Upper Bhadra Project | ಚಿಂಕಾರ ಧಾಮದಲ್ಲಿ ಕಾಲುವೆ: ಅನುಮತಿ ನಿರಾಕರಿಸಿದ ವನ್ಯಜೀವಿ ಮಂಡಳಿ

ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಬುಕ್ಕಾಪಟ್ಟಣದ ಚಿಂಕಾರ ವನ್ಯಜೀವಿ ಧಾಮದ 128 ಎಕರೆ ಅರಣ್ಯ ಬಳಸಿಕೊಳ್ಳುವ ಪ್ರಸ್ತಾವನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿಲ್ಲ.;

Update: 2024-09-04 06:50 GMT
ಭದ್ರಾ ಮೇಲ್ಡಂಡೆ ಯೋಜನೆ
Click the Play button to listen to article

ತುಮಕೂರು ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದ 128 ಎಕರೆ ಅರಣ್ಯ ಬಳಸಿಕೊಳ್ಳುವ ಪ್ರಸ್ತಾವನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ ನಿರಾಕರಿಸಿದೆ. 

ಕಾಲುವೆ ಇಕ್ಕೆಲಗಳಲ್ಲಿ ಪ್ರಾಣಿಗಳ ಸಂಚಾರಕ್ಕೆ ಹಾದಿ ಮತ್ತಿತರ ಕ್ರಮಗಳ ಬಗ್ಗೆ ಡೆಹ್ರಾಡೂನ್‌ನ ವೈಲ್ಡ್‌ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ತಜ್ಞರಿಂದ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಮಂಡಳಿ ತೀರ್ಮಾನಿಸಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸ್ಥಾಯಿಸಮಿತಿಯ 79ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 

ರಾಜ್ಯ ಸರ್ಕಾರ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಈ ಪ್ರಸ್ತಾವನೆಗೆ ಒಪ್ಪಿಗೆ ಕೊಟ್ಟಿವೆ. ಅಭಯಾರಣ್ಯ ಪ್ರದೇಶದ ಕಾಲುವೆಯ ಉದ್ದಕ್ಕೂ ಪ್ರತಿ 100 ಮೀಟರ್‌ಗೆ ಪ್ರಾಣಿಗಳಿಗೆ ಸಾಗಲು ಮಾರ್ಗ ನಿರ್ಮಿಸಲಾಗುತ್ತದೆ ಹಾಗೂ ಉಳಿದ ಕಡೆಗಳಲ್ಲಿ ಬೇಲಿ ಹಾಕಲಾಗುತ್ತದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸಭೆಯ ಗಮನಕ್ಕೆ ತಂದರು. ಮಂಡಳಿಯ ತಜ್ಞ ಸದಸ್ಯ ಡಾ.ಎಚ್.ಎಸ್. ಸಿಂಗ್, 'ಕಾಡು ಪ್ರಾಣಿಗಳು ದಾಟಲು ಕಾಲುವೆಗೆ ಸಮರ್ಪಕ ಮಾರ್ಗಗಳಿರಬೇಕು. ಕಾಲುವೆ ನೀರನ್ನು ಕುಡಿಯಲು ಕಾಡು ಪ್ರಾಣಿಗಳಿಗೆ ವ್ಯವಸ್ಥೆ ಇರಬೇಕು' ಎಂದು ಸಲಹೆ ನೀಡಿದರು. ಅಭಯಾರಣ್ಯದಲ್ಲಿ ಅನಗತ್ಯ ನಿರ್ಮಾಣ ಕಾಮಗಾರಿಗಳನ್ನು ತಪ್ಪಿಸಬೇಕು ಎಂದು ಸಮಿತಿಯ ಅಧ್ಯಕ್ಷರು ಸಲಹೆ ನೀಡಿದರು.

ಚಿಂಕಾರ ವನ್ಯಜೀವಿ ಧಾಮವು 136.11 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಪರಿಸರ ಸೂಕ್ಷ್ಮ ವಲಯವು 157.0962 ಚ.ಕಿ.ಮೀ ವ್ಯಾಪಿಸಿದೆ. ಇದರಲ್ಲಿ 18.5662 ಚ.ಕಿ.ಮೀ ಡೀಮ್ಸ್ ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶವು ವಿನಾಶದ ಅಂಚಿನಲ್ಲಿರುವ ಚಿಂಕಾರ (ಹುಲ್ಲೇಕರ) ಜತೆಗೆ ವಿವಿಧ ವನ್ಯಜೀವಿಗಳು, ವಿಶಿಷ್ಟ ಜಾತಿಯ ಸಸ್ಯ ಸಂಪತ್ತನ್ನು ಒಳಗೊಂಡಿದೆ. ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬುಕ್ಕಾಪಟ್ಟಣ ವನ್ಯಜೀವಿ ಧಾಮ ವಿಸ್ತರಿಸಿಕೊಂಡಿದೆ.

Tags:    

Similar News