ಬಿಜೆಪಿ ಆಡಳಿತದಲ್ಲೂ ಕಾಲ್ತುಳಿತ ದುರಂತಗಳು ನಡೆದಿವೆ, ಬೆಂಗಳೂರು ಕಾಲ್ತುಳಿತ ಸಮರ್ಥಿಸಿಕೊಂಡ ಸಿಎಂ!

2008ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ 162 ಮಂದಿ ಮೃತಪಟ್ಟಾಗ ಪ್ರೇಮ್ ಕುಮಾರ್ ಧುಮಾಲ್ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.;

Update: 2025-08-22 06:28 GMT

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ರಾಜ್ಯದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಸದನದಲ್ಲಿ ವಿಪಕ್ಷಗಳ ಟೀಕಾಪ್ರಹಾರಕ್ಕೆ ವಿಧಾನಸಭೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡರಲ್ಲದೆ, ದೇಶ ಹಾಗೂ ಜಗತ್ತಿನಾದ್ಯಂತ ನಡೆದ ಹಿಂದಿನ ದುರಂತಗಳ ಸುದೀರ್ಘ ಪಟ್ಟಿಯನ್ನು ಅಂಕಿಅಂಶಗಳ ಸಮೇತ ಸದನದ ಮುಂದಿಟ್ಟು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಚರ್ಚೆಯ ಆರಂಭದಲ್ಲಿ ಸರ್ಕಾರದ ಕ್ರಮಗಳನ್ನು ವಿವರಿಸಿದ ಸಿಎಂ, "ದುರಂತದ ಬಗ್ಗೆ ನಿಖರವಾದ ತನಿಖೆ ನಡೆಯಲಿ ಎಂದೇ ನಾವು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ತನಿಖಾ ಸಮಿತಿ ರಚಿಸಿದ್ದೆವು. ಅವರು ಜುಲೈ 10ರಂದು ವರದಿ ನೀಡಿದ್ದಾರೆ, ಜಿಲ್ಲಾಧಿಕಾರಿಗಳೂ ವರದಿ ಸಲ್ಲಿಸಿದ್ದಾರೆ. ಹೀಗಿರುವಾಗ ನಮ್ಮ ಮೇಲೆ 'ಕುಮ್ಮಕ್ಕು' ನೀಡಿದ್ದೀರಿ ಎಂದು ಆರೋಪಿಸುವುದು ಸರಿಯಲ್ಲ," ಎಂದು ಹೇಳಿದರು.

"ಧಾರ್ಮಿಕ ಸ್ಥಳಗಳು, ಕ್ರೀಡಾಕೂಟ ಅಥವಾ ಶೋಕಾಚರಣೆ ಹಾಗೂ ಜನರಲ್ಲಿ ಭಯ ಹುಟ್ಟಿದಾಗ ಉಂಟಾಗುವ ಸಂದರ್ಭಗಳಲ್ಲಿ ಕಾಲ್ತುಳಿತಗಳು ಸಂಭವಿಸುತ್ತವೆ. ಭಕ್ತಿ ಮತ್ತು ವ್ಯಕ್ತಿ ಆರಾಧನೆ ಇರುವಲ್ಲಿ ಇಂತಹ ಘಟನೆಗಳು ಸುಲಭವಾಗಿ ಸಂಭವಿಸುತ್ತವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದರು," ಎಂದು ಸಿಎಂ ವಿವರಿಸಿದರು.

ತಮ್ಮ ವಾದವನ್ನು ಸಮರ್ಥಿಸಲು ಹಿಂದಿನ ಘಟನೆಗಳನ್ನು ಒಂದೊಂದಾಗಿ ಉಲ್ಲೇಖಿಸಿದ ಸಿಎಂ, ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ನಡೆದ ದುರಂತಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. 2008ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ 162 ಮಂದಿ ಮೃತಪಟ್ಟಾಗ ಪ್ರೇಮ್ ಕುಮಾರ್ ಧುಮಾಲ್ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು ಎಂದ ಅವರು, ಅದೇ ವರ್ಷ ರಾಜಸ್ಥಾನದ ಜೋಧಪುರದ ಚಾಮುಂಡಾ ದೇವಿ ದೇಗುಲದಲ್ಲಿ ವಸುಂಧರಾ ರಾಜೆ ಸಿಂಧಿಯಾ ಮುಖ್ಯಮಂತ್ರಿಯಾಗಿದ್ದಾಗ 250 ಮಂದಿ ಪ್ರಾಣ ಕಳೆದುಕೊಂಡಿದ್ದನ್ನು ನೆನಪಿಸಿದರು.

2012ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ 20 ಮಂದಿ ಸಾವಿಗೀಡಾದಾಗ ಖಂಡೂರಿ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾಗ ರತ್ನಗಢ ದೇವಸ್ಥಾನದಲ್ಲಿ 135 ಮತ್ತು ಬಲೇಶ್ವರದಲ್ಲಿ 36 ಸಾವುಗಳು ಸಂಭವಿಸಿದ್ದವು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದಾಗ ಹತ್ರಾಸ್​​ನಲ್ಲಿ 121 ಮತ್ತು ಪ್ರಯಾಗ್ರಾಜ್ ಕುಂಭಮೇಳದಲ್ಲಿ 39 ಮಂದಿ ಮೃತಪಟ್ಟಿದ್ದರು. ಇದಲ್ಲದೆ, ಬಿಹಾರ, ಮಹಾರಾಷ್ಟ್ರ ಮತ್ತು ಗುಜರಾರ್​ನಲ್ಲಿ ವನಡೆದ ದುರಂತಗಳನ್ನೂ ಅವರು ಪಟ್ಟಿ ಮಾಡಿದರು.

ಭಾರತಕ್ಕೆ ಸೀಮಿತವಲ್ಲ

ಈ ದುರಂತಗಳು ಕೇವಲ ಭಾರತಕ್ಕೆ ಸೀಮಿತವಲ್ಲ ಎಂದು ಹೇಳಿದ ಸಿಎಂ, 1989ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ದುರಂತದಲ್ಲಿ 99 ಮಂದಿ, 2022ರಲ್ಲಿ ಇಂಡೋನೇಷ್ಯಾದಲ್ಲಿ 174 ಮಂದಿ ಹಾಗೂ 2025ರಲ್ಲಿ ಪ್ಯಾರಿಸ್​​ನಲ್ಲಿ ಇಬ್ಬರು ಮೃತಪಟ್ಟ ಘಟನೆಗಳನ್ನು ಉಲ್ಲೇಖಿಸಿದರು.

Tags:    

Similar News