ತ್ರಿಬಲ್ ಮರ್ಡರ್ ಮಿಸ್ಟರಿ | ತುಮಕೂರು ತ್ರಿವಳಿ ಮರ್ಡರ್ ಹಿಂದಿನ ಅಸಲೀ ಕಥೆ ಏನು?
ತುಮಕೂರಿನಲ್ಲಿ ಮೂವರನ್ನು ಅಮಾನುಷವಾಗಿ ಸಾಯಿಸಿ ಕಾರು ಸಮೇತ ಸುಟ್ಟು ಹಾಕಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಸ್ವಾಮಿ ಎಂಬ ಚತುರ ಪಾತಕಿ ಈ ತ್ರಿಬಲ್ ಮರ್ಡರ್ ಸೂತ್ರಧಾರ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ನಿಧಿ ಬೆನ್ನು ಹತ್ತಿ ಅಪರಿಚಿತರನ್ನು ನಂಬಿ ಹೋದ ಮೂವರು, ಇಹಲೋಕವನ್ನೇ ತ್ಯಜಿಸಿದ ದುರಂತ ಘಟನೆ ಇದು.
ಚಿನ್ನದ ನಿಧಿ ಆಸೆ ತೋರಿಸಿ ಅಮಾಯಕರನ್ನು ಯಾಮಾರಿಸಿ ದಂಧೆ ಮಾಡುವ ಜಾಲಗಳು ರಾಜ್ಯದ ಉದ್ದಗಲಕ್ಕೆ ಕೆಲಸ ಮಾಡುತ್ತಿವೆ. ಅಂತಹ ಜಾಲಗಳು ಅಮಾಯಕರನ್ನು ಬಲೆಗೆ ಬೀಳಿಸಿ ಲಕ್ಷ, ಕೋಟಿ ಸುಲಿಗೆ ಮಾಡಿ ಪರಾರಿಯಾಗುವುದು, ಇಲ್ಲವೇ ಹಣಕಾಸಿನ ವಿಷಯದಲ್ಲಿ ತಗಾದೆ ತೆಗೆದು ಜೀವವನ್ನೇ ತೆಗೆಯುವುದು, ಮುಂತಾದ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಪೊಲೀಸರು ಕೂಡ ಆಗಾಗ ಇಂತಹ ಜಾಲಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಎಚ್ಚರಿಕೆಯನ್ನೂ ನೀಡುತ್ತಿರುತ್ತಾರೆ.
ಆದಾಗ್ಯೂ ಜನ ಹಣದ ಅತಿಯಾಸೆ ಮತ್ತು ಸುಲಭವಾಗಿ ದುಡ್ಡು ಮಾಡುವ ದಾಹಕ್ಕೆ ಬಿದ್ದು ಇಂತಹ ಅಕ್ರಮ ಜಾಲಗಳಿಗೆ ಬಲಿಪಶುಗಳಾಗುವುದು ಕೂಡ ಮುಂದುವರಿದಿದೆ. ಇದೀಗ ತುಮಕೂರು ತ್ರಿವಳಿ ಕೊಲೆ ಪ್ರಕರಣ ಕೂಡ ಇಂತಹದ್ದೇ ಜಾಲದ ಕೃತ್ಯ ಎಂಬುದನ್ನು ಪೊಲೀಸರ ತನಿಖೆ ಬಹಿರಂಗಪಡಿಸಿದೆ. ದುರಂತವೆಂದರೆ ಇಲ್ಲಿ ನರಹಂತಕರ ಜಾಲಕ್ಕೆ ಬಲಿಪಶುವಾಗಿರುವುದು ವಿದ್ಯಾವಂತ, ವ್ಯಾಪಾರ- ವಹಿವಾಟಿನ ಅರಿವಿರುವವರೇ!
ಘಟನೆಯ ಹಿನ್ನೆಲೆ
22-03-2024 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಕೋರಾ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಪಿಎಸ್‌ಐ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಒಂದು ಮಾರುತಿ ಸುಜುಕಿ S-PRESSO ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು ಕಂಡು ಬಂದಿತ್ತು.
ಅದರಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತುಮಕೂರಿನ ಪೊಲೀಸರ ತನಿಖೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟಿನ ಕರಾಳ ನಕಲಿ ನಿಧಿ ದಂಧೆಯ ಹಕೀಕತ್ತು ಬಯಲಾಗಿದೆ.
ನಿಧಿ ಆಮಿಷ ಒಡ್ಡಿ ಅಮಾಯಕರಿಗೆ ಬಲೆ
ಚಿನ್ನದ ನಿಧಿ ಆಸೆ ತೋರಿಸಿ ಅಮಾಯಕರನ್ನು ಬಲೆಗೆ ಬೀಳಿಸಿ ಯಾಮಾರಿಸಿ ದಂಧೆ ಮಾಡುವ ದಂಧೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದರೂ, ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿರುವುದೇ ಮೂರು ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾವುದೋ ಮೂಲಗಳಿಂದ ಸಂತ್ರಸ್ತರ ನಂಬರ್ ಪಡೆಯುವ ವಂಚಕರು, ಅಮಾಯಕರನ್ನು ನಂಬಿಸಿ ತಮ್ಮ ಬಲೆಗೆ ಬೀಳಿಸುತ್ತಾರೆ. ಹೆಚ್ಚಿನ ಪ್ರಕರಣಗಳಲ್ಲಿ ವಂಚಕರು ವಾಮಾಚಾರ ಮಾಡುವ ಸ್ವಾಮಿಗಳಂತೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಈ ಪ್ರಕರಣದಲ್ಲೂ ನಡೆದಿರುವುದು ಅದೇ.
ತ್ರಿವಳಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಕುಮಾರ್ ಅಲಿಯಾಸ್ ಪಾತರಾಜು ತನ್ನನ್ನು ಸ್ವಾಮಿಯಂತೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸಿದ್ದೀಕ್ ಎಂಬಾತನಿಗೆ ಪರಿಚಯಿಸಿಕೊಳ್ಳುತ್ತಾನೆ. ಬೀದಿ ಬದಿಯಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಿದ್ದ ಸಿದ್ದೀಕ್, ಕಳ್ಳ ಸ್ವಾಮಿಯ ಮಾತು ನಂಬಿ ನಿಧಿಯ ಆಮಿಷಕ್ಕೆ ಬಿದ್ದು, ಸ್ವಾಮಿಯ ಸೋಗಿನಲ್ಲಿದ್ದ ಪಾತರಾಜುವನ್ನು ತನ್ನದೇ ಊರಿನ ಇಸಾಕ್‌ಗೆ ಪರಿಚಯಿಸುತ್ತಾನೆ.
ಪಾತರಾಜು ಅಲಿಯಾಸ್ ಕುಮಾರ್‌ಗೆ ರಾಜು ಮತ್ತು ರಾಜಗುರು ಎಂಬ ಇನ್ನೆರಡೂ ಹೆಸರುಗಳು ಇರುವುದಾಗಿ ಪೊಲೀಸರು ತಿಳಿಸಿದ್ದು, ಇಂತಹ ಅನೇಕ ವಂಚನೆ ಪ್ರಕರಣಗಳಲ್ಲಿ ಆತ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇಸಾಕ್ ಮನೆಗೆ ಭೇಟಿ ನೀಡಿದ್ದ ʼಸ್ವಾಮಿ ಕುಟುಂಬʼ
ಈ ಪ್ರಕರಣ ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿದ್ದು, ಸ್ವಾಮಿಯಂತೆ ನಟಿಸಿದ್ದ ಪಾತರಾಜು ತನ್ನ ಹೆಂಡತಿ ಮಕ್ಕಳೊಂದಿಗೆ ಬೆಳ್ತಂಗಡಿಯಲ್ಲಿರುವ ಇಸಾಕ್ ಮನೆಗೆ ಮೂರು ಬಾರಿ ಭೇಟಿ ನೀಡಿದ್ದ. ಈ ಹಿಂದೆ ವಿದೇಶದಲ್ಲಿದ್ದ ಇಸಾಕ್, ಸದ್ಯ ಊರಿನಲ್ಲೇ ಸಣ್ಣಪುಟ್ಟ ವಹಿವಾಟು ನಡೆಸಿ ಕುಟುಂಬವನ್ನು ಸಾಕುತ್ತಿದ್ದರು. ಸ್ವಾಮಿಯ ಮಾತಿನ ಕಮಾಲ್‌ಗೆ ಮಾರುಹೋಗಿ, ಆತ ಒಡ್ಡಿದ ಆಮಿಷವನ್ನು ನಂಬಿದ ಇಸಾಕ್, ತಮ್ಮ ಜಮೀನು, ಮಕ್ಕಳ ಚಿನ್ನಾಭರಣ ಮಾರಿ ಸುಮಾರು 35 ಲಕ್ಷ ರೂ.ಗಳನ್ನು ಸ್ವಾಮಿಗೆ ನೀಡಿದ್ದರು ಎಂದು ಇಸಾಕ್ ಕುಟುಂಬ ಹೇಳಿದೆ.
ಇಸಾಕ್ ಮತ್ತು ಸಿದ್ದೀಕ್ ರನ್ನು ನಂಬಿಸಿದ ಸ್ವಾಮಿ, ಬೆಳ್ತಂಗಡಿಯ ಸಾಮಾಜಿಕ ಕಾರ್ಯಕರ್ತ ಶಾಹುಲ್ ಹಮೀದ್ ಎಂಬವರನ್ನೂ ತನ್ನ ನಿಧಿಯ ಜಾಲಕ್ಕೆ ಬೀಳಿಸುತ್ತಾನೆ. ರಿಕ್ಷಾ ಚಾಲಕರಾಗಿದ್ದ ಹಮೀದ್ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸವನ್ನೂ ಮಾಡುತ್ತಿದ್ದರು. ಆದರೆ, ಕಪಟಿ ಸ್ವಾಮಿಯ ಮಾತಿಗೆ ಮರುಳಾಗಿ ತಮ್ಮ ಕುಟುಂಬದ ಆಸ್ತಿ ಮಾರಿದ 10 ಲಕ್ಷ ದುಡ್ಡನ್ನು ವಂಚಕರಿಗೆ ನೀಡಲು ಕೊಂಡೊಯ್ದಿದ್ದರು ಎಂದು ಹಮೀದ್ ಕುಟುಂಬ ಹೇಳಿದೆ.
ಆರಂಭದಲ್ಲಿ ಹತ್ತು ಚಿನ್ನದ ಕಾಯಿನ್ ಗಳನ್ನು ನೀಡಿದ್ದ ಸ್ವಾಮಿ ಇದರಲ್ಲಿ ನಾಲ್ಕು ಒರಿಜಿನಲ್ ಕಾಯಿನ್‌ಗಳಿದೆ, ಉಳಿದ ಆರು ನಕಲಿ. ಆದರೆ, ಒರಿಜಿನಲ್ ಯಾವುದು, ನಕಲಿ ಯಾವುದೆಂದು ನೀವೇ ಕಂಡು ಹಿಡಿಯಬೇಕು. ಒಂದೇ ಕಡೆ ಪರೀಕ್ಷೆ ನಡೆಸಿದರೆ ನೀವು ಸಿಕ್ಕಿ ಬೀಳುವ ಸಾಧ್ಯತೆ ಇದ್ದು, ಬೇರೆ ಬೇರೆ ಕಡೆಗಳಲ್ಲಿ ಪರೀಕ್ಷೆ ಮಾಡಿಸಬೇಕೆಂದು ಮೂವರನ್ನೂ ನಂಬಿಸಿರುತ್ತಾನೆ. ಸುಮಾರು ಎರಡು ತಿಂಗಳು ವಿವಿಧ ಕಡೆ ಆ ನಾಣ್ಯಗಳ ಪರೀಕ್ಷೆ ಮಾಡಿದ ಬಳಿಕ ಸ್ವಾಮಿ ಕೊಟ್ಟ ಎಲ್ಲಾ ಕಾಯಿನ್ ಗಳು ನಕಲಿ ಎಂದು ತಿಳಿದು ನಿಧಿಯ ನಿರೀಕ್ಷೆಯಲ್ಲಿದ್ದವರು ಮೊದಲ ಬಾರಿಗೆ ಬೇಸ್ತು ಬಿದ್ದಿದ್ದರು. ತಾವು ಮೋಸ ಹೋಗಿರುವುದು ಗೊತ್ತಾಗುತ್ತಲೇ ಮೂವರೂ, ತಾವು ಕೊಟ್ಟಿರುವ ದುಡ್ಡನ್ನು ವಾಪಸ್ ಕೊಡು ಎಂದು ಸ್ವಾಮಿಗೆ ಕೇಳುತ್ತಾರೆ.
ಆದರೆ, ದಿನಕ್ಕೊಂದು ನೆಪ ಹೇಳಿಕೊಂಡು, ನಿಧಿ ಹುಡುಕುತ್ತಿರುವುದಾಗಿ ಹೇಳುತ್ತಲೇ ಬಂದಿದ್ದ ಸ್ವಾಮಿ, ಕೊನೆಗೆ ಒಂದು ದಿನ ನಿಧಿ ನೀಡುವುದಾಗಿ ನಂಬಿಸಿ ಮೂವರನ್ನು ತುಮಕೂರಿಗೆ ಕರೆಸಿಕೊಳ್ಳುತ್ತಾನೆ. ಈ ವೇಳೆ, ಆತನನ್ನು ಮತ್ತೆ ನಂಬಿದ ಮೂವರೂ, ಜಮೀನು ಮಾರಿದ ದುಡ್ಡು, ಮತ್ತು ಗೆಳೆಯರಿಂದ ಸಾಲ ಪಡೆದ ಸುಮಾರು 50 ಲಕ್ಷಕ್ಕೂ ಅಧಿಕ ಮೊತ್ತದ ಹಣದೊಂದಿಗೆ ಆತನ ಭೇಟಿಗೆ ಹೋಗಿದ್ದರು ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳಿದ್ದಾರೆ.
ಆದರೆ, ಈಗಾಗಲೇ ಒಂದು ಬಾರಿ ದುಡ್ಡು ನೀಡಿ ಮೋಸ ಹೋಗಿದ್ದ ಇಸಾಕ್, ಸಿದ್ದೀಕ್ ಹಾಗೂ ಹಮೀದ್ ಈ ಬಾರಿ ವಂಚಕರ ಕೈಗೆ ದುಡ್ಡು ನೀಡದೆ, ಮೊದಲು ನೀಡಿದ್ದ ದುಡ್ಡಿಗೆ ನಿಧಿ ಕೊಡುವಂತೆ ಕೇಳಿದ್ದಾರೆ. ಸುಮಾರು ಹತ್ತು ದಿನಗಳ ಕಾಲ ತುಮಕೂರಿನಲ್ಲೇ ಉಳಿದಿದ್ದ ಮೃತರು, ನಿಧಿ ಕೊಡುವುದಾಗಿ ತಮ್ಮಿಂದ ಪಡೆದಿದ್ದ ದುಡ್ಡು ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ. ಸಾಮಾಜಿಕ-ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಾಹುಲ್ ಹಮೀದ್, ದುಡ್ಡನ್ನು ವಂಚಕರಿಗೆ ನೀಡದೆ ನಿಧಿ ನೀಡುವಂತೆ ಸ್ವಾಮಿಗೆ ಒತ್ತಡ ಹಾಕಿದ್ದಾರೆ.
ಬಾರ್ ನಲ್ಲಿ ಕುಳಿತೇ ಕೊಲೆಗೆ ಸಂಚು!
ಇವರ ಒತ್ತಡ ಹೆಚ್ಚಾಗುತ್ತಿದ್ದಂತೆ, ಪೊಲೀಸರಿಗೆ ದೂರು ನೀಡಿದರೆ ತನ್ನ ವಂಚನೆಯ ಜಾಲ ಬಯಲಾಗಲಿದೆ ಎಂಬ ಭೀತಿಯಲ್ಲಿ, ಮೂವರನ್ನೂ ಮುಗಿಸುವ ಯೋಚನೆ ಮಾಡುತ್ತಾನೆ. ಬಾರ್‌ನಲ್ಲಿ ಕುಳಿತು ಎರಡನೇ ಆರೋಪಿ ಗಂಗರಾಜು ಜೊತೆಗೆ ಕೊಲೆ ಸಂಚಿನ ಯೋಜನೆ ರೂಪಿಸುತ್ತಾನೆ.
ಗಂಗರಾಜು ಮುಖಾಂತರ, ಹೂ ಮಾರುವ ಕೆಲಸ ಮಾಡುತ್ತಿದ್ದ ಮಧುಸೂಧನ್(24), ನವೀನ್(24), ಕೃಷ್ಣ(22), ಗಣೇಶ(19), ಕಿರಣ್(23) ಹಾಗೂ ಸೈಮನ್(18) ರನ್ನು ಕರೆಸಿಕೊಳ್ಳುವ ಸ್ವಾಮಿ ಅವರಿಗೆ ಮದ್ಯ ಕುಡಿಸಿ ಕೊಲೆ ಮಾಡಿದರೆ ತಲಾ 3 ಕೆಜಿ ಚಿನ್ನ ನೀಡುವುದಾಗಿ ಆಮಿಷ ಒಡ್ಡುತ್ತಾನೆ. ಸ್ವಾಮಿಯ ಚಿನ್ನದ ಆಮಿಷಕ್ಕೆ ತಲೆದೂಗಿದ ಬಿಸಿರಕ್ತದ ಹುಡುಗರು ಕೊಲೆ ಮಾಡಲು ಜೈ ಎನ್ನುತ್ತಾರೆ.
ಅದರಂತೆ, ಬಾರ್ ನಲ್ಲಿಯೇ ಕುಳಿತು ಕೊಲೆಗೆ ಸಂಚು ರೂಪಿಸುವ ಪಾತಕಿಗಳ ಪಡೆ, ಮಾ. 22 ರಂದು ಮಧ್ಯರಾತ್ರಿ 12 ಗಂಟೆಗೆ, ನಿಧಿ ಕೊಡುವುದಾಗಿ ನಂಬಿಸಿ ಬೀರನಕಲ್ಲು ಬೆಟ್ಟದ ಬಳಿಗೆ ಬರುವಂತೆ ಮೂವರನ್ನು ಕರೆಸಿಕೊಳ್ಳುತ್ತಾರೆ. ನಿಧಿ ಸಿಕ್ಕೇ ಬಿಡ್ತು ಎಂದುಕೊಂಡು ಹೋದ ಮೂವರ ಮೇಲೆ ಪಾತಕಿಗಳು ಮಾರಕಾಯುಧಗಳಿಂದ ದಿಢೀರ್ ದಾಳಿ ನಡೆಸುತ್ತಾರೆ. ಈ ವೇಳೆ ಓರ್ವ ವ್ಯಕ್ತಿ ಅವರಿಂದ ತಪ್ಪಿಸಿ ಓಡುವ ಪ್ರಯತ್ನ ನಡೆಸುತ್ತಾನೆ. ಆದರೆ, ಆತನನ್ನು ಅಟ್ಟಾಡಿಸಿ ಹಿಡಿದ ಪಾತಕಿಗಳು, ಹತ್ಯೆ ಮಾಡುತ್ತಾರೆ. ಬಳಿಕ ಇಬ್ಬರ ಮೃತ ದೇಹವನ್ನು ಕಾರಿನ ಡಿಕ್ಕಿಯಲ್ಲೂ, ಮತ್ತೊಬ್ಬರ ದೇಹವನ್ನು ಕಾರಿನ ಹಿಂಬದಿ ಸೀಟಿನಲ್ಲೂ ಹಾಕಿ ಕೃತ್ಯ ನಡೆಸಿದ ಸ್ಥಳದಿಂದ ಸುಮಾರು 5 ಕಿಮೀ ದೂರದಲ್ಲಿರುವ ಕುಚ್ಚಂಗಿ ಕೆರೆಗೆ ಕೊಂಡೊಯ್ಯುತ್ತಾರೆ. ಅಲ್ಲಿ, 20 ಲೀಟರ್ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚುತ್ತಾರೆ.
ನಂತರ, ಹುಡುಗರಿಗೆ ತಲಾ 8 ಸಾವಿರ ದುಡ್ಡು ನೀಡಿ ತಲೆ ಮರೆಸಿಕೊಳ್ಳುವಂತೆ ಸೂಚಿಸುವ ಸ್ವಾಮಿ, ಗಂಗರಾಜು ಜೊತೆ ತುಮಕೂರಿನಲ್ಲೇ ನೆಲೆಸುತ್ತಾನೆ. ಇತ್ತ ಈ ಹುಡುಗರು ಮುರುಡೇಶ್ವರಕ್ಕೆ ತೆರಳಿ ತಲೆ ಮರೆಸಿಕೊಂಡಿರುತ್ತಾರೆ.
ಜೆಸಿಬಿ ಆಪರೇಟರ್ ನೀಡಿದ ಸುಳಿವು
ಮರುದಿನ ಸ್ವಾಮಿ ಸ್ಥಳೀಯ ಜೆಸಿಬಿ ಆಪರೇಟರ್ ಒಬ್ಬನನ್ನು ಸಂಪರ್ಕಿಸಿ, ಕುಚ್ಚಂಗಿ ಕೆರೆಯಲ್ಲಿ ಒಂದು ಕಾರು ಬೆಂಕಿಗೆ ಆಹುತಿಯಾಗಿದ್ದು, ಅದನ್ನು ಕೆರೆಯಲ್ಲೇ ಗುಂಡಿ ತೋಡಿ ಮುಚ್ಚಿಹಾಕುವಂತೆ ಸೂಚಿಸಿರುತ್ತಾನೆ. ಆತನ ಮಾತಿನಂತೆ ಕಾರನ್ನು ಹೂತು ಹಾಕಲು ಸ್ಥಳಕ್ಕೆ ಹೋದ ಜೆಸಿಬಿ ಆಪರೇಟರ್, ಕಾರಿನ ಸಮೀಪ ಹೋಗಿ ನೋಡಿದಾಗ ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುತ್ತಾನೆ.
ಆಗ ಸ್ಥಳಕ್ಕೆ ಬಂದ ಪೊಲೀಸರು ಕಾರಿನ ಚಾಸಿಸ್ ನಂಬರ್ ಪರಿಶೀಲಿಸಿ ಕಾರಿನ ಮಾಲಿಕ ರಫೀಕ್ ರನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಕಾರಿನಲ್ಲಿದ್ದವರ ಮಾಹಿತಿ ಪಡೆದು ಅವರ ಫೋನ್ ನಂಬರ್ ಎಡಿಆರ್ ಪರಿಶೀಲಿಸಿದಾಗ ಸ್ವಾಮಿ ಜೊತೆಗಿನ ಫೋನ್ ಕರೆಗಳ ಬಗ್ಗೆ ಮಹತ್ವದ ಸುಳಿವು ಲಭಿಸುತ್ತದೆ. ಈ ಜಾಡು ಹಿಡಿದು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಸ್ವಾಮಿಯನ್ನೂ ನಂತರ ಗಂಗರಾಜುವನ್ನು ವಶಕ್ಕೆ ಪಡೆಯುತ್ತಾರೆ. ಸ್ವಾಮಿ ನೀಡಿದ ಮಾಹಿತಿ ಮೇರೆಗೆ ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ಉಳಿದ ಆರು ಮಂದಿಯನ್ನೂ ವಶಕ್ಕೆ ಪಡೆಯುತ್ತಾರೆ.
ಪೊಲೀಸರಿಗೂ ಡೀಲ್ ಕುದುರಿಸಲು ಮುಂದಾದ ಸ್ವಾಮಿ!
ಸ್ವಾಮಿ ಈ ಹಿಂದೆಯೂ ಇಂತಹ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಹಲವಾರು ಹೆಸರುಗಳಿಂದ ಗುರುತಿಸಿಕೊಂಡಿದ್ದ. ಅಲ್ಲದೆ, ಪೊಲೀಸರೊಂದಿಗೂ ಉತ್ತಮ ಬಾಂಧವ್ಯದಲ್ಲಿದ್ದ ಈತ ತ್ರಿವಳಿ ಕೊಲೆ ಪ್ರಕರಣದಿಂದ ತನ್ನ ಹೆಸರು ಕೈ ಬಿಟ್ಟರೆ ಆರು ಕೆ ಜಿ ಚಿನ್ನ ನೀಡುವುದಾಗಿ ಓರ್ವ ಪೊಲೀಸ್ ಅಧಿಕಾರಿಗೆ ಆಮಿಷ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಲವು ಅಮಾಯಕರಿಗೆ ವಂಚನೆ ನಡೆಸಿದ್ದ ಸ್ವಾಮಿ, ಪೊಲೀಸ್ ಕೇಸ್ ಆಗದಂತೆ ಹೊಂದಾಣಿಕೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಅಮಾಯಕರನ್ನು ದುಡ್ಡಿನೊಂದಿಗೆ ಅಪರಿಚಿತ ಊರುಗಳಿಗೆ ಕರೆಸುತ್ತಿದ್ದ ಸ್ವಾಮಿ, ಬೇರೊಂದು ತಂಡದಿಂದ ದರೋಡೆ ನಡೆಸಿ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದ. ಇನ್ನು ಕೆಲವು ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ವ್ಯವಹಾರ ಕುದುರಿಸಿ ಪ್ರಕರಣ ದಾಖಲಾಗದಂತೆ ರಾಜಿಯಲ್ಲಿ ಮುಗಿಸುತ್ತಿದ್ದ ಎಂದೂ ಹೇಳಲಾಗಿದೆ.
ಆದರೆ, ಈ ಬಾರಿ, ಶಾಹುಲ್ ಹಮೀದ್ ದೆಸೆಯಿಂದಾಗಿ ಅವರನ್ನು ಸಂಪೂರ್ಣವಾಗಿ ಮೋಸ ಮಾಡಲು ಸಾಧ್ಯವಾಗಿರಲಿಲ್ಲ. ವಂಚಕರ ಕಣ್ಣಿಗೆ ದುಡ್ಡು ತೋರಿಸದೆ ಇರುವುದರಿಂದ ಅವರಲ್ಲಿದ್ದ 50 ಲಕ್ಷಕ್ಕೂ ಅಧಿಕ ಮೊತ್ತದ ದುಡ್ಡನ್ನು ದರೋಡೆ ಮಾಡಲು ವಂಚಕರಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಸ್ಥಳೀಯವಾಗಿ ರಾಜಕೀಯ-ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಾಹುಲ್ ಹಮೀದ್ ಮೊದಲು ನೀಡಿದ್ದ ದುಡ್ಡಿಗೆ ನಿಧಿಯನ್ನು ಕೇಳಿದ್ದರು. ಒಂದೆಡೆ ದುಡ್ಡು ಸಿಗದ ಹತಾಷೆಯಲ್ಲಿದ್ದ ಸ್ವಾಮಿ, ಶಾಹುಲ್ ಹಮೀದ್ ರ ಮಾತುಗಳಿಂದ ಕುಪಿತನಾಗಿ ಅವರನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದ ಎಂದು ತನಿಖಾ ತಂಡದ ಮೂಲಗಳು ತಿಳಿಸಿದೆ.