UGCET/UGNEET-25 |ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟ; ನಾಳೆ ಅಂತಿಮ ಫಲಿತಾಂಶ
ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಫಲಿತಾಂಶ ಪಡೆಯಬಹುದು. ಆಕ್ಷೇಪಣೆಗಳು ಇದ್ದಲ್ಲಿ ಇ- ಮೇಲ್ ಮೂಲಕ ಆಗಸ್ಟ್ 2ರಂದು ಬೆಳಿಗ್ಗೆ11ಗಂಟೆ ಒಳಗೆ ಕಳುಹಿಸಬೇಕು.;
ಯುಜಿಸಿಇಟಿ ಹಾಗೂ ಯುಜಿ ನೀಟ್-25 ರ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಫಲಿತಾಂಶ ಪಡೆಯಬಹುದು. ಆಕ್ಷೇಪಣೆಗಳು ಇದ್ದಲ್ಲಿ ಇ- ಮೇಲ್ ಮೂಲಕ ಆಗಸ್ಟ್ 2ರಂದು ಬೆಳಿಗ್ಗೆ11ಗಂಟೆ ಒಳಗೆ ಕಳುಹಿಸಬೇಕು. keauthority-ka@nic.in ಇನ್ ವಿಳಾಸಕ್ಕೆ ಆಕ್ಷೇಪಣೆ ಕಳುಹಿಸಬೇಕು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 25ರಂದು ಪ್ರಕಟಿಸಿತ್ತು.
ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ದಾಖಲಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಮೊದಲನೇ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗಿತ್ತು.
ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿಎಸ್‌ಸಿ (ನರ್ಸಿಂಗ್), ಬಿ-ಫಾರ್ಮ, ಫಾರ್ಮಾ-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 22ರ ಸಂಜೆ 6ಗಂಟೆವರೆಗೆ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು (ಆಪ್ಷನ್) ಪರಿಗಣಿಸಲಾಗಿತ್ತು.
ನಾಳೆ ಅಂತಿಮ ಫಲಿತಾಂಶ ಪ್ರಕಟ
ಆಗಸ್ಟ್ 2ರಂದು ಮಧ್ಯಾಹ್ನ 2ಕ್ಕೆ ಅಂತಿಮ ಯುಜಿ ಸಿಇಟಿ ಹಾಗೂ ಯುಜಿ ನೀಟ್ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಬಳಿಕ ಛಾಯ್ಸ್ ಆಯ್ಕೆಗೆ ಆಗಸ್ಟ್ 4ರಿಂದ 7ರವರೆಗೆ ಅವಕಾಶ ನೀಡಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.
ಇದುವರೆಗೂ ಇಚ್ಛೆ/ಆಯ್ಕೆಗಳನ್ನು ದಾಖಲಿಸದೇ ಇರುವ ಅಭ್ಯರ್ಥಿಗಳು ಕೂಡ ಇಷ್ಟವಿದ್ದಲ್ಲಿ 750 ರೂಪಾಯಿ ಪಾವತಿಸಿ, ಆಪ್ಷನ್ಸ್ ದಾಖಲಿಸಬಹುದು. ಮೊದಲ ಸುತ್ತಿಗೆ ನಿಗದಿಪಡಿಸಿರುವ ಕೊನೆ ದಿನಾಂಕದ ನಂತರ ಮುಂದಿನ ಯಾವುದೇ ಸುತ್ತಿಗೆ ಇಚ್ಛೆ- ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಕೋರ್ಸ್ ಶುಲ್ಕ ಇತ್ಯಾದಿ ನೋಡಿಕೊಂಡು, ಈಗಲೇ ತಮಗೆ ಇಷ್ಟವಾದ ಕಾಲೇಜು/ಕೋರ್ಸ್‌ಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು ಎಂದು ಹೇಳಿದ್ದಾರೆ.