು ಹೆಣ್ಣು ಎಂಬುವುದು ಹೊರಾವರಣಕ್ಕೆ ಅಷ್ಟೇ. ನಮ್ಮ ವ್ಯಕ್ತಿತ್ವ ಗೌರವಿಸಿ, ಪರಸ್ಪರ ವ್ಯಕ್ತಿತ್ವಕ್ಕೂ ಗೌರವ ನೀಡಬೇಕು.

Tags:    

Similar News