ಸಂವಿಧಾನ ಈ ದೇಶದ ಆತ್ಮ, ಅದನ್ನು ರಕ್ಷಿಸಿಕೊಳ್ಳಬೇಕು: ಡಿ.ಕೆ. ಶಿವಕುಮಾರ್
ಉಸಿರಾಡೋಕೆ ಹೇಗೆ ಗಾಳಿ ಬೇಕೋ ಹಾಗೇ ದೇಶ ನಡೆಸೋಕೆ, ನಾವು ಬದುಕಲು ಸಂವಿಧಾನ ಇರಲೇಬೇಕು.;
"ಸಂವಿಧಾನ ಈ ದೇಶದ ಆತ್ಮ. ಸಂವಿಧಾನ ಇಲ್ಲದೇ ಹೋದರೆ ಈ ದೇಶಕ್ಕೆ ಆತ್ಮವೇ ಇರುವುದಿಲ್ಲ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಬಳಿಕ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
"ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಎರಡನೇ ಬಾರಿಗೆ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಜನವರಿ 26 ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ಪವಿತ್ರವಾದ ದಿನ. ಒಕ್ಕೂಟ ವ್ಯವಸ್ಥೆ ಜಾರಿಯಾದ ದಿನ. ಎಲ್ಲಾ ಭಾಷೆ, ಧರ್ಮ, ಜಾತಿಗಳು ಒಂದೇ ಎಂದು ಸಾರಿದ ದಿನ.
ಉಸಿರಾಡೋಕೆ ಹೇಗೆ ಗಾಳಿ ಬೇಕೋ ಹಾಗೇ ದೇಶ ನಡೆಸೋಕೆ, ನಾವು ಬದುಕಲು ಸಂವಿಧಾನ ಇರಲೇಬೇಕು. ನೆಹರೂ ಅವರು ಪ್ರಧಾನಮಂತ್ರಿಯಾಗಿದ್ದಾಗ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ನೀಡಿ ಈ ದೇಶಕ್ಕೆ ಸಂವಿಧಾನ ನೀಡಲಾಯಿತು.
ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೇವೆ. ಗಾಂಧೀಜಿ ಅವರ ತತ್ವ, ಆದರ್ಶ, ನಾಯಕತ್ವ, ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು.
ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನದ ಅಗತ್ಯತೆ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಂವಿಧಾನವನ್ನು ಶ್ರೇಷ್ಠ ಎಂದು ಮಾದರಿಯಾಗಿ ಪರಿಗಣಿಸಿವೆ.
ಸಂವಿಧಾನದ ಆರ್ಟಿಕಲ್ 14 ಮತ್ತು 18 ಸಮಾನತೆ ಬಗ್ಗೆ ಹೇಳುತ್ತದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳುತ್ತದೆ. ಇದು ಕೇವಲ ಪುಸ್ತಕವಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಗೌರವ, ಸಮಾಜದ ಗೌರವ ಹಾಗೂ ದೇಶದ ಗೌರವ ಕಾಪಾಡಿಕೊಂಡು ಹೋಗಬೇಕು ಎಂಬುದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಿಳಿಸಿದ್ದಾರೆ.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಖರ್ಗೆ ಅವರು ಹೇಳಿದಂತೆ ಈ ಸಂವಿಧಾನ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಂವಿಧಾನಕ್ಕೆ ಆಗುತ್ತಿರುವ ಅಪಮಾನದ ವಿರುದ್ಧ ಹೋರಾಟ ಮಾಡಬೇಕು. ಇದಕ್ಕಾಗಿಯೇ ನಾವು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೇವೆ.
ಎಐಸಿಸಿಯ ಈ ಕಾರ್ಯಕ್ರಮವನ್ನು ಇಡೀ ವರ್ಷ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಬೇಕು ಎಂದು ನಮ್ಮ ಅಧ್ಯಕ್ಷರಲ್ಲಿ ನಾನು ಮನವಿ ಮಾಡಿದ್ದೆ. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಸಮಾಜದ ಎಲ್ಲಾ ವರ್ಗಗಳ ಕಾರ್ಯಕ್ರಮ. ಹೀಗಾಗಿ ಇದು ಸರ್ಕಾರದ ಕಾರ್ಯಕ್ರಮವಾಗಬೇಕು ಎಂದು ಪಕ್ಷದವತಿಯಿಂದ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಆಮೂಲಕ ಬಾಪು ಅವರ ತತ್ವ, ಅಂಬೇಡ್ಕರ್ ಅವರ ಮೌಲ್ಯಗಳು, ನಮ್ಮ ಸಂವಿಧಾನ ಕಾಪಾಡುವ ಕೆಲಸ ಮಾಡಬೇಕು. ಇವುಗಳ ಬಗ್ಗೆ ಶಾಲಾ ಕಾಲೇಜು ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗಬೇಕು.
ರಾಜ್ಯದ 224 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಲು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಇಡೀ ವರ್ಷ ನಡೆಯುವ ದಿನಾಂಕ ನಿಗದಿ ಮಾಡಲಾಗುವುದು. ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷ, ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ನಾಳೆ ಎಐಸಿಸಿ ವತಿಯಿಂದ ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು,
ಬೆಂಗಳೂರು ಜಾಗತಿಕ ನಗರ
ಬೆಂಗಳೂರಿನ ಯೋಜನೆಗಳಿಗೆ ಅನುದಾನ ಕೋರಿ ಪತ್ರ ಬರೆದಿರುವುದನ್ನು ಕೇಂದ್ರ ಸರ್ಕಾರ ಪರಿಗಣಿಸುವುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವುದರಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಬೆಂಗಳೂರಿನ ಮೂಲಕ ದೇಹವನ್ನು ನೋಡುತ್ತಿವೆ. ಬೆಂಗಳೂರು ಜಾಗತಿಕ ನಗರವಾಗಿದೆ. ಬೆಂಗಳೂರು ಪೂರ್ವಯೋಜಿತ ನಗರವಲ್ಲ. ಹೀಗಾಗಿ ಇದರ ಅಭಿವೃದ್ಧಿಗೆ ಕೇಂದ್ರದ ನೆರವು ಕೇಳುವುದು ನಮ್ಮ ಕರ್ತವ್ಯ. ಇತ್ತೀಚೆಗೆ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭವಾಗಿದ್ದು, ಮೂರು ದಿನಗಳ ಹಿಂದೆ ಫ್ರಾನ್ಸ್ ಪ್ರತಿನಿಧಿ ನನ್ನನ್ನು ಭೇಟಿ ಮಾಡಿ ಮುಂದಿನ ವರ್ಷ ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಿದ್ದಾರೆ. ಅವರ ದೃಷ್ಟಿಯಲ್ಲಿ ಬೆಂಗಳೂರು ಪ್ರಮುಖ ನಗರವಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರ ಕೇವಲ ಬಿಹಾರ ಹಾಗೂ ಆಂಧ್ರಪ್ರದೇಶವನ್ನು ಮಾತ್ರ ನೋಡದೆ ಕರ್ನಾಟಕದ ಪ್ರತಿನಿಧಿಯಾಗಿ ನಮ್ಮ ರಾಜ್ಯದ ಕಡೆಯೂ ನೋಡಿ, ಬೆಂಗಳೂರಿಗೆ ಅಗತ್ಯ ಅನುದಾನ ನೀಡುವಂತೆ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.
ಕ್ಷಣಗಣನೆಗಾಗಿ ಕಾಯುತ್ತಿದ್ದೇವೆ
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿ ಕೊಟ್ಟಿಲ್ಲ, ಆದರೆ ಈ ಯೋಜನೆಗಳಿಗೆ ಹಣ ನೀಡುತ್ತಾರಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು, "ನೋಡೋಣ, ರಾಜ್ಯದಿಂದ ಇಷ್ಟೊಂದು ಸಂಸದರು ಇದ್ದಾರೆ, ಕರ್ನಾಟಕ ರಾಜ್ಯಕ್ಕೆ ಮೋಸ ಮಾಡುವುದಿಲ್ಲ, ಅನುದಾನ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಕೇಳಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಒಂದೇ ದಿನದಲ್ಲಿ ಮೋದಿ ಅವರ ಕೈಯಿಂದ ಮೇಕೆದಾಟಿಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಅದಕ್ಕಾಗಿ ಕ್ಷಣಗಣನೆಗೆ ಕಾಯುತ್ತಿದ್ದೇನೆ. ಪ್ರಹ್ಲಾದ್ ಜೋಷಿ ಹಾಗೂ ಜಗದೀಶ್ ಶೆಟ್ಟರ್ ಅವರು ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುತ್ತಾರೆ ಎಂದು ಕಾಯುತ್ತಿದ್ದೇನೆ. ನಾವು ಈ ವಿಚಾರವಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಸಂಸತ್ ಕಲಾಪದ ವೇಳೆಯೂ ಹೋಗಿ ಭೇಟಿ ಮಾಡುತ್ತೇನೆ. ನನ್ನ ಕರ್ತವ್ಯ ಮಾಡುತ್ತೇನೆ. ಫಲಾಫಲ ಭಗವಂತನಿಗೆ ಬಿಟ್ಟದ್ದು" ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರು ಯಾವ ಸೂಚನೆ ನೀಡಿದರು ಎಂದು ಕೇಳಿದಾಗ, "ಈ ಕಚೇರಿ ಕಟ್ಟಿದ್ದು ಅವರೇ. ಅವರು ಇಲ್ಲಿ 2 ನಿಮಿಷ ನೆಮ್ಮದಿಯಾಗಿ ಕಾಫಿಯನ್ನು ಕುಡಿಯಬಾರದೆ? ನೀವು ನಿಮ್ಮ ಮನೆಯವರು ಚರ್ಚೆ ಮಾಡಿದನ್ನು ಸಾರ್ವಜನಿಕವಾಗಿ ಮಾತನಾಡುತ್ತೀರಾ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕುಟುಂಬ ಬೇರೆ ರಾಜಕೀಯ ಬೇರೆ ಎಂದು ಕೇಳಿದಾಗ, "ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮುಖ್ಯಮಂತ್ರಿಗಳು ವಾಣಿ ವಿಲಾಸ ಸಾಗರ ಆಣೆಕಟ್ಟು ಬಾಗಿನ ಅರ್ಪಣೆ ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದ್ದಾರೆ" ಎಂದು ತಿಳಿಸಿದರು.