ನಾವು ಆರ್‌ಎಸ್‌ಎಸ್ ನಿಷೇಧಿಸಿಲ್ಲ; ಶೆಟ್ಟರ್ ಆದೇಶವನ್ನೇ ಜಾರಿ ಮಾಡಿದ್ದೇವೆ: ಸಿದ್ದರಾಮಯ್ಯ
ನಮ್ಮ ಆದೇಶದಲ್ಲಿ 'ಯಾವುದೇ ಸಂಘ ಅಥವಾ ಸಂಸ್ಥೆ' ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, 2013ರಲ್ಲಿ ಇದೇ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.
"ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳು ಕಾರ್ಯಕ್ರಮ ನಡೆಸಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂದು ನಾವು ಹೊರಡಿಸಿರುವ ಆದೇಶದಲ್ಲಿ 'ಆರ್‌ಎಸ್‌ಎಸ್' ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ನಾವು ಆರ್‌ಎಸ್‌ಎಸ್ ಅನ್ನು ನಿಷೇಧಿಸಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಆದೇಶವು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಶೆಟ್ಟರ್ ಸರ್ಕಾರದ ಆದೇಶವನ್ನೇ ಪುನರುಚ್ಚರಿಸಿದ್ದೇವೆ
"ನಮ್ಮ ಆದೇಶದಲ್ಲಿ 'ಯಾವುದೇ ಸಂಘ ಅಥವಾ ಸಂಸ್ಥೆ' ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, 2013ರಲ್ಲಿ ಇದೇ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು. ನಾವು ಕೇವಲ ಆ ಆದೇಶವನ್ನೇ ಪುನರುಚ್ಚರಿಸಿದ್ದೇವೆ. ಆಗ ಅವರು ಮಾಡಬಹುದು, ಈಗ ನಾವು ಮಾಡಿದರೆ ತಪ್ಪೇ?" ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
"ಜಗದೀಶ್ ಶೆಟ್ಟರ್ ಅವರು ಈಗ, 'ಅದು ಶಿಕ್ಷಣ ಇಲಾಖೆ ಮಾಡಿದ್ದು, ನಾನಲ್ಲ' ಎನ್ನುತ್ತಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಈ ಆದೇಶ ಹೊರಡಿಸಲಾಗಿದೆ," ಎಂದು ಸಿದ್ದರಾಮಯ್ಯ ನೆನಪಿಸಿದರು.
ಅನುಮತಿ ನೀಡುವುದು ಕಡ್ಡಾಯವಲ್ಲ
ಸಂಘ-ಸಂಸ್ಥೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದರ ಕುರಿತು ಮಾತನಾಡಿದ ಸಿಎಂ, "ಅನುಮತಿ ಕೊಡಲೇಬೇಕು ಎಂದೇನೂ ಇಲ್ಲ. ಸ್ಥಳೀಯವಾಗಿ ಶಾಂತಿ ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಆಧರಿಸಿ, ಅನುಮತಿ ನೀಡುವುದು ಅಥವಾ ನಿರಾಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ," ಎಂದು ಸ್ಪಷ್ಟಪಡಿಸಿದರು.
ವಿವಾದದ ಹಿನ್ನೆಲೆ
ಇತ್ತೀಚೆಗೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಸರ್ಕಾರಿ ಶಾಲೆ, ಕಾಲೇಜು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಖಾಸಗಿ ಸಂಘ-ಸಂಸ್ಥೆಗಳು ಚಟುವಟಿಕೆ ನಡೆಸಬೇಕಾದರೆ, ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.