
ಸಚಿವ ಪ್ರಿಯಾಂಕ್ ಖರ್ಗೆ
ಪಥಸಂಚಲಕ್ಕೆ ಆರ್‌ಎಸ್‌ಎಸ್ ಅರ್ಜಿ ಸಲ್ಲಿಸಲಿ, ಅನುಮತಿಗೆ ಹಸ್ತಕ್ಷೇಪವಿಲ್ಲ: ಸಚಿವ ಖರ್ಗೆ ಸ್ಪಷ್ಟನೆ
ಬಿಜೆಪಿಯವರು ಬಿಹಾರ ಚುನಾವಣೆಗೆ ಕಪ್ಪ ನೀಡಿದ್ದಾರೆ ಎಂದು ನಮ್ಮ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬಂತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಹೈ ಕೋರ್ಟ್ ತೀರ್ಪಿನಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಹೊಸದಾಗಿ ಅರ್ಜಿ ಸಲ್ಲಿಸಲಿ, ಅನುಮತಿ ಕುರಿತು ಜಿಲ್ಲಾಡಳಿತ ತೀರ್ಮಾನ ಮಾಡಲಿದ್ದು ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಕಲಬುರಗಿಗೆ ಸ್ವಾಗತ. ಮೊದಲು ಅವರು ಅರ್ಜಿ ಹಾಕಬೇಕು ಅಲ್ಲವೇ ? ನಾನು ಅರ್ಜಿ ಹಾಕಲ್ಲ, ಪರವಾನಗಿ ತೆಗೆದುಕೊಳ್ಳಲ್ಲ ಎಂದರೆ ಹೇಗೆ ? ಎಲ್ಲರಿಗೂ ಒಂದೇ ಕಾನೂನು ಇರೋದು. ನಾನು ಯಾರಿಗೂ ಒತ್ತಡ ಹೇರುವುದಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿ ಸಿಎಂ ಆಗಲು ಕಪ್ಪ ಕೊಡಬೇಕು ಎಂದು ಹೇಳಿದ್ದರು. ಆಗ ಹೈಕಮಾಂಡ್‌ಗೆ ಹಣ ತಲುಪಿಸಿರಲಿಲ್ಲ ಎಂಬ ಕಾರಣಕ್ಕೆ ಮೂವರನ್ನು ಸಿಎಂ ಮಾಡಲಾಯಿತು. ಆದರೆ ಇದೀಗ ಬಿಜೆಪಿಯವರು ಬಿಹಾರ ಚುನಾವಣೆಗೆ ಕಪ್ಪ ನೀಡಿದ್ದಾರೆ ಎಂದು ನಮ್ಮ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕುರ್ಚಿಗಾಗಿ ಹೆಚ್‌ಡಿಕೆ ಕೇಸರಿಕರಣ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರ್‌ಎಸ್‌ಎಸ್ ಬಗ್ಗೆ ಈ ಹಿಂದೆಯೇ ಹಲವು ಭಾರಿ ಏನು ಹೇಳಿದ್ದರು ಎಂದು ನೋಡಲಿ. ದೇಶದಲ್ಲಿ ಆರ್‌ಎಸ್‌ಎಸ್ ನಿಂದ ಏನು ಆಗುತ್ತಿದೆ ಎಂದು ಹೇಳಿದ್ದರು. ಈಗ ಸಿದ್ಧಾಂತ ಬದಲಿಸಿ ಕುರ್ಚಿಗಾಗಿ ಅವರ ಜೊತೆ ಸೇರಿಕೊಂಡಿದ್ದಾರೆ. ನಾನು ಸಿಎಂ ಆಗಿದ್ದಾಗ ಹೊರಡಿಸಿದ್ದ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್ ಪ್ರಸ್ತಾಪಿಸಿಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಾಲಿಶ ಹೇಲಿಕೆ ನೀಡಿದ್ದಾರೆ. ಇದೀಗ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಆರ್‌ಎಸ್‌ಎಸ್‌ಗೆ ನಿರ್ಬಂಧ ಎಂದು ಎಲ್ಲೂ ಹೇಳಿಲ್ಲವಲ್ಲ, ಅವರು ಹೊರಡಿಸಿದ್ದ ಆದೇಶವನ್ನೇ ನಾವು ಮಾಡಿರೋದು ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಕಾನೂನು ಅಳವಡಿಕೆ ಸಾಧ್ಯವಿಲ್ಲ
ನಮ್ಮದು ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಕಾನೂನು ತಿದ್ದುಪಡಿ ತಂದಿದ್ದಾರೆ. ಆದರೆ ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ. ನಾನು ಎಲ್ಲವನ್ನೂ ನೋಡಿಯೇ ಪತ್ರ ಬರೆದಿರುವುದು ಎಂದು ತಿಳಿಸಿದರು.
ವೈಯಕ್ತಿಕ ತೇಜೋವಧೆ
ಕಳೆದ ಒಂದು ವಾರದಿಂದ ನನ್ನ ಬಗ್ಗೆ, ನನ್ನ ತಮ್ಮನ ಆರೋಗ್ಯ ಮತ್ತು ಕುಟುಂಬದ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ನಾನು ಕೇಳಿದ ಒಂದು ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದಾರಾ ? ಸಾವರ್ಕರ್‌ಗೆ ಯಾರು ʼವೀರ್ʼ ಎಂದು ಬಿರುದು ಕೊಟ್ಟಿದ್ದು, ರಾಷ್ಟ್ರಧ್ವಜ ಏಕೆ ಹಾರಿಸಿಲ್ಲಾ ಎಂದು ಕೇಳಿದ್ದೆ, ಇದಕ್ಕೆ ಅವರು ಇನ್ನೂ ಉತ್ತರವನ್ನೇ ಕೊಟ್ಟಿಲ್ಲಾ. ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ ನಿಂತು ದೊಡ್ಡ ಸಂಘಟನೆ ಮತ್ತೊಂದು ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಸಂಘಟನೆಗೆ ನೂರು ವರ್ಷವಾಗಿದ್ದು, ನಾಣ್ಯ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.