
ನೋಂದಣಿ ಆಗದ ಆರ್‌ಎಸ್‌ಎಸ್ ಭೂಗತ ಸಂಘಟನೆ ಅಲ್ಲವೇ; ಬಿ.ಕೆ. ಹರಿಪ್ರಸಾದ್ ಪ್ರಶ್ನೆ
“ದೇಶದ ಜನರಲ್ಲಿ ಆತ್ಮವಿಶ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನ. ದೊಣ್ಣೆ ಹಿಡಿದು ಪಥಸಂಚಲನದ ದ್ವೇಷದ ಬೀದಿಯಲ್ಲಿ ಸಾಗಿದರೆ, ಪ್ರೀತಿ ಹುಟ್ಟವುದಾದರೂ ಹೇಗೆ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಶಾಖೆ, ಬೈಠಕ್ ಸೇರಿ ಎಲ್ಲಾ ಬಗೆಯ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ ಮಾಡಿರುವ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.
ಆರ್‌ಎಸ್‌ಎಸ್ ಪಥ ಸಂಚಲನದ ಉದ್ದೇಶ ಪ್ರಶ್ನಿಸಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, “ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ ಬಿ.ಎಲ್. ಸಂತೋಷ ಅವರೇ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹರಿಹಾಯ್ದಿದ್ದಾರೆ.
“ದೇಶದ ಜನರಲ್ಲಿ ಆತ್ಮವಿಶ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನ. ದೊಣ್ಣೆ ಹಿಡಿದು ಪಥಸಂಚಲನದ ದ್ವೇಷದ ಬೀದಿಯಲ್ಲಿ ಸಾಗಿದರೆ, ಪ್ರೀತಿ ಹುಟ್ಟವುದಾದರೂ ಹೇಗೆ?, ದೊಣ್ಣೆ, ಲಾಠಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪಥಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
“ಆರ್‌ಎಸ್‌ಎಸ್ 'ಪೇಯ್ಡ್' ಸಂಘಟನೆಯಲ್ಲ ಎಂದಾದರೆ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು?, ಸಮಾಜ ಸೇವೆ ಮಾಡಲು ಆರ್‌ಎಸ್‌ಎಸ್ ಸರ್ಕಾರಿ ಸಂಸ್ಥೆಯೂ ಅಲ್ಲ, ಸರ್ಕಾರೇತರ ಸಂಸ್ಥೆಯೂ ಅಲ್ಲ. ಕನಿಷ್ಟ ನೊಂದಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ?, ವಿದೇಶದಿಂದ ಆರ್‌ಎಸ್‌ಎಸ್‌ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿ ಅಲ್ಲವೇ ಎನ್‌ಜಿಒಗಳಿಗೆ ವಿದೇಶಿ ಫಂಡ್ ಬರುವುದನ್ನು ನಿಲ್ಲಿಸಿರುವುದು' ಎಂದು ಪ್ರಶ್ನಿಸಿದ್ದಾರೆ.
'ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು?, ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ?, ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಸಂಘಕ್ಕೆ ಉಳಿಗಾಲವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅ. 4ರಂದು ಪತ್ರ ಬರೆದಿದ್ದರು. ಅದರಂತೆ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ, ಅನುದಾನಿತ ಶಾಲಾ ಕಾಲೇಜು, ದೇವಸ್ಥಾನ ಆವರಣಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಅನುಮತಿ ಇಲ್ಲದೇ ಸಭೆ, ಸಮಾರಂಭ ಮಾಡಬಾರದು ಎಂದು ನಿರ್ಣಯ ಕೈಗೊಳ್ಳಲಾಗಿತ್ತು.
ಭಾನುವಾರ ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸಿದ್ಧತೆ ನಡೆದಿತ್ತು. ಆದರೆ, ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು. ತಹಶೀಲ್ದಾರ್ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ, ಪಥ ಸಂಚಲನಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.