ನ್ಯಾ.ನಾಗಮೋಹನ್ ದಾಸ್ ವರದಿ ಅನುಷ್ಠಾನವಾದರೆ ಹೋರಾಟ : ಬಲಗೈ ಸಮುದಾಯ ಎಚ್ಚರಿಕೆ
ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಿದರೆ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆಗೆ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಎಚ್ಚರಿಕೆ;
ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಅಂಗೀಕಾರಕ್ಕೆ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಿದರೆ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಒಕ್ಕೂಟದ ಅಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ, ರಾಜ್ಯ ಸಂಚಾಲಕ ಸಿದ್ದಯ್ಯ ನೇತೃತ್ವದಲ್ಲಿ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು ಮತ್ತು ಬಲಗೈ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶೇ.7ರಷ್ಟು ಒಳಮೀಸಲಾತಿ ನೀಡಬೇಕು ಎಂಬ ಹಕ್ಕೊತ್ತಾಯ ಮಾಡಲಾಯಿತು.
ಆದಿ ಕರ್ನಾಟಕ, ಆದಿದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳಲ್ಲ. ಇವುಗಳು ಜಾತಿಗಳ ಗುಂಪುಗಳಾಗಿದ್ದು, ಎಡ-ಬಲ ಸಮುದಾಯದ ಜನಸಂಖ್ಯೆಯನ್ನು ಗುರುತಿಸುವ ಬದಲು ಆಯೋಗವು ಜಾತಿಗಳೇ ಅಲ್ಲದ ಗುಂಪಿಗೆ ಶೇ.1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ. ಎಲ್ಲರೂ ಬಲಗೈ ಸಮುದಾಯಕ್ಕೆ ಸೇರಿದ್ದು, ಪ್ರತ್ಯೇಕ ಮೀಸಲಾತಿ ನೀಡಿರುವುದರಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸಲು ಆಯೋಗವು ದುರುದ್ದೇಶ ಪೂರ್ವಕವಾಗಿ ಮೀಸಲಾತಿಯನ್ನು ನಿಗದಿಪಡಿಸಿದೆ. ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾದಿಗೆ ಸಮುದಾಯದ ಜನಸಂಖ್ಯೆಗೆ ಬಲಗೈ ಸಮುದಾಯದ ಜನಸಂಖ್ಯೆಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಗಣತಿದಾರರ ಬದಲು ಕುಟುಂಬದ ಸದಸ್ಯರು ಇತರರು ತರಬೇತಿ ಇಲ್ಲದೆಯೇ ಗಣತಿ ಕೈಗೊಂಡ ಕಾರಣ ಮತ್ತು ರೇಷನ್ ಕಾರ್ಡ್‌ನಲ್ಲಿ ಹೆಸರಿಲ್ಲದವರನ್ನು ಆಧಾರ್‌ಕಾರ್ಡ್‌ನಲ್ಲಿ 8 ಲಕ್ಷ ಸರ್ವೇ ಆಗುವವರೆವಿಗೂ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಕ್ಕಳು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಆಯೋಗವು ತಾನೇ ಘೋಷಿಸದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಬೂತ್‌ಗಳನ್ನು ತೆರೆಯದ ಕಾರಣ ಸಮೀಕ್ಷೆಯು ಎಲ್ಲಾ ಕುಟುಂಬಗಳನ್ನು ಒಳಗೊಂಡಿರುವುದಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಪರಿಶಿಷ್ಟ ಜಾತಿಯ ಸಂಖ್ಯೆಯನ್ನು 1.42 ಕೋಟಿಯ ಬದಲು 1.16 ಕೋಟಿಗಳಿಗೆ ಮಿತಿಗೊಳಿಸಿಕೊಂಡಿದ್ದಾರೆ. ಆಯೋಗವು ಕೇವಲ 1.05 ಕೋಟಿಗಳ ಜನಸಂಖ್ಯೆಯನ್ನು ಮಾತ್ರ ಸಮೀಕ್ಷೆ ಮಾಡಲಾಗಿದೆ. ಇದರಿಂದ ಸುಮಾರು 40 ಲಕ್ಷ ಜನರು ಸಮೀಕ್ಷೆಯಿಂದ ಹೊರಗುಳಿದಿರುವುದರಿಂದ ಸಮೀಕ್ಷೆಯು ಅಪೂರ್ಣವಾಗಿದೆ ಎಂದು ತಿಳಿಸಿದ್ದಾರೆ.
ನ್ಯಾ.ನಾಗಮೋಹನ್ ದಾಸ್ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವು ಬಲಗೈ ಸಮುದಾಯದ ಬಗ್ಗೆ ದ್ವೇಷಪೂರಿತ ಭಾವನೆಯನ್ನು ಹೊಂದಿದ್ದು, ಇವರು ಭಾಗವಹಿಸಿದ್ದ ಹಲವಾರು ಸಭೆಗಳಲ್ಲಿ ಪೂರ್ವಗ್ರಹ ಪೀಡಿತರಾಗಿ ಆರಂಭದಿಂದಲೂ ಬಲಗೈ ಸಮುದಾಯದ ವಿರುದ್ಧವಾಗಿ ಹಿಂದಿನಿಂದ ಲಾಭ ಪಡೆದವರು ತ್ಯಾಗ ಮಾಡಬೇಕು ಮತ್ತು ಬಲಗೈ ಸಮುದಾಯಕ್ಕೆ ಒಂದು ಚಮಚ ಕಡಿಮೆ ಕೊಡುತ್ತೇನೆ ಎಂದು ಹೇಳುತ್ತಾ ಬಂದು ಅದೇ ದ್ವೇಷವನ್ನು ಮನದಲ್ಲಿಟ್ಟುಕೊಂಡು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಜಾತಿಗಳನ್ನು ಮಾದಿಗ ಸಮುದಾಯದ ಗುಂಪಿಗೆ ಸೇರ್ಪಡೆಗೊಳಿಸುವುದರ ಮೂಲಕ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿ ಮೀಸಲಾತಿ ಪ್ರಮಾಣವು ಕಡಿತಗೊಳಿಸಲಾಗಿದೆ ಎಂದು ದೂರಿದ್ದಾರೆ.