ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವು
ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಸಂಶಯದ ಮೇರೆಗೆ ಕೃಷಿ ಹೊಂಡದಲ್ಲಿ ಹುಡುಕಿದಾಗ ಮೂವರ ಶವಗಳು ಪತ್ತೆಯಾಗಿವೆ.
ಸಾಂದರ್ಭಿಕ ಚಿತ್ರ
ಆಟವಾಡುತ್ತಿದ್ದಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ನಡೆದಿದೆ.
ಮೃತರನ್ನು ಶಿವಮ್ಮ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಮತ್ತು ಸ್ವಪ್ನಾ ರಾಜು ರಾಠೋಡ್ (12) ಎಂದು ಗುರುತಿಸಲಾಗಿದೆ.
ಮಹದೇವ ನಗರದ ಬಳಿಯ ರಾಠೋಡ್ ಎಂಬುವವರ ಜಮೀನಿನ ಬಳಿ ಈ ಮಕ್ಕಳು ಕುರಿಗಳೊಂದಿಗೆ ಆಟವಾಡುತ್ತಿದ್ದರು. ಕುರಿಗಳ ಹಿಂದೆ ಹೋಗಿ ಕೃಷಿ ಹೊಂಡದ ಬಳಿಗೆ ತೆರಳಿದಾಗ, ಆಟವಾಡುವ ಭರದಲ್ಲಿ ಆಯತಪ್ಪಿ ಮೂವರೂ ಒಟ್ಟಿಗೆ ಹೊಂಡಕ್ಕೆ ಬಿದ್ದಿದ್ದಾರೆ. ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಸಂಶಯದ ಮೇರೆಗೆ ಕೃಷಿ ಹೊಂಡದಲ್ಲಿ ಹುಡುಕಿದಾಗ ಮೂವರ ಶವಗಳು ಪತ್ತೆಯಾಗಿವೆ.
ದುರಂತದ ವಿಷಯ ತಿಳಿಯುತ್ತಿದ್ದಂತೆ, ವಿಜಯಪುರ ತಹಶೀಲ್ದಾರ್ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳಲ್ಲಿ ಇಂತಹ ದುರಂತ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮೈಲಾಪುರ ಬಳಿ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಬೆಳಗಾವಿಯ ಉದಪುಡಿಯಲ್ಲಿ ಅಣ್ಣ-ತಂಗಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿತ್ತು.