ವಾಲ್ಮೀಕಿ ನಿಗಮ ಹಗರಣ | ಸಚಿವ ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲೇ ಸಾಕ್ಷ್ಯ ನಾಶ ಯತ್ನ?

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರು ಮೇ 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಲಾಗಿದೆ ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಬಿಜೆಪಿ ಪ್ರಶ್ನಿಸಿದೆ.;

Update: 2024-06-08 11:13 GMT

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಮೇಲೆ ಪ್ರತಿಪಕ್ಷ ಬಿಜೆಪಿ ಮುಗಿಬಿದ್ದಿದೆ. ಸಚಿವ ಪಾಟೀಲ ಕಚೇರಿಯಲ್ಲೇ ಸಾಕ್ಷ್ಯನಾಶಕ್ಕೆ ಯತ್ನಿಸಲಾಗಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬಹುಕೋಟಿ ಹಗರಣದಲ್ಲಿ ಇಬ್ಬರೂ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ ಬಿಜೆಪಿ, ಇಬ್ಬರ ರಾಜೀನಾಮೆಯನ್ನು ಪಡೆದು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರು ಮೇ 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಲಾಗಿದೆ ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಬಿಜೆಪಿ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯಾ ನಾಶಗಳ ಕುರಿತಾಗಿ ನಾನು ಯಾವುದಾದರೂ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ವಿಧಾನಪರಿಷತ್ನ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರಿ ಹಗರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುವಂತೆ ಹಾಗೂ ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಆಗ್ರಹಿಸಿದ್ದಾರೆ.

ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣ ಎಂದರಲ್ಲದೆ, ಇನ್ನೂ ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದ ವಾಸನೆ ನಮಗೆ ಸಿಗುತ್ತಿದೆ. ಇವುಗಳ ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ಎಚ್ಚರಿಸಿದರು.

ಅತ್ಯಂತ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರು ಪತ್ರ ಬರೆದಿಟ್ಟು ಏಪ್ರಿಲ್ 26 ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ದರು. ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ನಡೆಸಿದ ಸಭೆಯ ಸಿಸಿ ಟಿವಿ ಫೂಟೇಜ್ ಅನ್ನು ರಕ್ಷಿಸಬೇಕು. ನಿಗಮದ ಅಧಿಕಾರಿ ಪರಶುರಾಮ್ ಅವರು ಈ ಫೂಟೇಜ್, ಸಾಕ್ಷ್ಯಾಧಾರವನ್ನು ರಕ್ಷಿಸಲು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಶರಣ ಪ್ರಕಾಶ್ ಪಾಟೀಲ್ ಸವಾಲು

“ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯಾ ನಾಶಗಳ ಕುರಿತಾಗಿ ನಾನು ಯಾವುದಾದರೂ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧನಿದ್ದೇನೆ,” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ.

ಆರೋಪಗಳ ಬಗ್ಗೆ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, "ಮೇ 24ರಂದು ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಯಲ್ಲಿ ನಾನು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಸವರಾಜ್ ದದ್ದಲ್ ಸೇರಿದಂತೆ ಕೆಲವರು ಸಭೆ ನಡೆಸಿ ಸಾಕ್ಷ್ಯ ನಾಶ ಮಾಡಿದ್ದೇನೆ ಎಂಬ ಆರೋಪ ಕೇಳಿಬಂದಿದೆ. ವಾಸ್ತವವಾಗಿ ಮೇ 24ರಂದು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಾನು ಕಚೇರಿಗೆ ಭೇಟಿ ನೀಡಿರಲಿಲ್ಲ. ಆದರೂ ನಾನು ಕಚೇರಿಯಲ್ಲಿ ಇದ್ದೆ ಎಂದರೆ, ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೇನಿದೆ" ಎಂದು ತಮ್ಮ ಮೇಲಿನ ಆರೋಪಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ. ಯಾವುದೇ ತನಿಖೆ ಮಾಡಿದರೂ ನಾನು ಕಾನೂನುಬದ್ದ ಎದುರಿಸಲು ಸಿದ್ದನಿದ್ದೇನೆ.

"ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಸುಳ್ಳು ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಪಾಟೀಲ್ ತಿರುಗೇಟು ನೀಡಿದರು. "ಅಷ್ಟಕ್ಕೂ ವಿಕಾಸಸೌಧದ ಕೊಠಡಿ, ಸರ್ಕಾರ ನೀಡಿರುವ ಕಚೇರಿ. ಅದು ನನ್ನ ಸ್ವಂತ ಮನೆಯೂ ಅಲ್ಲ, ನಾನು ಸಚಿವನಾಗಿರುವುದರಿಂದ ನನ್ನನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಬಂದು ಹೋಗುವವರ ಪೂರ್ಣ ವಿವರಗಳನ್ನು ಕಲೆ ಹಾಕಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

ಎಸ್ಐಟಿ ವಶದಲ್ಲಿರುವ ವ್ಯಕ್ತಿ ಗೊತ್ತಿಲ್ಲ

"ಎಸ್ಐಟಿ ವಶದಲ್ಲಿರುವ ವ್ಯಕ್ತಿಯ ಮುಖವನ್ನೂ ನೋಡಿಲ್ಲ. ನನಗೂ, ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಎಸ್ಐಟಿ ಅಧಿಕಾರಿಗಳ ಮುಂದೆ ಆತ ಏನು ಹೇಳಿದ್ದಾನೆ ಎಂಬುದು ನನಗೂ ಗೊತ್ತಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರು ಎಂದು ಎಲ್ಲಾದರೂ ಹೇಳಿರುವ ಬಗ್ಗೆ ವರದಿಯಾಗಿದೆಯೇ? ಊಹಾಪೋಹಗಳಿಗೆ ನಾನೇಕೆ ಉತ್ತರ ಕೊಡಲಿ" ಎಂದು ಪಾಟೀಲ್ ಪ್ರಶ್ನಿಸಿದರು.

"ನಾನು ನನ್ನ ಕಚೇರಿಯಲ್ಲಿ ಸಭೆ ನಡೆಸಿದ್ದರೆ ಸಿಸಿಟಿವಿಯ ಪೂಟೇಜ್ಗಳನ್ನು ತೆಗೆದು ಪರಿಶೀಲಿಸಲಿ. ಈ ಕುರಿತು ಸರ್ಕಾರ ತನಿಖೆ ನಡೆಸಿದರೂ ನನ್ನ ಅಭ್ಯಂತರವಿಲ್ಲ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ" ಎಂದರು.

Tags:    

Similar News