ವರದಾ - ಬೇಡ್ತಿ ನದಿ ಜೋಡಣೆಗೆ ಕೇಂದ್ರದ ಗಮನಕ್ಕೆ: ಡಿ.ಕೆ. ಶಿವಕುಮಾರ್‌

2022ರಲ್ಲಿ ರಾಜ್ಯ ಸರ್ಕಾರಕ್ಕೆ ಡಿಪಿಆರ್‌ ಸಲ್ಲಿಕೆಯಾಗಿದ್ದು ಇದನ್ನು ಆಧರಿಸಿ ಯೋಜನೆ ಸಿದ್ದಪಡಿಸಬಹುದು ಎಂಬ ಆತಂಕ ಉತ್ತರಕನ್ನಡ ಜಿಲ್ಲೆಯ ಜನರನ್ನು ತಳ್ಳಿದರೆ ಕೊಪ್ಪಳ ಹಾಗೂ ರಾಯಚೂರಿನ ಜನಕ್ಕೆ ಸಂತಸದ ಸುದ್ದಿಯಾಗಿತ್ತು.;

Update: 2025-05-04 12:59 GMT

ಹಾನಗಲ್‌ನಲ್ಲಿ ನಡೆದ ವಿವಿಧ ಕಾಮಗರಿಗಳಿಗೆ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ಬೇಡ್ತಿ ಹಾಗೂ ವರದಾ ನದಿಗಳ ಜೋಡಣೆಗೆ 1992ರಲ್ಲಿ ಯೋಜನೆ ರೂಪುಗೊಂಡಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, 2,018 ಕೋಟಿ ವೆಚ್ಚದ ವರದಾ ಮತ್ತು ಬೇಡ್ತಿ ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ನದಿ ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2021ರ ಬಜೆಟ್‌ನಲ್ಲಿ ನದಿಗಳ ಜೋಡಣೆಗೆ ಡಿಪಿಆರ್‌ ಸಿದ್ದಪಡಿಸಲು ಅನದಾನ ಮೀಸಲಿಡಲಾಗಿತ್ತು. 2022ರಲ್ಲಿ ರಾಜ್ಯ ಸರ್ಕಾರಕ್ಕೆ ಡಿಪಿಆರ್‌ ಸಲ್ಲಿಕೆಯಾಗಿದೆ.  ಅಂತೆಯೇ ಅರಬ್ಬಿ ಸಮುದ್ರಕ್ಕೆ ಹರಿಯುವ ಬೇಡ್ತಿ ನದಿಯನ್ನು ತುಂಗಭದ್ರಾ ನದಿಯ ಉಪನದಿಯಾದ ವರದಾ ನದಿಗೆ ಜೋಡಿಸುವ ಯೋಜನೆಯಿದ್ದು, ತುಂಗಭದ್ರಾ ಎಡದಂಡೆ ಯೋಜನಾ ಪ್ರದೇಶವಾದ ಕೊಪ್ಪಳ ಹಾಗೂ ರಾಯಚೂರಿಗೆ ನೀರು ಹರಿಯಲಿದೆ. ಇದೀಗ ಡಿಸಿಎಂ ಕೇಂದ್ರದ ಮುಂದೆ ಪ್ರಸ್ತಾಪ ಮಾಡುವ ಭರವಸೆ ನೀಡಿರುವುದರಿಂದ ಮತ್ತೊಮ್ಮೆ ಯೋಜನೆ ಆಸೆ ಚಿಗುರೊಡೆದಿದೆ.  

ಕರೆ ತುಂಬಿಸುವ ಯೋಜನೆ 

665.75 ಕೋಟಿ ರೂಪಾಯಿ ಅನುದಾನವನ್ನು ಹಾನಗಲ್‌ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದೇವೆ. 418 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಳಂಬೀಡು ಹಾಗೂ ಇತರ 72 ಗ್ರಾಮಗಳ 162 ಕೆರೆಗಳು. 116 ಕೋಟಿ ರೂಪಾಯಿ ವೆಚ್ಚದಲ್ಲಿ ಹಿರೇಕೌಂಶಿ ಮತ್ತು ಇತರ ಒಂಬತ್ತು ಗ್ರಾಮಗಳ 77 ಕೆರೆಗಳನ್ನು ತುಂಬಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. 

ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿದ್ದೇವೆ. ಈ ಹಣವನ್ನು ಸರ್ಕಾರ ಬಳಸಿಕೊಳ್ಳದೆ ರೈತರಿಗೆ ನೀಡಿದ್ದೇವೆ. 30 ಸಾವಿರವಿದ್ದ 10 ಗ್ರಾಂ ಚಿನ್ನದ ಬೆಲೆ 1 ಲಕ್ಷಕ್ಕೆ ಏರಿದೆ. ದಿನಸಿ ವಸ್ತುಗಳು, ಕಬ್ಬಿಣ, ಸಿಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾದಾಗ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಲಿಲ್ಲ. ಈಗ ಕಾಂಗ್ರೆಸ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರದಲ್ಲಿ ಇರುವ ನಾವು ನಿಮ್ಮ ನೆರವಿಗೆ ನಿಲ್ಲಬೇಕೆ ಹೊರತು ಪಿಕ್ ಪಾಕೆಟ್ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಗಲಿನಲ್ಲೇ ರೈತರಿಗೆ ವಿದ್ಯುತ್‌

"ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡುವುದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ, ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. 2013 ರ ಕಾಂಗ್ರೆಸ್ ಸರ್ಕಾರದ ವೇಳೆ ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡುವ ತ್ರೀ‌ ಫೇಸ್ ವಿದ್ಯುತ್ ಪೂರೈಕೆಯನ್ನು 6 ಗಂಟೆಯಿಂದ 7 ಗಂಟೆಗೆ ಹೆಚ್ಚಳ ಮಾಡಲಾಯಿತು." ಎಂದು ಹೇಳಿದರು.

ಜಿಎಸ್‌ಟಿ ರಾಜ್ಯದ ಪಾಲಿನ ಶೇ.13 ರಷ್ಟು ಮಾತ್ರ ವಾಪಸ್​​

ನಾವು ಅಧಿಕಾರಕ್ಕೆ ಬರುವ ಮುನ್ನ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ನಿಮಗೆ ನಾವು ಆಸರೆಯಾಗಿ ನಿಂತು ಆಧಾರವಾಗಿದ್ದೇವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಹೋದ ತೆರಿಗೆಯಲ್ಲಿ ಕೇವಲ ಶೇ 13 ರಷ್ಟನ್ನು ಮಾತ್ರ ವಾಪಸ್ ಕೊಡುತ್ತಿದೆ. ಆದರೂ ನಾವು 4 ಲಕ್ಷ ಕೋಟಿಗೂ ಅಧಿಕವಾದ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡನೆ ಮಾಡಿದ್ದೇವೆ ಎಂದರು.

ಗ್ಯಾರಂಟಿ ವಿರೋಧಿಸಿದವರಿಂದಲೆ ಗ್ಯಾರಂಟಿ ಘೋಷಣೆ

ರಾಜ್ಯದಲ್ಲಿ ಗ್ಯಾರಂಟಿ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ದೇಶದ ಪ್ರಧಾನಿ ಕರ್ನಾಟಕದ ಆರ್ಥಿಕತೆ ಬರಿದಾಯಿತು ಎಂದರು‌. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ಪ್ರತಿಯೊಂದು ಕುಟುಂಬ 5-6 ಸಾವಿರ ಉಳಿತಾಯ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅತ್ಯಂತ ಕ್ರಿಯಾಶೀಲವಾದ ಶಾಸಕ. ನೀರಾವರಿ, ಲೋಕೋಪಯೋಗಿ ಮಾತ್ರವಲ್ಲದೆ ಎಲ್ಲ ಇಲಾಖೆಗಳಿಂದ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Tags:    

Similar News